ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ರಸಗೊಬ್ಬರ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

Last Updated 17 ಏಪ್ರಿಲ್ 2021, 12:47 IST
ಅಕ್ಷರ ಗಾತ್ರ

ಚಾಮರಾಜನಗರ: ರಸಗೊಬ್ಬರಗಳ ಬೆಲೆ ಏರಿಕೆ ಖಂಡಿಸಿ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಜಿಲ್ಲಾಡಳಿತ ಭವನದ ಗೇಟಿನ ಎದುರು ಸೇರಿದ ಪ್ರತಿಭಟನಕಾರರು, ಅಲ್ಲಿಂದ ಭವನದವರೆಗೂ ಮೆರವಣಿಗೆಯಲ್ಲಿ ತೆರಳಿ, ಪ್ರವೇಶ ದ್ವಾರದ ಎದುರು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್‌ ಅವರು, ‘ಕೋವಿಡ್‌ ಸಂಕಷ್ಟದ ಸಮಯದಲ್ಲಿ ರಸಗೊಬ್ಬರದ ಬೆಲೆ ಹೆಚ್ಚಿಸುವ ಮೂಲಕ ಕೇಂದ್ರ ಸರ್ಕಾರ ರೈತರಿಗೆ ಬರೆ ಎಳೆದಿದೆ. ನಾವು ವೈಜ್ಞಾನಿಕ ಬೆಲೆಯನ್ನು ಕೇಳುತ್ತಿದ್ದೇವೆ. ಸರ್ಕಾರ ಈ ಬಗ್ಗೆ ಗಮನ ಹರಿಸದೆ, ಖಾಸಗಿ ಕಂಪನಿಗಳ ಒತ್ತಡಕ್ಕೆ ಮಣಿದು ರಸಗೊಬ್ಬರಗಳ ಬೆಲೆ ಏರಿಕೆ ಮಾಡಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶದಲ್ಲಿ ಕೃಷಿ ವಲಯದಲ್ಲಿ ಲಾಭದಾಯಕವಾಗಿಲ್ಲ. ಬೆಂಬಲ ಬೆಲೆ ನಿಗದಿ ಮಾಡುವಾಗ ಶೇ 4ರಷ್ಟು ಮಾತ್ರ ಬೆಲೆ ಹೆಚ್ಚಳ ಮಾಡಲಾಗಿದೆ. ಇದು ವೈಜ್ಞಾನಿಕವಾಗಿ ನಿಗದಿ ಮಾಡಿದ ಬೆಲೆ ಅಲ್ಲ. ಸರ್ಕಾರ ತಕ್ಷಣವೇ ಸರ್ಕಾರಿ ಸ್ವಾಮ್ಯದ ಹಾಗೂ ಖಾಸಗಿ ಕಂಪನಿಗಳ ಎಲ್ಲ ಗೊಬ್ಬರಗಳನ್ನು ಹಳೆಯ ದರದಲ್ಲಿ ಮಾರಾಟ ಮಾಡಬೇಕು’ ಎಂದು ಆಗ್ರಹಿಸಿದರು.

‘ರಸಗೊಬ್ಬರ ಸಹಾಯಧನಕ್ಕಾಗಿ ಇದುವರೆಗೆ ₹2.30 ಲಕ್ಷ ಕೋಟಿ ನೀಡಲಾಗುತ್ತಿತ್ತು. ಈ ಬಾರಿ ₹64 ಸಾವಿರ ಕೋಟಿ ಮಾತ್ರ ನೀಡಲಾಗಿದೆ. ಸಹಾಯಧನದ ಮೊತ್ತ ಇಳಿಸಿರುವುದು ಸರಿಯಲ್ಲ. ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ, ಕೃಷಿ ಸಚಿವರು ರೈತರ ಕಣ್ಣಿಗೆ ಮಣ್ಣು ಎರಚುವ ಕೆಲಸ ಮಾಡುತ್ತಿದ್ದಾರೆ. ರೈತರು ಕೃಷಿ ಬಿಟ್ಟಬಿಡಬೇಕು ಎಂಬ ಉದ್ದೇಶದಿಂದ ಸರ್ಕಾರ ರಸಗೊಬ್ಬರಗಳ ಬೆಲೆ ಏರಿಕೆ, ರೈತ ವಿರೋಧಿ ಕಾಯ್ದೆಗಳನ್ನು ಜಾರಿ ಮಾಡುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಂತರ ಪ್ರತಿಭಟನಕಾರರು ಜಿಲ್ಲಾಡಳಿತ ಚುನಾವಣಾ ವಿಭಾಗದ ತಹಸೀಲ್ದಾರ್ ವಿನೋದ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಸಂಘದ ಜಿಲ್ಲಾಧ್ಯಕ್ಷ ಪಿ.ಸೋಮಶೇಖರ್, ಪ್ರಧಾನ ಕಾರ್ಯದರ್ಶಿ, ಕಿರಗಸೂರು ಶಂಕರ, ತಾಲ್ಲೂಕು ಅಧ್ಯಕ್ಷ ಮೂಕಳ್ಳಿ ಮಹದೇವಸ್ವಾಮಿ, ಮೂಡಲಪುರ ಪಟೇಲ್ ಶಿವಮೂರ್ತಿ, ಹಾಡ್ಯ ರವಿ, ನರಸೀಪುರ ನಿಂಗರಾಜು, ಸೋಮಶೇಖರ್, ನಾಗರಾಜು ಮೂಡ್ಲುಪುರ, ಆಲೂರು ಎ.ಸಿ.ಸಿದ್ದರಾಜು, ಕುಮಾರ್, ಶಿವಸ್ವಾಮಿ, ಎಚ್.ಮೂಕಳ್ಳಿ, ಎಂ.ಬಿ.ರಾಜು, ಶಿವಶಂಕರ, ನಂಜಪುರ ಸತೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT