ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರವೇ ರೋಗಕ್ಕೆ ಔಷಧ: ಪುಟ್ಟರಂಗಶೆಟ್ಟಿ

Published 11 ನವೆಂಬರ್ 2023, 6:03 IST
Last Updated 11 ನವೆಂಬರ್ 2023, 6:03 IST
ಅಕ್ಷರ ಗಾತ್ರ

ಚಾಮರಾಜನಗರ: ಬದಲಾದ ಜೀವನ ಶೈಲಿ, ಆಹಾರ ಪದ್ಧತಿಯಿಂದಾಗಿ ಮನುಷ್ಯರಲ್ಲಿ ಅನಾರೋಗ್ಯ ಕಾಣಿಸಿಕೊಳ್ಳುತ್ತಿದೆ. ಆಯುರ್ವೇದ ಚಿಕಿತ್ಸಾ ವಿಧಾನ ಕೂಡ ಉತ್ತಮವಾಗಿದ್ದು, ಅನೇಕ ಕಾಯಿಲೆಗಳನ್ನು ಅದರಲ್ಲಿ ಗುಣಪಡಿಸಬಹುದು ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಶುಕ್ರವಾರ ಹೇಳಿದರು. 

ನಗರದ ಸರ್ಕಾರಿ ಪೇಟೆ ಪ್ರೈಮರಿ ಶಾಲಾ ಆವರಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಯುಷ್ ಇಲಾಖೆ ವತಿಯಿಂದ ಆಯೋಜಿಸಿದ್ದ ಶ್ರೀ ಧನ್ವಂತರಿ ಜಯಂತಿಯ 8ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಪ್ರಕೃತಿಯಲ್ಲಿ ಎಲ್ಲ ರೋಗಗಳಿಗೂ ಮದ್ದು ಇದೆ. ಹಿಂದಿನ ಕಾಲದಲ್ಲಿ ಎಂತಹದ್ದೇ ಕಾಯಿಲೆ ಇದ್ದರೂ, ಗಿಡ ಮೂಲಿಕೆಗಳು, ಮನೆ ಮದ್ದಿನಿಂದ ವಾಸಿಯಾಗುತ್ತಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ನಾವು ತಿನ್ನುವ ಆಹಾರದಿಂದಲೇ ಕಾಯಿಲೆಗಳು ಬರುತ್ತಿವೆ. ಹಾಗಾಗಿ, ಅಲೋಪಥಿ ಔಷಧಿಗಳಿಗೆ ಮೊರೆ ಹೋಗುತ್ತಿದ್ದೇವೆ’ ಎಂದರು. 

ನಾಟಿ ವೈದ್ಯ ಪದ್ದತಿಗಳು ಮರೆಯಾಗುತ್ತಿವೆ. ಆದರೆ, ಈಗಲೂ ಗ್ರಾಮೀಣ ಭಾಗಗಳಲ್ಲಿ ನಾಟಿ ಔಷಧಿಯನ್ನೇ ಸೇವಿಸುವವರು ಇದ್ದಾರೆ. ಅವರ ಆರೋಗ್ಯವೂ ಚೆನ್ನಾಗಿದೆ. ಅಲೋಪಥಿ ಔಷಧಿಗಳಲ್ಲಿ ಗುಣವಾಗದ ಕಾಯಿಲೆಗಳೂ ಆಯುರ್ವೇದದಿಂದ ವಾಸಿಯಾಗಿರುವ ಉದಾಹರಣೆಗಳುಂಟು. ನಾವು ಸೇವಿಸುವ ಆಹಾರ ಎಲ್ಲದಕ್ಕೂ ಮೂಲ ಕಾರಣ ಹೀಗಾಗಿ, ಉತ್ತಮ ಪೌಷ್ಟಿಕ ಆಹಾರ ಸೇವಿಸುವುದನ್ನು ರೂಢಿಸಿಕೊಳ್ಳಬೇಕು’ ಎಂದು ಪುಟ್ಟರಂಗಶೆಟ್ಟಿ ಹೇಳಿದರು. 

ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ ಪ್ರಸನ್ನ ಮಾತನಾಡಿ, ‘ ಧನ್ವಂತರಿ ಪ್ರಾಚೀನ ಚಿಕಿತ್ಸಾ ಪದ್ದತಿಯಾಗಿದ್ದು ಹಿಂದೆ ಇದಕ್ಕೆ ಹೆಚ್ಚು ಪ್ರಾಮುಖ್ಯ ಇತ್ತು. ಆರೋಗ್ಯದಲ್ಲಿ ಏರುಪೇರುಗಳಾಗುವ ಪ್ರಸ್ತುತ ದಿನಗಳಲ್ಲಿ ಸರಿಯಾದ ಔಷಧಗಳನ್ನು ಬಳಸಬೇಕು. ಆಯುರ್ವೇದ ದಿನಾಚರಣೆಯಿಂದ ಜನರಲ್ಲಿ ಆಯುರ್ವೇದದ ಬಗ್ಗೆ ಹೆಚ್ಚು ಅರಿವು ಮೂಡಲು ಸಹಕಾರಿಯಾಗುತ್ತದೆ’ ಎಂದರು.

ಆಯುಷ್ ವೈದ್ಯಾಧಿಕಾರಿ ಡಾ.ಸುಧಾ ಅವರು ಪ್ರಾಸ್ತವಿಕವಾಗಿ ಮಾತನಾಡಿ, ‘ಆಯುರ್ವೇದ ಚಿಕಿತ್ಸೆಗೆ ತನ್ನದೆ ಆದ ಭವ್ಯ ಇತಿಹಾಸವಿದೆ. ಬ್ರಹ್ಮ, ಋಷಿಗಳ ಕಾಲದಿಂದಲೂ ಆಯುರ್ವೇದ ಚಿಕಿತ್ಸೆಯನ್ನು ಕಾಣಬಹುದು. ಹಿತ, ಅಹಿತ, ಸುಖ, ದುಃಖಗಳ ಬಗ್ಗೆ ಸಂಪೂರ್ಣವಾಗಿ ತಿಳಿಸುವುದೇ ಆಯುರ್ವೇದ ಮೂಲ ಮಂತ್ರ’ ಎಂದರು.

ನಗರಸಭೆ ಸದಸ್ಯೆ ಕಲಾವತಿ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಸುಜಾತ, ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ.ಪುನೀತ್ ಬಾಬು, ಸರ್ಕಾರಿ ನೌಕರರ ಸಂಘದ ಪ್ರತಿನಿಧಿ ರಂಗಸ್ವಾಮಿ, ಸರ್ಕಾರಿ ಪೇಟೆ ಪ್ರೇಮರಿ ಶಾಲೆಯ ಪ್ರಾಂಶುಪಾಲ ನಾಗೇಂದ್ರ ಇತರರು ಇದ್ದರು. 

ಆಯುರ್ವೇದ ದಿನಾಚರಣೆ ಅಂಗವಾಗಿ ಶಾಲಾ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನೂ ಹಮ್ಮಿಕೊಳ್ಳಲಾಗಿತ್ತು. 

ಗಮನ ಸೆಳೆದ ವಿದ್ಯಾರ್ಥಿನಿ
ಕಾರ್ಯಕ್ರಮದ ಆರಂಭದಲ್ಲಿ ಸರ್ಕಾರಿ ಪೇಟೆ ಪ್ರೈಮರಿ ಶಾಲೆಯ 2ನೇ ತರಗತಿಯ ವಿದ್ಯಾರ್ಥಿನಿ ನುಸಹಾ ಫಾತಿಮಾ ಖಾನ್ ಭಾರತದ ಸಂವಿಧಾನ ಪೀಠಿಕೆಯನ್ನು ಬೋಧಿಸಿ ಎಲ್ಲರ ಗಮನ ಸೆಳೆದರು. ನುಸಹಾ ಪೀಠಿಕೆಯನ್ನು ಬರೆದುಕೊಂಡು ಬಂದಿರಲಿಲ್ಲ. ವೇದಿಕೆಯಲ್ಲಿ ಗಣ್ಯರ ಸಮ್ಮುಖದಲ್ಲೇ ನಿಂತು ಕೊಂಡು ನಿರರ್ಗಳವಾಗಿ ಪೀಠಿಕೆಯನ್ನು ಹೇಳಿದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT