ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದೇಶ್ವರ ಬೆಟ್ಟ: ಮನೆ ತೆರವಿಗೆ ನೋಟಿಸ್ ನೀಡಿರುವುದನ್ನು ಖಂಡಿಸಿ ಪ್ರತಿಭಟನೆ

ದೀಪದಗಿರಿ ಒಡ್ಡಿನಲ್ಲಿರುವ ಪ್ರಾಧಿಕಾರದ ಜಾಗದಲ್ಲಿ ಮನೆ ನಿರ್ಮಾಣ ಆರೋಪ‍
Last Updated 3 ಆಗಸ್ಟ್ 2020, 13:33 IST
ಅಕ್ಷರ ಗಾತ್ರ

ಮಹದೇಶ್ವರ ಬೆಟ್ಟ: ಇಲ್ಲಿನ ದೀಪದಗಿರಿ ಒಡ್ಡಿನ ಬಿಜಿಎಸ್ ಅತಿಥಿ ಗೃಹದ ಹತ್ತಿರ ನಿರ್ಮಿಸಲಾಗಿರುವ ಮನೆಗಳನ್ನು ತೆರವುಗೊಳಿಸಬೇಕು ಎಂದು ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವು 17 ಕುಟುಂಬಗಳಿಗೆ ನೋಟಿಸ್‌ ನೀಡಿರುವುದನ್ನು ಖಂಡಿಸಿ ಕರ್ನಾಟಕ ಪ್ರಾಂತ್ಯ ರೈತ ಸಂಘ ಹಾಗೂ ದಲಿತ ಅಭಿವೃದ್ದಿ ಸಂಘದ ಪದಾಧಿಕಾರಿಗಳು ಬೆಟ್ಟದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಬೆಟ್ಟದಲ್ಲಿರುವಪೆಟ್ರೋಲ್ ಬಂಕ್‌ ಎದುರು ಸೇರಿದ ಪ್ರತಿಭಟನನಿರತರು ಅಲ್ಲಿಂದ ಪ್ರಾಧಿಕಾರದ ಕಚೇರಿಯವರೆಗೂ ಮೆರವಣಿಗೆ ನಡೆಸಿ, ಕಚೇರಿ ಮುಂಭಾಗ ಸ್ವಲ್ಪ ಹೊತ್ತು ಪ್ರತಿಭಟನೆ ನಡೆಸಿದರು.

ಕರ್ನಾಟಕ ಪ್ರಾಂತ್ಯ ರೈತ ಸಂಘದ ಎನ್.ಎಲ್.ಭರತ್ ರಾಜ್ ಅವರು ಮಾತನಾಡಿ, ‘ಮನೆಗಳನ್ನು ತೆರವು ಮಾಡುವಂತೆ ಪ್ರಾಧಿಕಾರ ನೋಟಿಸ್‌ ಜಾರಿ ಮಾಡಿರುವುದು ಖಂಡನೀಯ. ಪ್ರಾಧಿಕಾರವು ಅಭಿವೃದ್ದಿ ಬಗ್ಗೆ ಗಮನವನ್ನು ಕೊಡದೆ ಇಂದು ಬಡವರನ್ನು ಒಕ್ಕಲೆಬ್ಬಿಸಲು ಹುನ್ನಾರ ಮಾಡುತ್ತಿದೆ. ಪ್ರಾಧಿಕಾರ ರಚನೆಯಾಗುವುದಕ್ಕಿಂತ ಮೊದಲಿನಿಂದಲೂ ಇಲ್ಲಿನ ಜನರು ವಾಸ ಮಾಡುತ್ತಿದ್ದಾರೆ. ಪ್ರಾಧಿಕಾರ ರಚನೆಯಾದ ನಂತರ ಇಲ್ಲಿನ ಜನರಿಗೆ ಕಿರುಕುಳ ನೀಡುತ್ತಿದ್ದಾರೆ. ಜನರಿಗೆ ಮಾದಪ್ಪನ ಮೇಲೆ ಇರುವಂತಹ ಭಾವನಾತ್ಮಕ ಸಂಬಂಧವನ್ನು ಕಾನೂನಿನ ನೆಪವೊಡ್ಡಿ ಜನರನ್ನು ಒಕ್ಕಲೆಬ್ಬಿಸಲಾಗುತ್ತಿದೆ. ನ್ಯಾಯ ಕೇಳಲು ಮುಂದಾದರೆ ಅವರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ’ ಎಂದು ಆರೋಪಿಸಿದರು.

‘ಕೋವಿಡ್‌ ಸಂಕಷ್ಟದಲ್ಲಿದ್ದ ಜನರಿಗೆ ರಕ್ಷಣೆ ನೀಡಬೇಕಿದ್ದ ಪ್ರಾಧಿಕಾರ ಕಾಮಗಾರಿಗಳ ಹೆಸರಿನಲ್ಲಿ ಲೂಟಿ ಹೊಡೆಯುವಂತಹ ಕೆಲಸ ಮಾಡುತ್ತಿದೆ. ಅಭಿವೃದ್ದಿಯ ಹೆಸರಿನಲ್ಲಿ ಭ್ರಷ್ಟಾಚಾರ ಮಾಡುತ್ತಿದ್ದು, ಮಲೆಮಹದೇಶ್ವರನ ಸನ್ನಿಧಿಗೆ ಕಳಂಕ ತರುತ್ತಿದೆ’ ಎಂದು ಆರೋಪಿಸಿದರು.

‘ಜನರನ್ನು ಒಕ್ಕಲೆಬ್ಬಿಸುವ ಪ್ರಾಧಿಕಾರದ ಕ್ರಮದ ವಿರುದ್ಧ ಮುಂದಿನ ದಿನಗಳಲ್ಲಿ ಜಾತ್ಯತೀತವಾಗಿ ದೊಡ್ಡ ಮಟ್ಟದ ಹೋರಾಟ ಮಾಡಲಾಗುವುದು’ ಎಂದು ಅವರು ಎಚ್ಚರಿಸಿದರು.

ನಂತರ ಪ್ರಾಧಿಕಾರದ ಉಪಕಾರ್ಯದರ್ಶಿಗಳಿಗೆ ಹಾಗೂ ಪಂಚಾಯಿತಿ ಪಿಡಿಒ ರಾಜ್‌ಕುಮಾರ್‌ ಅವರಿಗೆ ಮನವಿಪತ್ರ ನೀಡಿದರು.

ಸಬ್ ಇನ್‌ಸ್ಪೆಕಟ್ರ್‌ ವೀರಣ್ಣಾರಾಧ್ಯ, ಪ್ರಾಧಿಕಾರದ ಉಪಕಾರ್ಯದರ್ಶಿ ಬಸವರಾಜಪ್ಪ, ದಲಿತ ಅಭಿವೃದ್ದಿ ಸಂಘದ ಎಸ್‌.ಲಿಂಗಣ್ಣ ಉಮ್ಮತ್ತೂರು, ಗೋವಿಂದ, ಮುತ್ತಯ್ಯ, ನಾಗರಾಜು, ಮಾದೇಶ್, ಎಂ.ರಾಮಚಂದ್ರ ಮತ್ತಿತರರು ಇದ್ದರು.

‘ದಾಖಲೆ ಸಲ್ಲಿಸಲು ತಿಳಿಸಲಾಗಿದೆ’

ಪ್ರತಿಭಟನನಿರತರ ಆರೋಪದ ಬಗ್ಗೆ ಸ್ಪಷ್ಟನೆ ನೀಡಿರುವ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು, ‘ದೀಪದಗಿರಿ ಒಡ್ಡು ಬಳಿ (ಆದಿಚುಂಚನಗಿರಿ ವಸತಿ ಗೃಹದ ಪಕ್ಕ) ಇರುವಪ್ರಾಧಿಕಾರದ ಜಮೀನಿನಲ್ಲಿ ಕೆಲ ವರ್ಷಗಳಿಂದ ಅನಧಿಕೃತವಾಗಿ ಗುಡಿಸಲು ಹಾಗೂ ಕಚ್ಚಾಮನೆ ನಿರ್ಮಿಸಿಕೊಂಡಿರುವ 17 ಮಂದಿಗೆ ಮನೆ ತೆರವುಗೊಳಿಸುವಂತೆ ಪ್ರಾಥಮಿಕ ನೋಟಿಸ್‌ ನೀಡಲಾಗಿದೆ. ಮನೆಯ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ದಾಖಲೆಗಳು ಇದ್ದಲ್ಲಿ ಹಾಜರು ಪಡಿಸುವಂತೆ ತಿಳಿಸಲಾಗಿದೆ’ ಎಂದು ಹೇಳಿದ್ದಾರೆ.

‘ನೋಟಿಸ್‌ಗೆ ಉತ್ತರಿಸಲು 15 ದಿನಗಳ ಕಾಲಾವಕಾಶ ನೀಡಲಾಗಿದೆ. ಇದರ ನಡುವೆಯೇ ಕೆಲವು ಸಂಘಟನೆಗಳು ಪ್ರತಿಭಟನೆ ನಡೆಸಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಅವರ ಮನವಿಯನ್ನು ಪರಿಶೀಲನೆ ನಡೆಸಲಾಗುವುದು’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT