ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬರ, ಮಳೆಯಿಂದಾಗಿ ಸಂಕಷ್ಟದಲ್ಲಿ ರೈತರು: ಪರಿಹಾರಕ್ಕೆ ಒತ್ತಾಯಿಸಿ ಪ್ರತಿಭಟನೆ

Published 23 ಮೇ 2024, 14:22 IST
Last Updated 23 ಮೇ 2024, 14:22 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಬರ ಹಾಗೂ ಮಳೆ ಹಾನಿಯಿಂದ ಬೆಳೆ ನಷ್ಟಕ್ಕೆ ಒಳಗಾದ ರೈತರಿಗೆ ಕೂಡಲೇ ಪರಿಹಾರ ಮಂಜೂರು ಮಾಡುವಂತೆ ಒತ್ತಾಯಿಸಿ ಸಾಮೂಹಿಕ ನಾಯಕತ್ವ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಪಟ್ಟಣದ ಎಂಡಿಸಿಸಿ ಬ್ಯಾಂಕ್ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ತಾಲ್ಲೂಕು ಕಚೇರಿ ಬಳಿ ಜಮಾಯಿಸಿದ ಕಾರ್ಯಕರ್ತರು ಅಧಿಕಾರಿಗಳು ಹಾಗು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ಎಂಡಿಸಿಸಿ ಬ್ಯಾಂಕ್ ವೃತ್ತದ ಬಳಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ಹೊರ ಹಾಕಿದರು.

ಸಾಮೂಹಿಕ ನಾಯಕತ್ವ ರೈತ ಸಂಘದ ತಾಲ್ಲೂಕು ಅಧ್ಯಕ್ಷ ವೀರನಪುರ ನಾಗಪ್ಪ ಮಾತನಾಡಿ, ಬರ ಹಾಗೂ ಮಳೆ ಹಾನಿಯಿಂದ ಆದ ಬೆಳೆ ನಷ್ಟಕ್ಕೆ ಇನ್ನೂ ಪರಿಹಾರ ಸಿಕ್ಕಿಲ್ಲ. ಜೊತೆಗೆ ತಾಲ್ಲೂಕಿನಲ್ಲಿ ಕಳೆದ ವಾರದಿಂದ ಸುರಿಯುತ್ತಿರುವ ಭಾರಿ ಮಳೆ ಆಗುತ್ತಿದೆ. ಹಲವು ಗ್ರಾಮಗಳಲ್ಲಿ ರೈತರು ನಾಟಿ ಮಾಡಿದ ಅರಿಶಿಣ, ಈರುಳ್ಳಿ, ಬೆಳ್ಳುಳ್ಳಿ, ಸೂರ್ಯಕಾಂತಿ, ಹಸಲಂದೆ ಸೇರಿದಂತೆ ಇನ್ನಿತರ ಹಲವು ಬೆಳೆಗಳು ಮಳೆಯ ರಭಸಕ್ಕೆ ಸಂಪೂರ್ಣ ಕೊಚ್ಚಿ ಹೋಗಿವೆ. ಹಲವು ಕಡೆ ಮನೆ ಕುಸಿದಿದೆ. ಹೀಗಿದ್ದರೂ ಅಧಿಕಾರಿಗಳು ಕೇವಲ ಬೆಳೆ ಹಾನಿ ಸಮೀಕ್ಷೆ ನಡೆಸುವುದರಲ್ಲಿ ಮಾತ್ರ ಸೀಮಿತವಾಗಿದ್ದಾರೆ ಎಂದು ಕಿಡಿಕಾರಿದರು.

ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ತಹಶೀಲ್ದಾರ್ ಕೂಡಲೇ ಎಚ್ಚೆತ್ತುಕೊಂಡು ಮಳೆಯಿಂದ ಹಾನಿಯಾದ ಬೆಳೆಗಳಿಗೆ ಸಬೂಬು ಹೇಳದೆ ಶೀಘ್ರ ಪರಿಹಾರ ಘೋಷಣೆ ಮಾಡಬೇಕು. ಇಲ್ಲದಿದ್ದರೆ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕುವ ಜೊತೆಗೆ ರಾಷ್ಟ್ರೀಯ ಹೆದ್ದಾರಿ ತಡೆದು ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ಸಾಮೂಹಿಕ ನಾಯಕತ್ವ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಶಿರಸ್ತೇದಾರ್‌ಗೆ ಮನವಿ ಸಲ್ಲಿಸಿ ಕೂಡಲೇ ಪರಿಹಾರ ಮಂಜೂರಾತಿಗೆ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ನಾಗಶೆಟ್ಟಿ, ರಂಗಶೆಟ್ಟಿ, ಮಹದೇವಶೆಟ್ಟಿ, ಸಿದ್ದಶೆಟ್ಟಿ, ಶಿವರಾಜು, ಕುಮಾರ್, ಮಹದೇವು, ಮಲ್ಲೇಶ್ ಸೇರಿದಂತೆ ಹಲವು ಮಂದಿ ರೈತರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT