ಗುರುವಾರ , ಮೇ 19, 2022
21 °C
₹40 ಕೋಟಿ ಮಂಜೂರು, ಜಿಲ್ಲಾ ಕೇಂದ್ರದಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಕ್ರಿಯಾಯೋಜನೆ

ನಗರೋತ್ಥಾನ : ರಸ್ತೆಗೆ ₹13.79 ಕೋಟಿ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಮುಖ್ಯಮಂತ್ರಿಗಳ ಅಮೃತ ನರಗೋತ್ಥಾನ ಯೋಜನೆಯ 4ನೇ ಹಂತದಲ್ಲಿ ನಗರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೈಗೊಳ್ಳಲು 40 ಕೋಟಿ ಮಂಜೂರಾಗಿದ್ದು, ನಗರಸಭೆಯು ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಲು ಮುಂದಾಗಿದೆ. ಇದಕ್ಕಾಗಿ ₹13.79 ಕೋಟಿ ನಿಗದಿಪಡಿಸಿದೆ. 

₹40 ಕೋಟಿ ಮೊತ್ತದಲ್ಲಿ ಶೇ 85ರಷ್ಟು ಅಂದರೆ ₹34 ಕೋಟಿ ವೆಚ್ಚದಲ್ಲಿ ಕೈಗೊಳ್ಳಬೇಕಾದ ಯೋಜನೆಗಳಿಗೆ ಕ್ರಿಯಾಯೋಜನೆ ರೂಪಿಸುವಂತೆ ಸರ್ಕಾರ ಸೂಚಿಸಿತ್ತು. ಅದರಂತೆ ಅನುದಾನ ಬಳಕೆಗಾಗಿ ವಿವಿಧ ಯೋಜನೆಗಳನ್ನು ನಗರಸಭೆ ಕೈಗೆತ್ತಿಕೊಂಡಿದೆ.  

‘ಕ್ರಿಯಾಯೋಜನೆ ರೂಪಿಸಿ ಜಿಲ್ಲಾಧಿಕಾರಿ ಅವರಿಗೆ ಸಲ್ಲಿಸಲಾಗಿದ್ದು, ಅಲ್ಲಿಂದ ಸರ್ಕಾರಕ್ಕೆ ಹೋಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಯೋಜನೆ ಅನುಷ್ಠಾನದ ಬಗ್ಗೆ ಸಭೆ ನಡೆಸಿ ಸೂಚನೆಗಳನ್ನು ನೀಡಿದ್ದಾರೆ. ಅದೀಗ ಸರ್ಕಾರದ ಹಂತದಲ್ಲಿದೆ’ ಎಂದು ನಗರಸಭೆ ಆಯುಕ್ತ ಕರಿಬಸವಯ್ಯ ಹಾಗೂ ಅಧ್ಯಕ್ಷೆ ಸಿ.ಎಂ.ಆಶಾ ಅವರು ತಿಳಿಸಿದ್ದಾರೆ.

ನಗರಸಭೆಯ ವಾರ್ಡ್‌ಗಳಲ್ಲಿ ಬಹುತೇಕ ಕಡೆಗಳಲ್ಲಿ ರಸ್ತೆ ಸಮಸ್ಯೆಗಳಿದ್ದು, ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತಿವೆ. ವಾರ್ಡ್‌ ಸದಸ್ಯರು ಕೂಡ ರಸ್ತೆ ಅಭಿವೃದ್ಧಿಗೆ ಅನುದಾನ ನೀಡುವಂತೆ ಒತ್ತಡ ಹಾಕುತ್ತಲೇ ಬಂದಿದ್ದಾರೆ. ಹೀಗಾಗಿ, ನಗರೋತ್ಥಾನ ಯೋಜನೆ ಅಡಿಯಲ್ಲಿ ರಸ್ತೆ ಅಭಿವೃದ್ಧಿಗಾಗಿ ₹13.79 ಕೋಟಿಯನ್ನು ನಿಗದಿ ಮಾಡಲಾಗಿದೆ. 

ಉಳಿದಂತೆ, ಕುಡಿಯುವ ನೀರು ಹಾಗೂ ಒಳಚರಂಡಿ ಕಾಮಗಾರಿಗಳಿಗೆ ₹4.91 ಕೋಟಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕಲ್ಯಾಣಾಭಿವೃದ್ಧಿ ಕಾರ್ಯಕ್ರಮಗಳಿಗಾಗಿ ₹8.19 ಕೋಟಿ, ಇತರ ಹಿಂದುಳಿದ ಜನರ ಅಭಿವೃದ್ಧಿಗಾಗಿ ₹2.47 ಕೋಟಿ, ಅಂಗವಿಕಲರ ಕಲ್ಯಾಣಾಭಿವೃದ್ಧಿ ಕಾರ್ಯಕ್ರಮಗಳಿಗಾಗಿ ₹1.70 ಕೋಟಿ ಹಾಗೂ ಕ್ರೀಡಾಂಗಣ ಅಭಿವೃದ್ಧಿಗಾಗಿ ₹1 ಕೋಟಿ ನಿಗದಿ ಪಡಿಸಿ ಕ್ರಿಯಾಯೋಜನೆಗಳನ್ನು ಸಿದ್ಧಪಡಿಸಲಾಗಿದೆ.  

ಶೇ 15 ಅನುದಾನ ನಂತರ: ಆರಂಭದಲ್ಲಿ ಶೇ 85ರಷ್ಟು ಅನುದಾನ ಮಾತ್ರ ಬಿಡುಗಡೆಯಾಗಲಿದೆ. ಇದನ್ನು ಪೂರ್ಣವಾಗಿ ಬಳಸಿದ ನಂತರ ಉಳಿದ ಶೇ 15ರಷ್ಟು ಹಣ ಬಿಡುಗಡೆಯಾಗಲಿದೆ. 

‘ಸರ್ಕಾರದ ಸೂಚನೆಯಂತೆ ನಾವೀಗ ₹34 ಕೋಟಿ ಮೊತ್ತಕ್ಕೆ ಪೂರಕವಾಗಿ ಯೋಜನೆಗಳನ್ನು ರೂಪಿಸಿದ್ದೇವೆ. ಈ ಹಣ ಮುಗಿದ ನಂತರ ಉಳಿದ ‌ಮೊತ್ತವನ್ನು ಬಿಡುಗಡೆಗೊಳಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಬಳಿಕವಷ್ಟೇ ಉಳಿದ ₹6 ಕೋಟಿ ಅನುದಾನ ಸಿಗಲಿದೆ’ ಎಂದು ಆಯುಕ್ತ ಕರಿಬಸವಯ್ಯ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ವಾರ್ಡ್‌ಗೆ ತಲಾ ₹50 ಲಕ್ಷ

ಚಾಮರಾಜನಗರ ನಗರಸಭೆ ವ್ಯಾಪ್ತಿಯಲ್ಲಿ 31 ವಾರ್ಡ್‌ಗಳಿದ್ದು, ನಗರೋತ್ಥಾನದ ಅಡಿಯಲ್ಲಿ ಪ್ರತಿ ವಾರ್ಡ್‌ಗೆ ₹50 ಲಕ್ಷ ನೀಡಲು ನಗರಸಭೆ ನಿರ್ಧರಿಸಿದೆ ಎಂದು ಗೊತ್ತಾಗಿದೆ. 

ಸದಸ್ಯರು ಕೂಡ ಈ ನಿರೀಕ್ಷೆಯಲ್ಲಿದ್ದು, ₹50 ಲಕ್ಷವಾದರೂ ಸಿಕ್ಕಿದರೆ, ವಾರ್ಡ್‌ನಲ್ಲಿ ಕಣ್ಣಿಗೆ ಕಾಣಿಸುವ ಒಂದಷ್ಟು ಕೆಲಸಗಳನ್ನು ಮಾಡಿಸಬಹುದು ಎಂದು ಹೇಳುತ್ತಾರೆ ಅವರು. 

--

ನಗರೋತ್ಥಾನ ಯೋಜನೆ ಅಡಿಯಲ್ಲಿ ರಸ್ತೆ ಹಾಗೂ ಇತರ ಮೂಲಸೌಕರ್ಯಗಳನ್ನು ಕಲ್ಪಿಸಲು ಒತ್ತು ನೀಡಲಾಗುತ್ತದೆ
ಸಿ.ಎಂ.ಆಶಾ, ನಗರಸಭೆ ಅಧ್ಯಕ್ಷೆ

--

ಅನುದಾನ ಬಂದರೆ ವಾರ್ಡ್‌ಗಳಲ್ಲಿ ರಸ್ತೆ ಅಭಿವೃದ್ಧಿ, ಕುಡಿಯುವ ನೀರು ಸೇರಿದಂತೆ ಇತರ ಸೌಕರ್ಯಗಳನ್ನು ಕಲ್ಪಿಸಲು ಸಾಧ್ಯವಾಗಲಿದೆ
ಎಂ.ಮಹೇಶ್‌, 9ನೇ ವಾರ್ಡ್‌ ಸದಸ್ಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.