ಚಾಮರಾಜನಗರ: ಕೋವಿಡ್ ಹರಡುವುದನ್ನು ತಪ್ಪಿಸುವ ಉದ್ದೇಶದಿಂದ ಶ್ರಾವಣ ಮಾಸದ ಕೊನೆಯ ದಿನಗಳ ಅಂಗವಾಗಿ ಜಿಲ್ಲೆಯ ಪ್ರಸಿದ್ಧ ಯಾತ್ರಾಸ್ಥಳ ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಭಾನುವಾರದಿಂದ (ಸೆ.5) ಮಂಗಳವಾರದವರೆಗೆ (ಸೆ.7) ನಡೆಯಲಿರುವ ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಸಾರ್ವಜನಿಕರು ಹಾಗೂ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ.
ಭಾನುವಾರ ಎಣ್ಣೆ ಮಜ್ಜನ, ಸೋಮವಾರ ಅಮಾವಾಸ್ಯೆ ಹಾಗೂ ಮಂಗಳವಾರ 108 ಕುಂಭಾಭಿಷೇಕ ಕಾರ್ಯಕ್ರಮ ಜರುಗಲಿವೆ. ಸಾಮಾನ್ಯವಾಗಿ ಈ ಅವಧಿಯಲ್ಲಿ ದೇವಾಲಯಕ್ಕೆ ಅಪಾರ ಭಕ್ತರು ಭೇಟಿ ನೀಡುತ್ತಾರೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದರೆ ಕೋವಿಡ್ ನಿಯಮ ಪಾಲನೆ ಕಷ್ಟವಾಗಬಹುದು ಎಂಬ ಕಾರಣಕ್ಕೆ ಸ್ಥಳೀಯವಾಗಿ ಹಾಗೂ ಸರಳವಾಗಿ ಆಚರಿಸಲು ನಿರ್ಣಯಿಸಲಾಗಿದೆ.
ಜಿಲ್ಲಾಧಿಕಾರಿ ಸಹ ಮೂರು ದಿನ ಭಕ್ತರ ದೇವಾಲಯ ಪ್ರವೇಶ ನಿರ್ಬಂಧಿಸಿ ಆದೇಶ ಹೊರಡಿಸಿದ್ದಾರೆ.
ಭಕ್ತಾದಿಗಳು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದೊಂದಿಗೆ ಸಹಕರಿಸಬೇಕು ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವ ಸ್ವಾಮಿ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಅಭಿಯಾನ:ಮಹದೇಶ್ವರ ಬೆಟ್ಟದಲ್ಲಿ (ದಾಸೋಹ ಭವನ ಸುತ್ತಮುತ್ತಲ ಪ್ರದೇಶ) ಸುರಪನೇನಿ ವಿದ್ಯಾಸಾಗರ ಫೌಂಡೇಷನ್, ಮಲೆ ಮಹದೇಶ್ವರ ವನ್ಯಧಾಮ ಹಾಗೂ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಜಂಟಿ ಸಹಯೋಗದಲ್ಲಿ ಪ್ಲಾಸ್ಟಿಕ್ ಮುಕ್ತ ಮಹದೇಶ್ವರ ಬೆಟ್ಟ ಎರಡನೇ ಹಂತದ ಅಭಿಯಾನ ಶನಿವಾರ ನಡೆಯಲಿದೆ. ಬೆಳಿಗ್ಗೆ 7.30ರಿಂದ ಅಭಿಯಾನ ನಡೆಯಲಿದ್ದು, ಆಸಕ್ತರು ಭಾಗವಹಿಸಬೇಕು ಎಂದು ಜಯವಿಭವಸ್ವಾಮಿ ಮನವಿ ಮಾಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.