ಬುಧವಾರ, ಜನವರಿ 19, 2022
23 °C
ಕೋವಿಡ್‌, ಇಂಧನ ಬೆಲೆ ಏರಿಕೆ ಹೊಡೆತ; ಪ್ರಯಾಣಿಕರ ಜೇಬಿಗೂ ಬೀಳುತ್ತಿದೆ ಕತ್ತರಿ

ಅಡಕತ್ತರಿಯಲ್ಲಿ ಆಟೊ, ಟ್ಯಾಕ್ಸಿ ಚಾಲಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಆಟೊ, ಟ್ಯಾಕ್ಸಿ ಚಾಲಕರು, ಮಾಲೀಕರ ಬದುಕನ್ನು ಕೋವಿಡ್‌ ಹಾವಳಿ, ಇಂಧನ ಬೆಲೆ ಏರಿಕೆ ಅಡಕತ್ತರಿಯಲ್ಲಿ ಸಿಲುಕುವಂತೆ ಮಾಡಿದೆ. ಆಟೊ, ಟ್ಯಾಕ್ಸಿ ಪ್ರಯಾಣ ಇದೀಗ ಜನ ಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿದೆ. 

ಕೋವಿಡ್‌ನ ಎರಡೂ ಅಲೆಗಳ ಲಾಕ್‌ಡೌನ್‌ ಹೊಡೆತದಿಂದ ಚೇತರಿಸಿ ಕೊಳ್ಳುತ್ತಿರುವ ಸಂದರ್ಭದಲ್ಲೇ ಪೆಟ್ರೋಲ್‌, ಡೀಸೆಲ್‌, ಸಿಎನ್‌ಜಿ ಅನಿಲದ ಬೆಲೆ ಏರಿಕೆಯ ಹೊಡೆತವು ಆಟೊ, ಟ್ಯಾಕ್ಸಿಗಳನ್ನು ಓಡಿಸಿ ಜೀವನ ನಡೆಸುತ್ತಿದ್ದವರ ಬದುಕನ್ನು ಬರ್ಬಾದ್‌ ಗೊಳಿಸಿದೆ.

ಇಂಧನ ಬೆಲೆ ಏರಿಕೆಯಿಂದಾಗಿ ಆಟೊ ಚಾಲಕರು, ಮಾಲೀ ಕರು ದರವನ್ನು ಹೆಚ್ಚು ತೆಗೆದುಕೊಳ್ಳು ತ್ತಿರುವುದು ಪ್ರಯಾಣಿಕರಿಗೂ ಹೊರೆ ಯಾಗಿ ಪರಿಣಮಿಸಿದೆ. ಇದೇ ಕಾರಣಕ್ಕೆ ಅನಿವಾರ್ಯ ಪರಿಸ್ಥಿತಿ ವಿನಾಃ ಬೇರೆ ಸಂದರ್ಭಗಳಲ್ಲಿ ಆಟೊ, ಟ್ಯಾಕ್ಸಿಗಳಿಂದ ಜನರು ವಿಮುಖರಾಗುತ್ತಿದ್ದಾರೆ. 

ಜಿಲ್ಲಾ ವ್ಯಾಪ್ತಿಯಲ್ಲಿ ನಗರ ಪಟ್ಟಣ ಪ್ರದೇಶಗಳಲ್ಲಿ ಆಟೊಗಳ ಕನಿಷ್ಠ ಬಾಡಿಗೆ ದರ ₹ 30 ಇದೆ. ಸರ್ವಿಸ್‌ ಆಟೊ, ಟ್ಯಾಕ್ಸಿಗಳಲ್ಲಿ ಪ್ರಯಾಣದ ಕನಿಷ್ಠ ದರ ₹ 10 ಇದೆ. ಆದರೆ, ಆಟೊ ಚಾಲಕರು ಕನಿಷ್ಠ ಬಾಡಿಗೆ ದರಕ್ಕೆ ಪ್ರಯಾಣಿಕರನ್ನು ಕರೆದುಕೊಂಡು ಹೋಗುವುದು ಅಪರೂಪ. 2.5 ಕಿ.ಮೀ ಇರುವ ಜಾಗಕ್ಕೂ ₹ 50 ಹೇಳುತ್ತಾರೆ. ಪ್ರಯಾಣಿಕರು ಚರ್ಚೆ ಮಾಡಿದರೆ ₹ 10 ಕಡಿಮೆ ಮಾಡುತ್ತಾರೆ. ಅನಿವಾರ್ಯವಿದ್ದವರು ಮಾತ್ರ ಆಟೊ ಹತ್ತುತ್ತಾರೆ. ಸರ್ವಿಸ್‌ ಆಟೊಗಳು ಕನಿಷ್ಠ ₹ 10ಕ್ಕೆ ಕರೆದೊಯ್ಯುತ್ತವೆ. ನಾಲ್ವರು ಪ್ರಯಾಣಿಕರಿದ್ದರೂ ಅವರಿಗೆ ₹ 40 ಸಿಗುತ್ತದೆ. ಕನಿಷ್ಠ ಬಾಡಿಗೆ ದರಕ್ಕಿಂತ ಹೆಚ್ಚಿನ ಮೊತ್ತವೇ ಅವರಿಗೆ ಸಿಗುತ್ತದೆ. 

ಕೆಲವು ಹೋಬಳಿ, ಗ್ರಾಮೀಣ ಭಾಗಗಳಲ್ಲಿ ಕನಿಷ್ಠ ದರ ₹ 20 ಇದೆ. ಗ್ರಾಮೀಣ ಭಾಗದಲ್ಲಿ ವಾಹನಗಳ ಸೌಲಭ್ಯ ಕಡಿಮೆ ಇರುವ ಕಡೆಗಳಲ್ಲಿ ಆಟೊಗಳಿಗೆ ಬೇಡಿಕೆ ಹೆಚ್ಚಿದೆ. 

ಸರಕು ಸಾಗಣೆ ಆಟೊದಲ್ಲಿ ಸಂಚಾರ: ಸಾಮಾನ್ಯ ಆಟೊಗೆ ಹೆಚ್ಚು ಹಣ ನೀಡಬೇಕಾಗುತ್ತದೆ ಎಂಬ ಕಾರಣಕ್ಕೆ ಗ್ರಾಮೀಣ ಭಾಗದ ಜನರು ಸರಕು ಸಾಗಣೆ ಆಟೊಗಳಲ್ಲಿ ಸಂಚರಿಸುತ್ತಾರೆ. ಈ ಆಟೊಗಳಲ್ಲಿ ಕುಳಿತುಕೊಳ್ಳುವುದಕ್ಕೆ ವ್ಯವಸ್ಥೆ ಇಲ್ಲ. ಹಿಂಭಾಗದಲ್ಲಿ ನಿಂತು ಪ್ರಯಾಣಿಸುವುದಕ್ಕೆ ಅಡ್ಡಿ ಇಲ್ಲ!

‘ಸಾರಿಗೆ ಸಂಚಾರ ಕಡಿಮೆ ಇರುವ ಪ್ರದೇಶಗಳಿಗೂ ಆಟೊಗಳೇ ಆಧಾರ. ಚಾಲಕರು ಮನೆ ಸಮೀಪಕ್ಕೆ ಬಿಟ್ಟು ಬರುತ್ತಾರೆ. ಫೋನ್ ಮೂಲಕ ಟ್ಯಾಕ್ಸಿ ಚಾಲಕರನ್ನು ಸಂಪರ್ಕಿಸಬಹುದು. ಕೆಲವೇ ನಿಮಿಷಗಳಲ್ಲಿ ಹಾಜರಾಗುತ್ತಾರೆ. ಆಟೊ, ಟ್ಯಾಕ್ಸಿ ಮತ್ತು ಗೂಡ್ಸ್ ಗಾಡಿಗಳು ಊರ ಹತ್ತಿರದಲ್ಲೇ ಸಿಗುವುದ ರಿಂದ ಮಾಲೀಕರು ಬೆಲೆ ಚೌಕಾಸಿ ಮಾಡು ವುದಿಲ್ಲ. ಹಾಗಾಗಿ, ಹೆಚ್ಚಿನ ಜನರು ಗ್ರಾಮೀಣ ಮತ್ತು ನಗರ ಕೇಂದ್ರಗಳಿಗೆ ತೆರಳಲು ಸರಕು ಸಾಗಣೆ ವಾಹನಗಳೇ ಹೆಚ್ಚು ನೆರವಾಗಿವೆ’ ಎಂದು ಹೇಳುತ್ತಾರೆ ಚಂಚಹಳ್ಳಿ ಮಾದಮ್ಮ ಹಾಗೂ ಮಾಂಬಳ್ಳಿ ರವಿ.  

ಕಷ್ಟದ ಜೀವನ: ಆಟೊ, ಟ್ಯಾಕ್ಸಿ ಸಂಪಾದನೆಯಲ್ಲೇ ಬದುಕುವ ಕುಟುಂಬ ಗಳಿವೆ. ಆಟೊಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಟ್ಯಾಕ್ಸಿಗಳ ಸಂಖ್ಯೆ ಕಡಿಮೆ. ಆಟೊ ಚಾಲಕರು ಹೇಳುವ ಪ್ರಕಾರ, ಚಾಮರಾಜನಗರ ಒಂದರಲ್ಲೇ 1ಸಾವಿರಕ್ಕೂ ಹೆಚ್ಚು ಆಟೊಗಳಿವೆ.

‘ನಿರ್ವಹಣೆ ವೆಚ್ಚ ಹೆಚ್ಚಾಗಿದ್ದು, ಕೈಯಲ್ಲಿ ದುಡ್ಡು ಉಳಿಯುತ್ತಿಲ್ಲ. ದರ ಹೆಚ್ಚಳ ಮಾಡುವುದು ಅನಿವಾರ್ಯ. ಆದರೆ, ಹೆಚ್ಚು ಹಣ ಕೇಳಿದರೆ ಪ್ರಯಾ ಣಿಕರು ಬರುವುದಿಲ್ಲ; ಜಗಳಕ್ಕೆ ನಿಲ್ಲು ತ್ತಾರೆ. ಹಾಗಾಗಿ, ಸಿಗುವ ಬಾಡಿಗೆಗೆ ಓಡಿಸಬೇಕಾಗುತ್ತದೆ. ಸಂಪಾದನೆ ಕಡಿಮೆಯಾಗಿ ಈ ವೃತ್ತಿಯನ್ನು ಬಿಡುವ ಯೋಚನೆಯಲ್ಲೂ ಹಲವರಿದ್ದಾರೆ. ಆದರೆ, ಬೇರೆ ಏನು ಮಾಡಬೇಕು ಎಂಬುದೇ ತೋಚುತ್ತಿಲ್ಲ’ ಎನ್ನುತ್ತಾರೆ ಆಟೊ ಚಾಲಕರು ಹಾಗೂ ಮಾಲೀಕರು. 

ಅವರಲ್ಲೇ ಪೈಪೋಟಿ: ಸಾಕಷ್ಟು ಸಂಖ್ಯೆಯಲ್ಲಿ ಆಟೊಗಳು ಇರುವುದ ರಿಂದ ಚಾಲಕರ ನಡುವೆಯೇ ಬಾಡಿ ಗೆಗೆ ಪೈಪೋಟಿ ಇರುತ್ತದೆ. ಈಗ ಡೀಸೆಲ್‌ನಿಂದ ಓಡುವ ಹೆಚ್ಚು ಆಸನ ಸಾಮರ್ಥ್ಯದ ಆಟೊಗಳಿವೆ. ಈ ಆಟೊಗಳ ಚಾಲಕರು ಹೆಚ್ಚು ಜನರನ್ನು ಹಾಕಿ ಬಾಡಿಗೆ ಹೋಗುತ್ತಾರೆ. ಇದು ಸಾಮಾನ್ಯ ಆಟೊ ಮಾಲೀಕರು ಹಾಗೂ ಚಾಲಕರ ಅತೃಪ್ತಿಗೆ ಕಾರಣವಾಗಿದೆ. 

ಟ್ಯಾಕ್ಸಿಗಳು ದೂರದ ಊರಿಗೆ ಬಾಡಿಗೆಗೆ ಹೋಗಬೇಕು. ಆದರೆ ಜಿಲ್ಲೆಯಲ್ಲಿ ಗ್ರಾಮೀಣ ಭಾಗಗಳಿಂದ ನಗರ ಪಟ್ಟಣಗಳಿಗೆ ಸರ್ವಿಸ್‌ ಹೊಡೆಯು ತ್ತವೆ. ಇದಕ್ಕೆ ಪ್ರಾದೇಶಿಕ ಸಾರಿಗೆ ಇಲಾಖೆಯ ಅನುಮತಿ ಇಲ್ಲ ಎಂಬುದು ಆಟೊ ಚಾಲಕರ ಮಾತು.

‘ನಮ್ಮಲ್ಲಿ ಬಾಡಿಗೆ ಕಡಿಮೆ. ಅದನ್ನೇ ಕಾಯುತ್ತಾ ಕೂತರೆ ಜೀವನ ಸಾಗಬೇಕಲ್ಲ. ಅದಕ್ಕಾಗಿ ಊರುಗಳಿಂದ ಪಟ್ಟಣ, ನಗರ ಪ್ರದೇಶಗಳಿಗೆ ಪ್ರಯಾಣಿಕರನ್ನು ಕರೆ ತರುತ್ತೇವೆ. ಜನರಿಂದ ಹೆಚ್ಚು ಹಣ ಪಡೆಯಲ್ಲ. ಇದರಿಂದ ಅವರಿಗೂ ಅನು ಕೂಲವಾಗಿದೆ ಎಂದು ಹೇಳುತ್ತಾರೆ’ ಎಂದು ಹೇಳುತ್ತಾರೆ ಟ್ಯಾಕ್ಸಿ ಚಾಲಕರು.

 

ಚಾಲಕರು, ಮಾಲೀಕರು ಏನಂತಾರೆ?

ಜೀವನ ಕಷ್ಟವಾಗಿದೆ

ಕೋವಿಡ್‌ ಬಂದ ನಂತರ ಬಾಡಿಗೆ ಸಿಗುವುದು ಕಡಿಮೆಯಾಗಿದೆ. ಪೆಟ್ರೋಲ್‌, ಸಿಎನ್‌ಜಿ ಬೆಲೆ ಹೆಚ್ಚಳವಾಗಿರುವುದರಿಂದ ನಿರ್ವಹಣೆ ವೆಚ್ಚವೂ ಅಧಿಕವಾಗಿದೆ. ನಮ್ಮಲ್ಲಿ ಬಾಡಿಗೆ ಏರಿಕೆ ಮಾಡಿಲ್ಲ. ಹೆಚ್ಚು ದರ ಹೇಳುತ್ತಿದ್ದಂತೆಯೇ ಪ್ರಯಾಣಿಕರು ಜಗಳಕ್ಕೆ ಬರುತ್ತಾರೆ. ಆಟೊ ಹತ್ತುವುದೇ ಇಲ್ಲ. ಈಗ ಪೈಪೋಟಿಯೂ ಹೆಚ್ಚಾಗಿದೆ. ಒಂದು ದಿನ ಕೆಲಸ ಮಾಡಿದರೆ ಆ ದಿನದ ಕುಟುಂಬ ನಿರ್ವಹಣೆಗೆ ಬೇಕಾದಷ್ಟು ಆದಾಯ ಸಿಗುತ್ತಿಲ್ಲ.

–ನಾಗರಾಜು, ಭುವನೇಶ್ವರಿ ಆಟೊ ಚಾಲಕರ ಸಂಘದ ಕಾರ್ಯದರ್ಶಿ, ಚಾಮರಾಜನಗರ

ಬಾಡಿಗೆ ಏರಿಸಲಾಗದ ಸ್ಥಿತಿ

ಟ್ಯಾಕ್ಸಿಗೆ ಮೊದಲಿನಂತೆ ಬೇಡಿಕೆ ಇಲ್ಲ. ಎಲ್ಲ ಹಳ್ಳಿಗಳಲ್ಲೂ ಆಟೊ, ಗೂಡ್ಸ್ ವಾಹನಗಳು ಇದ್ದು, ಕಡಿಮೆ ದರದಲ್ಲಿ 10 ರಿಂದ 20 ಜನರನ್ನು ಸಾಗಿಸುತ್ತಾರೆ. ಹೆಚ್ಚು ಗ್ರಾಹಕರನ್ನು ಟ್ಯಾಕ್ಸಿಯಲ್ಲಿ ತುಂಬಲು ಸಾಧ್ಯ ಇಲ್ಲ. ಹಾಗಾಗಿ, ಪೆಟ್ರೋಲ್ ಬೆಲೆ ಏರಿಕೆ ಆಗಿದ್ದರೂ, ಬಾಡಿಗೆ ಏರಿಸಲಾಗದ ಪರಿಸ್ಥಿತಿ ನಮ್ಮದಾಗಿದೆ. ಇದರಿಂದ ನಿರ್ವಹಣಾ ವೆಚ್ಚ ಏರಿ, ಆದಾಯ ಕೈತಪ್ಪಿದೆ.

–ಇಫ್ತಖಾನ್ ಅಹಮದ್, ಟ್ಯಾಕ್ಸಿ ಮಾಲೀಕರ ಸಂಘದ ಉಪಾಧ್ಯಕ್ಷ, ಯಳಂದೂರು

ದೊಡ್ಡ ಆಟೊಗಳ ಲಗ್ಗೆ

ಪಟ್ಟಣ ಮತ್ತು ನಗರಗಳಲ್ಲಿ ಸಂಚರಿಸುವ ಆಟೊಗಳು ಮೂವರನ್ನು ಮಾತ್ರ ಕೂರಿಸಲು ಸಾಧ್ಯ. ಆದರೆ, ಹೊಸ ಆಟೊಗಳು ಹತ್ತಾರು ಜನರನ್ನು ಸಾಗಿಸುವಂತೆ ವಿನ್ಯಾಸ ಮಾಡಲಾಗಿದೆ. ಇವರ ಜತೆ ಪೈಪೋಟಿಗೆ ಇಳಿಯುವುದು ಕಷ್ಟ. ಹೆಚ್ಚಳವಾದ ಇಂಧನ ಬೆಲೆಯನ್ನು ಗ್ರಾಹಕರಿಗೆ ವರ್ಗಾಯಿಸುವಂತೆಯೂ ಇಲ್ಲ. ಹಾಗಾಗಿ, ಆಟೊ ಮಾಲೀಕರು ಚಾಲನಾ ವೃತ್ತಿ ತೊರೆದು, ಕೃಷಿ, ವ್ಯಾಪಾರ ಮತ್ತಿತರ ಕ್ಷೇತ್ರಗಳಿಗೆ ತೆರಳಿದ್ದಾರೆ. ಚಾಲನಾ ವೃತ್ತಿ ನಂಬಿದವರಿಗೆ ಬದುಕು ಕಟ್ಟಿಕೊಳ್ಳುವುದೇ ಸವಾಲಾಗಿದೆ.

–ಶಿವು, ಆಟೊ ಮಾಲೀಕರ ಸಂಘದ ಸದಸ್ಯ, ಯಳಂದೂರು

ಬದುಕೇ ಕಷ್ಟವಾಗಿದೆ

ನಾವು 25 ವರ್ಷಗಳಿಂದಲೂ ಆಟೊ ಓಡಿಸಿಕೊಂಡು ಜೀವನ ನಡೆಸುತ್ತಿದ್ದೇವೆ. ಈಗ ನಮ್ಮ ವೃತ್ತಿಗೆ ಬಹಳ ತೊಂದರೆ ಆಗುತ್ತಿದೆ. ಪ್ರಯಾಣಿಕರು ಸರಿಯಾಗಿ ಬರುತ್ತಿಲ್ಲ. ಕಾರಣ ಆಟೊ ದರ ಹೆಚ್ಚಳವಾಗಿದೆ ಎಂದು ಹೇಳುತ್ತಿದ್ದಾರೆ. ಹೀಗಾದರೇ ನಾವು ಹೇಗೆ ಬದುಕಬೇಕು?

– ಹಬೀಬ್ ಉಲ್ಲಾ, ಕೊಳ್ಳೇಗಾಲ, ಆಟೊ ಚಾಲಕ 

₹ 300 ಉಳಿಯುವುದಿಲ್ಲ

ಪ್ರತಿ ಹಳ್ಳಿಗೆ ಬಸ್ ಸೌಲಭ್ಯ ಇರುವುದರಿಂದ ಹೆಚ್ಚಿನ ಜನರು ಆಟೊಗಳಿಗೆ ಬರುತ್ತಿಲ್ಲ. ಕೋವಿಡ್ ನಂತರ ಆಟೊಗಳಿಗೆ ಬಾಡಿಗೆ ಕಡಿಮೆಯಾಗಿದೆ. ಪ್ರತಿ ದಿನ ₹ 300 ಉಳಿಯುವುದಿಲ್ಲ.

–ರಾಜೇಂದ್ರ ವಿ.ನಾಯಕ, ಹಿಮವದ್‌ ಗೋಪಾಲಸ್ವಾಮಿ ಆಟೊ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ  

ಬೇರೆ ವೃತ್ತಿ ಅನಿವಾರ್ಯ

ಹೆಚ್ಚಿನ ಜನರ ಬಳಿ ದ್ವಿಚಕ್ರ ವಾಹನಗಳಿವೆ. ಆಟೊಗಳಿಗೆ ಬರುತ್ತಿಲ್ಲ. ಇದರಿಂದಾಗಿ ಈ ವೃತ್ತಿ ಬಿಟ್ಟು ಬೇರೆ ವೃತ್ತಿಗೆ ಹೋಗಬೇಕು ಎನಿಸುತ್ತಿದೆ. ಕೇವಲ ಆಟೊ ಓಡಿಸಿ ಕುಟುಂಬ ನಿರ್ವಹಣೆ ಮತ್ತು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಸಾಧ್ಯವಿಲ್ಲ.

–ಸತೀಶ್, ಭೀಮನಬೀಡು, ಆಟೊ ಚಾಲಕ 

ಹಳೆ ಬಾಡಿಗೆ ಮುಂದುವರಿಕೆ

ಡೀಸೆಲ್ ಬೆಲೆ ಏರಿಕೆಯಾಗಿದೆ. ಬಾಡಿಗೆಯನ್ನು ಜಾಸ್ತಿ ಮಾಡುವ ಅನಿವಾರ್ಯತೆ ಇದೆ. ಆದರೆ, ಗ್ರಾಮೀಣ ಭಾಗದಲ್ಲಿ ರೈತರು ನಮ್ಮ ವಾಹನಗಳನ್ನೇ ಅವಲಂಬಿಸಿದ್ದಾರೆ. ಈಗಾಗಲೇ ಅತಿವೃಷ್ಟಿಯಿಂದಾಗಿ ಸಂಕಷ್ಟಕ್ಕೊಳಗಾಗಿರುವ ರೈತರಿಂದ ಬಾಡಿಗೆ ಜಾಸ್ತಿ ಕೇಳಲು ಮನಸ್ಸು ಒಪ್ಪುತ್ತಿಲ್ಲ. ಮೊದಲು ಇದ್ದ ಬಾಡಿಗೆ ದರವನ್ನು ಇಂದಿಗೂ ಮುಂದುವರೆಸಿಕೊಂಡು ಹೋಗುತ್ತಿದ್ದೇನೆ.

–ನಾಗರಾಜು, ಆಟೊ ಮಾಲೀಕರ ಸಂಘದ ಅಧ್ಯಕ್ಷ, ಹನೂರು

ಹಳೆ ದರವೇ ಅನಿವಾರ್ಯ

ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳದಿಂದ ದಿನದ ಆದಾಯ ನಷ್ಟವಾಗಿದೆ. ಪ್ರಯಾಣಿಕರು ಹಳೆಯ ದರವನ್ನು ಕೊಡುತ್ತಿದ್ದಾರೆ. ಹೊಸ ದರಕ್ಕೆ ನಮ್ಮಲ್ಲಿಯೇ ಪೈಪೋಟಿ ಇದೆ. ಬಾಡಿಗೆ ಇಲ್ಲದ ಕಾರಣ ಹಳೆಯ ದರಕ್ಕೆ ಟ್ಯಾಕ್ಸಿ ಓಡಿಸಬೇಕಾಗಿದೆ. ದಿನದ ದುಡಿಮೆ ನೋಡಿ ಬದುಕಬೇಕಾಗಿದೆ.

–ಮಹೇಶ್, ಟ್ಯಾಕ್ಸಿ ಚಾಲಕ, ಸಂತೇಮರಹಳ್ಳಿ

ಇಂಧನ ಬೆಲೆ ಇಳಿಸಿ

ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳಕ್ಕೆ ತಕ್ಕಂತೆ ಪ್ರಯಾಣಿಕರು ನಮಗೆ ಸ್ಪಂದಿಸುತ್ತಿಲ್ಲ. ಕಳೆದ ವರ್ಷ ಕೋವಿಡ್‌ ತೊಂದರೆ ಕೊಟ್ಟಿತ್ತು. ಈ ವರ್ಷ ಪೆಟ್ರೋಲ್, ಡೀಸೆಲ್ ದುಬಾರಿಯಾಯಿತು. ಇದರಿಂದ ನಾವು ಸಂಕಷ್ಟಕ್ಕೆ ಸಿಕ್ಕಿಕೊಂಡಿದ್ದೇವೆ. ನಾವು ಬದುಕುವ ರೀತಿಗೆ ಸರ್ಕಾರ ಕರುಣೆ ತೋರಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಬೇಕು.

–ಹೇಮಂತ್, ಆಟೊ ಚಾಲಕ, ಸಂತೇಮರಹಳ್ಳಿ

ನಿರ್ವಹಣೆ: ಸೂರ್ಯನಾರಾಯಣ ವಿ.

ಪೂರಕ ಮಾಹಿತಿ: ನಾ.ಮಂಜುನಾಥಸ್ವಾಮಿ, ಮಹದೇವ್‌ ಹೆಗ್ಗವಾಡಿಪುರ, ಎಂ.ಮಲ್ಲೇಶ, ಅವಿನ್‌ ಪ್ರಕಾಶ್‌ ವಿ., ಬಿ.ಬಸವರಾಜು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು