ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‌ಸಂತ್ರಸ್ತರ ಕುಟುಂಬಕ್ಕೆ ಸಾಂತ್ವನ ಹೇಳದ ಸರ್ಕಾರ: ಆರೋಪ

ಆಮ್ಲಜನಕ ದುರಂತ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಹಾಗೂ ₹20 ಲಕ್ಷ ಪರಿಹಾರಕ್ಕೆ ಕಾಂಗ್ರೆಸ್‌ ಮತ್ತೆ ಆಗ್ರಹ
Last Updated 7 ಜೂನ್ 2021, 11:22 IST
ಅಕ್ಷರ ಗಾತ್ರ

ಚಾಮರಾಜನಗರ: ‘ಮೇ 2ರಂದು ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಸಂಭವಿಸಿದ ಆಮ್ಲಜನಕ ದುರಂತದಲ್ಲಿ ಮೃತಪಟ್ಟ ಕುಟುಂಬಗಳನ್ನು ಸರ್ಕಾರ ನಿರ್ಲಕ್ಷಿಸಿದ್ದು, 24 ಮಂದಿಗೆ ತಲಾ ₹2 ಲಕ್ಷ ಪರಿಹಾರವನ್ನು ಆನ್‌ಲೈನ್‌ ಮೂಲಕ ಖಾತೆಗೆ ಹಾಕಿ ಕೈತೊಳೆದುಕೊಂಡಿದೆ. ಸಂತ್ರಸ್ತರ ಕುಟುಂಬದವರನ್ನು ಭೇಟಿ ಮಾಡಿ ಅವರಿಗೆ ಸಾಂತ್ವನ ಕೆಲಸವನ್ನು ಜಿಲ್ಲಾಡಳಿತ ಮಾಡಿಲ್ಲ’ ಎಂದು ಕಾಂಗ್ರೆಸ್‌ ಜಿಲ್ಲಾ ವಕ್ತಾರ ಕೆರೆಹಳ್ಳಿ ನವೀನ್‌ ಅವರು ಸೋಮವಾರ ಆರೋಪಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದುರಂತದಲ್ಲಿ 36 ಜನರು ಮೃತಪಟ್ಟಿದ್ದಾರೆ. ಎಂದು ಹೈಕೋರ್ಟ್‌ ನೇಮಿಸಿರುವ ತನಿಖಾ ಸಮಿತಿ ವರದಿ ನೀಡಿದೆ. ಇಂತಹ ದುರ್ಘಟನೆಗೆ ಕಾರರಾದವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ಮಾಡಿದೆ’ ಎಂದು ಅವರು ಆರೋಪಿಸಿದರು.

‘ಮೃತಪಟ್ಟವರ ಕುಟುಂಬಗಳಿಗೆ ತಲಾ ₹20 ಲಕ್ಷ ಪರಿಹಾರ ನೀಡಬೇಕು. ಪ್ರತಿ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು’ ಎಂದು ಆಗ್ರಹಿಸಿದರು.

‘ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಜಿಲ್ಲಾ ಬಿಜೆಪಿ ಮುಖಂಡರು ಏನೂ ಪ್ರಯತ್ನ ಮಾಡಿಲ್ಲ. ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಮನವಿ ನೀಡುವ ಕೆಲಸವನ್ನೂ ಮಾಡಿಲ್ಲ’ ಎಂದು ಅವರು ದೂರಿದರು.

ಜಿಲ್ಲೆಗೆ ಆಮ್ಲಜನಕ ಪೂರೈಕೆ ವಿಚಾರಕ್ಕೆ ಸಂಬಂಧಿಸಿದ ವೈರಲ್‌ ಆಗಿರುವ ಆಡಿಯೊ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ದುರಂತ ನಡೆದು ಒಂದು ತಿಂಗಳ ಬಳಿಕ ಆಡಿಯೊ ಬಿಡುಗಡೆ ಮಾಡಲಾಗಿದೆ. ಮೈಸೂರಿನ ಜಿಲ್ಲಾಧಿಕಾರಿ ಮೌಖಿಕವಾಗಿ ಏನು ನಿರ್ದೇಶನ ನೀಡಿದ್ದರು ಎಂಬುದು ಗೊತ್ತಿದೆ ಎಂದು ಅಲ್ಲಿನ ಸಂಸದ ಪ್ರತಾಪ್‌ ಸಿಂಹ ಹೇಳಿದ್ದಾರೆ. ಹಾಗಿದ್ದರೆ, ಈ ಘಟನೆಗೆ ಪ್ರತಾಪ್‌ ಅವರೂ ಕಾರಣರಾಗಿದ್ದಾರೆ’ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರ ವಿರುದ್ಧ ವಾಗ್ದಾಳಿ ನಡೆಸಿದ ನವೀನ್‌ ಅವರು, ‘ಸಚಿವರು ವಾರದಲ್ಲಿ ಎರಡು ದಿನ ಜಿಲ್ಲೆ ಭೇಟಿ ನೀಡಿದರೂ, ಕೋವಿಡ್‌ ನಿಯಂತ್ರಣಕ್ಕೆ ಯಾವುದೇ ಕ್ರಮ ವಹಿಸುತ್ತಿಲ್ಲ.ಎಚ್.ಮೂಕಹಳ್ಳಿಯಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡ ಮನೆಗೆ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತ ಹೋಗಿ ಸಾಂತ್ವನ ಹೇಳಿ ಪರಿಹಾರ ನೀಡಿಲ್ಲ’ ಎಂದರು.

ಲಸಿಕೆ ಸಿಗುತ್ತಿಲ್ಲ: ‘ಜಿಲ್ಲೆಯಲ್ಲಿ ಸರಿಯಾಗಿ ಕೋವಿಡ್‌ ಲಸಿಕೆ ವಿತರಣೆ ಆಗುತ್ತಿಲ್ಲ. ಈ ವಿಚಾರದಲ್ಲೂ ನಿರ್ಲಕ್ಷ್ಯ ವಹಿಸಲಾಗುತ್ತಿದೆ.ಜಿಲ್ಲಾಸ್ಪತ್ರೆಯಲ್ಲಿರುವ ವೆಂಟಿಲೇಟರ್ ಸಹ ಸರಿಯಾಗಿ ಕೆಲಸ ಮಾಡುತ್ತಿಲ್ಲ’ ಎಂದು ಅವರು ದೂರಿದರು.

‘ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರಚಿಸಲಾಗಿರುವ ಕೋವಿಡ್‌ ಟಾಸ್ಕ್‌ ಫೋರ್ಸ್ ಸಮಿತಿಗೆ ಸರ್ಕಾರ ಕನಿಷ್ಠ ₹1 ಅನುದಾನ ನೀಡಬೇಕು. ಜೊತೆಗೆ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ನೌಕರರನ್ನು ಕೋವಿಡ್‌ ಸೇನಾನಿಗಳು ಎಂದು ಘೋಷಣೆ ಮಾಡಬೇಕು’ ಎಂದು ನವೀನ್‌ ಆಗ್ರಹಿಸಿದರು.

ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ವಡಗೆರೆ ದಾಸ್, ಈಶ್ವರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT