ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗುಂಡ್ಲುಪೇಟೆ | ಪ್ಲಾಸ್ಟಿಕ್ ಮುಕ್ತ ಬಂಡೀಪುರ: ಸಂಕಲ್ಪ

ಚೆಕ್‌ಪೋಸ್ಟ್‌ಗಳಲ್ಲಿ ಪ್ರವಾಸಿಗರ ವಾಹನಗಳಿಂದ ಪ್ಲಾಸ್ಟಿಕ್‌ ವಶಪಡಿಸಿಕೊಳ್ಳುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ
Published 30 ಜೂನ್ 2024, 7:21 IST
Last Updated 30 ಜೂನ್ 2024, 7:21 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವನ್ನು ಪ್ಲಾಸ್ಟಿಕ್‌ ಮುಕ್ತಗೊಳಿಸುವ ಪರಿಸರಸ್ನೇಹಿ ಪ್ರಯತ್ನಕ್ಕೆ ಅರಣ್ಯ ಇಲಾಖೆ ಮುಂದಾಗಿದ್ದು, ಪ್ರದೇಶದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಂದ ಬಾಟಲಿ ಹಾಗೂ ಪ್ಲಾಸ್ಟಿಕ್‌ಗಳನ್ನು ವಶಪಡಿಸಿಕೊಳ್ಳುತ್ತಿದೆ.

ಹೆದ್ದಾರಿ–766ರ ವ್ಯಾ‍ಪ್ತಿಗೊಳಪಡುವ ಮದ್ದೂರು ಮತ್ತು ಹೆದ್ದಾರಿ–67ರ ವ್ಯಾಪ್ತಿಯ ಮೇಲುಕಾಮನಹಳ್ಳಿ ಚೆಕ್‌ಪೋಸ್ಟ್‌ನಲ್ಲಿ ಸಿಬ್ಬಂದಿಯು ವಾಹನಗಳ ತಪಾಸಣೆ ನಡೆಸುವಾಗಲೇ ಪ್ಲಾಸ್ಟಿಕ್‌ ವಸ್ತುಗಳನ್ನು ವಶಕ್ಕೆ ಪಡೆದು ಸಂಗ್ರಹಿಸುತ್ತಿದ್ದಾರೆ.

ಪ್ಲಾಸ್ಟಿಕ್‌ ತ್ಯಾಜ್ಯವನ್ನು ವಿಭಿನ್ನವಾಗಿ ಸಿದ್ಧಪಡಿಸಿರುವ ಗ್ಯಾಲರಿಯಲ್ಲಿ ಹಾಕಲಾಗುತ್ತಿದ್ದು, ಪರಿಸರ ಜಾಗೃತಿ ಮೂಡಿಸುವ ಪ್ರಯತ್ನವೂ ನಡೆದಿದೆ.

ಪ್ರಾಣಿಗಳ ಜೀವಕ್ಕೆ ಕುತ್ತು: ಈ ಹೆದ್ದಾರಿ ಮೂಲಕವೇ ಕೇರಳದ ವಯನಾಡು ಹಾಗೂ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಹೋಗಬೇಕು. ಕಾಡಿನೊಳಗೆ 30ರಿಂದ 40 ಕಿ.ಮೀ. ಸಂಚರಿಸಬೇಕು.

ಪ್ರಯಾಣದ ವೇಳೆ ಪ್ರವಾಸಿಗರು ಕುರುಕಲು ತಿಂಡಿಗಳನ್ನು ಮೆಲ್ಲುತ್ತಾ ಖಾಲಿಯಾದ, ಅಳಿದುಳಿದ ತಿಂಡಿ ಸಹಿತ ಪ್ಲಾಸ್ಟಿಕ್ ಕವರ್ ಹಾಗೂ ನೀರಿನ ಬಾಟಲಿಗಳನ್ನು ಹೆದ್ದಾರಿ ಬದಿಯಲ್ಲಿ ಎಸೆದು ಹೋಗುತ್ತಿದ್ದರು. ಜಿಂಕೆ, ಕಡವೆ, ಆನೆ ಹಾಗೂ ಇತರ ಪ್ರಾಣಿಗಳು ಅವುಗಳನ್ನೇ ತಿನ್ನುತ್ತಿದ್ದವು.

ಕಾಡಿನೊಳಗೆ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಸಿಬ್ಬಂದಿ ಹೆಕ್ಕುತ್ತಿದ್ದರೂ ಪ್ಲಾಸ್ಟಿಕ್ ಹಾವಳಿಗೆ ಕಡಿವಾಣ ಹಾಕಲು ಸಾಧ್ಯವಾಗಿರಲಿಲ್ಲ. ಸಮಸ್ಯೆಯನ್ನು ಮೂಲದಲ್ಲಿಯೇ ಪರಿಹರಿಸುವ ಸಲುವಾಗಿ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಪ್ರಭಾಕರನ್, ಪ್ಲಾಸ್ಟಿಕ್ ವಸ್ತುಗಳು ಕಾಡು ಸೇರುವ ಮುನ್ನ ಚೆಕ್‌ಪೋಸ್ಟ್‌ಗಳಲ್ಲಿಯೇ ನಿಯಂತ್ರಿಸಲು ಕ್ರಮ ಕೈಗೊಂಡಿದ್ದಾರೆ.

ಚೆಕ್‌ಪೋಸ್ಟ್‌ಗಳಲ್ಲಿ ಹಸಿರು ಸುಂಕ (ಗ್ರೀನ್ ಟ್ಯಾಕ್ಸ್‌) ಪಡೆಯುವಾಗಲೇ ಸಿಬ್ಬಂದಿಯು ಪ್ಲಾಸ್ಟಿಕ್ ವಸ್ತುಗಳನ್ನು ವಶಕ್ಕೆ ಪಡೆಯುತ್ತಿದ್ದಾರೆ. ಜತೆಗೆ ಪ್ರವಾಸಿಗರಿಗೆ,  ‘ಕಾಡಿನ ಮಧ್ಯೆ ಪರಿಸರಕ್ಕೆ ಹಾನಿಯಾಗುವ ವಸ್ತುಗಳನ್ನು ಎಸೆಯಬಾರದು, ಕಾಡು ಪ್ರಾಣಿಗಳಿಗೆ ಆಹಾರ ನೀಡಬಾರದು’ ಎಂಬ ಕಟ್ಟುನಿಟ್ಟಿನ ಸೂಚನೆಯನ್ನು ನೀಡುತ್ತಿದ್ದಾರೆ. ನಿಯಮ ಮೀರಿದರೆ ₹ 1 ಸಾವಿರ ದಂಡ ವಿಧಿಸುವ ಎಚ್ಚರಿಕೆಯನ್ನೂ ಕೊಡುತ್ತಿದ್ದಾರೆ.

ಚೆಕ್‌ಪೋಸ್ಟ್‌ನಲ್ಲಿ ವಾಹನ ತಪಾಸಣೆ ವೇಳೆಯಲ್ಲೇ ಪ್ಲಾಸ್ಟಿಕ್‌ ವಸ್ತುಗಳನ್ನು ವಶಕ್ಕೆ ಪಡೆಯಲಾಗುತ್ತಿದೆ.
ಚೆಕ್‌ಪೋಸ್ಟ್‌ನಲ್ಲಿ ವಾಹನ ತಪಾಸಣೆ ವೇಳೆಯಲ್ಲೇ ಪ್ಲಾಸ್ಟಿಕ್‌ ವಸ್ತುಗಳನ್ನು ವಶಕ್ಕೆ ಪಡೆಯಲಾಗುತ್ತಿದೆ.

ಚೆಕ್‌ಪೋಸ್ಟ್‌ಗಳಲ್ಲಿ ಪ್ಲಾಸ್ಟಿಕ್‌ ವಸ್ತುಗಳು ವಶಕ್ಕೆ ಪ್ಲಾಸ್ಟಿಕ್‌ ತ್ಯಾಜ್ಯದಿಂದ ಜಾಗೃತಿ ಪ್ರಯತ್ನ

‘ಬಸ್‌ಗಳಲ್ಲೂ ಕ್ರಮ ಅಗತ್ಯ’ ‘ಹೊಸ ಪ್ರಯತ್ನದಿಂದ ಶೇ 80ರಷ್ಟು ಪ್ಲಾಸ್ಟಿಕ್‌ ಹಾವಳಿ ತಪ್ಪಲಿದೆ. ಕಾಡಿನೊಳಗೆ ಬಾಟಲಿ ಹಾಗೂ ಕವರ್ ಬಿಸಾಡದಂತೆ ಬಸ್‌ಗಳ ಪ್ರಯಾಣಿಕರಿಗೂ ಸಾರಿಗೆ ಇಲಾಖೆಯು ಕಟ್ಟುನಿಟ್ಟಿನ ಸೂಚನೆ ಹಾಗೂ ಎಚ್ಚರಿಕೆ ನೀಡಿದರೆ ಅರಣ್ಯ ವಲಯವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಬಹುದು’ ಎನ್ನುತ್ತಾರೆ ಡಿಸಿಎಫ್ ಪ್ರಭಾಕರನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT