ಶನಿವಾರ, ಸೆಪ್ಟೆಂಬರ್ 19, 2020
23 °C
ಗಣನಾಯಕನಿಗೂ ಕೋವಿಡ್‌ ಸಂಕಷ್ಟ

ಗಣೇಶನ ಆಗಮನಕ್ಕೆ ವಿಘ್ನ: ಪ್ರತಿಮೆಗಳಿಗೆ ಇಲ್ಲ ಬೇಡಿಕೆ, ಕಲಾವಿದರಿಗೆ ನಷ್ಟದ ಭೀತಿ

ನಾ.ಮಂಜುನಾಥಸ್ವಾಮಿ Updated:

ಅಕ್ಷರ ಗಾತ್ರ : | |

Prajavani

ಯಳಂದೂರು: ಗೌರಿ–ಗಣೇಶನ ಹಬ್ಬ ಹತ್ತಿರದಲ್ಲೇ ಇದ್ದರೂ, ಈ ವರ್ಷ ಸಿದ್ಧತೆಗಳು ನಡೆಯುತ್ತಿಲ್ಲ. ಕೋವಿಡ್‌–19 ಕಾರಣದಿಂದ ಹಬ್ಬದ ಸಂಭ್ರಮ ಕಳೆಕಟ್ಟಿಲ್ಲ. 

ಗಣಪನ ಪ್ರತಿಮೆಯ ಮಾರಾಟದಿಂದ ಆದಾಯ ಮಾಡಿಕೊಳ್ಳುವ ವ್ಯಾಪಾರಿಗಳಿಗೂ ಈ ಬಾರಿ ನಿರಾಸೆ ಆಗಿದೆ. ವಕ್ರತುಂಡನ ಆಕಾರಕ್ಕೆ ಮೆರಗು ನೀಡುತ್ತಿದ್ದ ಕಲಾವಿದರು ಕೂಡ ಬೇಡಿಕೆ ಇಲ್ಲದೆ ಬಸವಳಿದಿದ್ದಾರೆ.  

ಪ್ರತಿ ವರ್ಷ ತಾಲ್ಲೂಕಿನಲ್ಲಿ ಹಾಗೂ ಪಟ್ಟಣದಲ್ಲಿ ಪರಿಸರ ಸ್ನೇಹಿ ಗೌರಿ–ಗಣೇಶನ ನೂರಾರು ಮೂರ್ತಿಗಳು ಮಾರಾಟಕ್ಕೆ ಬರುತ್ತಿದ್ದವು. ಬಗೆಬಗೆಯ ವೇಷ ತೊಟ್ಟ ವಿಘ್ನೇಶನಿಗೆ ಮುಂಗಡ ಹಣ ನೀಡಿ ಕಾಯುತ್ತಿದ್ದರು. ಸಂಭ್ರಮ–ಸಡಗರಗಳಿಂದ ಗ್ರಾಮೀಣ ಪ್ರದೇಶಗಳಿಗೆ ಮೆರವಣಿಗೆಯಲ್ಲಿ ಕೊಂಡೊಯ್ಯುತ್ತಿದ್ದರು. ಇಂತಹ ಹಬ್ಬದ ಉತ್ಸಾಹ ಮತ್ತು ಧಾವಂತ ಈಗ ಎಲ್ಲೂ ಕಾಣುತ್ತಿಲ್ಲ. 

ಈ ಬಾರಿ ಮಾರಾಟಗಾರರು ಗಣೇಶನನ್ನು ಅಂಗಡಿಯ ಮುಂದೆ ಇಡಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಹೀಗಾಗಿ, ಹಲವು ತಿಂಗಳಿಂದ ಕಲಾವಿದರು ಕಷ್ಟಪಟ್ಟು ತಯಾರಿಸಿದ ಗಣೇಶನ ವಿಗ್ರಹಗಳನ್ನು ಕೇಳುವವರಿಲ್ಲ. ಇದರಿಂದ ಅವರು ನಷ್ಟದ ಭೀತಿಯಲ್ಲಿ ಇದ್ದಾರೆ. 

‘ಸಾರ್ವಜನಿಕವಾಗಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸಲು ಈ ವರ್ಷ ಜಿಲ್ಲಾಡಳಿತ ಅನುಮತಿ ನೀಡುತ್ತದೆಯೇ ಇಲ್ಲವೇ ಎಂಬ ಅನುಮಾನವೂ ಇದೆ’ ಎಂದು ಹೇಳುತ್ತಾರೆ ಪಟ್ಟಣದ ಸುರೇಶ್. 

‘ಪಟ್ಟಣದ ಕುಂಬಾರ ಬೀದಿಯಲ್ಲಿ ಹಲವರು ತಾತನ ಕಾಲದಿಂದ ಗಜಾನನ ಮೂರ್ತಿಯನ್ನು ತಯಾರಿಸುತ್ತಿದ್ದರು. ಇದಕ್ಕೆ ಬೇಕಾದ ಕಚ್ಚಾ ವಸ್ತುಗಳನ್ನು ತಮಿಳುನಾಡು ಮತ್ತಿತರ ಕಡೆ ಕೊಳ್ಳುತ್ತಿದ್ದರು. ಬೇಡಿಕೆ ಹೆಚ್ಚಾದರೆ, ಬೇರೆ ಜಿಲ್ಲೆಗಳಲ್ಲಿ ಸಂಬಂಧಿಕರು ತಯಾರಿಸಿದ ಮೂರ್ತಿಗಳನ್ನು ಕೊಂಡು ಸಗಟು ಬೆಲೆಗೆ ಮಾರಾಟ ಮಾಡುತ್ತಿದ್ದರು’ ಎನ್ನುತ್ತಾರೆ ಗುರು.

‘ಪ್ರತಿ ವರ್ಷ ಹಬ್ಬಕ್ಕೆ ಆರು ತಿಂಗಳು ಇರುವಾಗಲೇ ಗಣೇಶನ ತಯಾರಿ ನಡೆಯುತ್ತದೆ. ಪ್ರತಿ ವರ್ಷ ಲಕ್ಷಾಂತರ ವಹಿವಾಟು ಇರುತ್ತಿತ್ತು. ಮುಂಗಡ ಬುಕ್ಕಿಂಗ್‌ ಮಾಡಿಕೊಂಡು ಬೇಡಿಕೆ–ನೀಡಿಕೆಗೆ ತಕ್ಕಂತೆ ವ್ಯವಹಾರ ಕುದುರುತ್ತಿತ್ತು. ಆದರೆ, ಈ ಬಾರಿ ಕೇಳುವವರೇ ಇಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಇವರು. 

‘ಮೂರರಿಂದ 10 ಅಡಿ ವಿನಾಯಕನಿಗೆ ಆಯಾ ವರ್ಷದ ಜನಪ್ರಿಯ ಹೆಸರುಗಳನ್ನು ಇಟ್ಟು ಮಾರಾಟ ಮಾಡಲಾಗುತ್ತಿತ್ತು. ಪ್ರಾಣಿ, ಪಕ್ಷಿಗಳ ಮೇಲೆ ಸುಮುಖನನ್ನು ಅಲಂಕರಿಸಿ ಭಕ್ತರನ್ನು ಆಕರ್ಷಿಸಲಾಗುತ್ತಿತ್ತು. ಈ ಬಾರಿ, ಕೊರೊನಾ ಗಣಪ ಮತ್ತು ಕೋವಿಡ್‌ ನಿಗ್ರಹಿಸುವ ವಿಘ್ನ ವಿನಾಯಕನನ್ನು ಸೃಷ್ಟಿಸಲಾಗಿತ್ತು. ಪಟ್ಟಣ ಪಂಚಾಯಿತಿ ಮತ್ತು ಪೊಲೀಸರು ಏಕದಂತ ಮಾರಾಟಕ್ಕೆ ಇನ್ನೂ ಹಸಿರು ನಿಶಾನೆ ತೋರಿಸಿಲ್ಲ. ಸರ್ಕಾರ ಅನುಮತಿ ನೀಡಿದರೆ ಗಜವದನನ್ನು ನಂಬಿ ಹೂಡಿಕೆ ಮಾಡಿದ ಕಲಾವಿದರಿಗೆ ತುಸು ಆದಾಯ ಬರಬಹುದು’ ಎನ್ನುತ್ತಾರೆ ಕಲಾವಿದರು.

ವೈರಾಣು ಕಂಟಕ

‘ಇತ್ತೀಚಿನ ವರ್ಷಗಳಲ್ಲಿ ಪರಿಸರ ಸ್ನೇಹಿ ಗಣಪತಿ ತಯಾರಿಸಲು ಮಾತ್ರ ಅನುಮತಿ ಸಿಗುತ್ತಿತ್ತು. ಜಲ ಮಾಲಿನ್ಯಕ್ಕೆ ಕಾರಣವಾಗುವ ಪಿಒಪಿ ಗಣೇಶನ ಮಾರಾಟಕ್ಕೆ ನಿಷೇಧವಿದೆ. ಕೊರೊನಾ ಸೋಂಕು ಕಾಣಿಸಿಕೊಂಡ ನಂತರ ಅರಿಸಿನ ಮೂರ್ತಿಗಳ ತಯಾರಿಕೆಯತ್ತ ಚಿತ್ತ ಹರಿದಿದೆ. ಕಡಲೆಹಿಟ್ಟು, ಗೆಣಸಿನಪುಡಿ, ಬಿಳಿ ರಂಗೋಲಿ ಪುಡಿ ಬಳಸಿ ಪೇಪರ್‌ ಗಣಪತಿ ತಯಾರಿಯತ್ತಲೂ ಚಿಂತನೆ ನಡೆಸಲಾಗಿದೆ. ಉಳಿದಂತೆ ಕಡಿಮೆ ಖರ್ಚು ಮತ್ತು ಮಾಲಿನ್ಯ ರಹಿತ ಮೂರ್ತಿಗಳನ್ನು ತಯಾರಿಗೆ ಮುಂದಾಗಿದ್ದರೂ, ಬೇಡಿಕೆ ಸಲ್ಲಿಸುವವರೇ ಇಲ್ಲ. ಇದನ್ನೇ ನಂಬಿಕೊಂಡು ಬದುಕು ರೂಪಿಸಿಕೊಳ್ಳುತ್ತಿದ್ದ ಗಣಪತಿ ಕಲಾವಿದರಿಗೆ ಈ ಬಾರಿ ಕೋವಿಡ್‌ ವೈರಾಣು ಕಂಟಕವಾಗಿ ಕಾಡಿದೆ’ ಎಂದು ಕುಂಬಾರ ಬೀದಿಯ ಮಂಜುನಾಥ್, ಮಹೇಶ್‌ ಮತ್ತು ಆಶಾ ಅಳಲು ತೋಡಿಕೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು