ಸೋಮವಾರ, ಆಗಸ್ಟ್ 2, 2021
28 °C
ಗೋಪಿನಾಥಂನಲ್ಲಿ ಮಾರಿಯಮ್ಮನ್‌ ದೇವಸ್ಥಾನದಲ್ಲಿ ವಿಶೇಷ ಪೂಜೆ, ಜನರ ನಂಬಿಕೆ

ಮಹದೇಶ್ವರ ಬೆಟ್ಟ| ಗೋಪಿನಾಥಂನಲ್ಲಿ ಕೋವಿಡ್‌–19 ಹರಡಂತೆ ಊರಿಗೆ ತೀರ್ಥ ಪ್ರೋಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಹದೇಶ್ವರ ಬೆಟ್ಟ: ಜಿಲ್ಲೆಯನ್ನೂ ಕಾಡುತ್ತಿರುವ ಕೋವಿಡ್‌–19 ತಮ್ಮ ಗ್ರಾಮದಲ್ಲಿ ಹರಡಬಾರದು ಎಂಬ ಕಾರಣಕ್ಕೆ ಇಲ್ಲಿಗೆ ಸಮೀಪದ ಗೋಪಿನಾಥಂನಲ್ಲಿ ಇಡೀ ಊರಿಗೆ ಮಾರಿಯಮ್ಮನ ತೀರ್ಥವನ್ನು ಪ್ರೋಕ್ಷಣೆ ಮಾಡಲಾಗಿದೆ.

ಶನಿವಾರ ಈ ಆಚರಣೆ ನಡೆದಿದೆ. ಕಾಡುಗಳ್ಳ ವೀರಪ್ಪನ್‌ ಹುಟ್ಟೂರಾಗಿರುವ ಗೋಪಿನಾಥಂ ಗ್ರಾಮದಲ್ಲಿರುವ ಮಾರಿಯಮ್ಮನ್ ದೇವಾಲಯದಲ್ಲಿ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸಿದ್ದು, ಆ ಬಳಿಕ ತೀರ್ಥವನ್ನು ಪ್ರೋಕ್ಷಣೆ ಮಾಡಲಾಗಿದೆ. 

ಅರ್ಚಕ ಸುಬ್ರಹ್ಮಣ್ಯ ಅವರು ದೇವಾಲಯವನ್ನು ಶುದ್ಧೀಕರಿಸಿ ಮಾರಿಮ್ಮನಿಗೆ ವಿಶೇಷ ಪೂಜೆ ನಡೆಸಿದ್ದಾರೆ. ಅವರ ಮೈಮೇಲೆ ದೇವಿ ಆವಾಹನೆಯಾಗಿ, ತೀರ್ಥ ಪ್ರೋಕ್ಷಣೆ ಮಾಡಿದರೆ ಕೋವಿಡ್‌ –19 ಬರುವುದಿಲ್ಲ ಎಂಬ ಅಭಯವನ್ನು ದೇವಿ ನೀಡಿದ್ದಾಳೆ ಎಂಬುದು ಗ್ರಾಮಸ್ಥರ ಮಾತು. 

ಈ ಹಿಂದೆಯೂ ಗ್ರಾಮದಲ್ಲಿ ಕೋವಿಡ್‌–19 ಬಾರದಂತೆ ವಿಶೇಷ ಪೂಜೆ ಸಲ್ಲಿಸಲಾಗಿತ್ತು. 

ಅರ್ಚಕ ಸುಬ್ರಹ್ಮಣ್ಯ ಅವರು ಇಡೀ ಗ್ರಾಮದಲ್ಲಿ ಸುತ್ತಾಡಿ, ಎಲ್ಲ ಕಡೆಯೂ ತೀರ್ಥವನ್ನು ಪ್ರೋಕ್ಷಣೆ ಮಾಡಿದ್ದಾರೆ.  ಗೋಪಿನಾಥಂ ವ್ಯಾಪ್ತಿಗೆ ಒಳಪಡುವ ಮಾರಿಕೊಟ್ಟಾಯಿ, ಆತ್ತೂರು ಆಲಾಂಭಾಡಿ ಪುದೂರಿನ ಗ್ರಾಮಸ್ಥರು ತೀರ್ಥ ಪ್ರಸಾದವನ್ನು ಪಡೆದು ತಮ್ಮ ಗ್ರಾಮಗಳಿಗೆ ತೆರಳಿ ಅದನ್ನು ಎಲ್ಲ ಕಡೆಯೂ ಪ್ರೋಕ್ಷಣೆ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿದ ಗ್ರಾಮಸ್ಥ ನಾಗರಾಜು ಅವರು, ‘ತಮಿಳುನಾಡಿಗೆ ಹೊಂದಿಕೊಂಡಂತಿರುವ ನಮ್ಮ ಗ್ರಾಮದಲ್ಲಿ ಇದುವರೆವಿಗೆ ಸೋಂಕು ಕಂಡು ಬಂದಿಲ್ಲ. ಅಲ್ಲದೆ ಲಾಕ್‌ಡೌನ್‌ ಸಡಿಲಿಕೆಯಾದ ನಂತರ ಗ್ರಾಮಸ್ಥರು ತಮಿಳುನಾಡಿನೊಂದಿಗೆ ಹೆಚ್ಚು ಒಡನಾಟ ಇಟ್ಟುಕೊಂಡಿದ್ದರು. ತಮಿಳುನಾಡಿನಲ್ಲಿ ಪ್ರಕರಣಗಳು ಹೆಚ್ಚುತ್ತಿದ್ದರೂ ನಮ್ಮ ಗ್ರಾಮ ಪ್ರವೇಶಿಸಿಲ್ಲ. ಮಾರಿಯಮ್ಮನ್‌ ದೇವಿ ನಮ್ಮ ಗ್ರಾಮವನ್ನು ಕಾಪಾಡುತ್ತಾಳೆ ಎಂಬ ನಂಬಿಕೆ ನಮ್ಮದು’ ಎಂದು ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.