ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ವನ್ಯಪ್ರಾಣಿ ಹಾವಳಿಗೆ ಜನ, ಜಾನುವಾರು ತತ್ತರ

ಚಿರತೆ, ಹುಲಿ, ಕಾಡಾನೆ, ಹಂದಿಗಳ ಉಪಟಳ, ಬೆಳೆ ನಾಶ
Last Updated 25 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ನಾಲ್ಕು ರಕ್ಷಿತಾರಣ್ಯಗಳನ್ನು ಹೊಂದಿರುವ ಜಿಲ್ಲೆಯ ಕಾಡಂಚಿನ ಗ್ರಾಮಗಳಲ್ಲಿ ವನ್ಯ ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ರೈತರು, ಗ್ರಾಮಸ್ಥರು ಹೈರಾಣರಾಗುತ್ತಿದ್ದಾರೆ.

ತಿಂಗಳಿನಿಂದೀಚೆಗೆ ಜನರ ಮೇಲೆ ಪ್ರಾಣಿಗಳ ದಾಳಿ, ಕೃಷಿ ಜಮೀನುಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿರುವ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ.

ಗ್ರಾಮಗಳು, ಕೃಷಿ ಜಮೀನುಗಳಿಗೆ ಪ್ರಾಣಿಗಳು ನುಗ್ಗದಂತೆ ಮಾಡಲು ಅರಣ್ಯ ಇಲಾಖೆ ಸೋಲಾರ್ ಬೇಲಿ, ಆನೆ ಕಂದಕ, ರೈಲ್ವೆ ಕಂಬಿ ಬೇಲಿ ನಿರ್ಮಾಣ ಮಾಡಿದ್ದರೂ ಆನೆ ಸೇರಿದಂತೆ ಇತರೆ ವನ್ಯಪ್ರಾಣಿಗಳ ಹಾವಳಿಯನ್ನು ಪೂರ್ಣವಾಗಿ ನಿಯಂತ್ರಿಸಲು ಆಗುತ್ತಿಲ್ಲ.

ಹನೂರು ಭಾಗದಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದೆ. ಎರಡು ತಿಂಗಳ ಹಿಂದೆ ಕೆವಿಎನ್‌ ದೊಡ್ಡಿಯಲ್ಲಿ ಚಿರತೆ ರೈತರೊಬ್ಬರನ್ನು ಕೊಂದಿದೆ. ಕಳೆದ ವಾರ ಮಾರ್ಟಳ್ಳಿಯ ಕಡಬೂರಿನಲ್ಲಿ ಆನೆಯೊಂದು ದನಗಾಹಿಯ ಮೇಲೆ, ಕೊಕ್ಕಬೆರೆಯಲ್ಲಿ ಕರಡಿಯೊಂದು ಹಸು ಮೇಯಿಸುತ್ತಿದ್ದ ವ್ಯಕ್ತಿಯ ಮೇಲೆ ದಾಳಿ ಮಾಡಿದೆ.

ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಹಂದಿಗಳ ಕಾಟ ಹೆಚ್ಚಾಗಿದೆ. ಕಾಂಡಂಚಿನ ಗ್ರಾಮಸ್ಥರು ಬೆಳೆದಿರುವ ಬೆಳೆಗಳು ಹಾಳಾಗುತ್ತಿವೆ. ಅಲ್ಲಲ್ಲಿ ಚಿರತೆಗಳು ಜಾನುವಾರುಗಳ ಮೇಲೆ ದಾಳಿ ಮಾಡುತ್ತಿವೆ.

ಬಿಆರ್‌ಟಿ ವ್ಯಾಪ್ತಿಯಲ್ಲಿ ಕಾಡಾನೆ, ಹಂದಿಗಳು ಸೇರಿದಂತೆ ಇತರೆ ಪ್ರಾಣಿಗಳ ಕಾಟ ಹೆಚ್ಚಾಗಿದ್ದು, ಜನರು ತೊಂದರೆ ಅನುಭವಿಸುತ್ತಿದ್ದಾರೆ. ಬಿಆರ್‌ಟಿ ವ್ಯಾಪ್ತಿಯಲ್ಲಿ ಮಾನವ ವನ್ಯಜೀವಿ ಸಂಘರ್ಷ ತಡೆಯುವುದಕ್ಕಾಗಿ ಅರಣ್ಯ ಇಲಾಖೆ ಏಳೂ ವಲಯಗಳಲ್ಲಿ ಕ್ಷಿಪ್ರ ಕಾರ್ಯ ಪಡೆಯನ್ನು ರಚಿಸಿದೆ. ಉಪ ವಲಯ ಅರಣ್ಯಾಧಿಕಾರಿ ಅವರನ್ನೊಳಗೊಂಡ ಕಾರ್ಯಪಡೆಯು ಗ್ರಾಮಸ್ಥರಿಂದ ಬಂದ ದೂರುಗಳ ಬಗ್ಗೆ ತ್ವರಿತವಾಗಿ ಸ್ಪಂದಿಸಲಿವೆ.

20 ದಿನಗಳಿಂದ ಕೊಳ್ಳೇಗಾಲ ತಾಲ್ಲೂಕಿನ ಲಕ್ಕರಸನಪಾಳ್ಯ, ಕೆಂಪನಪಾಳ್ಯ, ತಿಮ್ಮರಾಜೀಪುರ, ಮಧುವನಹಳ್ಳಿ, ಸಿದ್ದಯ್ಯನಪುರ, ಹರಳೆ, ಮುಳ್ಳೂರು, ಹಂಪಾಪುರ ಗ್ರಾಮದಲ್ಲಿ ಚಿರತೆಗಳು ಕಾಣಿಸಿಕೊಳ್ಳುತ್ತಿದ್ದು, ಜನರಲ್ಲಿ ಮತ್ತು ರೈತರಲ್ಲಿ ಆಂತಕಗಳು ಸೃಷ್ಠಿಯಾಗಿದೆ. ಹಲವು ಬೀದಿ ನಾಯಿಗಳು ಚಿರತೆಗಳಿಗೆ ಬಲಿಯಾಗಿವೆ.

ಶಿವನಸಮುದ್ರದ ಬಳಿ ಕಾಡಾನೆಗಳು ನಿರಂತರವಾಗಿ ಭತ್ತದ ನಾಟಿ, ಕಬ್ಬು ಬೆಳೆಗಳನ್ನು ನಾಶ ಮಾಡುತ್ತಿವೆ. ಜಾಗೇರಿ, ಜಕ್ಕಳಿ ಸುತ್ತಮುತ್ತ ಕೂಡ ಆನೆಗಳ ಹಾವಳಿ ಹೆಚ್ಚಾಗಿದೆ.

ರೈತರ ಆಕ್ರೋಶ: ಹನೂರು ತಾಲ್ಲೂಕು ವ್ಯಾಪ್ತಿಗೆ ಮಲೆ ಮಹದೇಶ್ವರ ವನ್ಯಧಾಮ ಹಾಗೂ ಕಾವೇರಿ ವನ್ಯಧಾಮಗಳು ಬರುತ್ತದೆ. ಆನೆ, ಜಿಂಕೆ ನವಿಲ್‌ ಮುಂತಾದ ಪ್ರಾಣಿಗಳ ಹಾವಳಿಯ ಜೊತೆಗೆ ಹೆಚ್ಚು ಆತಂಕ ಮೂಡಿಸಿರುವುದು ಚಿರತೆಗಳು ನಡೆಸುತ್ತಿರುವ ದಾಳಿಗಳು. ಕಾವೇರಿ ವನ್ಯಧಾಮದ ಹನೂರು ಹಾಗೂ ಕೊತ್ತನೂರು ವನ್ಯಜೀವಿ ವ್ಯಾಪ್ತಿಯಲ್ಲಿ ಜಾನುವಾರುಗಳು ಚಿರತೆಗಳಿಗೆ ಬಲಿಯಾಗುತ್ತಿವೆ.

ವನ್ಯಧಾಮದ ಅಂಚಿನಲ್ಲಿರುವ ಕೆವಿಎನ್ ದೊಡ್ಡಿ ಗ್ರಾಮದ ಗೋವಿಂದಯ್ಯ ಎಂಬುವವರು ಜಾನುವಾರುಗಳನ್ನು ಮೇಯಿಸುವ ಸಂದರ್ಭದಲ್ಲಿ ಚಿರತೆ ದಾಳಿಗೆ ತುತ್ತಾಗಿ ಮೃತಪಟ್ಟಿದ್ದರು. ಈ ಬಗ್ಗೆ ಅರಣ್ಯದಂಚಿನ ಗ್ರಾಮಸ್ಥರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಬಳಿಕ ಒಂದು ತಿಂಗಳ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸೆರೆಹಿಡಿದು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಬಿಡಬೇಕಾಯಿತು.

ಘಟನೆ ಮಾಸುವ ಮುನ್ನವೇ ದೊಡ್ಡಿಂದುವಾಡಿ ಬಳಿಯ ಕರಿಯನಪುರ ಗ್ರಾಮದಲ್ಲಿ ಚಿರತೆ ದಾಳಿಗೆ ಹಸು ಮೃತಪಟ್ಟಿತ್ತು. ಅಲ್ಲದೇ ಆ ಭಾಗದ ರಸ್ತೆ, ಜಮೀನುಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುವುದರ ಮೂಲಕ ಜನರಲ್ಲಿ ಭೀತಿ ಉಂಟು ಮಾಡಿದೆ.

ಪರಿಹಾರ ಸಾಕಾಗುವುದಿಲ್ಲ: ಗುಂಡ್ಲುಪೇಟೆ ತಾಲ್ಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಕೃಷಿ ಮಾಡುವ ರೈತರಿಗೆ ಆನೆ, ಹಂದಿ, ಜಿಂಕೆ ಮತ್ತು ನವೀಲುಗಳಿಂದ ಬೆಳೆ ನಷ್ಟವಾಗುತ್ತಿದೆ. ಬೆಳೆ ನಷ್ಟಕ್ಕೆ ಇಲಾಖೆ ನೀಡುವ ಪರಿಹಾರ ಸಾಲುವುದಿಲ್ಲ ಎಂಬುದು ರೈತರ ದೂರು.

ಕಾಡಂಚಿನ ಗ್ರಾಮದಲ್ಲಿ ಚಿರತೆ ಹಾಗೂ ಹುಲಿಗಳಿಂದಾಗಿ ಜಾನುವಾರುಗಳು ಸಾವಿಗೀಡಾಗುತ್ತಿವೆ. ಎರಡು ವಾರಗಳ ಹಿಂದೆ ಗೋಪಾಲಸ್ವಾಮಿ ಬೆಟ್ಟ ವಲಯದಲ್ಲಿ ಚೌಡಹಳ್ಳಿ ಗ್ರಾಮದ ಭಾಗದಲ್ಲಿ ಹುಲಿ ರೈತನ ಮೇಲೆ ದಾಳಿ ಮಾಡಿತ್ತು. ಅದೃಷ್ಟವಶಾತ್ ಹೆಚ್ಚಿನ ಅನಾಹುತ ಆಗದೆ ರೈತ ಪಾರಾಗಿದ್ದರು. ಅ ಹುಲಿ ಪತ್ತೆಗೆ ವಾರಗಟ್ಟಲೆ ಶೋಧ ಕಾರ್ಯಾಚರಣೆ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ.

‘ಪ್ರತಿ ದಿನ ಚಿರತೆ, ಹುಲಿಗಳಿಗೆ ಮೇಕೆ, ನಾಯಿ ಮತ್ತು ಜಾನುವಾರುಗಳು ಬಲಿಯಾಗುತ್ತಿವೆ. ಇವುಗಳಿಗೆ ಇಲಾಖೆ ಪರಿಹಾರ ಮೀಡಿದರೂ ಮತ್ತೊಂದನ್ನು ಖರೀದಿ ಮಾಡಲು ಸಾಧ್ಯವಾಗುದಿಲ್ಲ, ಇನ್ನೂ ಹಂದಿಗಳಿಂದ ಹೆಚ್ಚು ಬೆಳೆ ನಷ್ಟ ಆಗುತ್ತದೆ. ಪ್ರತಿದಿನ ಹಂದಿಗಳನ್ನು ಜಮೀನಿನಲ್ಲಿ ಕಾಯುವುದೇ ಸವಾಲಿನ ಕೆಲಸವಾಗಿದೆ’ ಎಂಬುದು ರೈತರ ಅಳಲು.

ಪರಿಹಾರ ಹೆಚ್ಚಳ: ಈ ಮಧ್ಯೆ, ವನ್ಯಪ್ರಾಣಿಗಳ ದಾಳಿಯಿಂದ ಮಾನವ ಪ್ರಾಣಿ ಹಾನಿ, ಅಂಗವೈಕಲ್ಯ ಉಂಟಾದರೆ ನೀಡಲಾಗುತ್ತಿದ್ದ ಪರಿಹಾರದ ಮೊತ್ತವನ್ನು ರಾಜ್ಯ ಸರ್ಕಾರ ಹೆಚ್ಚಿಸಿದೆ. ಪ್ರಾಣಿಗಳ ದಾಳಿಯಿಂದ ವ್ಯಕ್ತಿ ಮೃತಪಟ್ಟರೆ, ಅವರಕುಟುಂಬಕ್ಕೆ ನೀಡುತ್ತಿದ್ದ ಪರಿಹಾರ ಮೊತ್ತವನ್ನು ₹7.5 ಲಕ್ಷದಿಂದ ₹15 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಶಾಶ್ವತ ಅಂಗವೈಕಲ್ಯ ಉಂಟಾದರೆನೀಡುತ್ತಿದ್ದ ಪರಿಹಾರವನ್ನು ₹5 ಲಕ್ಷದಿಂದ ₹10 ಲಕ್ಷಕ್ಕೆ ಏರಿಸಲಾಗಿದೆ. ಭಾಗಶಃ ಶಾಶ್ವತ ಅಂಗವೈಕಲ್ಯ ಪ್ರಕರಣಗಳಿಗೆ ₹2.50 ಲಕ್ಷದಿಂದ
₹5 ಲಕ್ಷಕ್ಕೆ ಹೆಚ್ಚಿಸಲಾಗಿದೆ. ದಾಳಿಯಿಂದ ಗಾಯಗೊಂಡಿರುವವರಿಗೆ ನೀಡುತ್ತಿದ್ದ ಪರಿಹಾರ ಧನವನ್ನು ₹30 ಸಾವಿರದಿಂದ ₹60 ಸಾವಿರಕ್ಕೆ ಹೆಚ್ಚಿಸಲಾಗಿದೆ. ಕಾಡಾನೆ ದಾಳಿಯಿಂದ ಉಂಟಾದ ಆಸ್ತಿ ನಷ್ಟ ಪರಿಹಾರ ಮೊತ್ತವನ್ನು ₹10 ಸಾವಿರದಿಂದ ₹20 ಸಾವಿರಕ್ಕೆ ಹೆಚ್ಚಿಸಲಾಗಿದೆ. ಪ್ರಾಣಿಗಳ ದಾಳಿಯಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ನೀಡಲಾಗುತ್ತಿದ್ದ ಮಾಸಾಶನವನ್ನು (ಐದು ವರ್ಷಗಳವರೆಗೆ) ₹2000ದಿಂದ ₹4000ಕ್ಕೆ ಹೆಚ್ಚಿಸಲಾಗಿದೆ. ಶ್ರೀ

ಜನರು ಏನಂತಾರೆ?

ಗಮನಹರಿಸದ ಅಧಿಕಾರಿಗಳು

ಸಾಲ ಮಾಡಿ ವ್ಯವಸಾಯ ಮಾಡುತ್ತೇವೆ. ಈಗ ಕಾಡಾನೆಗಳ ಕಾಟ ಹೆಚ್ಚಾಗಿದೆ. ಇದರಿಂದ ಬೆಳೆಗಳು ನಾಶವಾಗುತ್ತಿವೆ. ಅರಣ್ಯ ಇಲಾಖೆಯವರು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸುವುದಿಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ರೈತರು ವ್ಯವಸಾಯ ಮಾಡುವುದನ್ನೇ ಬಿಡಬೇಕಾದ ಪರಿಸ್ಥಿತಿ ಬರಬಹುದು.

-ದಂಡಪಾಣಿ,ಕೆಂಪನಪಾಳ್ಯ, ಕೊಳ್ಳೇಗಾಲ ತಾಲ್ಲೂಕು

ಕಿತ್ತು ಬಂದ ಸೋಲಾರ್ ಬೇಲಿ

ಕಾಡಂಚಿನ ಗ್ರಾಮಗಳ ಕೆಲವೆಡೆ ಸೋಲಾರ್ ತಂತಿ ಕಿತ್ತು ಬಂದಿದ್ದು, ಇಂತಹ ಸ್ಥಳಗಳ ಮೂಲಕ ಆನೆಗಳು ಜಮೀನುಗಳಿಗೆ ಬರುತ್ತವೆ. ಒಂದೆರಡು ಹೊಲಗದ್ದೆಗಳಲ್ಲಿ ಈಚೆಗೆ ಕಬ್ಬು ಮತ್ತಿತರ ದವಸ ಧಾನ್ಯಗಳನ್ನು ತಿಂದು ಹೋಗಿವೆ. ಪ್ರತಿದಿನ ಅರಣ್ಯ ಸಿಬ್ಬಂದಿ ಗಸ್ತು ಹೊಡೆದರೆ ವನ್ಯಜೀವಿಗಳನ್ನು ನಿಯಂತ್ರಿಸಬಹುದು.

-ಸಿದ್ದರಾಜು,ಅಲ್ಕೆರೆ ಅಗ್ರಹಾರ, ಯಳಂದೂರು ತಾಲ್ಲೂಕು

ಹಂದಿಗಳ ಹಾವಳಿ ತಪ್ಪಿಸಿ

ಕಾಡಂಚಿನ ಗ್ರಾಮಗಳಲ್ಲದೇ ಇತರ ಕಡೆಗಳಲ್ಲಿ ಮುಳ್ಳು ಹಂದಿಗಳು, ನವಿಲುಗಳು ಕೃಷಿಕರ ಫಸಲನ್ನು ನಾಶ ಮಾಡುತ್ತಿವೆ. ಇವುಗಳ ನಿಯಂತ್ರಣಕ್ಕೂ ಅರಣ್ಯ ಇಲಾಖೆ ಮುಂದಾಗಬೇಕಿದೆ.

-ಮಹದೇವಯ್ಯ,ಹೊನ್ನೂರು, ಯಳಂದೂರು ತಾಲ್ಲೂಕು

ಕಾಡುವ ಚಿರತೆ ಭಯ

ಒಂದು ತಿಂಗಳಿನಿಂದ ನಿರಂತರವಾಗಿ ಚಿರತೆ ಕಾಣಿಸಿಕೊಳ್ಳುತ್ತಲೇ ಇದೆ. ಹೀಗಿದ್ದರೂ ಅರಣ್ಯಾಧಿಕಾರಿಗಳು ಚಿರತೆ ಹಾವಳಿ ತಪ್ಪಿಸಿಲ್ಲ. ಶನಿವಾರ ಮುಂಜಾನೆಯೇ ಜಮೀನಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಭಯ ಹುಟ್ಟಿಸಿದೆ.

-ಲಿಂಗರಾಜು,ಕರಿಯನಪುರ ಗ್ರಾಮ, ಹನೂರು ತಾಲ್ಲೂಕು

ಚಿರತೆ ಸೆರೆ ಹಿಡಿಯಿರಿ

ಗ್ರಾಮದಲ್ಲಿ ಮೇಲಿಂದ‌ ಮೇಲೆ ಚಿರತೆ ಕಾಣಿಸಿಕೊಳ್ಳುತ್ತಿದ್ದು ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಕೂಡಲೇ ಅರಣ್ಯಾಧಿಕಾರಿಗಳು ಚಿರತೆಯನ್ನು ಸೆರೆ ಹಿಡಿಯಲು ಕ್ರಮ ವಹಿಸಬೇಕು.

-ಕುಮಾರ,ಚಿಕ್ಕಿಂದುವಾಡಿ, ಹನೂರು ತಾಲ್ಲೂಕು

ಬೆಳೆಗಳನ್ನು ರಕ್ಷಿಸಿ

ಉಮ್ಮತ್ತೂರು ಗುಡ್ಡ ಭಾಗದಲ್ಲಿ ಕೃಷ್ಣಮೃಗಗಳುಬೆಳೆಗಳನ್ನು ಹಾಳು ಮಾಡುತ್ತಿವೆ. ರೈತರು ರಾತ್ರಿ ಸಮಯದಲ್ಲಿ ಜಮೀನು ಕಾಯಲು ಹೋದಾಗ ಚಿರತೆಯ ಕಾಟವಿದೆ. ಹೀಗಾಗಿ ಫಸಲುಗಳನ್ನು ರಕ್ಷಣೆ ಮಾಡಲು ಸಾಧ್ಯವಾಗುತ್ತಿಲ್ಲ. ಹಂದಿಗಳ ಕಾಟ ನಿರಂತರವಾಗಿದೆ. ಅರಣ್ಯ ಇಲಾಖೆಯವರು ಪ್ರಾಣಿಗಳಿಂದ ರಕ್ಷಣೆ ನೀಡಿ ಬೆಳೆಗಳನ್ನು ರಕ್ಷಿಸಬೇಕು.

–ಮಧು,ಹಳ್ಳಿಕೆರೆಹುಂಡಿ, ಚಾಮರಾಜನಗರ ತಾಲ್ಲೂಕು

ಶಾಶ್ವತ ಪರಿಹಾರ ಬೇಕು

ಆನೆಗಳು ಹೊರಗೆ ಬಾರದಂತೆ ಇಲಾಖೆ ಏನೇ ಕ್ರಮ ಕೈಗೊಂಡರೂ ಬೇರೊಂದು ಜಾಗ ಹುಡುಕಿ ಹೊರಬಂದು ಬೆಳೆ ನಾಶ ಮಾಡುತ್ತಿದೆ. ಮೇಲುಕಾಮನಹಳ್ಳಿ, ಮಗುವಿನ ಹಳ್ಳಿ, ಹಂಗಳ ಭಾಗದಲ್ಲಿ ಆನೆಗಳಿಂದ ಬೆಳೆ ಹಾಳಾಗುವುದು ಹೆಚ್ಚಿತ್ತು. ಕಳೆದೊಂದು ತಿಂಗಳಿನಿಂದ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಆನೆಗಳ ಹಾವಳಿಗೆ ಶಾಶ್ವತ ಪರಿಹಾರ ಬೇಕು.

–ರಮೇಶ್‌,ಮೇಲುಕಾಮನಹಳ್ಳಿ, ಗುಂಡ್ಲುಪೇಟೆ ತಾಲ್ಲೂಕು

––

ಜನರ ಸಹಕಾರ ಅಗತ್ಯ

ಕಾವೇರಿ ವನ್ಯಧಾಮದಲ್ಲಿ 120ಕ್ಕೂ ಹೆಚ್ಚು ಚಿರತೆಗಳಿವೆ ಎಂಬುದು ದಾಖಲಾಗಿದೆ.ಅರಣ್ಯದಲ್ಲಿ ದನಕರು, ಮೇಕೆಗಳು ಸುಲಭವಾಗಿ ಸಿಗುವುದರಿಂದ ಚಿರತೆಗಳು ಹೆಚ್ಚಾಗಿ ಅವುಗಳ ಮೇಲೆ ಅವಲಂಬಿತವಾಗಿ ಅರಣ್ಯದೊಳಗೆ ಬೇಟೆಯಾಡುವುದನ್ನೇ ಕಡಿಮೆ ಮಾಡಿ ಆಹಾರಕ್ಕಾಗಿ ಗ್ರಾಮಗಳತ್ತ ಬರಲು ಪ್ರಾರಂಭಿಸುತ್ತವೆ. ಚಿರತೆಗಳನ್ನು ಹಿಡಿದು ಬೇರೆಡೆ ಬಿಡುವುದು ಪರಿಹಾರವಲ್ಲ. ಅವುಗಳು ಗ್ರಾಮಗಳತ್ತ ಬರದಂತೆ ನೋಡಿಕೊಳ್ಳುವುದೇ ಇದಕ್ಕೆ ಶಾಶ್ವತ ಪರಿಹಾರ. ಈ ನಿಟ್ಟಿನಲ್ಲಿ ಅರಣ್ಯದಂಚಿನ ಗ್ರಾಮಗಳ ಜನರೂ ಅರಣ್ಯ ಇಲಾಖೆಯೊಂದಿಗೆ ಸಹಕರಿಸಬೇಕು.

-ನಂದೀಶ್,ಡಿಸಿಎಫ್, ಕಾವೇರಿ ವನ್ಯಧಾಮ.

ಕಾಡಂಚಿನ ಕಬ್ಬು ಕಟಾವಿಗೆ ಸಲಹೆ

ಈಗ ಆನೆಗಳು ವಲಸೆ ಹೋಗುವ ಸಮಯ. ಅದಲ್ಲದೇ ಕಬ್ಬು ಸೇರಿದಂತೆ ಬೆಳೆಗಳು ಕಟಾವಿಗೆ ಬಂದಿವೆ. ಹೀಗಾಗಿ, ಪ್ರಾಣಿಗಳು ಕೃಷಿ ಜಮೀನುಗಳಿಗೆ ನುಗ್ಗುವ ಸಾಧ್ಯತೆ ಇರುತ್ತದೆ. ಬಿಆರ್‌ಟಿ ಅಂಚಿನಲ್ಲಿ ಕಬ್ಬು ಬೆಳೆ ಹೆಚ್ಚಿದ್ದು, ಸಕ್ಕರೆ ಕಾರ್ಖಾನೆಯವರು ಅಥವಾ ರೈತರು ಆದ್ಯತೆಯ ಮೇರೆಗೆ ಕಾಡಂಚಿನ ಪ್ರದೇಶದಲ್ಲಿರುವ ಕಬ್ಬನ್ನು ಮೊದಲು ಕಟಾವು ಮಾಡಲು ಕ್ರಮವಹಿಸಬೇಕು. ಇದನ್ನು ಜಿಲ್ಲಾಧಿಕಾರಿ ಅವರ ಗಮನಕ್ಕೂ ತಂದಿದ್ದೇನೆ. ರೈತ ಮುಖಂಡರ ಗಮನಕ್ಕೂ ತರಲಾಗಿದೆ. ಕಬ್ಬು ಕಟಾವು ಆದರೆ, ಆನೆಗಳು ಜಮೀನಿಗೆ ನುಗ್ಗುವುದು ಕಡಿಮೆಯಾಗುತ್ತದೆ.

– ದೀಪ್‌ ಜೆ.ಕಾಂಟ್ರಾಕ್ಟರ್‌,ಡಿಸಿಎಫ್‌, ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ

ನಿರ್ವಹಣೆ: ಸೂರ್ಯನಾರಾಯಣ ವಿ.

ಪೂರಕ ಮಾಹಿತಿ: ಬಿ.ಬಸವರಾಜು, ಅವಿನ್‌ ಪ್ರಕಾಶ್‌ ವಿ., ನಾ.ಮಂಜುನಾಥಸ್ವಾಮಿ, ಮಲ್ಲೇಶ ಎಂ., ಮಹದೇವ್‌ ಹೆಗ್ಗವಾಡಿಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT