ಮಂಗಳವಾರ, ಮೇ 17, 2022
26 °C
ಅಮೃತಭೂಮಿಯಲ್ಲಿ ಪ್ರೊ.ಎಂಡಿಎನ್‌ 85ನೇ ಜನ್ಮ ದಿನಾಚರಣೆ: ರಕ್ತದಾನ, ಪ್ರಶಸ್ತಿ ಪ್ರದಾನ, ವಿಚಾರ ಸಂಕಿರಣ

‘ವಿಷಮುಕ್ತ ಕರ್ನಾಟಕ’ಕ್ಕೆ ಚಾಲನೆ, ರೈತರ ಕಂಪನಿ ಲೋಕಾರ್ಪಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ರಾಜ್ಯದಾದ್ಯಂತ ರೈತರು ನೈಸರ್ಗಿಕ ಕೃಷಿಯಲ್ಲಿ ತೊಡಗಿಕೊಳ್ಳುವಂತೆ ಪ್ರೇರೇಪಿಸಲು ರೂಪಿಲಾಗಿರುವ ‘ವಿಷಮುಕ್ತ ಕರ್ನಾಟಕ’ ಅಭಿಯಾನಕ್ಕೆ ಶನಿವಾರ ತಾಲ್ಲೂಕಿನ ಹೊಂಡರಬಾಳುವಿನಲ್ಲಿರುವ ಅಮೃತಭೂಮಿಯಲ್ಲಿ ಚಾಲನೆ ನೀಡಲಾಯಿತು. 

ರೈತ ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ 85ನೇ ಜನ್ಮದಿನದಂದು ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಕಳೆದ ಬಾರಿ ‌ಆರಂಭಿಸಲಾಗಿದ್ದ ‘ವಿಷಮುಕ್ತ ಚಾಮರಾಜನಗರ’ ಆಂದೋಲನಕ್ಕೆ ಸದಸ್ಯರ ಸೇರ್ಪಡೆಗೊಳಿಸುವ ಪ್ರಕ್ರಿಯೆಯನ್ನೂ ಇದೇ ಸಂದರ್ಭದಲ್ಲಿ  ಆರಂಭಿಸಲಾಯಿತು. 

ರಾಜ್ಯದ ವಿವಿಧ ಭಾಗಗಳ ರೈತರೇ ಸೇರಿ ಆರಂಭಿಸಲು ಉದ್ದೇಶಿಸಿರುವ ‘ಪ್ರೊ.ಎಂಡಿಎನ್‌ ಸ್ವಾಭಿಮಾನಿ ರೈತ ಉತ್ಪಾದಕ  ಕಂಪನಿ–ಕರ್ನಾಟಕ’ ಲೋಕಾರ್ಪಣೆಯನ್ನೂ ರೈತ ಮುಖಂಡರು ನಡೆಸಿಕೊಟ್ಟರು.

ನಂಜುಂಡಸ್ವಾಮಿ ಅವರ ಸಮಾಧಿಯ ಮುಂಭಾಗದಲ್ಲಿ ರೈತ ಧ್ವಜರೋಹಣದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ರೈತ ಮುಖಂಡರು ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಬಂದ ರೈತರು ನಂಜುಂಡಸ್ವಾಮಿ ಅವರ ಸ‌ಮಾಧಿಗೆ ಪುಷ್ಪನಮನ ಸಲ್ಲಿಸಿದರು. 

ಸ್ವಯಂ ಪ್ರೇರಿತರಾಗಿ ರೈತ ಸಂಘಕ್ಕೆ ಸೇರ್ಪಡೆಗೊಳ್ಳಲು ಮುಂದೆ ಬಂದ ನಂಜನಗೂಡು, ಜಿಲ್ಲೆಯ ವಿವಿಧ ಭಾಗಗಳ 50ಕ್ಕೂ ಹೆಚ್ಚು ರೈತರಿಗೆ ಹಸಿರು ಶಾಲು ನೀಡಿ, ಪ್ರತಿಜ್ಞಾವಿಧಿ ಬೋಧಿಸಲಾಯಿತು.  ರಕ್ತದಾನ ಶಿಬಿರವನ್ನೂ ಏರ್ಪಡಿಸಲಾಗಿತ್ತು. 23 ಮಂದಿ ರಕ್ತದಾನ ಮಾಡಿದರು. ಪ್ರೊ.ಎಂಡಿಎನ್‌ ಪ್ರತಿಷ್ಠಾನ ಪ್ರಶಸ್ತಿಯನ್ನು ಇದೇ ಸಂದರ್ಭದಲ್ಲಿ ಚಾಮರಾಜನಗರ ಪಟ್ಟಣ ಠಾಣೆಯ ಸಬ್‌ ಇನ್‌ಸ್ಪೆಕ್ಟರ್ ಸಿದ್ದರಾಜ ನಾಯಕ ಅವರಿಗೆ ಪ್ರದಾನ ಮಾಡಲಾಯಿತು. 

ವೇದಿಕೆ ಖಾಲಿ: ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅತಿಥಿಗಳು ಹಾಗೂ ಗಣ್ಯರು ವೇದಿಕೆಯಲ್ಲಿ ಇಲ್ಲದೇ ಇದ್ದುದು, ಈ ಬಾರಿಯ ಕಾರ್ಯಕ್ರಮದ ವಿಶೇಷ. ಎಲ್ಲರೂ ಸಭಿಕರೊಂದಿಗೆ ಕುಳಿತಿದ್ದರು. ರೈತರ ಸೇರ್ಪಡೆ, ಪ್ರಶಸ್ತಿ ಪ್ರದಾನ ಹಾಗೂ ಭಾಷಣ ಮಾಡುವ ಸಂದರ್ಭದಲ್ಲಿ ಮಾತ್ರ ವೇದಿಕೆಗೆ ಹೋಗುತ್ತಿದ್ದರು.  

ವಿಮರ್ಶಕ ಕೆ.ಪಿ.ಸುರೇಶ್‌ ಅವರು ರೈತ ಕಾಯ್ದೆಗಳಿಂದ ಕೃಷಿಕರಿಗೆ ಎದುರಾಗುವ ಸಂಕಷ್ಟಗಳು ಹಾಗೂ ‌ರೈತರೇ ಕಟ್ಟಬಹುದಾದ ಪರ್ಯಾಯಗಳ ಬಗ್ಗೆ ವಿಷಯ ಮಂಡಿಸಿದರು.  

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್, ಮುಖಂಡರಾದ ರಾಮಣ್ಣ, ಸುರೇಶ್‌ ಮಲ್ಲಿಕಾರ್ಜುನ, ವಿದ್ಯಾಸಾಗರ, ಮಂಜು ಕಿರಣ್‌ ಇದ್ದರು.

ಚಳವಳಿಯಲ್ಲಿ ನಾಯಕತ್ವದ ಕಾಯಿಲೆ: ಚುಕ್ಕಿ

ವೇದಿಕೆ ಖಾಲಿಯಾಗಿ ಇದ್ದುದಕ್ಕೆ ಪ್ರಾಸ್ತಾವಿಕ ಭಾಷಣದಲ್ಲಿ ಸ್ಪಷ್ಟನೆ ನೀಡಿದ ರೈತ ನಾಯಕಿ, ಅಮೃತಭೂಮಿಯ ಕಾರ್ಯನಿರ್ವಾಹಕ ಧರ್ಮದರ್ಶಿ ಚುಕ್ಕಿ ನಂಜುಂಡಸ್ವಾಮಿ ಅವರು, ‘ರೈತ ಚಳವಳಿಯಲ್ಲೂ ಈಗ ನಾಯಕತ್ವದ ಕಾಯಿಲೆ ಬಂದಿದೆ. ನಾನು ನಾಯಕನಾಗಬೇಕು ಎಂಬುದು ಒಂದು ರೋಗ. ಒಬ್ಬ ನಾಯಕನನ್ನು ಮುಂದಿಟ್ಟುಕೊಂಡು ಹೋರಾಟ ಮಾಡುತ್ತೇವೆ ಎಂಬುದು ಸುಳ್ಳು’ ಎಂದರು.

‘ನಮ್ಮ ಕಾರ್ಯವೈಖರಿ, ಸಂಸ್ಕೃತಿ ಬದಲಾಗಬೇಕು. ವೇದಿಕೆ ಸಂಸ್ಕೃತಿ ಬಿಟ್ಟು, ಎಲ್ಲರೂ ಸಮನಾಗಿ ಚಳವಳಿ ಕಟ್ಟುವ ಪ್ರತಿಜ್ಞೆ ಮಾಡೋಣ. ಇದೇ ಕಾರಣಕ್ಕೆ ಇವತ್ತು ವೇದಿಕೆಯನ್ನು ಖಾಲಿ ಬಿಡಲಾಗಿದೆ’ ಎಂದರು. 

ಜಿಲ್ಲಾಧಿಕಾರಿ ಕಚೇರಿ, ವಿಧಾನಸೌದ ಮುತ್ತಿಗೆ ಹಾಕುವುದು, ಹೋರಾಟ ಮಾಡುವುದು ಚಳವಳಿಯ ಒಂದು ಆಯಾಮ. ಇದರ ಜೊತೆಗೆ ನಮಗೆ ಬೇಕಾದ ಮಾದರಿಯನ್ನು ನಾವೇ ಕಟ್ಟಿಕೊಳ್ಳಬೇಕಿದೆ. ನಮ್ಮ ಬುಡಕ್ಕೆ ಕೈ ಹಾಕುತ್ತಿದ್ದಾರೆ ಎಂದಾಗ ಸುಮ್ಮನೆ ಕೇಳುತ್ತಾ, ಟೀಕೆ ಮಾಡುತ್ತಾ, ಪ್ರತಿಭಟನಾ ಮಾಡುತ್ತಾ ಕೂರುವುದಕ್ಕೆ ಆಗುವುದಿಲ್ಲ’ ಎಂದರು. 

ಸಾಮೂಹಿಕ ನಾಯಕತ್ವದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆಯ ವರಿಷ್ಠ ಕೆ.ಟಿ.ಗಂಗಾಧರ್‌ ಅವರು ಮಾತನಾಡಿ, ‘ವಿಶ್ವ ವಾಣಿಜ್ಯ ಒಪ್ಪಂದದಲ್ಲಿ ಭಾರತ ಕೃಷಿಯನ್ನು ಯಾವಾಗ ಸೇರ್ಪಡೆ ಮಾಡಿದರೋ ಅಂದಿನಿಂದ ದೇಶ, ಸಂಸ್ಕೃತಿ, ಆಹಾರ ಸಾರ್ವಭೌಮತ್ವ ಮೇಲೆ ತೂಗುಗತ್ತಿ ನೇತಾಡುತ್ತಿದೆ. ಇದಕ್ಕೆ ಮೋದಿ ಸರ್ಕಾರ ಬಲಿಯಾಗಿದೆ. ಎಲ್ಲ ಪಕ್ಷದವರು ಸಂಸತ್ತಿನಲ್ಲಿ ಪರ್ಯಾಯವನ್ನು ಕಂಡುಹಿಡಿಯುವ ಕೆಲಸ ಮಾಡಬೇಕು. ಕೃಷಿ ಹಾಗೂ ರೈತರನ್ನು ಚುನಾವಣಾ ತಂತ್ರಕ್ಕೆ ಬಳಸುವುದನ್ನು ಪಕ್ಷಗಳು ಕೈ ಬಿಡಬೇಕು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು