ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಹಕರ ಹಕ್ಕು ಅರಿಯಿರಿ: ಸದಾಶಿವ

ರಾಷ್ಟ್ರೀಯ ಗ್ರಾಹಕರ ದಿನಾಚರಣೆ; ಕಾನೂನುಗಳ ಬಗ್ಗೆ ಜಾಗೃತಿ
Last Updated 24 ಡಿಸೆಂಬರ್ 2021, 16:02 IST
ಅಕ್ಷರ ಗಾತ್ರ

ಚಾಮರಾಜನಗರ: ಗ್ರಾಹಕರ ಹಕ್ಕುಗಳ ರಕ್ಷಣೆಗಾಗಿಯೇ ಗ್ರಾಹಕರ ಕಾನೂನು ರಚಿಸಲಾಗಿದ್ದು, ಪ್ರತಿಯೊಬ್ಬರೂ ಗ್ರಾಹಕರ ಹಕ್ಕುಗಳ ಬಗ್ಗೆ ತಿಳಿದಿರಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಸದಾಶಿವ ಎಸ್.ಸುಲ್ತಾನ್ ಪುರಿ ಶುಕ್ರವಾರ ಇಲ್ಲಿ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಜೆಎಸ್ಎಸ್ ಮಹಿಳಾ ಕಾಲೇಜುಗಳ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ಗ್ರಾಹಕರು ತಾವು ಖರೀದಿಸುವ ಯಾವುದೇ ವಸ್ತು ಅಥವಾ ಪಡೆಯುವ ಸೇವೆಯಲ್ಲಿ ನಷ್ಟ, ಮೋಸ ಅನುಭವಿಸಿದಲ್ಲಿ ಗ್ರಾಹಕರ ವೇದಿಕೆಗೆ ದೂರು ಸಲ್ಲಿಸಿ, ಆ ಮೂಲಕ ಪರಿಹಾರ ಪಡೆಯಬಹುದಾಗಿದೆ’ ಎಂದು ಹೇಳಿದರು.

‘ಹಣ ಕೊಟ್ಟು ಖರೀದಿಸಿದ ಯಾವುದೇ ವಸ್ತುವಿನಲ್ಲಿ ಗುಣಮಟ್ಟ, ಬೆಲೆ, ಪ್ರಮಾಣ ಹಾಗೂ ಅನುಕೂಲಗಳಲ್ಲಿ ವ್ಯತಿರಿಕ್ತ ಪರಿಣಾಮ ಉಂಟಾದಲ್ಲಿ ಮಾರಾಟಗಾರರ ವಿರುದ್ಧ ಖರೀದಿಸಿದ ರಶೀದಿ ಮತ್ತು ದಾಖಲೆಗಳ ಆಧಾರದ ಮೇಲೆ ದೂರು ಸಲ್ಲಿಸಿ ಕಾನೂನು ಹೋರಾಟ ಮಾಡಬಹುದಾಗಿದೆ’ ಎಂದರು.

‘ಗ್ರಾಹಕರು ವಸ್ತು ಖರೀದಿಸಿದ ಎರಡು ವರ್ಷದ ಅವಧಿಯೊಳಗೆ ದೂರು ಸಲ್ಲಿಸಬೇಕು. ₹ 5 ಲಕ್ಷದೊಳಗಿನ ಪರಿಹಾರಕ್ಕೆ ಯಾವುದೇ ಶುಲ್ಕ ಪಾವತಿ ಮಾಡದೇ ಉಚಿತವಾಗಿ ದೂರು ಸಲ್ಲಿಸಬಹುದು. ₹ 10 ಕೋಟಿವರೆಗಿನ ಪರಿಹಾರಕ್ಕೆ ಸಂಬಂಧಿಸಿದಂತೆ ನಿಗದಿತ ಶುಲ್ಕ ಗ್ರಾಹಕರ ವೇದಿಕೆಗೆ ಪಾವತಿಸಿ ಗ್ರಾಹಕರ ವ್ಯಾಜ್ಯ ಪರಿಹಾರ ಕಾಯ್ದೆಯ ಮೂಲಕ ಸೂಕ್ತ ಪರಿಹಾರ ಪಡೆಯಬಹುದು’ ಎಂದು ಹೇಳಿದರು.

‘ಸಾಕಷ್ಟು ಜನರು ಗ್ರಾಹಕರ ಕಾನೂನುಗಳ ಅರಿವು ಹೊಂದಿಲ್ಲ. ಶಾಲಾ-ಕಾಲೇಜು ವಿದ್ಯಾರ್ಥಿಗಳು ನಿತ್ಯದ ವ್ಯವಹಾರಕ್ಕೆ ಸಂಬಂಧಿಸಿದಂತೆ ಪಠ್ಯದೊಂದಿಗೆ ಕಾನೂನಿನ ಅರಿವು ಹೊಂದುವುದು ಬಹಳ ಮುಖ್ಯ. ಗ್ರಾಹಕರ ಕಾನೂನುಗಳ ಕುರಿತು ತಾವು ಅರಿತು ಇತರರಿಗೂ ಅರಿವು ಮೂಡಿಸಬೇಕು’ ಎಂದು ನ್ಯಾಯಾಧೀಶರು ಸಲಹೆ ನೀಡಿದರು.

ಜಿಲ್ಲಾ ಗ್ರಾಹಕರ ಆಯೋಗದ ಮಹಿಳಾ ಸದಸ್ಯೆ ಗೌರಮ್ಮಣಿ ಮಾತನಾಡಿ, ‘ಪ್ರತಿಯೊಬ್ಬ ಗ್ರಾಹಕನೂ ಯಾವುದೇ ವಸ್ತುವಿನ ಖರೀದಿಗೂ ಮುನ್ನ ವಸ್ತುವಿನ ತೂಕ, ಅಳತೆ, ನಿಖರ ಬೆಲೆ, ಗುಣಮಟ್ಟ, ವಸ್ತುವಿನ ಅವಧಿ ಬಗ್ಗೆ ವಿಶ್ಲೇಷಣೆ ಮಾಡಬೇಕು. ಖರೀದಿಸಿದ ವಸ್ತುವಿನಲ್ಲಿ ನ್ಯೂನತೆ ಉಂಟಾದರೆ ದೂರು ಸಲ್ಲಿಸಿದ ಮೂರು ತಿಂಗಳೊಳಗೆ ಪ್ರಕರಣ ಇತ್ಯರ್ಥಗೊಳಿಸಲಾಗುತ್ತದೆ. ಗ್ರಾಹಕರ ವ್ಯಾಜ್ಯಕ್ಕೆ ಸಂಬಂಧಿಸಿದ ಕಾನೂನುಗಳಿದ್ದು, ಎಲ್ಲ ಪ್ರಜ್ಞಾವಂತ ನಾಗರಿಕರು ಸಮರ್ಪಕವಾಗಿ ಬಳಸಿಕೊಳ್ಳಬೇಕು’ ಎಂದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಶ್ರೀಧರ ಮಾತನಾಡಿದರು.ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯ ವೈ.ಎಸ್.ತಮ್ಮಣ್ಣ ಅಧ್ಯಕ್ಷತೆ ವಹಿಸಿದ್ದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಯೋಗಾನಂದ, ಕಾಲೇಜಿನ ಪ್ರಾಂಶುಪಾಲರಾದ ಕೆ.ಎಸ್.ಮರಿಸ್ವಾಮಿ, ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಸಂಚಾಲಕರಾದ ಶಿವರಾಜಮ್ಮ, ಗ್ರಾಹಕ ಇಲಾಖೆಯ ಸಹಾಯಕ ನಿರ್ದೇಶಕ ರಾಜೀವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT