ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಜಿಲ್ಲೆಯಾದ್ಯಂತ ರಾಷ್ಟ್ರೀಯ ಪಲ್ಸ್‌ ಪೋಲಿಯೊ ಕಾರ್ಯಕ್ರಮ

Published 3 ಮಾರ್ಚ್ 2024, 16:11 IST
Last Updated 3 ಮಾರ್ಚ್ 2024, 16:11 IST
ಅಕ್ಷರ ಗಾತ್ರ

ಚಾಮರಾಜನಗರ: ಮಕ್ಕಳಿಗೆ ಪೋಲಿಯೊ ಹನಿ ನೀಡುವ ರಾಷ್ಟ್ರೀಯ ಪಲ್ಸ್‌ ಪೋಲಿಯೊ ಕಾರ್ಯಕ್ರಮ ಭಾನುವಾರ ಜಿಲ್ಲೆಯಾದ್ಯಂತ ನಡೆಯಿತು.  

ನಗರದ ಜಿಲ್ಲಾಸ್ಪತ್ರೆಯ ಹರಿಗೆ ವಿಭಾಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಮಟ್ಟದ ಕಾರ್ಯಕ್ರಮವನ್ನು ಶಾಸಕ, ಎಂಐಎಸ್‌ಎಲ್‌ ಅಧ್ಯಕ್ಷ ಸಿ.ಪುಟ್ಟರಂಗಶೆಟ್ಟಿ ಉದ್ಘಾಟಿಸಿದರು. ಸಾಂಕೇತಿಕವಾಗಿ ಮಗುವಿಗೆ ಪೋಲಿಯೊ ಹಾನಿ ಹಾಕುವ ಮೂಲಕ ಅವರು ಅಭಿಯಾನಕ್ಕೆ ಚಾಲನೆ ನೀಡಿದರು. 

ನಂತರ ಮಾತನಾಡಿದ ಅವರು, ‘ಮಕ್ಕಳನ್ನು ಮಾರಕವಾದ ಪೋಲಿಯೊದಿಂದ ರಕ್ಷಿಸಲು ನವಜಾತ ಶಿಶುವಿನಿಂದ ಹಿಡಿದು ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೂ ಪೋಲಿಯೊ ಹನಿ ಹಾಕಿಸಬೇಕು’ ಎಂದು ಹೇಳಿದರು. 

‘30 ವರ್ಷಗಳ ಹಿಂದೆ ಮಕ್ಕಳಿಗೆ ಪೋಲಿಯೊ ಕಾಯಿಲೆ ಮಾರಕವಾಗಿ ಪರಿಣಮಿಸಿತ್ತು. ಪೋಲಿಯೊ ವ್ಯರಸ್‍ನಿಂದ ಮಕ್ಕಳನ್ನು ರಕ್ಷಿಸಲು ಸರ್ಕಾರವು 1995ರಿಂದ ಪ್ರತಿವರ್ಷವೂ ಈ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಈ ಹಿಂದೆ ಪೋಷಕರು ಮಕ್ಕಳಿಗೆ ಪೋಲಿಯೊ ಹನಿ ಹಾಕಿಸಲು ಹಿಂಜರಿಯುತ್ತಿದ್ದರು. ಈಗ ಜನರು ಜಾಗೃತರಾಗಿದ್ದಾರೆ’ ಎಂದರು. 

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಚಿದಂಬರ, ‘ಪೋಲಿಯೊ ವೈರಸ್ ನೀರು ಮತ್ತು ಆಹಾರದ ಮೂಲಕ ದೇಹವನ್ನು ಸೇರಿ ಪ್ರತಿಯೊಂದು ನರಗಳಿಗೂ ವ್ಯಾಪಿಸಿ ಮಾಂಸಖಂಡಗಳು ಶಕ್ತಿ, ಸ್ವಾಧೀನ ಕಳೆದುಕೊಳ್ಳುವಂತೆ ಮಾಡುತ್ತದೆ. ಪೋಲಿಯೊ ಹನಿ ಹಾಕಿಸಲು ಉದಾಸೀನತೆ ಬೇಡ. ಮಕ್ಕಳನ್ನು ಪೋಲಿಯೊ ರೋಗದಿಂದ ರಕ್ಷಿಸಲು 30 ವರ್ಷಗಳಿಂದ ನಿರಂತರವಾಗಿ ಪೋಲಿಯೊ ಹನಿ ಹಾಕಲಾಗುತ್ತಿದ್ದು, ಜಿಲ್ಲೆಯಲ್ಲಿ ಈ ಬಾರಿ 5 ವರ್ಷದೊಳಗಿನ 65,835 ಮಕ್ಕಳಿಗೆ ಪೋಲಿಯೊ ಹನಿ ಹಾಕುವ ಗುರಿ ಹೊಂದಲಾಗಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಶ್ರೀಕಂಠರಾಜೇ ಅರಸ್, ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಡಾ.ಮಂಜುನಾಥ್, ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ. ಮಂಜುನಾಥ್, ಜಿಲ್ಲಾ ಸರ್ಜನ್ ಡಾ.ಕೃಷ್ಣಪ್ರಸಾದ್, ಸ್ಥಾನಿಕ ವೈದ್ಯಾಧಿಕಾರಿ ಡಾ.ಮಹೇಶ್, ಪಲ್ಸ್ ಪೋಲಿಯೊ ಜಿಲ್ಲಾ ನೋಡೆಲ್ ಅಧಿಕಾರಿ ಡಾ.ಜಯರಾಜ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ್, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ದುಶ್ಯಂತ್, ನಗರ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಉಮಾರಾಣಿ, ಜಿಲ್ಲಾ ಆರೋಗ್ಯ ಮತ್ತು ಶಿಕ್ಷಣ ಅಧಿಕಾರಿ ದೊರೆಸ್ವಾಮಿ ನಾಯಕ್, ಸರ್ಕಾರಿ ಶುಶ್ರೂಷಕ ಕಾಲೇಜಿನ ಪ್ರಾಂಶುಪಾಲ ಖುದ್ರತ್, ಜಿಲ್ಲಾ ಶುಶ್ರೂಷಕ ಅಧಿಕಾರಿ ಶಾಂತಮ್ಮ, ರೋಟರಿ, ರೋಟರಿ ಸಿಲ್ಕ್‌ ಸಿಟಿ ಲಯನ್ಸ್ ಸಂಸ್ಥೆಯ ಪದಾಧಿಕಗಳು ಪಾಲ್ಗೊಂಡಿದ್ದರು.

ಮಕ್ಕಳಿಗೆ ಪೋಲಿಯೊ ಹನಿ ಹಾಕಿಸಲು ತಮ್ಮ ಸರದಿಗಾಗಿ ಕಾದು ಕುಳಿತಿದ್ದ ತಾಯಂದಿರು
ಮಕ್ಕಳಿಗೆ ಪೋಲಿಯೊ ಹನಿ ಹಾಕಿಸಲು ತಮ್ಮ ಸರದಿಗಾಗಿ ಕಾದು ಕುಳಿತಿದ್ದ ತಾಯಂದಿರು

ನಾಲ್ಕು ದಿನ ಅಭಿಯಾನ

ಜಿಲ್ಲಾಧಿಕಾರಿ ಶಿಲ್ಪಾ ನಾಅವರು ‘ರಾಷ್ಟ್ರೀಯ ಪಲ್ಸ್ ಪೋಲಿಯೊ ಅಂಗವಾಗಿ ಜಿಲ್ಲೆಯಾದ್ಯಂತ 4 ದಿನಗಳ ಕಾಲ ಪೋಲಿಯೊ ಹನಿ ಹಾಕುವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 8ರಿಂದ ಸಂಜೆ 5 ಗಂಟೆಯವರೆಗೆ ಅಂಗನವಾಡಿ ಕೇಂದ್ರಗಳು ಬಸ್ ಹಾಗೂ ರೈಲ್ವೆ ನಿಲ್ದಾಣ ಸೇರಿದಂತೆ ಜನನಿಬಿಡ ಸ್ಥಳಗಳಲ್ಲಿ ಹನಿ ಹಾಕಲಾಗುತ್ತದೆ. ಭವಿಷ್ಯದ ಸತ್ಪ್ರಜೆಗಳನ್ನು ರೂಪಿಸುವ ನಿಟ್ಟಿನಲ್ಲಿ 5 ವರ್ಷದೊಳಗಿನ ಯಾವ ಮಗುವು ಪೋಲಿಯೋ ಲಸಿಕೆ ಹನಿಯಿಂದ ವಂಚಿತವಾಗದಂತೆ ನೋಡಿಕೊಳ್ಳಬೇಕು’ ಎಂದರು. ‘ಭಾರತ ಪೋಲಿಯೊ ಮುಕ್ತ ದೇಶವಾಗಿದೆ. 2014ರಿಂದ ಭಾರತದ ಯಾವುದೇ ಭಾಗದಲ್ಲಿ ಪೋಲಿಯೊ ಕಾಣಿಸಿಕೊಂಡಿಲ್ಲ. ನೆರೆ ದೇಶಗಳಲ್ಲಿ ಪೋಲಿಯೊ ಪ್ರಕರಣಗಳಿರುವುದರಿಂದ ಮುನ್ನೆಚ್ಚರಿಕೆಯಾಗಿ 5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಪೋಲಿಯೊ ಹನಿ ಹಾಕಲಾಗುತ್ತಿದೆ’ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT