ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ಸಂಪುಟ: ಗಡಿ ಜಿಲ್ಲೆ ಚಾಮರಾಜನಗರಕ್ಕೆ ನಿರೀಕ್ಷಿತ ನಿರಾಸೆ

ನಿರಂಜನಕುಮಾರ್‌ಗೆ ಸಿಗದ ಸಚಿವ ಸ್ಥಾನ, ಹುಸಿಯಾದ ಬೆಂಬಲಿಗರ ಲೆಕ್ಕಾಚಾರ
Last Updated 4 ಆಗಸ್ಟ್ 2021, 12:07 IST
ಅಕ್ಷರ ಗಾತ್ರ

ಚಾಮರಾಜನಗರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟದಲ್ಲಿ ನಿರೀಕ್ಷೆಯಂತೆಯೇ ಜಿಲ್ಲೆಗೆ ಪ್ರಾತಿನಿಧ್ಯ ಸಿಕ್ಕಿಲ್ಲ.

ಜಿಲ್ಲೆಯ ಏಕೈಕ ಬಿಜೆಪಿ ಶಾಸಕ, ಗುಂಡ್ಲುಪೇಟೆ ಕ್ಷೇತ್ರದ ಸಿ.ಎಸ್‌.ನಿರಂಜನಕುಮಾರ್‌ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬುದು ಜಿಲ್ಲಾ ಬಿಜೆಪಿಯ ಕೆಲವು ಮುಖಂಡರ ಒತ್ತಾಯವಾಗಿತ್ತು. ಅವರ ಬೆಂಬಲಿಗರು ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲೂ ಒತ್ತಾಯ ಮಾಡಿದ್ದರು.

ಯಡಿಯೂರಪ್ಪ ಅವರ ಆಪ್ತವಲಯದಲ್ಲಿ ಗುಂಡ್ಲುಪೇಟೆ ಶಾಸಕ ಗುರುತಿಸಿಕೊಂಡಿರುವುದರಿಂದ ಸಂಪುಟದಲ್ಲಿ ಅವರಿಗೆ ಸ್ಥಾನ ಸಿಗಬಹುದು ಎಂಬ ನಿರೀಕ್ಷೆ ಅವರ ಬೆಂಬಲಿಗರಿಗೆ ಇತ್ತು. ಅದು ಹುಸಿಯಾಗಿದೆ.

ಈ ಬಾರಿಯೂ ಸಂಪುಟದಲ್ಲಿ ಜಿಲ್ಲೆಗೆ ಪ್ರಾತಿನಿಧ್ಯ ಸಿಗುವ ಸಾಧ್ಯತೆ ಕ್ಷೀಣ ಎಂದು ‘ಪ್ರಜಾವಾಣಿ’ ಜುಲೈ 30ರಂದು ವರದಿ ಮಾಡಿತ್ತು. ಅದೀಗ ನಿಜವಾಗಿದೆ.

ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ಯುವ ಹಾಗೂ ಹೊಸ ಮುಖಗಳಿಗೆ ಅವಕಾಶ ನೀಡಲಾಗುತ್ತದೆ ಎಂಬ ಸಂದೇಶ ರವಾನೆಯಾಗಿದ್ದು ಜಿಲ್ಲೆಯ ಬಿಜೆಪಿ ಕಾರ್ಯಕರ್ತರಲ್ಲಿ ನಿರೀಕ್ಷೆಯನ್ನು ಹುಟ್ಟುಹಾಕಿತ್ತು. ಯಡಿಯೂರಪ್ಪ ಅವರು ಸೂಚಿಸಿರುವವರನ್ನೇ ಹೈಕಮಾಂಡ್‌ ಮುಖ್ಯಮಂತ್ರಿ ಮಾಡಿದೆ. ಅದೇ ರೀತಿ ಸಚಿವ ಸಂಪುಟ ವಿಸ್ತರಣೆಯಲ್ಲೂ ಅವರ ಮಾತು ನಡೆಯಲಿದೆ ಎಂಬ ಲೆಕ್ಕಾಚಾರ ಅವರದ್ದಾಗಿತ್ತು.

ಸ್ವತಃ ನಿರಂಜನ ಕುಮಾರ್‌ ಅವರು ಯಡಿಯೂರಪ್ಪ ಅವರನ್ನು ಭೇಟಿಯಾಗಿ ಸಂಪುಟದಲ್ಲಿ ಅವಕಾಶ ನೀಡುವಂತೆ ಮನವಿಯನ್ನೂ ಮಾಡಿದ್ದರು. ‘ಈ ಬಾರಿ ಸಾಧ್ಯವಿಲ್ಲ’ ಎಂದು ಅವರು ಸ್ಪಷ್ಟವಾಗಿ ಹೇಳಿದ್ದರು ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಕೆಲವು ದಿನಗಳ ಹಿಂದೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದ ನಿರಂಜನ ಕುಮಾರ್‌ ಅವರು, ‘ಸ್ಥಾನ ನೀಡುವ ಬಗ್ಗೆ ವರಿಷ್ಠರು ತೀರ್ಮಾನ ಮಾಡುತ್ತಾರೆ. ಅವಕಾಶ ಸಿಕ್ಕಿದರೆ ಪ್ರಾಮಾಣಿಕವಾಗಿ ಕೆಲಸ ಮಾಡಲು ಸಿದ್ಧ’ ಎಂದು ಹೇಳಿದ್ದರು.

ನಿರಂಜನ ಕುಮಾರ್ ಅವರು ಮೊದಲ ಬಾರಿ ಶಾಸಕರಾಗಿದ್ದಾರೆ. ಮುಂದೆ ಸಾಕಷ್ಟು ಅವಕಾಶಗಳಿವೆ. ಆರ್‌ಎಸ್‌ಎಸ್‌ಗೆ ನಿಷ್ಠರಾಗಿರುವ ಹಾಗೂ ಮೂರ್ನಾಲ್ಕು ಬಾರಿ ಗೆದ್ದಿರುವವರಿಗೂ ಸಚಿವ ಸ್ಥಾನ ಸಿಕ್ಕಿಲ್ಲ. ಜೊತೆಗೆ ನಿರಂಜನಕುಮಾರ್‌ ಅವರು ಕರ್ನಾಟಕ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆಗಿದ್ದಾರೆ. ಈ ಎಲ್ಲ ಕಾರಣಗಳಿಂದ ವರಿಷ್ಠರು ಅವರ ಹೆಸರನ್ನು ಸಚಿವ ಸ್ಥಾನಕ್ಕೆ ಪರಿಗಣಿಸಿಲ್ಲ ಎಂದು ಪಕ್ಷದ ಮುಖಂಡರು ಹೇಳುತ್ತಿದ್ದಾರೆ.

‘ಜಿಲ್ಲೆಗೆ ಸಚಿವ ಸ್ಥಾನ ಸಿಗಲಿದೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದು ನಿಜ. ಆದರೆ, ಈ ಬಾರಿ ಸಿಕ್ಕಿಲ್ಲ. ಅಂದ ಮಾತ್ರಕ್ಕೆ ಜಿಲ್ಲೆಗೆ ನಿರಾಸೆ ಎಂಬುದು ಸರಿ ಅಲ್ಲ. ಮೈಸೂರಿನಲ್ಲಿ ಕೂಡ ಯಾರೂ ಸಚಿವರಾಗಿಲ್ಲ. ವರಿಷ್ಠ ತೀರ್ಮಾನದ ಹಿಂದೆ ಕಾರಣಗಳಿರುತ್ತದೆ. ಮುಂದೆ ಖಂಡಿತವಾಗಿ ಅವಕಾಶ ಸಿಗಬಹುದು’ ಎಂದು ಬಿಜೆಪಿ ಮುಖಂಡ ನಿಜಗುಣ ರಾಜು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಉಸ್ತುವಾರಿ ಸಚಿವರು ಯಾರು?

ಸಚಿವ ಸಂಪುಟ ರಚನೆಯಾದ ಬೆನ್ನಲ್ಲೇ ಜಿಲ್ಲೆಯ ನೂತನ ಉಸ್ತುವಾರಿ ಸಚಿವರು ಯಾರಾಗಬಹುದು ಎಂಬ ಕುತೂಹಲವೂ ಜನರಲ್ಲಿ ಮೂಡಿದೆ. ಯಡಿಯೂರಪ್ಪ ಸರ್ಕಾರದಲ್ಲಿ ಉಸ್ತುವಾರಿ ಸಚಿವರಾಗಿದ್ದ ಎಸ್‌.ಸುರೇಶ್‌ ಕುಮಾರ್‌ ಅವರು ಬೊಮ್ಮಾಯಿ ಸಂಪುಟದಲ್ಲಿ ಇಲ್ಲ.

2008ರಲ್ಲಿ ಅಸ್ತಿತ್ವಕ್ಕೆ ಬಂದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಚ್‌.ಹಾಲಪ್ಪ, ವಿ.ಸೋಮಣ್ಣ, ಪಿ.ಎಂ.ನರೇಂದ್ರಸ್ವಾಮಿ, ಎಂ.ಪಿ.ರೇಣುಕಾಚಾರ್ಯ, ವಿಜಯಶಂಕರ್‌ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು.

ಈ ಹಿಂದೆ, ಉಸ್ತುವಾರಿ ಸಚಿವರಾಗಿದ್ದವರ ಪೈಕಿ ವಿ.ಸೋಮಣ್ಣ ಅವರು ಮಾತ್ರ ಬುಧವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ಹಿಂದಿನ ಸರ್ಕಾರದಲ್ಲಿ ಅವರಿಗೆ ಕೊಡಗು ಜಿಲ್ಲೆಯ ಉಸ್ತುವಾರಿ ಹೊಣೆ ವಹಿಸಲಾಗಿತ್ತು.

ಜಿಲ್ಲೆಯಲ್ಲಿ ಸೋಮಣ್ಣ ಅವರಿಗೆ ಅಭಿಮಾನಿ ಬಳಗವಿದೆ. ಸುರೇಶ್‌ ಕುಮಾರ್‌ ಅವರು ಉಸ್ತುವಾರಿಯಾಗಿದ್ದಾಗ, ಅವರನ್ನು ಬದಲಿಸಿ ಸೋಮಣ್ಣ ಅವರನ್ನು ಮಾಡಬೇಕು ಎಂದು ಪಕ್ಷದ ಮುಖಂಡರ ಮೇಲೆ ಇಲ್ಲಿನ ಕೆಲವು ಮುಖಂಡರು ಒತ್ತಡ ಹಾಕಿದ್ದರು. ಕೆಲವರು ಬಹಿರಂಗವಾಗಿಯೇ ಆಗ್ರಹಿಸಿದ್ದರು.

ಸೋಮಣ್ಣ ಅವರಿಗೆ ಜಿಲ್ಲೆಯ ಪರಿಚಯ ಇರುವುದರಿಂದ ಅವರನ್ನೇ ಉಸ್ತುವಾರಿ ಸಚಿವರನ್ನಾಗಿ ಮಾಡಬಹುದು ಎಂಬ ಲೆಕ್ಕಾಚಾರದಲ್ಲಿ ಬೆಂಬಲಿಗರಿದ್ದಾರೆ.ಅವರು ಅಲ್ಲದಿದ್ದರೆ, ಹೊಸಬರೊಬ್ಬರಿಗೆ ಜಿಲ್ಲೆಯ ಉಸ್ತುವಾರಿ ಹೊಣೆ ಸಿಗಲಿದೆ.

‘ಪ್ರಮಾಣವಚನ ಸ್ವೀಕಾರ ಮಾಡಿರುವ ಸಚಿವರಿಗೆ ಇನ್ನೂ ಖಾತೆ ಹಂಚಿಕೆ ಆಗಿಲ್ಲ. ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ’ ಎಂದು ಬಿಜೆಪಿ ಮುಖಂಡರು ಹೇಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT