ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ಕರಿಕಲ್ಲು ಸಾಗಣೆ ಮೇಲೆ ಹೆಚ್ಚಿದ ನಿಗಾ

ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸರಿಂದ ತಪಾಸಣೆ, ದಾಖಲೆಗಳ ಪರಿಶೀಲನೆ ತೀವ್ರ
Last Updated 4 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿರುವ ಕರಿ ಕಲ್ಲು ಕ್ವಾರೆಗಳಿಂದ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೆ ಮಾಡಲಾಗುತ್ತಿರುವ ಕರಿ ಕಲ್ಲುಗಳ ಸಾಗಣೆ ಮೇಲೆ ಜಿಲ್ಲಾ ಪೊಲೀಸರು ತೀವ್ರ ನಿಗಾ ಇಟ್ಟಿದ್ದು, ಕೆಲವು ದಿನಗಳಿಂದೀಚೆಗೆ ಕಲ್ಲು ಸಾಗಿಸುತ್ತಿರುವ ಲಾರಿಗಳ ತಪಾಸಣೆ, ದಾಖಲೆಗಳ ಪರಿಶೀಲನೆ ಹೆಚ್ಚಾಗಿದೆ.

ತಾಲ್ಲೂಕಿನ ಪುಣಜನೂರು ಚೆಕ್‌ಪೋಸ್ಟ್‌ ಸೇರಿದಂತೆ ವಿವಿಧ ಕಡೆಗಳಲ್ಲಿ ಪೊಲೀಸ್‌ ಸಿಬ್ಬಂದಿ ಲಾರಿಗಳನ್ನು ತಡೆದು, ಪರವಾನಗಿ ಸೇರಿದಂತೆ ಇತರ ದಾಖಲೆಗಳನ್ನು ತಪಾಸಣೆ ಮಾಡುತ್ತಿದ್ದಾರೆ. ಮಿತಿಗಿಂತಲೂ ಹೆಚ್ಚು ಭಾರದ ಕರಿಕಲ್ಲು ಸಾಗಣೆ ಮಾಡಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸುತ್ತಿದ್ದಾರೆ. ನಿಯಮ ಉಲ್ಲಂಘನೆ ಮಾಡಿದ್ದು ಕಂಡು ಬಂದರೆ, ಲಾರಿಗಳನ್ನು ಜಪ್ತಿ ಮಾಡಿ ಸಂಬಂಧಿಸಿದ ಠಾಣೆ ಎದುರು ನಿಲ್ಲಿಸಲಾಗುತ್ತಿದೆ.

ಇತ್ತೀಚೆಗೆ ಅಧಿಕಾರ ವಹಿಸಿಕೊಂಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ (ಎಸ್‌ಪಿ) ದಿವ್ಯಾ ಸಾರಾ ಥಾಮಸ್‌ ಸೂಚನೆಯ ಅನ್ವಯ ಈ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಆರೋಪ:ಜಿಲ್ಲೆಯಲ್ಲಿ ಪರವಾನಗಿ ಇಲ್ಲದೆ ಕರಿಕಲ್ಲು ಸಾಗಿಸಲಾಗುತ್ತಿದೆ, ಮಿತಿಗಿಂತ ಹೆಚ್ಚು ಭಾರವನ್ನು ಲಾರಿಗಳಲ್ಲಿ ಹಾಕಲಾಗುತ್ತಿದೆ. ಒಂದು ಪರವಾನಗಿಯನ್ನು ಇಟ್ಟುಕೊಂಡು ಹಲವು ಲಾರಿಗಳಲ್ಲಿ ಕರಿಕಲ್ಲು ಸಾಗಿಸಲಾಗುತ್ತಿದೆ ಎಂಬ ಆರೋಪ ಮೊದಲಿನಿಂದಲೂ ಕೇಳಿ ಬರುತ್ತಲೇ ಇದೆ.

ಪೊಲೀಸರು, ಗಣಿ ಇಲಾಖೆ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳು ಅಪರೂಪಕ್ಕೆ ಎಂಬಂತೆ ಕಾರ್ಯಾಚರಣೆ ನಡೆಸಿ ನಿಯಮ ಉಲ್ಲಂಘಿಸುವ ಲಾರಿಗಳನ್ನು ಜಪ್ತಿ ಮಾಡುವ ನಿದರ್ಶನಗಳೂ ಇವೆ.

ದಿವ್ಯಾ ಸಾರಾ ಥಾಮಸ್‌ ಅವರು ಎಸ್‌ಪಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಈ ವಿಚಾರದ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಿದ್ದು, ನಿಯಮ ಉಲ್ಲಂಘಿಸುತ್ತಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ ಎಂದು ಗೊತ್ತಾಗಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ದಿವ್ಯಾ ಅವರು, ‘ಕರಿ ಕಲ್ಲುಗಳನ್ನು ಸಾಗಣೆ ಮಾಡುವಾಗ ನಿಯಮಗಳನ್ನು ಪಾಲಿಸಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸುತ್ತಿದ್ದೇವೆ. ಪರವಾನಗಿ, ಭಾರ ಮಿತಿ ಎಲ್ಲವನ್ನೂ ತಪಾಸಣೆ ಮಾಡುತ್ತಿದ್ದೇವೆ. ನಿಯಮ ಉಲ್ಲಂಘಿಸಿದ್ದು ಕಂಡು ಬಂದರೆ, ಗಣಿ ಇಲಾಖೆ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆಯ ಗಮನಕ್ಕೆ ತರುತ್ತೇವೆ. ಅವರು ಕ್ರಮಗಳನ್ನು ಕೈಗೊಳ್ಳಲಿದ್ದಾರೆ’ ಎಂದು ಹೇಳಿದರು.

‍ಅಸಮಾಧಾನ:ಪೊಲೀಸರ ಈ ಕ್ರಮ ಕರಿ ಕಲ್ಲು ಉದ್ಯಮಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಎಲ್ಲ ನಿಯಮಗಳನ್ನು ಪಾಲಿಸಿದರೂ, ಪೊಲೀಸರು ಅನಗತ್ಯವಾಗಿ ‌ತೊಂದರೆ ಕೊಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

‘ಕರಿ ಕಲ್ಲು ಸಾಗಣೆಗೆ ನಮ್ಮ ಬಳಿ ಪರವಾನಗಿ ಇದೆ. ಬಿಲ್‌ ಕೂಡ ಇದೆ. ಲಾರಿಯಲ್ಲಿ ಮಿತಿಗಿಂತ ಹೆಚ್ಚು ಭಾರ ಹಾಕಿಲ್ಲ. ಹಾಗಿದ್ದರೂ, ಲಾರಿಗಳನ್ನು ಚೆಕ್‌ಪೋಸ್ಟ್‌ನಲ್ಲಿ ತಡೆಯುತ್ತಿದ್ದಾರೆ’ ಎಂದು ಕರಿ ಕಲ್ಲು ಉದ್ಯಮದಲ್ಲಿ ತೊಡಗಿಕೊಂಡವರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸ್ಥಳೀಯ ಪೊಲೀಸರು ದಾಖಲೆಗಳನ್ನು ಪರಿಶೀಲಿಸಿ, ಎಲ್ಲ ಸರಿ ಇದೆ ಎಂದು ಕಳುಹಿಸಿದರೆ, ಪುಣಜನೂರು ಚೆಕ್‌ಪೋಸ್ಟ್‌ನಲ್ಲಿ ತಡೆಯಲಾಗುತ್ತಿದೆ. ನಿಯಮ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಿ. ಎಲ್ಲ ದಾಖಲೆಗಳಿದ್ದರೂ ಬಿಡುತ್ತಿಲ್ಲ. ಇದರಿಂದ ತೊಂದರೆಯಾಗಿದೆ. ಈ ರೀತಿ ಯಾಕೆ ಮಾಡುತ್ತಿದ್ದಾರೆ ಎಂಬುದೇ ಗೊತ್ತಾಗುತ್ತಿಲ್ಲ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT