ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ಅಕ್ರಮ ಗಣಿಗಾರಿಕೆ: ಹೆದ್ದಾರಿ ತಡೆದು ಪ್ರತಿಭಟನೆ

ಗಣಿಗಳ ಶಾಶ್ವತ ಸ್ಥಗಿತಕ್ಕೆ ಒತ್ತಾಯ, ಆಸ್ತಿ ತನಿಖೆಗೆ ರೈತರ ಆಗ್ರಹ
Last Updated 8 ಮಾರ್ಚ್ 2022, 6:19 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗೆ ತಡೆಯೊಡ್ಡುವಂತೆ ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಕಾರ್ಯಕರ್ತರು ನಗರದಲ್ಲಿ ಸೋಮವಾರ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ನಗರದ ಸಂತೇಮರಹಳ್ಳಿ ರಸ್ತೆಯ ಜಾಲಹಳ್ಳಿಹುಂಡಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೇರಿದ ಪ್ರತಿಭಟನಕಾರರು ಹೆದ್ದಾರಿಯಲ್ಲಿ ಕುಳಿತು ವಾಹನ ಸಂಚಾರ ತಡೆದರು. ಜಿಲ್ಲಾಡಳಿತ, ಗಣಿ ಇಲಾಖೆಯ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.

ರೈತ ಸಂಘದ ಜಿಲ್ಲಾಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್ ಅವರು ಮಾತನಾಡಿ, ’ ಜಿಲ್ಲೆಯಲ್ಲಿ ಪ್ರಾಕೃತಿಕ ಸಂಪತ್ತು ಹೇರಳವಾಗಿದ್ದು, ಕೆಲವೇ ಕೆಲವು ಜನರು ದೋಚುತ್ತಿದ್ದಾರೆ.ಜಿಲ್ಲೆಯಲ್ಲಿರುವ ಶೇ 99ರಷ್ಟು ಗಣಿಗಳು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿವೆ. ಇದಕ್ಕೆ ಜಿಲ್ಲಾಡಳಿತ, ಗಣಿ ಇಲಾಖೆಯ ಅಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಕಾರಣ. ಇಡೀ ಸಂಪತ್ತನ್ನು ಲೂಟಿ ಮಾಡಲಾಗುತ್ತಿದೆ.ಎಂಜಲು ಕಾಸಿಗೆ ಕೈ ಒಡ್ಡಿ ಅಕ್ರಮ ಗಣಿಗಾರಿಕೆಗೆ ಅವಕಾಶ ನೀಡಲಾಗುತ್ತಿದೆ‘ ಎಂದು ಆರೋಪಿಸಿದರು.

’ಇದೇ ರೀತಿ ಸಂಪತ್ತು ಲೂಟಿಯಾಗುತ್ತಿದ್ದರೆ ಜಿಲ್ಲೆಯ ಬೆಟ್ಟಗಳು ಉಳಿಯುವುದಿಲ್ಲ. ಇನ್ನು ಐದು ಹತ್ತು ವರ್ಷಗಳಲ್ಲಿ ಎಲ್ಲವೂ ನಾಶವಾಗುತ್ತದೆ. ಮುಂದಿನ ಪೀಳಿಗೆಯ ಬದುಕು ದುಸ್ತರವಾಗುತ್ತದೆ. ಮುಂದಿನ ಪೀಳಿಗೆಗೆ ಏನೂ ಉಳಿಯುವುದಿಲ್ಲ‘ ಎಂದರು.

’ಜಿಲ್ಲೆಯಲ್ಲಿ ಗಣಿಗಾರಿಕೆಯಲ್ಲಿ ತೊಡಗಿರುವವರ ಆಸ್ತಿ ಪಾಸ್ತಿಗಳ ಬಗ್ಗೆ ತನಿಖೆ ನಡೆಯಬೇಕು. ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕದಿದ್ದರೆ, ರೈತರು ಬೀದಿಗಿಳಿಯಲಿದ್ದಾರೆ‘ ಎಂದು ಎಚ್ಚರಿಸಿದರು.

ಪ್ರತಿಭಟನಾ ಸ್ಥಳಕ್ಕೆ ಬಂದ ಗಣಿ ಇಲಾಖೆ ಹಾಗೂ ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕ ನಾಗಭೂಷಣ್‌ ಅವರು, ರೈತರ ಅಹವಾಲು ಸ್ವೀಕರಿಸಿದರು.

ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ’ರೈತರು ಮುಂದಿಟ್ಟ ಬೇಡಿಕೆಗಳನ್ನು ಪಟ್ಟಿ ಮಾಡಿದ್ದೇನೆ. ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು‘ ಎಂದರು.

ರೈತ ಸಂಘದ ಹೆಗ್ಗೋಠಾರ ವಿಜಯ್‌ ಕುಮಾರ್‌, ಹರೀಶ್ ಕುಮಾರ್, ಪುಟ್ಟಮಾದೇಗೌಡ, ಮಲ್ಲಿಕಾರ್ಜುನಸ್ವಾಮಿ, ಪುಟ್ಟರಾಜು, ಮಹೇಶ್, ಕುಮಾರ್ ಸೇರಿದಂತೆ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT