ಭಾನುವಾರ, ಅಕ್ಟೋಬರ್ 25, 2020
27 °C

ಚಾಮರಾಜನಗರ: ಬೌದ್ಧ ಬಿಕ್ಕು ದೀಕ್ಷೆ ಪಡೆದ ಮುಸ್ಲಿಂ ವ್ಯಕ್ತಿ

ಪ್ರಜಾವಾಣಿ ವಾಣಿ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಹೈದರಾಬಾದ್‌ನ ಮುಸ್ಲಿಂ ವ್ಯಕ್ತಿಯೊಬ್ಬರು ನಗರದಲ್ಲಿ ಬುಧವಾರ ಬೌದ್ಧ ಬಿಕ್ಕುವಾಗಿ ದೀಕ್ಷೆ ಪಡೆದರು.

ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಬೌದ್ಧ ಧರ್ಮ ಸ್ವೀಕಾರ ಮಾಡಿದ ದಿನಾಚರಣೆಯ ಅಂಗವಾಗಿ ನಗರದ ಸಾರನಾಥ ಬೌದ್ಧ ವಿಹಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ 40 ವರ್ಷದ ಶಹನಾವಾಜ್‌ ಅಲಿ ಎಂಬುವವರಿಗೆ ಪ್ರಸ್ತಾವಿತ ನಳಂದಾ ವಿಶ್ವವಿದ್ಯಾಲಯದ ಬೋಧಿದತ್ತ ಬಂತೇಜಿ ಅವರು ಸನ್ಯಾಸ ದೀಕ್ಷೆ ನೀಡಿದರು.

ದೀಕ್ಷೆ ಪಡೆದ ಶಹನಾವಾಜ್‌ ಅವರಿಗೆ ಬಂತೇ ಧಮ್ಮ ಕ್ರಾಂತಿ ಎಂದು ನಾಮಕಾರಣ ಮಾಡಲಾಗಿದೆ. 

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬೋಧಿದತ್ತ ಬಂತೇಜಿ ಅವರು, ‘ಷಹನಾವಾಜ್‌ ಅವರು ಹೈದರಾಬಾದ್‌ನಲ್ಲಿ ಮೆಕ್ಯಾನಿಕ್‌ ಆಗಿದ್ದರು. ಗೌತಮ ಬುದ್ಧ ಹಾಗೂ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ತತ್ವ ಆದರ್ಶಗಳಿಂದ ಸ್ಫೂರ್ತಿ ಪಡೆದು ಬೌದ್ಧ ಧರ್ಮ ಸ್ವೀಕರಿಸಿ‌, ಬಿಕ್ಕುವಾಗಿದ್ದಾರೆ’ ಎಂದು ಹೇಳಿದರು. 

ದೀಕ್ಷೆ ಪಡೆದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಬಂತೇ ಧಮ್ಮ ಕ್ರಾಂತಿ ಅವರು, ‘ಪಂಚಶೀಲ ತತ್ವ ಹಾಗೂ ಡಾ.ಬಿ.ಆರ್‌.ಅಂಬೇಡ್ಕರ್‌ ಅವರಿಂದ ಸ್ಫೂರ್ತಿ ಪಡೆದು ಬೌದ್ಧ ಧರ್ಮ ಸೇರಿದ್ದೇನೆ. ಎಲ್ಲ ಧರ್ಮಗಳ ಬಗ್ಗೆ ನನಗೆ ಗೌರವವಿದೆ. ಆದರೆ, ಬೌದ್ಧ ಧರ್ಮವನ್ನು ನಂಬುತ್ತೇನೆ. ನನ್ನ ನಿರ್ಧಾರವನ್ನು ಜನರು ವಿರೋಧ ಮಾಡಬಹುದು ಎಂಬ ಭಯವಿಲ್ಲ. ಅಚಲವಾಗಿದ್ದೇನೆ’ ಎಂದರು. 

‘10 ವರ್ಷಗಳಿಂದ ಸಮಾಜಸೇವೆ ಮಾಡುತ್ತಾ ಬಂದಿದ್ದೇನೆ. ಅಂಬೇಡ್ಕರ್‌ ಅವರ ಆದರ್ಶಗಳಿಗೆ ಮಾರುಹೋದೆ. ಗೌತಮ ಬುದ್ಧ ಅವರ ಸಂದೇಶ ನನ್ನಲ್ಲಿ ಮನಃಪರಿವರ್ತನೆ ಮಾಡಿತು. 2015ರಿಂದ ನನ್ನಲ್ಲಿ ಏನೋ ಬದಲಾವಣೆಯಾಯಿತು. ಅಂದಿನಿಂದ ನಾನು ತಲೆ, ಗಡ್ಡ ಬೋಳಿಸಲು ಆರಂಭಿಸಿದೆ. ತ್ರಿಪುರಾದ ಬಂತೇಜಿಯೊಬ್ಬರು ಹೈದಾರಾಬಾದ್‌ಗೆ ಬಂದಿದ್ದಾಗ, ‘ಬುದ್ಧ ನನ್ನ ಕನಸಲ್ಲಿನಲ್ಲಿ ಬಂದಿದ್ದರು. ನನ್ನಲ್ಲಿ ಬದಲಾವಣೆಗಳಾಗುತ್ತಿದೆ. ಏನು ಮಾಡಬೇಕು’ ಎಂದು ಕೇಳಿದೆ. ಅವರು ಏನೂ ಹೇಳಲಿಲ್ಲ. ನಂತರ ನಾನು ದೆಹಲಿ, ಬೋಧಿ ಗಯಾಕ್ಕೂ ಭೇಟಿ ನೀಡಿದೆ’ ಎಂದು ಅವರು ಹೇಳಿದರು. 

‘ಪಂಚಶೀಲ ತತ್ವದಲ್ಲಿ ಜಗತ್ತು ನಿಂತಿದೆ. ಬೌದ್ಧ ಧರ್ಮ ಪಾಲಿಸುವ ನೆರೆ ಹೊರೆ‌ಯ ದೇಶಗಳೆಲ್ಲ ಅಭಿವೃದ್ಧಿ ಹೊಂದಿವೆ. ಆದರೆ, ಭಾರತ ಇನ್ನೂ ಅಭಿವೃದ್ಧಿಯಾಗಿಲ್ಲ. ಡಾ.ಬಿ.ಆರ್‌.ಅಂಬೇಡ್ಕರ್‌ ಹಾಗೂ ಗೌತಮ ಬುದ್ಧರ ಸಿದ್ಧಾಂತ ಆದರ್ಶಗಳನ್ನು ಪ್ರಚಾರ ಮಾಡಲು ಜೀವನ ಮುಡಿಪಾಗಿಡುತ್ತೇನೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು