ಶನಿವಾರ, ಜುಲೈ 24, 2021
27 °C
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಭೆ

ಚಾಮರಾಜನಗರ: 12 ದಿನಗಳ ಒಳಗಾಗಿ ಹೆದ್ದಾರಿ ದುರಸ್ತಿ: ಸಚಿವರ ಸುರೇಶ್‌ ಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಹೊಂಡ ಗುಂಡಿಗಳಿಂದಾಗಿ ಹದಗೆಟ್ಟಿರುವ ರಾಷ್ಟ್ರೀಯ ಹೆದ್ದಾರಿ 209ರ ಅಟ್ಟುಗೂಳಿಪುರದಿಂದ ಪುಣಜನೂರುವರೆಗಿನ ರಸ್ತೆಯನ್ನು ತಕ್ಷಣವೇ ದುರಸ್ತಿಗೆ ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಬುಧವಾರ ಹೇಳಿದರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಸ್ತೆಯ ದುಃಸ್ಥಿತಿಯಿಂದಾಗಿ ಪ್ರತಿ ದಿನ ಅಲ್ಲಿ ವಾಹನ ಅಪಘಾತ ಆಗುತ್ತಿರುವುದು ಗಮನಕ್ಕೆ ಬಂದಿದೆ. ಈ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇನೆ. ತಕ್ಷಣವೇ ಗುಂಡಿಗಳನ್ನೆಲ್ಲ ಮುಚ್ಚಿ, ರಸ್ತೆ ದುರಸ್ತಿ ಮಾಡಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಇನ್ನು ಒಂದು ವಾರದಲ್ಲಿ ಇದಕ್ಕೆ ಬೇಕಾದ ಎಲ್ಲ ಯಂತ್ರೋಪಕರಣಗಳು ಬರಲಿವೆ’ ಎಂದು ಹೇಳಿದರು. 

‘ಎಂಟರಿಂದ 12 ದಿನಗಳಲ್ಲಿ ಹೆದ್ದಾರಿಯ ದುರಸ್ತಿ ನಡೆಯಲಿದೆ. ಆ ಬಳಿಕ, ರಸ್ತೆ ಅಭಿವೃದ್ಧಿ ಯೋಜನೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು’ ಎಂದು ಸಚಿವರು ಹೇಳಿದರು. 

ಮಧ್ಯಾಹ್ನದ ನಂತರ ಸಚಿವರು ಪುಣಜನೂರುವರೆಗೆ ಸಂಚರಿಸಿ ಹದಗೆಟ್ಟಿರುವ ರಸ್ತೆಯ ಸ್ಥಿತಿಗತಿಯನ್ನು ಖುದ್ದಾಗಿ ಪರಿಶೀಲಿಸಿದರು. 

ಕೆರೆಗೆ ನೀರು: ‘ಜಿಲ್ಲೆಯ 22 ಕೆರೆಗಳಿಗೆ ನೀರು ತುಂಬಿಸುವ ಪ್ರಕ್ರಿಯೆಗೆ ಶೀಘ್ರವಾಗಿ ಚಾಲನೆ ನೀಡಲಾಗುವುದು. ಕಾವೇರಿ ನೀರಾವರಿ ನಿಗಮ ಹಾಗೂ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮದ (ಸೆಸ್ಕ್‌) ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ವಿದ್ಯುತ್‌ ಬಿಲ್‌ ಬಾಕಿ ಕಾರಣಕ್ಕೆ ಸ್ವಲ್ಪ ಸಮಸ್ಯೆ ಆಗಿತ್ತು. ಬಾಕಿ ಮೊತ್ತದಲ್ಲಿ ಸ್ವಲ್ಪ ಹಣವನ್ನು ನಿಗಮಕ್ಕೆ ಪಾವತಿಸಲಾಗಿದೆ. ಹಾಗಾಗಿ, ನೀರೆತ್ತುವ ಪಂಪ್‌ಹೌಸ್‌ಗಳಿಗೆ ವಿದ್ಯುತ್‌ ಪೂರೈಸಲು ಸಹಕಾರ ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಶೀಘ್ರದಲ್ಲಿ ಕೆರೆಗಳಿಗೆ ನೀರು ಹರಿಯಲಿದೆ’ ಎಂದು ಸಚಿವರು ಹೇಳಿದರು. 

ಉತ್ತಮ ಮಳೆ: ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ರೈತರಿಗೆ ಯಾವುದೇ ಸಮಸ್ಯೆ ಆಗದ ರೀತಿಯಲ್ಲಿ ಗೊಬ್ಬರ, ಬಿತ್ತನೆ ಬೀಜಗಳ ವ್ಯವಸ್ಥೆ ಮಾಡಲಾಗಿದೆ. ಯಾವುದಕ್ಕೂ ಕೊರತೆಯಿಲ್ಲ. ರಸಗೊಬ್ಬರದ ದಾಸ್ತಾನು ಬೇಕಾದಷ್ಟಿದೆ. ಉತ್ತಮ ಮಳೆಯಾಗಿರುವುದರಿಂದ ರೈತರು ಈ ವರ್ಷ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದಾರೆ’ ಎಂದು ಅವರು ಹೇಳಿದರು.

ಸಂಸದರ ಗೈರು: ಬುಧವಾರ ನಡೆದ ಮೂರು ಸಭೆಗಳಿಗೆ ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಅವರು ಗೈರಾಗಿದ್ದರು. 

ಸಭೆಗೆ ಆಹ್ವಾನ ನೀಡದ್ದಕ್ಕೆ ಕಾಂಗ್ರೆಸ್‌ ಶಾಸಕರು ಗರಂ

ಸುರೇಶ್‌ ಕುಮಾರ್‌ ಅವರು ಬುಧವಾರ ಬೆಳಿಗ್ಗೆ ಕಾವೇರಿ ನೀರಾವರಿ ನಿಗಮ ಹಾಗೂ ಸೆಸ್ಕ್‌ ಅಧಿಕಾರಿಗಳು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಹಾಗೂ ಕೋವಿಡ್‌ ನಿಯಂತ್ರಣಕ್ಕೆ ಸಂಬಂಧಿಸಿದ ಸಭೆ ನಡೆಸಿದ್ದರು. ಅದರಲ್ಲಿ ಕೋವಿಡ್‌–19 ನಿಯಂತ್ರಣಕ್ಕೆ ಸಂಬಂಧಿಸಿದ ಸಭೆಗೆ ಮಾತ್ರ ಶಾಸಕರು, ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗಿತ್ತು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್‌ ಶಾಸಕರಾದ ಆರ್‌.ನರೇಂದ್ರ ಹಾಗೂ ಸಿ.ಪುಟ್ಟರಂಗಶೆಟ್ಟಿ ಅವರು ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಪಂಚಾಯಿತಿಯ ಕಾಂಗ್ರೆಸ್‌ ಸದಸ್ಯರು ಶಾಸಕರೊಂದಿಗೆ ಧ್ವನಿ ಸೇರಿಸಿದರು. ಧಿಕ್ಕಾರವನ್ನೂ ಕೂಗಿದರು. 

‘ಮೂರು ಸಭೆಗಳಲ್ಲಿ ಒಂದು ಸಭೆಗೆ ಮಾತ್ರ ನಮ್ಮನ್ನು ಆಹ್ವಾನಿಸಲಾಗಿದೆ. ಇದು ಸರಿಯಲ್ಲ. ಹಾಗಿದ್ದರೆ ವಿಷಯಗಳ ಬಗ್ಗೆ ಚರ್ಚಿಸಲು ನಾವು ಬೇಡವೇ? ಪ್ರತಿ ಬಾರಿಯೂ ಈ ರೀತಿ ಮಾಡಲಾಗುತ್ತದೆ. ಬೇರೆ ಪಕ್ಷದವರು ಎಂದು ಹೊರಗಿಡುವುದು ಸರಿಯಲ್ಲ’ ಎಂದು ಶಾಸಕರಾದ ಆರ್.ನರೇಂದ್ರ ಹಾಗೂ ಸಿ.ಪುಟ್ಟರಂಗಶೆಟ್ಟಿ ಅವರು ಆರೋಪಿಸಿದರು. 

‘ವೇದಿಕೆಯಿಂದ ಕೆಳಗಿಳಿದು ಬಂದ ಸಚಿವರು, ಎಲ್ಲ ಸಭೆಗಳಿಗೂ ಆಹ್ವಾನ ನೀಡಲಾಗಿದೆ ಎಂದು ಸಮಜಾಯಿಷಿ ನೀಡಲು ಪ್ರಯತ್ನಿಸಿದರು. ಆದರೆ, ಕಾಂಗ್ರೆಸ್‌ ಶಾಸಕರು ಇದಕ್ಕೆ ಬಗ್ಗಲಿಲ್ಲ.

‘ನಾವು ಇಲ್ಲದೇ ನೀವು ಸಭೆ ಮಾಡುತ್ತಿದ್ದರೆ ಮಾಡಿ. ನಮಗೇನು ಅಭ್ಯಂತರವಿಲ್ಲ. ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಪಕ್ಷಭೇದ ಮರೆತು ನಿಮಗೆ ಸಹಕಾರ ಕೊಟ್ಟಿದ್ದೇವೆ. ಹಾಗಿರುವಾಗ ಹೀಗೆ ಮಾಡುವುದು ಸರಿಯಲ್ಲ’ ಎಂದು ಇಬ್ಬರೂ ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು. 

ಇನ್ನಿಬ್ಬರು ಶಾಸಕರಾದ ಸಿ.ಎಸ್‌.ನಿರಂಜನಕುಮಾರ್‌ ಹಾಗೂ ಎನ್‌.ಮಹೇಶ್‌ ಅವರು ಬೆಳಿಗ್ಗೆಯಿಂದಲೇ ಸಭೆಯಲ್ಲಿ ಭಾಗವಹಿಸಿದ್ದರು. ನಿರಂಜನ್‌ಕುಮಾರ್‌ ಅವರು ಸಚಿವರ ಬೆಂಬಲಕ್ಕೆ ನಿಂತು ಮಾತನಾಡಲು ಯತ್ನಿಸಿದರಾದರೂ ಕಾಂಗ್ರೆಸ್‌ ಶಾಸಕರು ಅವಕಾಶ ಕೊಡಲಿಲ್ಲ.

ಅಂತಿಮವಾಗಿ ಸಚಿವ ಸುರೇಶ್‌ ಕುಮಾರ್‌ ಅವರು, ‘ಅಚಾತುರ್ಯದಿಂದ ಹೀಗಾಗಿದೆ. ಕ್ಷಮೆ ಕೋರುತ್ತೇನೆ. ಈಗ ಸಭೆ ಮುಂದುವರೆಸೋಣ’ ಎಂದು ಮನವಿ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು