ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆದರಿಕೆ, ನಿಂದನೆ ಮಧ್ಯೆ ಕೋವಿಡ್‌ ಕರ್ತವ್ಯ ಮೆರೆದ ಗಟ್ಟಿಗಿತ್ತಿಯರು

ಕೋವಿಡ್‌ ಸಮಯದಲ್ಲಿ ಆಶಾ ಕಾರ್ಯಕರ್ತರಿಂದ ಜೀವದ ಹಂಗು ತೊರೆದು ಕೆಲಸ, ಜನರಿಂದ ಸಿಗದ ಸಹಕಾರ
Last Updated 14 ಜೂನ್ 2021, 5:25 IST
ಅಕ್ಷರ ಗಾತ್ರ

ಚಾಮರಾಜನಗರ: ಜೂನ್‌ 9ರಂದು ತಾಲ್ಲೂಕಿನ ನಲ್ಲೂರು ಗ್ರಾಮದಲ್ಲಿ ಸ್ಥಳೀಯ ಆಶಾ ಕಾರ್ಯಕರ್ತೆಯೊಬ್ಬರು ಕೋವಿಡ್‌ ದೃಢಪಟ್ಟ ಮಹಿಳೆಯನ್ನು ಕೋವಿಡ್‌ ಕೇರ್‌ ಸೆಂಟರ್‌ಗೆ ದಾಖಲಿಸಿದರು ಎಂಬ ಕಾರಣಕ್ಕೆ ಆ ಮಹಿಳೆಯ ಕುಟುಂಬದವರು ಆಶಾ ಕಾರ್ಯಕರ್ತೆ ಮನೆಯ ಮುಂದೆ ಗಲಾಟೆ ಮಾಡಿದರು. ತಕ್ಷಣ ಆಶಾ ಕಾರ್ಯಕರ್ತೆ ಪೊಲೀಸ್‌ ಇಲಾಖೆಯ ತುರ್ತು ಸಹಾಯವಾಣಿ 112ಗೆ ಕರೆ ಮಾಡಿ, ಪೊಲೀಸರಿಗೆ ಮಾಹಿತಿ ನೀಡಿದರು. ವಾಹನದಲ್ಲಿ ಬಂದ ಪೊಲೀಸರು, ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಅದರ ಮುನ್ನಾ ದಿನ (ಜೂನ್‌ 8) ತಾಲ್ಲೂಕಿನ ಅಮಚವಾಡಿಯಲ್ಲಿ ವೈದ್ಯರ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ನಡೆಯುತ್ತಿತ್ತು. ಈ ಸಂದರ್ಭದಲ್ಲೂ ಗ್ರಾಮದ ಕೆಲವರು ಆಶಾ ಕಾರ್ಯಕರ್ತೆ ಹಾಗೂ ಆರೋಗ್ಯ ಸಿಬ್ಬಂದಿ ಜೊತೆ ಗಲಾಟೆ ಮಾಡಿದರು. ಸ್ಥಳಕ್ಕೆ ಬಂದ ಪೊಲೀಸರು ಸಮಸ್ಯೆಯನ್ನು ಇತ್ಯರ್ಥ ಪಡಿಸಿದರು.

ಇದು ಎರಡು ಉದಾಹರಣೆಗಳಷ್ಟೇ. ಕೋವಿಡ್‌ ಸಂಕಷ್ಟದ ಸಮಯದಲ್ಲಿ ಜೀವದ ಹಂಗು ತೊರೆದು ಮನೆ ಮನೆಗೆ ಹೋಗಿ ಸೋಂಕು ನಿಯಂತ್ರಣಕ್ಕೆ ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರನ್ನು ಬೆದರಿಸುವ, ಅವಾಚ್ಯ ಶಬ್ದಗಳಿಂದ ನಿಂದಿಸುವ, ಅವರೊಂದಿಗೆ ಗಲಾಟೆ ಮಾಡುತ್ತಿರುವ ಪ್ರಕರಣಗಳು ಜಿಲ್ಲೆಯಲ್ಲಿ ಪದೇ ಪದೇ ವರದಿಯಾಗುತ್ತಿವೆ.

ಇತ್ತೀಚೆಗೆ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಭಾಗವಹಿಸಿದ್ದ ಟಾಸ್ಕ್‌ ಫೋರ್ಸ್‌ ಸಭೆಯಲ್ಲಿ ಗುಂಡ್ಲುಪೇಟೆ ತಾಲ್ಲೂಕಿನ ಬಾಚಹಳ್ಳಿ ಗ್ರಾಮದ ಆಶಾ ಕಾರ್ಯಕರ್ತೆಯರೊಬ್ಬರು, ‘ಕೋವಿಡ್ ಪರೀಕ್ಷೆ ಅಥವಾ ಲಸಿಕೆ ಪಡೆದುಕೊಳ್ಳುವಂತೆ ತಿಳಿ ಹೇಳಿದರೂ ಗ್ರಾಮದ ಕೆಲವು ಮಂದಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕುತ್ತಾರೆ. ‘ಆರೋಗ್ಯವಾಗಿರುವ ನಮಗೆ ಲಸಿಕೆ ಹಾಕಬೇಡಿ. ಒಂದು ವೇಳೆ ಲಸಿಕೆ ಹಾಗಿ ಆರೋಗ್ಯದಲ್ಲಿ ವ್ಯತ್ಯಯ ಉಂಟಾದರೆ ನೀವೇ ಜವಾಬ್ದಾರಿ ತೆದುಕೊಳ್ಳುತ್ತೀರಾ? ಈ ಬಗ್ಗೆ ನಮಗೆ ಬಾಂಡ್ ಪೇಪರ್‌ನಲ್ಲಿ ಬರೆದುಕೊಡಿ’ ಎಂದು ಹೇಳುತ್ತಾರೆ’ ಎಂಬುದಾಗಿ ಅಳಲು ತೋಡಿಕೊಂಡಿದ್ದರು.

ಸಭೆಯಲ್ಲಿ ಮಾತನಾಡಿದ್ದ ಸುರೇಶ್‌ ಕುಮಾರ್‌ ಅವರು, ಆಶಾ ಕಾರ್ಯಕರ್ತೆಯರಿಗೆ ಆತ್ಮಸ್ಥೈರ್ಯ ತುಂಬಿ ಎಂಬ ಸಲಹೆಯನ್ನು ಅಧಿಕಾರಿಗಳಿಗೆ ನೀಡಿದ್ದರು.

ಒತ್ತಡದ ಕೆಲಸ: ತಿಂಗಳಿಗೆ ಗರಿಷ್ಠ ಎಂದರೆ ₹7,500ದಷ್ಟು ವೇತನ ಪಡೆಯುವ ಆಶಾ ಕಾರ್ಯಕರ್ತೆಯರು ಮಾಡುವ ಕೆಲಸದ ಪಟ್ಟಿ ದೊಡ್ಡದಿದೆ. ಕೋವಿಡ್‌ ಕಾಟ ಆರಂಭಗೊಂಡ ನಂತರ ಇದು ದುಪ್ಪಟ್ಟಾಗಿದೆ.

ಮನೆ-ಮನೆಗಳಿಗೆ ತೆರಳಿ ಆತ್ಮ ವಿಶ್ವಾಸ ತುಂಬಿ ಜನರನ್ನು ಸಂತೈಸುವುದು, ಕುಟುಂಬಸ್ಥರ ಗಂಟಲು ದ್ರವ ಸಂಗ್ರಹ, ಸೋಂಕಿತರ ಚಲನವಲನಗಳಬಗ್ಗೆ ಕಣ್ಣಿಡುವುದು ಸೇರಿದಂತೆ ಸಣ್ಣ, ಪುಟ್ಟ ಕಾಯಿಲೆಗಳಿಗೂ ಶುಶ್ರೂಷೆ ಒದಗಿಸಬೇಕು. ಗ್ರಾಮ ಪಂಚಾಯಿತಿ ಮಟ್ಟದ ಟಾಸ್ಕ್ ಪೋರ್ಸ್ ಸಭೆಗಳಲ್ಲಿ ಮಾಹಿತಿ ಒದಗಿಸುವುದು, ಪಿಡಿಒ, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ತಾಲ್ಲೂಕು ಆಸ್ಪತ್ರೆಗಳ ಜೊತೆ ಸದಾ ಸಂಪರ್ಕದಲ್ಲಿ ಇದ್ದು, ಆಯಾ ಕ್ಷಣದ ಮಾಹಿತಿ ಒದಗಿಸುವುದು. ಇದರ ನಡುವೆ ಲಸಿಕೆ ಅಭಿಯಾನ, ವಯಸ್ಸಿನವರ್ಗೀಕರಣ ಮಾಡಿ ಲಸಿಕೆ ಕೊಡಿಸಲು ಸಿದ್ಧತೆ ಮಾಡುವುದು, ಇದರ ಜೊತೆಗೆ ತಮ್ಮ ಆರೋಗ್ಯ ಹಾಗೂ ಕುಟುಂಬದವರ ಯೋಗಕ್ಷೇಮವನ್ನೂ ನೋಡಿಕೊಳ್ಳಬೇಕು.

ಇಷ್ಟೆಲ್ಲ ಕೆಲಸಗಳನ್ನು ಮಾಡಿದರೂ ಸಂಬಳ ಮತ್ತುಸಾರಿಗೆ ಹೆಚ್ಚಿಸುವ ಮನಃಸ್ಥಿತಿ ಯಾರಿಗೂ ಇಲ್ಲ ಎಂದು ಅಳಲು ತೋಡಿಕೊಳ್ಳುತ್ತಾರೆ ಆಶಾ ಕಾರ್ಯಕರ್ತೆಯರು.

ಜಿಲ್ಲೆಯಲ್ಲಿ 796 ಮಂದಿ ಆಶಾಕಾರ್ಯಕರ್ತೆಯರಿದ್ದಾರೆ (278 –ಚಾಮರಾಜನಗರ, 273–ಕೊಳ್ಳೇಗಾಲ ಮತ್ತು ಹನೂರು,177–ಗುಂಡ್ಲುಪೇಟೆ, 68–ಯಳಂದೂರು). ಇದುವರೆಗೆ 30 ಮಂದಿಗೆ ಕೊರೊನಾ ವೈರಸ್‌ ಸೋಂಕು ತಗುಲಿದೆ. ಅದೃಷ್ಟವಶಾತ್‌ ಇದುವರೆಗೆ ಜೀವ ಹಾನಿ ಸಂಭವಿಸಿಲ್ಲ.

‘ಆರೋಗ್ಯ ಇಲಾಖೆ ಸೂಚಿಸುವ ಎಲ್ಲ ಕೆಲಸಗಳನ್ನು ಮಾಡುವ ತಮಗೆ ಸರ್ಕಾರ ಸೂಕ್ತ ಸಂಭಾವನೆ ಕೊಡುವುದಿಲ್ಲ. ಸಾರಿಗೆ ಹಾಗೂ ಇತರ ಸೌಲಭ್ಯಗಳೂ ಸರಿಯಾಗಿ ಸಿಗುವುದಿಲ್ಲ. ಕೋವಿಡ್‌ ಸಂದರ್ಭದಲ್ಲಿ ಎಲ್ಲ ಆಶಾ ಕಾರ್ಯಕರ್ತೆಯರಿಗೆ ಇಲಾಖೆ ಮಾಸ್ಕ್‌, ಸ್ಯಾನಿಟೈಸರ್‌, ಇತರ ಸುರಕ್ಷತಾ ಸಲಕರಣೆಗಳನ್ನು ಪೂರೈಸಿರಲಿಲ್ಲ’ ಎಂಬುದು ಅವರ ಆರೋಪ. ಇತ್ತೀಚೆಗೆ ಗ್ರಾಮ ಪಂಚಾಯಿತಿಗಳಿಂದ ತಲಾ ಎರಡು ಮಾಸ್ಕ್‌, ಸ್ಯಾನಿಟೈಸರ್‌ ವಿತರಿಸಲಾಗಿದೆ.

ಉತ್ತೇಜನ ಬೇಕು: ‘ಜೀವದ ಹಂಗು ತೊರೆದು ಕೋವಿಡ್‌ ಕಷ್ಟಕಾಲದಲ್ಲೂ ಕೆಲಸ ಮಾಡುತ್ತಿದ್ದೇವೆ. ಆದರೆ ಸರ್ಕಾರದಿಂದ ಸರಿಯಾದ ಉತ್ತೇಜನ, ಸೌಲಭ್ಯ ಸಿಗುತ್ತಿಲ್ಲ. ಗೌರವಧನ, ಪ್ರೋತ್ಸಾಹ ಧನ ಸೇರಿ ತಿಂಗಳಿಗೆ ಗರಿಷ್ಠ ₹ 7,500–₹ 8,000 ಸಂಬಳ ಬರುತ್ತದೆ. ತಿಂಗಳಿಗೆ ₹ 12 ಸಾವಿರ ಗೌರವಧನ ನಿಗದಿ ಮಾಡಿ ಎಂದು ಹಲವು ಸಮಯದಿಂದ ಒತ್ತಾಯಿಸುತ್ತಲೇ ಬಂದಿದ್ದೇವೆ. ನಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸುತ್ತಲೇ ಇಲ್ಲ’ ಎಂದುಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆಕವಿತ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಂಡ ಕೂಡಲೇ ಬಾಗಿಲು ಹಾಕುತ್ತಾರೆ’
ಕೋವಿಡ್‌ ಸಮಯದಲ್ಲಿ ನಾವು ಮಾಡುತ್ತಿರುವ ಕೆಲಸದ ಬಗ್ಗೆ ಹೆಮ್ಮೆ ಇದೆ. ಗ್ರಾಮೀಣ ಭಾಗಗಳಲ್ಲಿ ಮನೆ ಮನೆಗೆ ತೆರಳಿ ಆರೋಗ್ಯ ಸೇವೆ ನೀಡುತ್ತಾ ಗೌರವ ಸಂಪಾದಿಸಿದ್ದೆವು. ಜನರು ತಮ್ಮನ್ನು ಮನೆಯೊಳಕ್ಕೆ ಕರೆದು, ಮಾತನಾಡಿಸುತ್ತಿದ್ದರು. ಅವರ ಆರೋಗ್ಯ ಸಮಸ್ಯೆ, ಕಷ್ಟ ಸುಖಗಳನ್ನು ಹೇಳಿಕೊಳ್ಳುತ್ತಿದ್ದರು. ಆದರೆ, ಕೋವಿಡ್‌ ಬಂದ ನಂತರ ಬಹುತೇಕ ಕಡೆಗಳಲ್ಲಿ ನಾವು ಮನೆಗಳಿಗೆ ಹೋದರೆ ವಿಚಿತ್ರವಾಗಿ ನೋಡುತ್ತಾರೆ. ಅಸ್ಪೃಶ್ಯರಂತೆ ಕಾಣುತ್ತಿದ್ದಾರೆ. ಕೆಲವು ಜನರ ವರ್ತನೆಯಿಂದ ಮಾನಸಿಕ ಹಿಂಸೆ ಅನುಭವಿಸುತ್ತಿದ್ದೇವೆ. ಕೆಲವು ಕಡೆಗಳಲ್ಲಿ ಸಾಮಾಜಿಕವಾಗಿ, ದೈಹಿಕವಾಗಿಯೂ ತೊಂದರೆಯಾಗಿದೆ. ಇದರಿಂದಾಗಿ ಆಶಾ ಕಾರ್ಯಕರ್ತೆಯರ ಮನೆಗಳಲ್ಲೂ ಸಮಸ್ಯೆಯಾಗುತ್ತಿದೆ. ಕೆಲವು ಕಡೆ ನಮಗೆ ಸ್ಥಳೀಯ ಜನಪ್ರತಿನಿಧಿಗಳ ಸಹಕಾರವೂ ಸಿಗುತ್ತಿಲ್ಲ.

ಇತ್ತೀಚೆಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಟಾಸ್ಕ್‌ ಫೋರ್ಸ್‌ ಸಮಿತಿ ರಚನೆಯಾದ ಬಳಿಕ ಹಾಗೂ ಪೊಲೀಸರು ಕೂಡ ಸಹಾಯಕ್ಕೆ ಬರಲು ಆರಂಭಿಸಿದ ನಂತರ ನಮಗೆ ಸ್ವಲ್ಪ ಸಮಾಧಾನವಾಗಿದೆ. ಏನಾದರೂ ತೊಂದರೆಯಾದರೆ ಸಮಿತಿಗೆ ತಿಳಿಸುತ್ತೇವೆ. ಪೊಲೀಸರನ್ನು ಸಂಪರ್ಕಿಸುತ್ತೇವೆ.

ಒಂದು ಕೋವಿಡ್‌ ಪ್ರಕರಣ ಪತ್ತೆ ಮಾಡಿದರೆ ಎಷ್ಟು ದುಡ್ಡು ಕೊಡುತ್ತಾರೆ ಎಂದು ಜನ ಕೇಳುತ್ತಾರೆ. ನಮಗೆ ಏನೂ ಸಿಗುವುದಿಲ್ಲ. ಜನರಿಗೆ ಯಾರೋ ತಪ್ಪು ಮಾಹಿತಿ ನೀಡುತ್ತಿದ್ದಾರೆ.
– ಕವಿತ, ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ

*********

ಆಶಾ ಕಾರ್ಯಕರ್ತೆಯರು ಏನಂತಾರೆ?

ಅಪಾಯ​ ಭತ್ಯೆ ಕೊಡಿ
ಕೋವಿಡ್ ವಾರಿಯರ್‌ಗಳಿಗೆ ನೀಡುವ ಅಪಾಯ ಭತ್ಯೆ ₹ 5,000 ಅನ್ನು ನಮಗೂನೀಡಬೇಕು. ಸಾವಿಗೀಡಾದ ಕುಟುಂಬಗಳಿಗೆ ₹5 ಲಕ್ಷ ಪರಿಹಾರ ನೀಡಬೇಕು. ಮಾಸಿಕ ಗೌರವಧನವನ್ನು ಆಯಾ ತಿಂಗಳು ನೀಡಲು ಕ್ರಮ ವಹಿಸಬೇಕು. ಅಗತ್ಯ ಪಿಪಿಇ ಕಿಟ್, ಮಾಸ್ಕ್,
ಸ್ಯಾನಿಟೈಸರ್ ಮತ್ತು ಗ್ಲೌಸ್ ಸೇರಿದಂತೆ ಸುರಕ್ಷಾ ಸಲಕರಣೆಗಳನ್ನು ನೀಡಬೇಕು. ಸೋಂಕಿತ ಆಶಾ ಕಾರ್ಯಕರ್ತೆಯರಿಗೆ ₹25 ಸಾವಿರನೀಡಿ ಅವರ ಕುಟುಂಬಕ್ಕೆ ನೆರವಾಗಬೇಕು.
– ಸಿದ್ದನಾಗಮ್ಮ,ಯಳಂದೂರು ತಾಲ್ಲೂಕುಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ

ಅಸ್ಪೃಶ್ಯರಂತೆ ಕಾಣುತ್ತಿದ್ದಾರೆ
ಗ್ರಾಮೀಣ ಕೆಲಸ ಮಾಡುವುದೇ ಕಷ್ಟವಾಗಿದೆ. ಗ್ರಾಮಗಳಲ್ಲಿ ಆಶಾ ಕಾರ್ಯಕರ್ತೆಯನ್ನೇ ಅಸ್ಪೃಶ್ಯರಂತೆ ಕಾಣುತ್ತಾರೆ. ‘ನೀವು ಪ್ರತಿನಿತ್ಯ ಆಸ್ಪತ್ರೆಗೆ ಹೋಗುತ್ತಿರಿ. ನಮ್ಮ ಮನೆಗಳ ಬಳಿ ಬರಬೇಡಿ’ ಎನ್ನುತ್ತಾರೆ. ಕೋವಿಡ್ ದೃಢಪಟ್ಟಿರುವವರನ್ನು ಸಂಪರ್ಕಿಸಿದರೆ ‘ನಮಗೆ ಯಾವುದೇ ರೋಗವಿಲ್ಲ’ ಎಂದು ನಮ್ಮನ್ನೇ ಗದರಿಸುತ್ತಾರೆ. ಇಷ್ಟೆಲ್ಲ ಅವಮಾನಗಳ ನಡುವೆ ನಮ್ಮ ಕಾರ್ಯಕರ್ತೆಯರು ಕೆಲಸ ಮಾಡಬೇಕಿದೆ. ಅಧಿಕಾರಿಗಳು ಈ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದರೂ ಜನರು ಮಾತ್ರ ಆಶಾ ಕಾರ್ಯಕರ್ತೆಯರನ್ನು ಜರಿಯುವುದನ್ನು ಬಿಟ್ಟಿಲ್ಲ
– ಸುಲೋಚನಾ, ಅಧ್ಯಕ್ಷೆ, ಕೊಳ್ಳೇಗಾಲ (ಹನೂರು ಸೇರಿ) ತಾಲ್ಲೂಕು ಘಟಕ

ಜನರ ಸ್ಪಂದನೆ, ಬೇರೆಯವರ ಸಹಕಾರವೂ ಇಲ್ಲ
ದಿನದ ಇಪ್ಪತ್ತು ನಾಲ್ಕು ಗಂಟೆ ಕೆಲಸ ಮಾಡಿ ಎನ್ನುತ್ತಾರೆ. ನಮಗೆ ಕೋವಿಡ್ ಬಂದರೆ ಏನು ಗತಿ? ಅಂಗನವಾಡಿ ಕಾರ್ಯಕರ್ತರು ಸರಿಯಾದ ಬೆಂಬಲ ನೀಡುವುದಿಲ್ಲ. ಕೋವಿಡ್ ನಿರ್ವಹಣೆಗೆ ಎಲ್ಲರೂ ಸಹಕಾರದಿಂದ ಕೆಲಸ ಮಾಡಿ ಎಂದು ಶಾಸಕರು ಮತ್ತು ಅಧಿಕಾರಿಗಳು ಹೇಳುತ್ತಾರೆ. ನಮಗೆ ಯಾರೂ ಬೆಂಬಲ ನೀಡುವುದಿಲ್ಲ. ಜನರ ಸ್ಪಂದನೆಯೂ ಇಲ್ಲ.ಆಶಾ ಕಾರ್ಯಕರ್ತೆಯರು ಮತ್ತು ನರ್ಸ್‌ಗಳನ್ನು ಬಿಟ್ಟರೆ ಬೇರೆ ಯಾರೂ ಲಸಿಕೆ ಹಾಕಿಸಿಕೊಳ್ಳಿ ಎಂದು ಜನರಿಗೆ ಹೇಳುವುದಿಲ್ಲ. ಬುಡಕಟ್ಟು ಜನಾಂಗದ ಕಾಲೋನಿಗಳಲ್ಲಿ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಾರೆ. ಎಲ್ಲರಿಗೂ ಲಸಿಕೆ ಹಾಕಿ ಎಂದು ಅಧಿಕಾರಿಗಳು ಒತ್ತಡ ಹಾಕುತ್ತಾರೆ. ಆದರೆ ಜನರು ಭಯ ಪಡುತ್ತಿದ್ದಾರೆ
– ವಿಶಾಲಾಕ್ಷಿ, ಆಶಾ ಕಾರ್ಯಕರ್ತೆ, ಗುಂಡ್ಲುಪೇಟೆ

ಸಂಭಾವನೆ ಹೆಚ್ಚಿಸಿ
ಗ್ರಾಮೀಣ ಭಾಗಗಳಲ್ಲಿ ದಿನನಿತ್ಯವೂ ಸೇವೆ ಒದಗಿಸಬೇಕಿದೆ. ಸಹಾಯ ಕೇಳಿ ಬರುವ ಸ್ತ್ರೀಯರು, ವೃದ್ಧರು ಮತ್ತು ಮಕ್ಕಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗಬೇಕು.ಇದಕ್ಕಾಗಿ 24 ಗಂಟೆಗಳ ದುಡಿತ ಅನಿವಾರ್ಯ. ಹೀಗಾಗಿ ಸರ್ಕಾರ ಮೊಬೈಲ್, ಆನ್‌ಲೈನ್‌ ಮತ್ತಿತರ ಸೇವೆ ಒದಗಿಸಲು ನಮಗೂ ಭತ್ಯೆ ಮತ್ತು ಸಂಭಾವನೆಯನ್ನು ಕಾಲಕಾಲಕ್ಕೆಹೆಚ್ಚಿಸಬೇಕು. ಕೆಲಸದ ಸಮಯವನ್ನು ಮಿತಿಗೊಳಿಸಬೇಕು.
– ಮಹದೇವಮ್ಮ, ಆಶಾ ಕಾರ್ಯಕರ್ತೆ, ಗೌಡಹಳ್ಳಿ, ಯಳಂದೂರು ತಾಲ್ಲೂಕು

ವಾಹನ ವ್ಯವಸ್ಥೆ ಕಲ್ಪಿಸಿ
ಪಿ.ಜಿ.ಪಾಳ್ಯ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ 10 ಗಿರಿಜನ ಹಾಡಿಗಳಿವೆ. ಇವೆಲ್ಲದಕ್ಕೂ ಯಾವುದೇ ವಾಹನದ ವ್ಯವಸ್ಥೆ ಇಲ್ಲ. ಲಾಕ್‌ಡೌನ್‌ಗಿಂತ ಮೊದಲು ಸಾರಿಗೆ ಬಸ್‌ ಬರುತ್ತಿತ್ತು. ಈಗ ಅದು ಬರುತ್ತಿಲ್ಲ. ಹಾಡಿಗಳಿಗೆ ತೆರಳುವುದೇ ಕಷ್ಟವಾಗಿದೆ. ತುರ್ತು ಸಂದರ್ಭಗಳಲ್ಲಿ ನಾವು ನಡೆದುಕೊಂಡೇ ಓಡಾಡಬೇಕಿದೆ. ಗಿರಿಜನರು ನಮ್ಮ ಕೆಲಸಗಳಿಗೂ ಸ್ಪಂದಿಸದಿರುವುದರಿಂದ ಕಷ್ಟವಾಗುತ್ತಿದೆ. ಲಸಿಕೆ, ಚುಚ್ಚುಮದ್ದು ಕೊಡಿಸಲು ಸಾಕಷ್ಟು ಪರದಾಡಬೇಕಿದೆ. ವಾಹನ ವ್ಯವಸ್ಥೆ ಕಲ್ಪಿಸಿದರೆ ಅನುಕೂಲ.
–ಮಹೇಶ್ವರಿ, ಆಶಾ ಕಾರ್ಯಕರ್ತೆ, ಪಿ.ಜಿ ಪಾಳ್ಯ, ಹನೂರು ತಾಲ್ಲೂಕು

ಪುನರ್‌ಮನನ, ತಜ್ಞರಿಂದ ಕೌನ್ಸೆಲಿಂಗ್‌ಗೆ ಯೋಜನೆ
ಆಶಾ ಕಾರ್ಯಕರ್ತರು ಆರೋಗ್ಯ ಇಲಾಖೆಯ ಶಕ್ತಿ. ಅವರು ಮಾಡುತ್ತಿರುವ ಕೆಲಸ ಹಾಗೂ ಅವರ ಬಗ್ಗೆ ತುಂಬಾ ಗೌರವವಿದೆ. ಜನರಿಗೆ ಮನೆ ಬಾಗಿಲಿಗೇ ಆರೋಗ್ಯ ಸೇವೆಯನ್ನು ನೀಡುತ್ತಾ ಬಂದಿದ್ದಾರೆ. ಕೋವಿಡ್‌ ಹಾವಳಿ ಆರಂಭದ ನಂತರ ಅವರು ಮುಂಚೂಣಿ ಕಾರ್ಯಕರ್ತರಾಗಿದ್ದಾರೆ. ಗ್ರಾಮೀಣ ಭಾಗಗಳಲ್ಲಿ ಸೋಂಕು ನಿಯಂತ್ರಣ, ಕೋವಿಡ್‌ ಪರೀಕ್ಷೆ ಇವರ ಕೊಡುಗೆ ಸಾಕಷ್ಟಿದೆ. ಕೋವಿಡ್‌ ಪರೀಕ್ಷೆಯ ಸಂದರ್ಭ, ಸೋಂಕಿತರನ್ನು ಕ್ವಾರಂಟೈನ್‌ ಮಾಡುವುದು ಅಥವಾ ಆಸ್ಪತ್ರೆಯ ದಾಖಲಿಸುವುದು, ಕೋವಿಡ್‌ ಲಸಿಕೆ ಪಡೆಯುವಂತೆ ಮಾಡುವ ಸಂದರ್ಭದಲ್ಲಿ ಗ್ರಾಮೀಣದ ಜನರು ಆಶಾಕಾರ್ಯಕರ್ತೆಯರಿಗೆ ಸಹಕರಿಸುತ್ತಿಲ್ಲ. ತಾವು ಅನುಭವಿಸುತ್ತಿರುವ ಕಷ್ಟಗಳನ್ನು ಉಸ್ತುವಾರಿ ಸಚಿವರೊಂದಿಗೆ, ಅಧಿಕಾರಿಗಳೊಂದಿಗೆ ಅವರು ಹಂಚಿಕೊಂಡಿದ್ದಾರೆ. ಹಲವರು ಮಾನಸಿಕವಾಗಿ ಒತ್ತಡ ಅನುಭವಿಸುತ್ತಿದ್ದಾರೆ. ಕೋವಿಡ್‌ ನಿಯಂತ್ರಣ‌ಕ್ಕೆ ಬಂದ ನಂತರ ಜಿಲ್ಲೆಯ ಆಶಾ ಕಾರ್ಯಕರ್ತರಿಗೆ ಹೋಬಳಿ, ತಾಲ್ಲೂಕು ಮಟ್ಟದಲ್ಲಿ ಪುನರ್‌ಮನನ ಕಾರ್ಯಕ್ರಮ, ತಜ್ಞರಿಂದ ಕೌನ್ಸೆಲಿಂಗ್‌ ನಡೆಸಲು ಯೋಜನೆ ಹಾಕಿಕೊಂಡಿದ್ದೇವೆ.

ಗೌರವಧನ ಹೆಚ್ಚಳ ಮಾಡಬೇಕು ಎಂದು ಹಲವು ಸಮಯದಿಂದ ಅವರು ಒತ್ತಾಯಿಸುತ್ತಲೇ ಬಂದಿದ್ದಾರೆ. ಆದರೆ, ಇದು ಸರ್ಕಾರದ ಮಟ್ಟದಲ್ಲಿ ತೀರ್ಮಾನವಾಗಬೇಕಾಗಿದೆ. ಕೋವಿಡ್‌ 2ನೇ ಅಲೆಯ ಸಂದರ್ಭದಲ್ಲಿ ಸರ್ಕಾರ ಆಶಾ ಕಾರ್ಯಕರ್ತೆಯರಿಗೆ ₹3,000 ಸಹಾಯಧನ ಘೋಷಿಸಿದೆ. ಅದನ್ನು ಅವರಿಗೆ ತಲುಪಿಸಲು ಕ್ರಮ ವಹಿಸಲಾಗುವುದು.
– ಡಾ.ಎಂ.ಸಿ.ರವಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ

___________________________________________

ಅಭಿಪ್ರಾಯ ಸಂಗ್ರಹ: ನಾ.ಮಂಜುನಾಥಸ್ವಾಮಿ, ಮಲ್ಲೇಶ ಎಂ. ಅವಿನ್‌ ಪ್ರಕಾಶ್, ಬಿ.ಬಸವರಾಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT