ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳ್ಳೇಗಾಲ ನಗರಸಭೆ: ಎನ್‌.ಮಹೇಶ್‌ ಬಣ, ಬಿಜೆಪಿ ಮೈತ್ರಿಗೆ ಒಲಿದ ಗೆಲುವು

ಗಂಗಮ್ಮ ಅಧ್ಯಕ್ಷೆ, ಕವಿತಾ ಉಪಾಧ್ಯಕ್ಷೆ, ಕಾಂಗ್ರೆಸ್‌ಗೆ ಕೈ ತಪ್ಪಿದ ಅಧಿಕಾರ
Last Updated 29 ಅಕ್ಟೋಬರ್ 2020, 14:48 IST
ಅಕ್ಷರ ಗಾತ್ರ

ಕೊಳ್ಳೇಗಾಲ: ತೀವ್ರ ಕುತೂಹಲ ಮೂಡಿಸಿದ್ದ ಇಲ್ಲಿನ ನಗರಸಭೆಯ ಚುನಾವಣೆಯಲ್ಲಿ ಸ್ಥಳೀಯ ಶಾಸಕ ಎನ್‌.ಮಹೇಶ್‌ ಹಾಗೂ ಬಿಜೆಪಿಯ ಮೈತ್ರಿಗೆ ಗೆಲುವಾಗಿದೆ.

ಬಿಎಸ್‌ಪಿಯಿಂದ ಸ್ಪರ್ಧಿಸಿ ಗೆದ್ದು, ನಂತರ ಎನ್‌.ಮಹೇಶ್‌ ಅವರೊಂದಿಗೆ ಗುರುತಿಸಿಕೊಂಡಿದ್ದ ಆರನೇ ವಾರ್ಡ್‌ ಸದಸ್ಯೆ ಗಂಗಮ್ಮ ಅವರು ಅಧ್ಯಕ್ಷೆಯಾಗಿ ಹಾಗೂ ಉಪಾಧ್ಯಕ್ಷೆಯಾಗಿ 8ನೇ ವಾರ್ಡ್‌ನ ಬಿಜೆಪಿ ಸದಸ್ಯೆ ಕವಿತ ಅವರು ಆಯ್ಕೆಯಾಗಿದ್ದಾರೆ.

ನಗರಸಭೆಯ ಹಿಂದಿನ ಅವಧಿಯಲ್ಲಿ ಸ್ಪಷ್ಟ ಬಹುಮತ ಪಡೆದು ಅಧಿಕಾರ ನಡೆಸಿದ್ದ ಕಾಂಗ್ರೆಸ್‌ಗೆ ಈ ಬಾರಿ ಅಧಿಕಾರ ಕೈತಪ್ಪಿದೆ.

ಅಧ್ಯಕ್ಷ ಸ್ಥಾನಕ್ಕೆ ಮೂವರು, ಉಪಾಧ್ಯಕ್ಷ ಸ್ಥಾನಕ್ಕೆ ಇಬ್ಬರು: 31 ಸದಸ್ಯ ಬಲದ ನಗರಸಭೆಯಲ್ಲಿ 11 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್‌ ದೊಡ್ಡ ಪಕ್ಷ. ಎರಡು ವರ್ಷಗಳ ಹಿಂದೆ ನಡೆದಿದ್ದ ಚುನಾವಣೆಯಲ್ಲಿ ಬಿಎಸ್‌ಪಿ ಒಂಬತ್ತು ವಾರ್ಡ್‌ಗಳಲ್ಲಿ ಗೆದ್ದಿತ್ತು. ಶಾಸಕ ಎನ್‌.ಮಹೇಶ್‌ ಅವರು ಬಿಎಸ್‌ಪಿಯಿಂದ ಉಚ್ಚಾಟನೆಗೊಂಡ ಬಳಿಕ, ಏಳು ಸದಸ್ಯರು ಅವರೊಂದಿಗೆ ಗುರುತಿಸಿಕೊಂಡಿದ್ದಾರೆ. ಇಬ್ಬರು ಮಾತ್ರ ಪಕ್ಷದ ಜೊತೆ ಗುರುತಿಸಿಕೊಂಡಿದ್ದಾರೆ. ಇವರನ್ನು ಬಿಟ್ಟು ಬಿಜೆಪಿಯ ಏಳು ಸದಸ್ಯರು ಹಾಗೂ ಪಕ್ಷೇತರರು ನಾಲ್ವರು ಇದ್ದಾರೆ.

ನಗರಸಭೆಯ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಾಗಿದೆ. ಗುರುವಾರ ಮಧ್ಯಾಹ್ನ ಚುನಾವಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಡಾ.ಗಿರೀಶ್‌ ದಿಲೀಪ್‌ ಬದೋಲೆ ಅವರ ಉಪಸ್ಥಿತಿಯಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು.

ಎನ್‌.ಮಹೇಶ್‌ ಹಾಗೂ ಬಿಜೆಪಿಯ ಮೈತ್ರಿಯಿಂದ ಅಧ್ಯಕ್ಷ ಸ್ಥಾನಕ್ಕೆ ಗಂಗಮ್ಮ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕವಿತ ಅವರು ಸ್ಪರ್ಧಿಸಿದ್ದರು. ಕಾಂಗ್ರೆಸ್‌ನಿಂದ ಅಧ್ಯಕ್ಷ ಸ್ಥಾನಕ್ಕೆ 27ನೇ ವಾರ್ಡ್‌ ಸದಸ್ಯೆ ಪುಷ್ಪಲತಾ ಹಾಗೂ 31ನೇ ವಾರ್ಡ್‌ ಸದಸ್ಯೆ ಸುಶೀಲಾ ನಾಮಪತ್ರ ಸಲ್ಲಿಸಿದ್ದರು. ಬಿಎಸ್‌ಪಿಯಿಂದ 23ನೇ ವಾರ್ಡ್‌ ಸದಸ್ಯೆ ಜಯಮೇರಿ ಅವರು ಕಣಕ್ಕಿಳಿದಿದ್ದರು.

ಅಭ್ಯರ್ಥಿಗಳ ಪರ ಸದಸ್ಯರು ಕೈ ಎತ್ತಿ ಹಿಡಿಯುವುದರ ಮೂಲಕ ಬೆಂಬಲ ಸೂಚಿಸಿದರು.

ಪಕ್ಷೇತರ ಸದಸ್ಯನ ಬೆಂಬಲ: ಎನ್‌.ಮಹೇಶ್‌ ಅವರ ಏಳು ಬೆಂಬಲಿಗರು ಹಾಗೂ ಬಿಜೆಪಿಯ ಏಳು ಸದಸ್ಯರು, ಶಾಸಕ ಹಾಗೂ ಸಂಸದರ ಮತಗಳು ಸೇರಿದಂತೆ ಮೈತ್ರಿ ಅಭ್ಯರ್ಥಿಗಳಿಗೆ 16 ಮತಗಳು ಲಭ್ಯವಿದ್ದವು. ಸ್ಪಷ್ಟಬಹುಮತಕ್ಕಾಗಿ ಇನ್ನೊಂದು ಮತದ ಅಗತ್ಯವಿತ್ತು. ಪಕ್ಷೇತರ ಸದಸ್ಯ ಶಂಕರನಾರಾಯಣ ಗುಪ್ತ ಅವರು ಬೆಂಬಲಿಸಿದ್ದರಿಂದ ತಲಾ 17 ಪತಗಳನ್ನು ಗಳಿಸಿದ ಗಂಗಮ್ಮ ಹಾಗೂ ಕವಿತ ಅವರು ಗೆಲುವು ಪಡೆದರು.

ಕಾಂಗ್ರೆಸ್‌ನ ಅಭ್ಯರ್ಥಿಗಳ ಪರವಾಗಿ 11 ಸದಸ್ಯರು ಹಾಗೂ ಮೂವರು ಪಕ್ಷೇತರರು ಸೇರಿದಂತೆ 14 ಮತಗಳಷ್ಟೇ ಬಿದ್ದವು. ಬಿಎಸ್‌ಪಿಯ ಜಯಮೇರಿ ಅವರು ಎರಡು ಮತಗಳನ್ನು ಗಳಿಸಿದರು.

ಮೆರವಣಿಗೆ: ಅಧ್ಯಕ್ಷೆ ಗಂಗಮ್ಮ ಹಾಗೂ ಉಪಾಧ್ಯಕ್ಷೆ ಕವಿತ ಅವರು ಜಯಗಳಿಸುತ್ತಿದ್ದಂತೆಯೇ ಶಾಸಕರ ಬೆಂಬಲಿಗರು ಹಾಗೂ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಪಕ್ಷದ ಮುಖಂಡರು ಶಾಲು, ಹಾರ ಹೊದಿಸಿ ಸನ್ಮಾನ ನಡೆಸಿದರು. ವಿಜೇತರ ಮೆರವಣಿಗೆಯೂ ನಡೆಯಿತು. ಕೊಳ್ಳೇಗಾಲದ ಅಭಿವೃದ್ಧಿಗೆ ಶ್ರಮಿಸುವುದಾಗಿ ನೂತನ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷೆ ಹೇಳಿದ್ದಾರೆ.

ಲಘು ಲಾಠಿ ಪ್ರಹಾರ: ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಎನ್.ಮಹೇಶ್ ಬೆಂಬಲಿಗರು, ಬಿಎಸ್‌ಪಿ ಕಾರ್ಯಕರ್ತರು ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಸರ್ಕಲ್‌ ಇನ್‌ಸ್ಪೆಕ್ಟರ್‌ ಶ್ರೀಕಾಂತ್ ಅವರು ಮದ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದರು. ಆದರೂ ಜಗ್ಗದೇ ಇದ್ದಾಗ ಪೊಲೀಸರು ಲಘುಲಾಠಿ ಪ್ರವಾಹ ನಡೆಸಿದರು.

ಪ್ರತಿಷ್ಠೆ ಪಣಕ್ಕಿಟ್ಟಿದ್ದ ಎನ್‌.ಮಹೇಶ್ ಬಿಜೆಪಿಗೆ ಇನ್ನೂ ಹತ್ತಿರ

ಶಾಸಕ ಎನ್‌.ಮಹೇಶ್‌ ಅವರಿಗೆ ಇದು ಪ್ರತಿಷ್ಠೆಯ ಚುನಾವಣೆಯಾಗಿತ್ತು. ಬಿಎಸ್‌ಪಿಯಿಂದ ಉಚ್ಚಾಟನೆಗೊಂಡ ನಂತರ ಕ್ಷೇತ್ರದಲ್ಲಿ ತಮ್ಮ ಅಸ್ತಿತ್ವವನ್ನು ಸಾಬೀತು ಪಡಿಸಬೇಕಾದ ಅನಿವಾರ್ಯತೆಗೆ ಅವರು ಸಿಲುಕಿದ್ದರು. ರಾಜ್ಯದಲ್ಲಿ ಜೆಡಿಎಸ್‌, ಕಾಂಗ್ರೆಸ್‌ ಮೈತ್ರಿ ಸರ್ಕಾರ ಉರುಳಿದ ನಂತರ ಬಿಜೆಪಿ ಬಗ್ಗೆ ಮೃದು ಧೋರಣೆ ತಾಳುತ್ತಾ ಬಂದಿದ್ದ ಮಹೇಶ್‌ ಅವರು, ಈಗ ಕೊಳ್ಳೇಗಾಲದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ಕಮಲ ಪಕ್ಷಕ್ಕೆ ಇನ್ನಷ್ಟು ಹತ್ತಿರವಾಗಿದ್ದಾರೆ.

ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಹಾಗೂ ಬಿಜೆಪಿಯ ಸ್ಥಳೀಯ ಮುಖಂಡರೊಂದಿಗೆ ಸೇರಿ ಅವರು ಹೆಣೆದಿರುವ ಕಾರ್ಯತಂತ್ರ ಯಶಸ್ವಿಯಾಗಿದೆ.

ಈ ಹಿಂದಿನ ಅವಧಿಯಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್‌, ಮತ್ತೆ ಅಧಿಕಾರ ಪಡೆಯುವಲ್ಲಿ ವಿಫಲವಾಗಿದೆ. ಕೊನೆಯ ಕ್ಷಣದವರೆಗೂ ಬಿಎಸ್‌ಪಿ ಸದಸ್ಯರು ಹಾಗೂ ಎಲ್ಲ ನಾಲ್ವರು ಪಕ್ಷೇತರರ ಬೆಂಬಲ ಪಡೆಯುವ ವಿಶ್ವಾಸದಲ್ಲಿ ಕಾಂಗ್ರೆಸ್‌ ಮುಖಂಡರು ಇದ್ದರು. ಆದರೆ, ಅವರ ನಿರೀಕ್ಷೆಯಂತೆ ಯಾವುದೂ ನಡೆದಿಲ್ಲ.

ಸದಸ್ಯರಿಂದ ಪಕ್ಷಕ್ಕೆ ದ್ರೋಹ: ಬಿಎಸ್‌ಪಿ

ಎಲ್ಲ ಸದಸ್ಯರು ಪಕ್ಷದ ಅಭ್ಯರ್ಥಿಗೆ ಮತ ಹಾಕಬೇಕು ಎಂದು ಬಿಎಸ್‌ಪಿ ವಿಪ್‌ ಜಾರಿಗೊಳಿಸಿತ್ತು. ಮಹೇಶ್‌ ಬೆಂಬಲಿಗರು ಅದನ್ನು ಪಾಲಿಸಿಲ್ಲ.

‘ನಮ್ಮ ಪಕ್ಷದ ಸದಸ್ಯರು ಪಕ್ಷಕ್ಕೆ ದ್ರೋಹ ಮಾಡಿದ್ದಾರೆ. ಪಕ್ಷ ನೀಡಿರುವ ವಿಪ್ ಉಲ್ಲಂಘಿಸಿದ್ದಾರೆ. ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ದೂರು ನೀಡಿ ಅವರನ್ನು ಅನರ್ಹ ಮಾಡಿ ಎಂದು ಹೇಳುತ್ತೇವೆ. ಕಾನೂನು ಹೋರಾಟವನ್ನೂ ಮಾಡುತ್ತೇವೆ’ ಎಂದುಬಿಎಸ್‌ಪಿ ಕ್ಷೇತ್ರದ ಅಧ್ಯಕ್ಷ ರಾಜಶೇಖರ್ ಮೂರ್ತಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT