ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಳಂದೂರು: 40 ವರ್ಷಗಳಿಂದ ನಾದಸ್ವರದ ಲಯ ಕಟ್ಟಿಕೊಂಡ ಅಂಬಳೆ ಸಿದ್ಧಯ್ಯ

ತಾಲ್ಲೂಕಿನ ಅಂಬಳೆ ಗ್ರಾಮದ ಗುರುಸಿದ್ಧಯ್ಯ 65ರ ಹರೆಯದಲ್ಲೂ ನಾದಸ್ವರವನ್ನು ಸರಾಗವಾಗಿ ನುಡಿಸಬಲ್ಲರು
Published 7 ಜೂನ್ 2023, 0:01 IST
Last Updated 7 ಜೂನ್ 2023, 0:01 IST
ಅಕ್ಷರ ಗಾತ್ರ

-ನಾ.ಮಂಜುನಾಥಸ್ವಾಮಿ

ಯಳಂದೂರು: ಮುಂಜಾವ ಮತ್ತು ಮುಸ್ಸಂಜೆಯಲ್ಲಿ ನಾದಸ್ವರ ವಾದನ ಕಲಿಯಲು ಶಿಷ್ಯರು ಮಡಿಯುಟ್ಟು ಅಣಿಯಾಗುತ್ತಾರೆ. ಗುರು ನಾದಸ್ವರದ ಜಂಟಿ ವರಸೆಗಳನ್ನು ಸಪ್ತ ಸ್ವರಗಳನ್ನು ಸರಳವಾಗಿ ಪರಿಚಯಿಸುತ್ತಾರೆ. ಸಣ್ಣ ಸಣ್ಣ ವರಸೆಗಳನ್ನು, ವರ್ಣಂ, ಆದಿತಾಳ ಸ್ವರಗಳ ಲಯವನ್ನು ಕಟ್ಟಿಕೊಡುವ ಗುರುಸಿದ್ಧಯ್ಯ, ಯುವಕರಿಗೆ ಸಂಗೀತ ಕಲಿಸುವ ‘ಗುರು’ ಆಗಿದ್ದಾರೆ.

ತಾಲ್ಲೂಕಿನ ಅಂಬಳೆ ಗ್ರಾಮದ ಗುರುಸಿದ್ಧಯ್ಯ 65ರ ಹರೆಯದಲ್ಲೂ ನಾದಸ್ವರವನ್ನು ಸರಾಗವಾಗಿ ನುಡಿಸಬಲ್ಲರು. ಹೊರ ರಾಜ್ಯಗಳಿಗೂ ಶಿಷ್ಯ ಪಡೆ ಕಟ್ಟಿಕೊಂಡು ಸುತ್ತಬಲ್ಲರು. ವರ್ಷಪೂರ್ತಿ ಶಿಷ್ಯತ್ವ ನಂಬಿ ಬಂದವರಿಗೆ ವಾದನದ ಕೌಶಲಗಳನ್ನು ಹೇಳಿಕೊಡುತ್ತಾರೆ. 40 ವರ್ಷಗಳಿಂದ ಮಾಡುತ್ತಾ ಬಂದಿರುವ ಅವರ ಕಲಾಸೇವೆ ಈಗಲೂ ಮುಂದುವರಿದಿದೆ.

‘ಚಿಕ್ಕ ವಯಸ್ಸಿನಲ್ಲಿ ಊರು-ಕೇರಿಯಲ್ಲಿ ನಡೆಯುವ ಉತ್ಸವ, ಹಬ್ಬ, ಲಗ್ನಕ್ಕೆ ತಪ್ಪದೆ ಹಾಜರಾಗುತ್ತಿದ್ದೆವು. ಇಲ್ಲಿ ಸಪ್ತಸ್ವರ ವಾದನ ಮತ್ತು ಡೋಲಿನ ಲಯಬದ್ಧ ಶಬ್ಧ ನಮ್ಮನ್ನು ಬೇರೊಂದು ಲೋಕಕ್ಕೆ ಕರೆದುಕೊಂಡು ಹೋಗುತ್ತಿತ್ತು. ಸಂಗೀತಗಾರರು ಪ್ರಥಮವಾಗಿ ನುಡಿಸುವ ಗಣೇಶಸ್ತುತಿ ‘ಮಹಾಗಣಪತಿ’ ರಾಗ, ನಂತರದ ಶುಭ ಕಾರ್ಯಗಳಿಗೆ ಅನುಗುಣವಾಗಿ ಹೊಮ್ಮುವ ನಾದ ಲಹರಿಗಳ ವಿಸ್ಮಯ ನಮ್ಮನ್ನು ಆಕರ್ಷಿಸುತ್ತಿತ್ತು. ಬುದ್ದಿ ಬರುತ್ತಲೇ ಕಂಡಕಂಡ ವಾದ್ಯಗಾರರನ್ನ ತಮಗೂ ಕಲಿಸುವಂತೆ ಒತ್ತಾಯಿಸುತ್ತಿದ್ದೆವು. ಹೀಗೆ ನಮ್ಮ ಗ್ರಾಮಗಳಲ್ಲಿ ಸಂಗೀತದ ಬಗೆಗಿನ ಅರಿವು ವಿಸ್ತರಿಸುತ್ತ ಸಾಗಿತು’ ಎಂದು ತಾವು ಸಂಗೀತ ಕಲೆಯ ಬಗೆಯನ್ನು ವಿವರಿಸುತ್ತಾರೆ ಗುರುಸಿದ್ಧಯ್ಯ.

‘ಪ್ರತಿವರ್ಷ ಹತ್ತಾರು ಆಸಕ್ತರು ವಾದನದತ್ತ ಆಕರ್ಷಿತರಾಗುತ್ತಾರೆ. ಇವರಿಗೆ ನಸುಕಿನಿಂದಲೇ ಸರಳ ವರಸೆಗಳ ಪರಿಚಯ ಮಾಡಿಕೊಡಬೇಕು. ರಾಗಗಳ ಜ್ಞಾನ, ಕೀರ್ತನೆ ಮಹತ್ವ ತಿಳಿಸಬೇಕು. ಸಮಯ, ಸಂದರ್ಭದ ಅನುಸಾರ ನುಡಿಸಬೇಕಾದ ಹಲವು ರಾಗಗಳ ಬಗೆಗಿನ ತಿಳಿವು ಬಹು ಮುಖ್ಯ’ ಎನ್ನುತ್ತಾರೆ ಅವರು.

ಆದಿ ಅಂತ್ಯ ಇಲ್ಲ: ‘ಮುಂಜಾನೆ, ಸಂಜೆ ಸಮಯಗಳಲ್ಲಿ ಸಂಗೀತಗಾರ ನುಡಿಸಬೇಕಾದ ರಾಗಗಳನ್ನು ಪಟ್ಟಿ ಮಾಡಲಾಗಿದೆ. ಬಿಲಹರಿ, ಭೇಡ್, ಉದಯ, ಮೇಘ ಮಲ್ಲಾರ ಮತ್ತಿತರರ ರಾಗಗಳನ್ನು ಆಯಾ ಕಾಲದಲ್ಲಿ ನುಡಿಸಬೇಕು. ಬಹುತೇಕ ಕರ್ನಾಟಕ ಸಂಗೀತ ಪ್ರಕಾರದಲ್ಲಿ ರಾಗಗಳ ಲಯ ಸಿದ್ಧಿಸಿಕೊಳ್ಳಬೇಕು. ರಾಗಗಳ ಸೂಕ್ಷ್ಮ ಗುಣ ಲಕ್ಷಣಗಳನ್ನು ಪರಿಚಯಿಸಿಕೊಳ್ಳಲು ಕನಿಷ್ಠ ಎರಡು ವರ್ಷಗಳು ಬೇಕು. ಸಂಗೀತ ಕಲಿಕೆಗೆ ಆದಿ, ಅಂತ್ಯ ಇಲ್ಲ’ ಎಂದು ಸಿದ್ಧಯ್ಯ ಹೇಳಿದರು.

ಅಂಬಳೆ ಸಿದ್ದಯ್ಯ
ಅಂಬಳೆ ಸಿದ್ದಯ್ಯ

ತಮಿಳುನಾಡಿಗೂ ಪಯಣ

‘ಮದುವೆ ಜಾತ್ರೆ ಶುಭಕಾರ್ಯ ದೇವಸ್ಥಾನಗಳಲ್ಲಿ ಆಯೋಜಿಸುವ ಕಾರ್ಯಕ್ರಮಗಳಿಗೆ ಕೊಯಮತ್ತೂರು ಈರೋಡು ಸೇಲಂ ಮತ್ತಿತರ ಕಡೆ ಹೋಗುತ್ತೇವೆ. 5 ರಿಂದ 10 ಜನರ ತಂಡ ಮುಂಗಡ ಪಡೆದು ನಾದಸ್ವರ ನುಡಿಸುತ್ತೇವೆ. ಜಂಟಿ ವರಸೆ ಅಲಂಕಾರ ಸ್ವರ ಗೀತೆಗಳನ್ನು ಸಾಂಪ್ರದಾಯಿಕವಾಗಿ ಕಲಿತವರಿಗೆ ಬೇಡಿಕೆ ಹೆಚ್ಚಿದೆ. ಅಷಾಢ ಮಾಸದಲ್ಲೂ ವಾದನಕಾರರಿಗೆ ಮನ್ನಣೆ ಇದೆ’ ಎಂದು ಗುರುಸಿದ್ದಯ್ಯ ಶಿಷ್ಯ ಮಹದೇವ ಹೇಳುತ್ತಾರೆ.  ‘ಗ್ರಾಮದಲ್ಲಿ 25 ಯುವಕರು ನಾದಸ್ವರ ಕಲಿತು ಬಿಡುವಿನ ಸಮಯದಲ್ಲಿ ಕಾರ್ಯಕ್ರಮ ನೀಡುತ್ತಾರೆ. ಕರ್ನಾಟಕ ಸಂಗೀತದ ಎಲ್ಲ ರಾಗಗಳನ್ನು ಶಾಸ್ತ್ರೀಯವಾಗಿ ನುಡಿಸುವವರಿಗೆ ರೇಡಿಯೊ ಮತ್ತು ವೇದಿಕೆ ಕಾರ್ಯಕ್ರಮಗಳಲ್ಲಿ ಅವಕಾಶಗಳು ಸಿಗುತ್ತಿವೆ’ ಎಂದು ಗುರುಸಿದ್ದಯ್ಯ ಹೇಳುತ್ತಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT