ಶನಿವಾರ, ಅಕ್ಟೋಬರ್ 8, 2022
23 °C
ಪೌರಾಣಿಕ, ಸಾಮಾಜಿಕ ನಾಟಕಗಳಲ್ಲಿ 35 ವರ್ಷಗಳಿಂದ ನಟಿಸುತ್ತಿರುವ ಮಹದೇವಯ್ಯ

ಎಲೆಮರೆಕಾಯಂತಿರುವ ರಂಗಭೂಮಿ ಕಲಾವಿದ ಮಹದೇವಯ್ಯ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಾನಪದ ಕಲಾವಿದರಿಗೆ ಹೆಸರಾದ, ನಗರಕ್ಕೆ ಸಮೀಪದ ರಾಮಸಮುದ್ರದಲ್ಲಿ 35 ವರ್ಷಗಳಿಂದಲೂ ರಂಗಭೂಮಿಯಲ್ಲಿ ತೊಡಗಿಕೊಂಡಿರುವ ಹವ್ಯಾಸಿ ಕಲಾವಿದ ರೊಬ್ಬರು ಎಲೆಮರೆ ಕಾಯಿಯಂತೆ ಇದ್ದಾರೆ. ಅವರ ಹೆಸರು ಮಹದೇವಯ್ಯ. 

ಸಾಮಾಜಿಕ ಹಾಗೂ ಪೌರಾಣಿಕ ನಾಟಕಗಳಲ್ಲಿ ಅಭಿನಯಿಸುತ್ತಾ ಬಂದಿರುವ ಮಹದೇವಯ್ಯ ಅವರಿಗೆ ಈಗ 55 ವರ್ಷ ವಯಸ್ಸು. ನಗರಸಭೆಯಲ್ಲಿ ಗುತ್ತಿಗೆ ಆಧಾರದಲ್ಲಿ ನೀರುಗಂಟಿಯಾಗಿ ಕೆಲಸ ಮಾಡುತ್ತಿರುವ ಅವರು 18 ವರ್ಷ ವಯಸ್ಸಿನಿಂದಲೇ ನಾಟಕಗಳಲ್ಲಿ ಬಣ್ಣ ಹಚ್ಚುತ್ತಾ ಬಂದಿದ್ದಾರೆ. 

ಮಹದೇವಯ್ಯ ಅವರ ತಾಯಿಯ ತಂದೆ ನಾಟಕ ಕಲಾವಿದರಾಗಿದ್ದರಂತೆ. ಅವರನ್ನು ಬಿಟ್ಟರೆ ಇವರ ಕುಟುಂಬದಲ್ಲಿ ರಂಗಭೂಮಿ, ಕಲೆಯಲ್ಲಿ ತೊಡಗಿಕೊಂಡವರು ಯಾರೂ ಇಲ್ಲ. ಆದರೂ ಪ್ರೌಢ ವಯಸ್ಸಿನಿಂದಲೇ ರಂಗಭೂಮಿ ಇವರನ್ನು ಸೆಳೆಯಿತು. 

‘ನಾನು ಪ್ರೌಢ ಶಾಲೆಗೆ ಹೋಗುತ್ತಿರುವಾಗ ನಮ್ಮ ಹಿರಿಯ ವಿದ್ಯಾರ್ಥಿಗಳು ವಿವಿಧ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಊರಲ್ಲೂ ಆಗಾಗ ನಾಟಕಗಳು ನಡೆಯುತ್ತಿದ್ದವು. ಅಲ್ಲಿನ ಕಲಾವಿದರನ್ನು ಕಂಡು, ನನಗೂ ನಾಟಕಗಳಲ್ಲಿ ಅಭಿನಯಿಸಬೇಕು ಎಂದು ಮನಸಾಯಿತು. ಆರಂಭದಲ್ಲಿ ಹಾಸ್ಯ ಪಾತ್ರಗಳಿಗಷ್ಟೇ ಸೀಮಿತವಾಗಿದ್ದೆ. ನಂತರ ಪ್ರಮುಖ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದೆ. ನಾಯಕ ಪಾತ್ರವನ್ನೂ ಮಾಡಿದ್ದೇನೆ’ ಎಂದು ತಮ್ಮ ರಂಗಭೂಮಿಯ ಪಯಣವನ್ನು ವಿವರಿಸುತ್ತಾರೆ ಮಹದೇವಯ್ಯ ಅವರು.

ಅಂಬೇಡ್ಕರ್‌ ಜನ್ಮದಿನದ ಪ್ರಯಕ್ತ ನಡೆದ ಮಹಾತ್ಯಾಗಿ ನಾಟಕದಲ್ಲಿ ಶೇಷ ಎನ್ನುವ ಪಾತ್ರಕ್ಕೆ ಬಣ್ಣ ಹಚ್ಚುವ ಮೂಲಕ ಮಹದೇವಯ್ಯ ಅವರ ರಂಗಭೂಮಿ ಪಯಣ ಆರಂಭವಾಯಿತು. ಆ ನಂತರ ನಿರಂತರವಾಗಿ ನಾಟಕಗಳಲ್ಲಿ ಅಭಿನಯಿಸುತ್ತಾ ಬಂದಿದ್ದಾರೆ. ಈಗಲೂ ನಟಿಸುತ್ತಿದ್ದಾರೆ. 

ಮಹಾತ್ಯಾಗಿ, ಕಂಬನಿ, ರತ್ನಮಾಂಗಲ್ಯ, ದೀಪಾವಳಿ ಸೇರಿದಂತೆ ಹಲವು ಸಾಮಾಜಿಕ ನಾಟಕಗಳಲ್ಲಿ ಇವರು ತಮ್ಮ ನಟನಾ ಕೌಶಲವನ್ನು ಮೆರೆದಿದ್ದಾರೆ. ರಕ್ತರಾತ್ರಿ, ತ್ರಿಜನ್ಮಮೋಕ್ಷ, ಕುರುಕ್ಷೇತ್ರ, ‘ಮೂರೂವರೆ ವಜ್ರ’, ‘ರಾಮಾಯಣ‘ ಮುಂತಾದ ಪೌರಾಣಿಕ ನಾಟಕಗಳಲ್ಲಿ ನೌಲಿಪಕ್ಕ, ನಾರದ, ಶಕುನಿ, ಬ್ರಾಹ್ಮಣ, ದಂಡಿ ಪಾತ್ರಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. 

‘ವಿರಾಟಪರ್ವ ನಾಟಕದಲ್ಲಿ ಉತ್ತರಕುಮಾರನ ಪಾತ್ರವನ್ನೂ ಮಾಡಿದ್ದೇನೆ’ ಎಂದು ಹೇಳುತ್ತಾರೆ ಮಹದೇವಯ್ಯ. 

ಹವ್ಯಾಸಿ ಕಲಾವಿದ ರಾಗಿರುವುದರಿಂದ ಜಿಲ್ಲೆಯ ಹೊರಗಡೆ ಅವರು ಹೆಚ್ಚು ಪ್ರದರ್ಶನ ನೀಡಿಲ್ಲ. ಊರಿನಲ್ಲಿ ನಡೆಯುವ ನಾಟಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ ರಂಗೋತ್ಸವ, ನಾಟಕೋತ್ಸವಗಳಲ್ಲಿ ಸ್ಥಳೀಯವಾಗಿ ಅಭಿನಯಿಸಿದ್ದಾರೆ. ರಾಮಸಮುದ್ರದಲ್ಲಿ ನಡೆಯುವ ನಾಟಕಗಳಲ್ಲಿ ಮಹದೇವಯ್ಯ ಅವರಿಗೆ ಒಂದು ಪಾತ್ರ ಖಚಿತ. ಊರಿನವರೇ ಒತ್ತಾಯ ಮಾಡಿ ಕಲಾವಿದರ ಪಟ್ಟಿಯಲ್ಲಿ ಅವರ ಹೆಸರು ಸೇರಿಸುತ್ತಾರೆ. 

‘ಮೊದಲಿಗೆ ಹೋಲಿಸಿದರೆ ಈಗ ನಾಟಕಗಳ ಪ್ರದರ್ಶನ ಕಡಿಮೆಯಾಗಿದೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ನಮ್ಮ ಜಿಲ್ಲೆಯಲ್ಲಿ ಇನ್ನೂ ಸಾಮಾಜಿಕ ಹಾಗೂ ಪೌರಾಣಿಕ ನಾಟಕಗಳು ಪ್ರದರ್ಶನ ಕಾಣುತ್ತಿವೆ. ನಾನು ಕಲಿತ ಕಲೆಯನ್ನು ನನ್ನ ಮಗನಿಗೆ ಹೇಳಿಕೊಡುತ್ತಿದ್ದೇನೆ. ಅವನೂ ಈಗ ನಾಟಕಗಳಲ್ಲಿ ಅಭಿನಯಿಸುತ್ತಿದ್ದಾನೆ’ ಎಂದು ಮಹದೇವಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಉಸಿರು ಇರುವವರೆಗೆ ನಟನೆ’

35 ವರ್ಷಗಳಿಂದಲೂ ಹವ್ಯಾಸಿ ರಂಗಭೂಮಿಯಲ್ಲಿ ತೊಡಗಿಕೊಂಡಿರುವ ಮಹದೇವಯ್ಯ ಅವರ ಬಗ್ಗೆ ಬಹಳಷ್ಟು ಮಂದಿಗೆ ಗೊತ್ತಿಲ್ಲ. ದುಡ್ಡಿಗಾಗಿ ನಾಟಕಗಳಲ್ಲಿ ಅಭಿನಯಿಸಿದವರು ಅವರಲ್ಲ. 

ನಟನೆಯ ಮೇಲಿನ ಆಸಕ್ತಿಯಿಂದ ನಟನೆಯಲ್ಲಿ ತೊಡಗಿಕೊಂಡಿದ್ದಾರೆ. ಅವರಲ್ಲಿರುವ ಕಲೆಯನ್ನು ಗುರುತಿಸಿದವರು ಕಡಿಮೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಮಹದೇವಯ್ಯ ಅವರನ್ನು ಸನ್ಮಾನಿಸಿ ಗೌರವಿಸಿದೆ. 

‘ನಾನು ಪ್ರತಿಫಲಾಪೇಕ್ಷೆ ಇಲ್ಲದೆ ನಾಟಕಗಳಲ್ಲಿ ತೊಡಗಿಕೊಂಡಿದ್ದೇನೆ. ಸನ್ಮಾನ, ಪ್ರಶಸ್ತಿಗಾಗಿ ಅರ್ಜಿ ಹಾಕಿದವನಲ್ಲ. ನನ್ನ ಉಸಿರು ಇರುವವರೆಗೆ ಅವಕಾಶ ಸಿಕ್ಕಾಗಲೆಲ್ಲ ನಟಿಸುತ್ತೇನೆ’ ಎಂದು ಮಹದೇವಯ್ಯ ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.