ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳ್ಳೇಗಾಲ: ತಂಬಾಕು ಉತ್ಪನ್ನಗಳ ಬಳಕೆ ಅವ್ಯಾಹತ

ಅವಿನ್‌ ಪ್ರಕಾಶ್‌ ವಿ.
Published 5 ಜನವರಿ 2024, 7:04 IST
Last Updated 5 ಜನವರಿ 2024, 7:04 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಸಾರ್ವಜನಿಕ ಸ್ಥಳಗಳಲ್ಲಿ ಬೀಡಿ, ಸಿಗರೇಟು ಸೇರಿದಂತೆ ತಂಬಾಕು ಉತ್ಪನ್ನಗಳ ಸೇವನೆಗೆ ನಿರ್ಬಂಧ ಇದ್ದರೂ, ನಗರದಲ್ಲಿ ತಂಬಾಕು ಉತ್ಪನ್ನಗಳ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. 

‘ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆ, ಬೀಡಿ, ಸಿಗರೇಟು ಸೇದಿದವರಿಗೆ ಕಾನೂನುಪ್ರಕಾರ ದಂಡ ವಿಧಿಸಲು ಅವಕಾಶವಿದೆ. ತಾಲ್ಲೂಕಿನ ಅಧಿಕಾರಿಗಳು ಕಂಡರೂ ಕಾಣದಂತೆ ವರ್ತಿಸುತ್ತಿದ್ದಾರೆ.  ನಗರದ ಪ್ರತಿಯೊಂದು ಚಹ ಅಂಗಡಿಗಳು ದೂಮಪಾನದ ಸ್ಥಳವಾಗಿ ಬದಲಾಗಿದೆ’ ಎಂಬುದು ಸಾರ್ವಜನಿಕರ ದೂರು. 

‘ಜನರು ಬಿಡಿ ಸಿಗರೇಟುಗಳನ್ನು ಸೇದುವುದಲ್ಲದೇ, ಇತರರೂ ಪರೋಕ್ಷವಾಗಿ ಅದರ ಹೊಗೆಯನ್ನು ಸೇವಿಸುವಂತೆ ಮಾಡುತ್ತಿದ್ದಾರೆ. ಬೀಡಿ ಸಿಗರೇಟ್‌ ತುಂಡುಗಳನ್ನು ರಸ್ತೆಯಲ್ಲೇ ಎಸೆಯುತ್ತಾರೆ. ಇದರ ಬಗ್ಗೆ ದೂರು ನೀಡಿದರೂ ಯಾವ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ’ ಎಂದು ಮುಖಂಡ ಮಣಿಕಂಠ ದೂರಿದರು. 

ಶಾಲಾ ಕಾಲೇಜುಗಳ ಮುಂದೆ ಹೆಚ್ಚು: ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಶಾಲಾ ಕಾಲೇಜು ಮುಂಭಾಗದಲ್ಲಿ ಹೆಚ್ಚು ಮಂದಿ ಸಿಗರೇಟ್‌ ಸೇದುತ್ತಾರೆ.

ಅದರಲ್ಲೂ ಶಾಲಾ-ಕಾಲೇಜು ಸಮೀಪದ ಚಹ ಅಂಗಡಿಗಳು ಹಾಗೂ ಕ್ಯಾಂಟೀನ್‌ಗಳಲ್ಲಿ ಕಾಲೇಜು ವಿದ್ಯಾರ್ಥಿಗಳು, ಯುವಕರು ಸಿಗರೇಟು ಖರೀದಿದರು. ಸರ್ಕಾರಿ ಕಚೇರಿಗಳು, ಬಸ್ ನಿಲ್ದಾಣ, ಹೋಟೆಲ್, ಬಾರ್ ಮುಂಭಾಗ ಸೇರಿದಂತೆ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರು ಇದ್ದಾರೆ. 

‘ಶಾಲಾ-ಕಾಲೇಜಿಗೆ ಹೋಗುವ ವಿದ್ಯಾರ್ಥಿನಿಯರಿಗೆ, ಮಹಿಳೆಯರಿಗೆ ತುಂಬಾ ತೊಂದರೆಯಾಗುತ್ತಿದ್ದು, ಮೂಗು ಮುಚ್ಚಿಕೊಂಡು ಹೋಗಬೇಕಾಗಿದೆ. ಚಿತ್ರ ಮಂದಿರಗಳಲ್ಲಿ ಸಿನಿಮಾವನ್ನು ವೀಕ್ಷಣೆ ಮಾಡುವ ಸಂದರ್ಭದಲ್ಲಿ ಕೆಲವರು ಬೀಡಿ ಸಿಗರೇಟುಗಳನ್ನು ಸೇದುತ್ತಾರೆ. ಚಿತ್ರಮಂದಿರದ ಮಾಲೀಕರಿಗೆ ದೂರು ನೀಡಿದರೂ ಪ್ರಯೋಜನ ಆಗುತ್ತಿಲ್ಲ. ಬಸ್ ನಿಲ್ದಾಣದಲ್ಲಂತೂ ಧೂಮಪಾನಿಗಳಲ್ಲದವರು ನಿಲ್ಲುವ ಹಾಗೆಯೇ ಇಲ್ಲ. ಆರೋಗ್ಯ ಇಲಾಖೆ, ನಗರಸಭೆ ಅಧಿಕಾರಿಗಳು, ಪೊಲೀಸರು ಇದರ ಬಗ್ಗೆ ಗಮನ ಹರಿಸಬೇಕು’ ಎಂದು ವಿದ್ಯಾರ್ಥಿನಿ ಮೋಹಿತಾ ಒತ್ತಾಯಿಸಿದರು. 

ಆರೋಗ್ಯ ಇಲಾಖೆ ಕೋಟ್ಪಾ ಕಾಯ್ದೆ ಅನುಷ್ಠಾನದ ಭಾಗವಾಗಿ ವಿವಿಧ ಕಡೆಗಳಲ್ಲಿ ದಾಳಿ ಮಾಡಿ ದಂಡ ಹಾಕುವುದು, ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆಯಾದರೂ, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ, ತಂಬಾಕು ಉತ್ಪನ್ನಗಳ ಸೇವನೆಗೆ ನಿರ್ಬಂಧ ನಿಯಮ ಪೂರ್ಣವಾಗಿ ಜಾರಿಗೆ ಬಂದಿಲ್ಲ. 

ಒಂದೊಂದು ದಿನ ಕಾರ್ಯಾಚರಣೆ ಮಾಡಿದರೆ ಸಾಲದು, ಪ್ರತಿ ದಿನವೂ ಕಾರ್ಯಾಚರಣೆ ನಡೆಸಬೇಕು. ಸ್ಥಳದಲ್ಲೇ ದಂಡ ವಿಧಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ.

ಸಾರ್ವಜನಿಕ ಸ್ಥಳಗಳಲ್ಲಿ ಬಿಡಿ ಸಿಗರೇಟು ಸೇದುವುದು ಅಪರಾಧ. ನಿಯಮ ಮೀರಿದವರ ಮೇಲೆ ದಂಡ ವಿಧಿಸಲಾಗುತ್ತಿದೆ
ಸೋಮೇಗೌಡ ಡಿವೈಎಸ್‌ಪಿ 
ತಂಬಾಕು ಉತ್ಪನ್ನಗಳನ್ನು ಸಾರ್ವಜನಿಕವಾಗಿ ಬಳಸುವವರಿಗೆ ದಂಡ ವಿಧಿಸುತ್ತಿದ್ದೇವೆ. ಜಾಗೃತಿ ಕಾರ್ಯಕ್ರಮಗಳನ್ನೂ ಮಾಡುತ್ತಿದ್ದೇವೆ
ಡಾ.ಗೋಪಾಲ್ ತಾಲ್ಲೂಕು ಆರೋಗ್ಯಾಧಿಕಾರಿ
ಇನ್ನೂ ಮೂಡದ ಜಾಗೃತಿ
ಬೀಡಿ ಸಿಗರೇಟುಗಳನ್ನು ಸೇದಿ ಅವುಗಳ ತುಂಡುಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಎಸೆಯುತ್ತಾರೆ. ಗುಟ್ಕಾ ಪಾನ್ ತಿಂದು ರಸ್ತೆಗೆ ಹಾಗೂ ಗೋಡೆಗಳ ಮೇಲೆ ಉಗಿಯುವವರೂ ಇದ್ದಾರೆ. ಇದರಿಂದ ಸ್ವಚ್ಛತೆಯೂ ಹಾಳಾಗುತ್ತಿದೆ.  ತಂಬಾಕು ಉತ್ಪನ್ನಗಳ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ತಾಲ್ಲೂಕು ಆಡಳಿತ ನಗರಸಭೆ ಜಾಗೃತಿ ಮೂಡಿಸುತ್ತಿದ್ದರೂ ಜನರಲ್ಲಿ ಅರಿವು ಮೂಡುತ್ತಿಲ್ಲ. ಅರಿವು ಕಾರ್ಯಕ್ರಮವನ್ನು ಇನ್ನಷ್ಟು ಹೆಚ್ಚಿಸಬೇಕು ಎಂಬ ಒತ್ತಾಯ ಸಾರ್ವಜನಿಕರದ್ದು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT