ಶನಿವಾರ, ಅಕ್ಟೋಬರ್ 16, 2021
22 °C

ನ್ಯಾ.ಸದಾಶಿವ ಆಯೋಗ ವರದಿ ಜಾರಿಗೆ ಆಗ್ರಹಿಸಿ ಬೃಹತ್‌ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಒಳಮೀಸಲಾತಿಗೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ನೇತೃತ್ವದ ಆಯೋಗ ನೀಡಿರುವ ವರದಿಯನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಜಿಲ್ಲಾ ಬಾಬೂ ಜಗಜೀವನರಾಂ ಒಕ್ಕೂಟ ಹಾಗೂ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಜಿಲ್ಲಾ ಘಟಕದ ಆಶ್ರಯದಲ್ಲಿ ಮಾದಿಗ ಸಮುದಾಯದವರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. 

ಚಾಮರಾಜೇಶ್ವರ ದೇವಾಲಯದ ಬಳಿಯಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಪ್ರತಿಭಟನಕಾರರು ಅಲ್ಲಿಂದ ಭುವನೇಶ್ವರಿ ವೃತ್ತದವರೆಗೆ ಮೆರವಣಿಗೆ ನಡೆಸಿ, ವೃತ್ತದಲ್ಲಿ ಕುಳಿತು ಸ್ವಲ್ಪ ಹೊತ್ತು ರಸ್ತೆ ತಡೆ ನಡೆಸಿದರು. ನಂತರ ಬಿ.ರಾಚಯ್ಯ ಜೋಡಿ ರಸ್ತೆ ಮಾರ್ಗವಾಗಿ ಜಿಲ್ಲಾಡಳಿತ ಭವನದವರೆಗೂ ಮೆರವಣಿಗೆಯನ್ನು ಮುಂದುವರೆಸಿ, ವರದಿ ಜಾರಿಗೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. 

‘ಎಲ್‌.ಜಿ.ಹಾವನೂರು ವರದಿಯ ಪ್ರಕಾರ ರಾಜ್ಯದಲ್ಲಿ ಪರಿಶಿಷ್ಟ ಜಾತಿಯಲ್ಲಿ ಶೇ 57.3ರಷ್ಟು ಮಂದಿ ಮಾದಿಗ ಸಮುದಾಯದವರು ಇದ್ದಾರೆ. ಆದರೆ, ರಾಜಕೀಯವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಸಮುದಾಯವು ಪ್ರಗತಿಯಾಗಿಲ್ಲ. ಹಾಗಾಗಿ, ಒಳ ಮೀಸಲಾತಿ ನೀಡುವಂತೆ 30 ವರ್ಷಗಳಿಂದ ಹೋರಾಟ ನಡೆಸುತ್ತಾ ಬರಲಾಗುತ್ತಿದೆ. ನ್ಯಾ.ಎ.ಜೆ.ಸದಾಶಿವ ಆಯೋಗವು ಮಾದಿಗ ಸಮುದಾಯದಕ್ಕೆ ಶೇ 6ರಷ್ಟು ಒಳಮೀಸಲಾತಿ ನೀಡಬೇಕು ಎಂದು ವರದಿ ನೀಡಿದ್ದು ಅದನ್ನು ಜಾರಿ ಮಾಡಬೇಕು’ ಎಂದು ಒತ್ತಾಯಿಸಿದರು.

‘ಪರಿಶಿಷ್ಟ ಜಾತಿಯಲ್ಲಿ 101 ಜಾತಿಗಳಿವೆ. ಪರಿಶಿಷ್ಟ ಜಾತಿಗಳಿಗೆ ಸೇರಿದ 36 ಮಂದಿ ಶಾಸಕರಿದ್ದು, ಮಾದಿಗ ಸಮುದಾಯದವರು ಕೇವಲ ಆರು ಮಂದಿ ಇದ್ದಾರೆ. ಆಯೋಗದ ವರದಿಯನ್ನು ಸರಿಯಾಗಿ ಗ್ರಹಿಸದ ಪಶು ಸಂಗೋಪನಾ ಸಚಿವ ಪ್ರಭು ಚವಾಣ್‌ ಅವರು, ಲಂಬಾಣಿ, ಕೊರಮ, ಕೊರಚ ಮುಂತಾದ ಸಮುದಾಯಗಳನ್ನು ಎತ್ತಿಕಟ್ಟಿ, ಆಯೋಗದ ವರದಿಯನ್ನು ಜಾರಿ ಮಾಡಬಾರದು ಎಂದು ಹೇಳಿಕೆ ಕೊಡುತ್ತಾ ಸಮಾಜವನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಅವರನ್ನು ಸಂಪುಟದಿಂದ ವಜಾ ಗೊಳಿಸಬೇಕು’ ಎಂದು ಆಗ್ರಹಿಸಿದರು.

‘ಈ ಹೋರಾಟ ಕೇವಲ ಮಾದಿಗರಿಗೆ ಮಾತ್ರ ಸೀಮಿತವಾಗಿಲ್ಲ. ಪರಿಶಿಷ್ಟ ಜಾತಿಯಲ್ಲಿ ಬರುವ ಮಾದಿಗ ಹಾಗೂ ಅದಕ್ಕೆ ಸಂಬಂಧಿಸಿದ ಜಾತಿಗಳು ಮತ್ತು ಹೊಲೆಯ ಹಾಗೂ ಅದಕ್ಕೆ ಸಂಬಂಧಿಸಿದ ಜಾತಿಗಳು ಹೊಲೆಯ ಮತ್ತು ಸಂಬಂಧಿಸಿದ ಜಾತಿಗಳು ಲಂಬಾಣಿ, ಬೋವಿ, ಕೊರಚ, ಕೊರಮ ಮುಂತಾದ ಎಲ್ಲ ಜಾತಿಗಳಿಗೂ ಜನಸಂಖ್ಯೆವಾರು ಮೀಸಲಾತಿ ನೀಡಬೇಕು’ ಎಂದರು.

‘ಈ ದೇಶದ ಪ್ರತಿಯೊಂದು ಜಾತಿಗೂ, ಕಟ್ಟಕಡೆಯ ವ್ಯಕ್ತಿಗೂ ಜನಸಂಖ್ಯಾವಾರು ಮೀಸಲಾತಿ ಸಿಗಬೇಕು ಎಂಬುದು ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ರಚಿಸಿರುವ ಸಂವಿಧಾನದ ಆಶಯ. ರಾಜಕೀಯ, ಶೈಕ್ಷಣಿಕ ಮತ್ತು ಉದ್ಯೋಗದಲ್ಲೂ ಸಮಾನತೆ ಸಿಗಬೇಕು ಎಂದು ಸಂವಿಧಾನ ಹೇಳುತ್ತದೆ. ಮಾದಿಗ ಸಮುದಾಯ ಅಂಬೇಡ್ಕರ್‌ ಅವರ ದಾರಿಯಲ್ಲಿ ನಡೆಯುತ್ತಿದೆ. ರಾಜ್ಯ ಸರ್ಕಾರ ಚಳಿಗಾಲದ ಅಧಿವೇಶನದಲ್ಲಿ ಸದಾಶಿವ ಆಯೋಗದ ವರದಿಯನ್ನು ಅಂಗೀಕರಿಸಿ, ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಇಲ್ಲದಿದ್ದರೆ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು. 

ಪ್ರತಿಭಟನಾ ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಕಾತ್ಯಾಯಿನಿ ದೇವಿ ಅವರು ಭೇಟಿ ನೀಡಿ, ಪ್ರತಿಭಟನಕಾರರ ಅಹವಾಲು ಆಲಿಸಿ ಮನವಿ ಪತ್ರವನ್ನು ಸ್ವೀಕರಿಸಿದರು.

ಮಾದಿಗ ಹೋರಾಟ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಬಸವನಪುರ ರಾಜಶೇಖರ್‌, ಜಿಲ್ಲಾ ಬಾಬೂ ಜಗಜೀವನರಾಂ ಒಕ್ಕೂಟದ ಅಧ್ಯಕ್ಷ ಎಂ.ಶಿವಮೂರ್ತಿ, ಮುಖಂಡರಾದ ಆರ್‌.ಎಂ.ಕಾಂತರಾಜು, ಪಾಳ್ಯ ಎಂ.ರಾಚಪ್ಪ, ಬಾಲರಾಜ್‌, ರಂಗಸ್ವಾಮಿ, ಎಸ್‌.ಬಸವರಾಜು, ಚಾಮರಾಜು, ಬಿ.ಗುರುಸ್ವಾಮಿ, ಕೆ.ಜಗದೀಶ, ಸುದೇಶ, ಗೋಪಾಲ, ಸೋಮು, ಕಾಮಗೆರೆ ಮಹದೇವ, ಬೂದು ಬಾಳು ಮಹದೇವ ಇತರರು ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು