ಮಂಗಳವಾರ, ಮೇ 17, 2022
30 °C
ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸರಕ ಸಂಘದವರಿಂದ ಪ್ರತಿಭಟನ

ಎಲ್ಲ ಅತಿಥಿ ಉಪನ್ಯಾಸಕರ ನೇಮಕಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: 2020-21ನೇ ಸಾಲಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಶೇ 50 ರಷ್ಟು ಅತಿಥಿ ಉಪನ್ಯಾಸಕರ ನೇಮಕ ಮಾಡಿಕೊಳ್ಳಲು ಹೊರಡಿಸಿರುವ ಆದೇಶವನ್ನು ರದ್ದುಪಡಿಸುವಂತೆ ಆಗ್ರಹಿಸಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಜಿಲ್ಲಾ  ಸಮಿತಿಯ ಪದಾಧಿಕಾರಿಗಳು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. 

ಜಿಲ್ಲಾಡಳಿತ ಭವನದ ಮುಂಭಾಗ ಸೇರಿದ ಪ್ರತಿಭಟನಕಾರರು ಧರಣಿ ನಡೆಸಿದರು.  ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿದೇವಿ ಅವರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.  

ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಅವರು, ‘ಶೇ 50ರಷ್ಟು ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ಹೊರಡಿಸಿರುವ ಆದೇಶ ಅವೈಜ್ಞಾನಿಕ. ಕೂಡಲೇ ಈ ಆದೇಶ ರದ್ದುಪಡಿಸಿ, ಎಲ್ಲ  14,183 ಅತಿಥಿ ಉಪನ್ಯಾಸಕರನ್ನೂ ನೇಮಿಸಿಕೊಳ್ಳಲು ಆದೇಶ ಹೊರಡಿಸಬೇಕು’ ಎಂದು ಆಗ್ರಹಿಸಿದರು.  

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಗುರುರಾಜು ಯರಗನಹಳ್ಳಿ ಅವರು ಮಾತನಾಡಿ, ‘ರಾಜ್ಯದಾದ್ಯಂತ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಅತಿಥಿ ಉಪನ್ಯಾಸಕರು ಹಲವು ತಿಂಗಳುಗಳಿಂದ ನಿರಂತರವಾಗಿ ಪ್ರತಿಭಟನೆ ಮಾಡುತ್ತಲೇ ಬಂದಿದ್ದಾರೆ. ಸರ್ಕಾರ ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗುತ್ತಿಲ್ಲ. ವಿಳಂಬ ಧೋರಣೆ ಬಿಟ್ಟು, ಮುಖ್ಯಮಂತ್ರಿ ಅವರು ಮಧ್ಯಪ್ರವೇಶ ಮಾಡಿ ವಾರದೊಳಗೆ ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಬಗೆಹರಿಸದಿದ್ದರೆ, ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ’ ಎಂದು ಎಚ್ಚರಿಸಿದರು.

‘ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ ನಾರಾಯಣ ಅವರ ಆದೇಶದಂತೆ 2020ರ ನವೆಂಬರ್‌ 17ರಿಂದಲೇ ಅತಿಥಿ ಉಪನ್ಯಾಸಕರ  ಸೇವೆ ಎಂದು ಪರಿಗಣಿಸಬೇಕು. ಅತಿಥಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಕೋವಿಡ್-19 ಮಾರ್ಗಸೂಚಿ ಅನ್ವಯ 40:50ರ ಅನುಪಾತದಲ್ಲಿ ತರಗತಿ ವಿಭಜನೆ ಮಾಡಬೇಕು. ಅತಿಥಿ ಉಪನ್ಯಾಸಕರ ಸೇವಾ ಭದ್ರತೆಗೆ ಸಂಬಂಧಿಸಿದ ಕಡತವನ್ನು ಸಚಿವ ಸಂಪುಟ ಸಮಿತಿ ಮುಂದೆ ತಂದು ಉದ್ಯೋಗ ಭದ್ರತೆ ಘೋಷಿಸಬೇಕು’ ಎಂದು ಪ್ರತಿಭಟನನಿರತರು ಆಗ್ರಹಿಸಿದರು. 

ಕೊಳ್ಳೇಗಾಲ ಕಾಲೇಜಿನ ಡಿ.ಕುಮಾರ್, ಲೋಕೇಶ್, ಕಬ್ಬಳ್ಳಿ ಕಾಲೇಜಿನಿಂದ ಎಚ್.ಬಿ.ಶೈಲ, ಮಹಿಳಾ ಕಾಲೇಜಿನ ತುಳಸಮ್ಮ, ಚಾಮರಾಜನಗರದಿಂದ ಸಿ.ರಾಜೇಂದ್ರ, ಎಚ್.ಎನ್.ಮನುಕುಮಾರ್, ಎಸ್.ಸಂಕಲ್ಪ, ಬಿ.ಆರ್.ಸೌಮ್ಯ, ಪಿ.ಶಾರದ, ಎಂ.ಯೋಗೇಶ್, ಎಸ್.ಬಸವಣ್ಣ, ಡಾ.ಎಚ್.ಗೋವಿಂದರಾಜು, ಎಂ.ಗೌರೀಶ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು