ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲಾಸ್ಟಿಕ್‌ ಮುಕ್ತ ಮಹದೇಶ್ವರ ಬೆಟ್ಟ ಅಭಿಯಾನ

ಎರಡು ವಾರಕ್ಕೊಮ್ಮೆ ನಡೆಸಲು ತೀರ್ಮಾನ, ಪ್ಲಾಸ್ಟಿಕ್‌ ಬಳಸಿದರೆ ದಂಡ
Last Updated 17 ಆಗಸ್ಟ್ 2021, 12:47 IST
ಅಕ್ಷರ ಗಾತ್ರ

ಮಹದೇಶ್ವರ ಬೆಟ್ಟ: ಇಲ್ಲಿನ ಮಲೆಮಹದೇಶ್ವರ ಸ್ವಾಮಿಯ ಕ್ಷೇತ್ರದ ದಾಸೋಹ ಭವನದ ಮುಂಭಾಗದಲ್ಲಿ ಮಂಗಳವಾರ ಪ್ಲಾಸ್ಟಿಕ್‌ ಮುಕ್ತ ಮಹದೇಶ್ವರ ಬೆಟ್ಟ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.

ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ 105 ಮಂದಿ ಸಿಬ್ಬಂದಿ, ಸುರಪನೇನಿ ವಿದ್ಯಾಸಾಗರ್ ಫೌಂಡೇಷನ್‌ ಸೇರಿದಂತೆ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಸ್ವಯಂ ಸೇವಕರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸೇರಿದಂತೆ 350ಕ್ಕೂ ಹೆಚ್ಚು ಮಂದಿ ಈ ಅಭಿಯಾನದಲ್ಲಿ ಭಾಗವಹಿಸಿ, ದಾಸೋಹ ಭವನದ ಸುತ್ತಮುತ್ತಲಿನದ್ದ ಪ್ಲಾಸ್ಟಿಕ್‌ ಬಾಟಲಿ ಸೇರಿದಂತೆ ಇನ್ನಿತರ ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ಸಂಗ್ರಹಿಸಿದರು.

ಸಾಲೂರು ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ಅಭಿಯಾನ ನಡೆಯಿತು.

ವೇಧಿಕೆ ಕಾರ್ಯಕ್ರಮದಲ್ಲಿ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದ ಪ್ರಾಧಿಕಾರದ ಕಾರ್ಯಧರ್ಶಿ ಜಯವಿಭವ ಸ್ವಾಮಿ ಅವರು. ‘ಪ್ಲಾಸ್ಟಿಕ್‌ ತ್ಯಾಜ್ಯಗಳಿಂದ ದೇಶವು ದೊಡ್ಡ ಸವಾಲು ಎದುರಿಸುತ್ತಿದೆ. ಇದರ ಬಳಕೆಯಿಂದ ನಮಗೆ ಅರಿವಿಲ್ಲದಂತೆಯೇ ಅನೇಕ ರೋಗ ರುಜಿನಗಳಿಗೆ ತುತ್ತಾಗುತ್ತಿದ್ದೇವೆ. ಮಹದೇಶ್ವರ ಬೆಟ್ಟವನ್ನು ಪ್ಲಾಸ್ಟಿಕ್ ಮುಕ್ತವಾಗಿ ಪಣ ತೊಟ್ಟಿದ್ದೇವೆ’ ಎಂದರು.

ಪ್ಲಾಸ್ಟಿಕ್‌ ನಿಷೇಧ: ಇನ್ನು ಮುಂದೆ ದೇವಾಲಯಕ್ಕೆ ಬರುವ ಭಕ್ತಾದಿಗಳು ಕ್ಷೇತ್ರಕ್ಕೆ ಪ್ಲಾಸ್ಟಿಕ್ ವಸ್ತುಗಳನ್ನು ತರುವುದು ನಿಷೇಧಿಸಲಾಗಿದೆ. ಅಂಗಡಿ ಮಾಲೀಕರು ಭಕ್ತರಿಗೆ ಪ್ಲಾಸ್ಟಿಕ್ ಚೀಲ ನೀಡುವುದನ್ನೂ ನಿಷೇಧಿಸಲಾಗಿದೆ. ಇದನ್ನು ಉಲ್ಲಂಘಿಸಿದರೆ ಮೊದಲನೆಯದಾಗಿ ₹1,000 ಹಾಗೂ ನಂತರ ₹2,000ದಂಡ ವಿಧಿಸಲಾಗುವುದು. ಅನಿವಾರ್ಯವಾಗಿ ತಂದಂತಹ ನೀರಿನ ಬಾಟಲಿ ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳನ್ನು ಅಲ್ಲಲ್ಲಿ ಬಿಸಾಡದೆ ನಿಗದಿತ ಸ್ಥಳಗಳಲ್ಲಿ ಬಿಸಾಡಲು ಕಸದ ಬುಟ್ಟಿಯನ್ನು ಇರಿಸಲಾಗುತ್ತದೆ’ ಎಂದರು.

ಈ ಅಭಿಯಾನವು ಒಂದು ದಿನದ್ದಾಗಿರದೇ, ನಿರಂತರವಾಗಿರಲು ಎರಡು ವಾರಕ್ಕೊಮ್ಮೆ ಆಯೋಜಿಸಲು ನಿರ್ಣಯಿಸಲಾಯಿತು.

ಅಭಿಯಾನದ ರೂವಾರಿ ಹಾಗೂ ಸುರಪನೇನಿ ವಿದ್ಯಾಸಾಗರ್ ಫೌಂಡೇಷನ್‌ ಅಧ್ಯಕ್ಷ ವಿದ್ಯಾಸಾಗರ್ ಅವರು ಮಾತನಾಡಿ, ‘ಇದು ಅರಿವು ಮೂಡಿಸುವ ಕಾರ್ಯವಾಗಿದ್ದು, ಆಗಾಗ್ಗೆ ಆಯೋಜಿಸಲಾಗುವುದು ಹಾಗೂ ಈ ನಿಟ್ಟಿನಲ್ಲಿ ಪ್ರಾಧಿಕಾರದ ಜೊತೆ ಕೈಜೋಡಿಸಲಾಗುವುದು’ ಎಂದರು.

ಟೋಲ್ ಗೇಟ್‌ನಲ್ಲೇ ಪ್ಲಾಸ್ಟಿಕ್‌ ವಿಲೇವಾರಿ

‘ಅಭಿಯಾನದ ಬಳಿಕ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು, ‘ಇನ್ನು ಮುಂದೆ ಬೆಟ್ಟಕ್ಕೆ ಬರುವ ಎಲ್ಲ ವಾಹನಗಳು ಹಾಗೂ ವ್ಯಕ್ತಿಗಳನ್ನು ಟೋಲ್ ಗೇಟಿನಲ್ಲಿ ತಪಾಸಣೆಗೊಳಪಡಿಸಿ, ಪ್ಲಾಸ್ಟಿಕ್ ವಸ್ತುಗಳನ್ನು ಅಲ್ಲೇ ವಿಲೇವಾರಿ ಮಾಡಿಸಲಾಗುವುದು. ಬೆಟ್ಟ ವ್ಯಾಪ್ತಿಯಲ್ಲಿ ಶುದ್ಧ ನೀರಿನ ಘಟಕ ಸಾಕಷ್ಟು ಸಂಖ್ಯೆಯಲ್ಲಿದ್ದು, ಅವಶ್ಯವಿದ್ದಲ್ಲಿ ಸ್ಟೀಲ್ ಬಾಟಲಿಗಳನ್ನು ಬಳಸಲು ತಿಳಿಸಿ, ಬೇಕಾದಲ್ಲಿ ಅಲ್ಲೇ ಕಡಿಮೆ ದರದಲ್ಲಿ ಖರೀದಿಸಲು ವ್ಯವಸ್ಥೆ ಮಾಡಲಾಗುವುದು‌. ಬಳಸಿದ ನಂತರ ವಾಪಸ್ ಬರುವಾಗ, ಸ್ಟೀಲ್ ಬಾಟಲಿ ನೀಡಿದಲ್ಲಿ ₹10 (ನಿರ್ವಹಣಾ ವೆಚ್ಚ) ಕಳೆದು ಉಳಿಕೆ ಮೊತ್ತವನ್ನು ವಾಪಸ್ ನೀಡಲಾಗುವುದು. ಈ ವ್ಯವಸ್ಥೆ ಇಷ್ಟರಲ್ಲೇ ಜಾರಿಗೊಳಿಸಲಾಗುವುದು‌’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT