ಚಾಮರಾಜನಗರ: ಮೈಸೂರಿನ ಎನ್‌ಟಿಎಂ ಶಾಲೆ ಉಳಿಸುವಂತೆ ಒತ್ತಾಯಿಸಿ ಕರ್ನಾಟಕ ಕಾವಲುಪಡೆ ಜಿಲ್ಲಾ ಸಮಿತಿ ಕಾರ್ಯಕರ್ತರು ನಗರದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.
ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಿಂದ ಭುವನೇಶ್ವರಿ ವೃತ್ತದವರೆಗೂ ಮೆರವಣಿಗೆ ನಡೆಸಿದ ಪ್ರತಿಭಟನಕಾರರು, ಅಲ್ಲಿ ಕೆಲಕಾಲ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ರಾಮಕೃಷ್ಣ ಆಶ್ರಮದ ವಿರುದ್ದ ಘೋಷಣೆ ಕೂಗಿ ಅಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ಕಾವಲುಪಡೆ ರಾಜ್ಯಾಧ್ಯಕ್ಷ ಎಂ.ಮೋಹನ್‌ಕುಮಾರ್‌ಗೌಡ ಮಾತನಾಡಿ, ‘ಮೈಸೂರಿನ ಎನ್‌ಟಿಎಂ ಶಾಲೆಗಾಗಿ 14 ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆದುಕೊಂಡು ಬಂದಿದೆ. ಮೈಸೂರಿನ ಮಹಾರಾಣಿ ಕೆಂಪನಂಜಮ್ಮಣಿ ಅವರು ಹೆಣ್ಣುಮಕ್ಕಳ ಬೌದ್ಧಿಕ ಹಾಗೂ ವೈಚಾರಿಕ ವಿಕಾಸಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಶತಮಾನದ ಹಿಂದೆಯೇ ಈ ಶಾಲೆಯನ್ನು ಕಟ್ಟಿಸಿದ್ದರು. ಶಾಲೆಯು ಸಾವಿರಾರು ಹೆಣ್ಣುಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಿಕೊಟ್ಟಿದೆ. ಇಲ್ಲಿ ಕಲಿತ ಎಷ್ಟೋ ಹೆಣ್ಣುಮಕ್ಕಳು ಸ್ವಾವಲಂಬಿಗಳಾಗಿ ಬದುಕುತ್ತಿದ್ದಾರೆ. ಇಂತಹ ಉತ್ತಮ ಶಾಲೆಯನ್ನು ಕೆಡವಿ ವಿವೇಕ ಸ್ಮಾರಕ ಕಟ್ಟಡ ನಿರ್ಮಿಸಲು ಹೊರಟಿರುವುದು ಖಂಡನೀಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿ.ಎಂ ಮೌನ ಏಕೆ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿರೋಧ ಪಕ್ಷದ ನಾಯಕರಾಗಿದ್ದಾಗ ಎನ್‌ಟಿಎಂ ಶಾಲೆಯನ್ನು ಉಳಿಸುವುದಾಗಿ ಹೇಳಿದರು. ಸರ್ಕಾರ ಅಸ್ತಿತ್ವಕ್ಕೆ ನಾಲ್ಕು ತಿಂಗಳು ಕಳೆದಿದೆ. ಆದರೂ ಎನ್‌ಟಿಎಂ ಶಾಲೆ ಬಗ್ಗೆ ಧ್ವನಿ ಎತ್ತದೆ ಮೌನವಾಗಿದ್ದಾರೆ. ಇದು ಖಂಡನೀಯ. ನವೆಂಬರ್ ತಿಂಗಳ ಒಳಗಾಗಿ ಎನ್‌ಟಿಎಂ ಶಾಲೆ ಉಳಿಸುವ ತೀರ್ಮಾನವನ್ನು ಸರ್ಕಾರ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ಕಾವಲು ಪಡೆಯ ರಾಜ್ಯ ಕಾರ್ಯದರ್ಶಿ ಕರಿಗೌಡ, ಉಪಾಧ್ಯಕ್ಷ ರವೀಂದ್ರ, ಭೂಮಿ ನಾಗರಾಜು, ಜಿಲ್ಲಾಧ್ಯಕ್ಷ ಕೆ.ಪರಶಿವಮೂರ್ತಿ, ಲಕ್ಷ್ಮಣ, ಈಗಲ್‌ಸ್ವಾಮಿ, ಯಳಂದೂರು ತಾಲೂಕು ಅಧ್ಯಕ್ಷ ನಾಗೇಂದ್ರ, ಮುಖಂಡರಾದ ಚೆಂಗುಮಣಿ, ಬದನಗುಪ್ಪೆ ನಾರಾಯಣ, ಸಂತೋಷ, ಎಚ್.ಎಸ್.ಮಹದೇವಸ್ವಾಮಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.