ಗುರುವಾರ , ಮಾರ್ಚ್ 23, 2023
21 °C
ಪಟಾಕಿಗಳ ಬೆಲೆ ಶೇ 20ರಷ್ಟು ಹೆಚ್ಚಳ; ಹಸಿರು ಪಟಾಕಿಗಳಿಗಷ್ಟೇ ಅವಕಾಶ

ಬೆಳಕಿನ ಹಬ್ಬ: ವ್ಯಾಪಾರಿಗಳಲ್ಲಿ ಹೆಚ್ಚಿದ ನಿರೀಕ್ಷೆ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಬೆಳಕಿನ ಹಬ್ಬ ದೀಪಾವಳಿಯ ಆಚರಣೆಗೆ ಜಿಲ್ಲೆಯ ಜನರು ಸಿದ್ಧತೆ ನಡೆಸಿದ್ದಾರೆ. ಬುಧವಾರದಿಂದ (ನರಕ ಚತುರ್ದಶಿ) ದೀಪಾವಳಿ ಸಂಭ್ರಮ ಜಿಲ್ಲೆಯಾದ್ಯಂತ ಮನೆ ಮಾಡಲಿದೆ. 

ಕೋವಿಡ್‌ ಹಾವಳಿಯಿಂದ ಕಳೆದ ವರ್ಷ ದೀಪಾವಳಿ ಸಂಭ್ರಮ ಸಪ್ಪೆಯಾಗಿತ್ತು. ಈ ಬಾರಿ ಜಿಲ್ಲೆಯಲ್ಲಿ ಕೋವಿಡ್‌ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಹಬ್ಬದ ಆಚರಣೆಗೆ ಕಠಿಣ ನಿರ್ಬಂಧ ಗಳಿಲ್ಲ. ಹಾಗಾಗಿ, ಜನರು ಕಳೆದ ವರ್ಷ ಕ್ಕಿಂತ ಹೆಚ್ಚು ಸಡಗರ ಸಂಭ್ರಮದಿಂದ ಬೆಳಕಿನ ಹಬ್ಬ ಆಚರಿಸುವ ನಿರೀಕ್ಷೆ ಇದೆ. 

ಹಣತೆ, ಪಟಾಕಿ ವ್ಯಾಪಾರಿಗಳು ಈ ಬಾರಿ ಉತ್ತಮ ವ್ಯಾಪಾರದ ನಿರೀಕ್ಷೆಯಲ್ಲಿದ್ದಾರೆ. ಕೆಲವು ದಿನಗಳಿಂದ ಕಂಡು ಬರುತ್ತಿರುವ ವಾತಾವರಣ, ಪಟಾಕಿ ವ್ಯಾಪಾರದ ಮೇಲೆ ದುಷ್ಪರಿಣಾಮ ಬೀರುವ ಆತಂಕವೂ ವ್ಯಕ್ತವಾಗಿದೆ.

ಮಣ್ಣಿನ ಹಣತೆಗಳ ಮೆರುಗು: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಣ್ಣಿನ ಹಣತೆಗಳಿಗೆ ಮಹತ್ವ. ಪ್ರತಿ ಮನೆ ಮನೆಯಲ್ಲೂ ಪ್ರತಿ ದಿನ ರಾತ್ರಿ ಮಹಿಳೆಯರು ಹಣತೆಗಳನ್ನು ಬೆಳಗಿಸಿ ಹಬ್ಬವನ್ನು ಆಚರಿಸುತ್ತಾರೆ. ಹಾಗಾಗಿ, ದೀಪಾವಳಿ ಸಮಯದಲ್ಲಿ ಹಣತೆಗಳಿಗೆ ಹೆಚ್ಚಿನ ಬೇಡಿಕೆ. ಹಬ್ಬ ಆರಂಭಕ್ಕೂ ನಾಲ್ಕೈದು ದಿನ ಮುಂಚಿತವಾಗಿ ಮಣ್ಣಿನಿಂದ ಮಾಡಿದ ಹಣತೆ, ಪಿಂಗಾಣಿ ಹಣತೆಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತವೆ. ಈಚಿನ ವರ್ಷಗಳಲ್ಲಿ ಮಣ್ಣಿನಿಂದ ಮಾಡಿದ ಹಣತೆಗಳ ಭರಾಟೆಯೇ ಜೋರಾಗಿದೆ. 

ನರಕ ಚತುರ್ದಶಿಯ ಮುನ್ನಾ ದಿನ ಹಣತೆಗಳ ವ್ಯಾಪಾರ ಜೋರಾಗು ತ್ತದೆ. ನಗರದ ಚಿಕ್ಕಂಗಡಿ, ದೊಡ್ಡಂ ಗಡಿ, ರಥದ ಬೀದಿ ಸೇರಿದಂತೆ ಜನಸಂದಣಿ ಹೆಚ್ಚಿರುವ ಪ್ರದೇಶ ಗಳಲ್ಲಿ ವ್ಯಾಪಾರಿಗಳು ಬಗೆ ಬಗೆಯ ಮಣ್ಣಿನ ಅಲಂ ಕಾರಿಕ ದೀಪಗಳನ್ನು ತಳ್ಳು ಗಾಡಿಗಳಲ್ಲಿ, ಅಂಗಡಿ ಗಳ ಮುಂಭಾಗದಲ್ಲಿ ಇಟ್ಟು ಮಾರಾಟ ಮಾಡುತ್ತಿದ್ದಾರೆ. 

ಸೀಮೆಹಂಚಿನ ದೀಪ, ಗಾಜಿನ ದೀಪ, ಗೊಂಬೆ ದೀಪ, ಮಣ್ಣಿನ ಸ್ಟ್ಯಾಂಡ್‌ ದೀಪ ಹೀಗೆ ಹತ್ತಕ್ಕೂ ಹೆಚ್ಚು ಬಗೆಯ ಹಣತೆ ಲಭ್ಯವಿವೆ. ₹ 2ರಿಂದ ಹಿಡಿದು ₹ 100, ₹ 150 ಬೆಲೆಯ ಹಣತೆ, ದೀಪಗಳು ಗ್ರಾಹಕರನ್ನು ಸೆಳೆಯುತ್ತಿವೆ.

ವ್ಯಾಪಾರಿಗಳು ತಮಿಳುನಾಡಿನ ಕೊಯ ಮತ್ತೂರು, ಸೇಲಂ ಸೇರಿದಂತೆ ವಿವಿಧ ಕಡೆಗಳಿಂದ ಈ ಹಣತೆಗಳನ್ನು ತರಿಸಿದ್ದಾರೆ. 

‘ಕಳೆದ ವರ್ಷ ಕೋವಿಡ್‌ ಕಾರಣದಿಂದ ವ್ಯಾಪಾರ ಹೆಚ್ಚು ಇರಲಿಲ್ಲ. ಈ ವರ್ಷ ಕೋವಿಡ್‌ ಸಮಸ್ಯೆ ಹೆಚ್ಚಿಲ್ಲ. ಹಾಗಾಗಿ, ಜನರು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಬಹುದು. ಉತ್ತಮ ವ್ಯಾಪಾರವಾಗುವ ನಿರೀಕ್ಷೆಯಲ್ಲಿ ದ್ದೇವೆ’ ಎಂದು ದೊಡ್ಡಂಗಡಿ ಬೀದಿಯಲ್ಲಿ ತಳ್ಳುಗಾಡಿಗಳಲ್ಲಿ ಹಣತೆಗಳನ್ನಿಟ್ಟು ವ್ಯಾಪಾರ ಮಾಡುತ್ತಿದ್ದ ಅಹಮದ್‌ ಜಾನ್‌, ಅಬ್ರಾರ್‌ ಪಾಷಾ ‘ಪ್ರಜಾವಾಣಿ’ಗೆ ತಿಳಿಸಿದರು.

ಹಸಿರು ಪಟಾಕಿಗೆ ಮಳೆಯ ಆತಂಕ

ಈ ಮಧ್ಯೆ, ನಗರದ ಖಾಸಗಿ ಬಸ್‌ ನಿಲ್ದಾಣದ ಬಳಿ ಪಟಾಕಿ ಮಳಿಗೆಗಳನ್ನು ಹಾಕಲು ನಗರಸಭೆ ಅನುಮತಿ ನೀಡಿದ್ದು, ಸದ್ಯ ಎಂಟು ಮಳಿಗೆಗಳು ಇವೆ.

ಈ ಬಾರಿಯೂ ಹಸಿರು ಪಟಾಕಿಗಳ ಮಾರಾಟಕ್ಕೆ ಮಾತ್ರ ಅವಕಾಶ ನೀಡಲಾಗಿದ್ದು, ವ್ಯಾಪಾರಿಗಳು ಹಸಿರು ಪಟಾಕಿಗಳ ಸಂಗ್ರಹವನ್ನೇ ಇಟ್ಟುಕೊಂಡಿದ್ದಾರೆ. 

ಈ ಬಾರಿ ಪಟಾಕಿ ಖರೀದಿಸಲಿರುವ ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ. ಕಳೆದ ವರ್ಷಕ್ಕೆ ಹೋಲಿಸಿದ್ದರೆ, ಈ ಬಾರಿ ಪಟಾಕಿ ದರ ಶೇ 20ರಷ್ಟು ಹೆಚ್ಚಾಗಿದೆ ಎಂದು ಹೇಳುತ್ತಾರೆ ವ್ಯಾಪಾರಿಗಳು.

ಮಳಿಗೆ ತೆರೆಯಲು ಹೊಸ ಜಾಗ ನಿಗದಿ ಪಡಿಸಿರುವುದು ಮತ್ತು ಮೋಡ ಕವಿದ ವಾತಾವರಣದಿಂದಾಗಿ ವ್ಯಾಪಾರಕ್ಕೆ ತೊಂದರೆಯಾಗಬಹುದು ಎಂಬ ಸಣ್ಣ ಆತಂಕ ವ್ಯಾಪಾರಿಗಳನ್ನು ಕಾಡುತ್ತಿದೆ. 

‘ಹಸಿರು ಪಟಾಕಿ ಬಳಕೆಗಷ್ಟೇ ಅವಕಾಶ ನೀಡಲಾಗಿದೆ. ಹಾಗಾಗಿ, ನಮ್ಮಲ್ಲಿ ಪರಿಸರ ಸ್ನೇಹಿ ಪಟಾಕಿಗಳಷ್ಟೇ ಲಭ್ಯವಿದೆ. ಪಟಾಕಿ ತಯಾರಿಸುವ ಶಿವಕಾಶಿಯಲ್ಲಿ ಹಸಿರು ಪಟಾಕಿ ಮಾತ್ರ ತಯಾರಿಸಲಾಗುತ್ತಿದೆ. ಎಲ್ಲ ರೀತಿಯ ಪಟಾಕಿಗಳೂ ಲಭ್ಯವಿವೆ. ಬೆಲೆ ಸ್ವಲ್ಪ ಹೆಚ್ಚಾಗಿದೆ’ ಎಂದು ಪಟಾಕಿ ವ್ಯಾಪಾರಿ ಅಭಿಜಿತ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಗ್ರಾಹಕರು ಇನ್ನೂ ಬರುವುದಕ್ಕೆ ಆರಂಭಿಸಿಲ್ಲ. ಈ ವರ್ಷ ಹೊಸ ಜಾಗದಲ್ಲಿ ಮಳಿಗೆ ಹಾಕಲು ಅವಕಾಶ ನೀಡಿದ್ದಾರೆ. ಮಳೆಯ ವಾತಾವರಣವೂ ಇದೆ. ಹಾಗಾಗಿ, ಜನರು ಪಟಾಕಿ ಖರೀದಿಗೆ ಬರುತ್ತಾರೋ ಎಂದು ನೋಡಬೇಕಿದೆ’ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.