ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಲುಪೇಟೆ: ಕೃಷಿ, ಹೈನುಗಾರಿಕೆ, ಶಿವಮಲ್ಲು ಯಶೋಗಾಥೆ

ಆರು ಎಕರೆ ಜಮೀನಿನಲ್ಲಿ ಕೃಷಿ, 10 ಹಸುಗಳ ಪಾಲನೆ, ಕುಟುಂಬದ ಸಹಕಾರ
Last Updated 10 ಫೆಬ್ರುವರಿ 2023, 6:20 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ರೈತರು ವಿವಿಧ ಬೆಳೆಯ ಜೊತೆಗೆ ಹೈನುಗಾರಿಕೆಯಲ್ಲಿ ತೊಡಗಿಕೊಂಡರೆ ಯಾವುದೇ ರೀತಿಯಲ್ಲಿ ನಷ್ಟ ಕಾಣುವುದಿಲ್ಲ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ ತಾಲ್ಲೂಕಿನ ಪಸಯ್ಯನಪುರ ಗ್ರಾಮದ ರೈತ ಶಿವಮಲ್ಲು ಮತ್ತು ಕುಟುಂಬದವರು.

ಸಿದ್ದಯ್ಯನಪುರದಲ್ಲಿರುವ ತಮ್ಮ ಆರು ಎಕರೆ ಜಮೀನಿನಲ್ಲಿ ಕಾಲಕ್ಕೆ ತಕ್ಕಂತೆ ವಿವಿಧ ಬೆಳೆ ಬೆಳೆಯುತ್ತ ಹಸುಗಳನ್ನು ಸಾಕಿ ಪ್ರತಿ ನಿತ್ಯ ಡೇರಿಗೆ 100 ಲೀಟರ್‌ ಹಾಲು ಹಾಕುತ್ತ ಮಾದರಿಯಾಗಿ ಗೌರವದಿಂದ ಬದುಕು ಸಾಗಿಸುತ್ತಿದೆ ಈ ಕುಟುಂಬ.

ಅರಿಸಿನ, ಬೀನ್ಸ್, ಈರುಳ್ಳಿ, ಬೀಟ್‌ರೂಟ್‌, ಮೆಣಸಿನಕಾಯಿ, ಮೆಕ್ಕೆಜೋಳ, ಹಾಲುಗೆಡ್ಡೆ, ಕೋಸು ಇತ್ಯಾದಿ ತರಕಾರಿ ಬೆಳೆಗಳನ್ನು ಬೆಳೆಯುತ್ತಾರೆ. ಎಚ್‌ಎಫ್‌ ತಳಿಯ 10 ಹಸುಗಳನ್ನು ಈ ಕುಟುಂಬ ಆರೈಕೆ ಮಾಡುತ್ತಿದ್ದು, ಅವುಗಳಿಗಾಗಿ ಮೇವಿನ ಕಡ್ಡಿ ಮತ್ತು ಮುಸುಕಿನ ಜೋಳವನ್ನು ಬೆಳೆಯುತ್ತಿದೆ.

ಕೃಷಿಯಲ್ಲಿ ಲಾಭ ನಷ್ಟ ಇದ್ದೇ ಇರುತ್ತದೆ. ಹಾಗಾಗಿ, ಆದಾಯಕ್ಕಾಗಿ ವ್ಯವಸಾಯ ಒಂದನ್ನೇ ನಂಬಬಾರದು. ಅದರ ಜೊತೆಗೆ ಹೈನುಗಾರಿಕೆ, ಕುರಿಸಾಕಾಣಿಕೆ ಮುಂತಾದ ಪೂರಕ ಚಟುವಟಿಕೆಗಳನ್ನು ಮಾಡಿದರೆ ರೈತರಿಗೆ ಆರ್ಥಿಕವಾಗಿ ದೃಢತೆ ಕೊಡುತ್ತದೆ’ ಎಂದು ಹೇಳುತ್ತಾರೆ ಶಿವಮಲ್ಲು.

‘ಜಾನುವಾರುಗಳಿಗೆ ಸಕಾಲದಲ್ಲಿ ಮೇಲು, ಲಸಿಕೆ ಮತ್ತು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿದರೆ ಯಾವುದೇ ತೊಂದರೆ ಇರುವುದಿಲ್ಲ. ಹವೆ ಬದಲಾದಾಗ ಹಸುಗಳಿಗೆ ಸಣ್ಣ ಪುಟ್ಟ ಕಾಯಿಲೆ ಕಾಣಿಸುತ್ತದೆ. ಹಂಗಳ ಗ್ರಾಮದ ಪಶುವೈದ್ಯಾಧಿಕಾರಿ ಡಾ. ಗುರುಸ್ವಾಮಿ ಅವರು ಸಕಾಲದಲ್ಲಿ ಸ್ಪಂದಿಸುವುದರಿಂದ ಯಾವುದೇ ತೊಂದರೆ ಇಲ್ಲ’ ಎಂದು ಅವರು ಹೇಳಿದರು.

ಶಿವಮಲ್ಲು ಅವರ ಕೃಷಿ ಕಾಯಕದಲ್ಲಿ ಪತ್ನಿ ಭಾಗ್ಯ, ಮಕ್ಕಳಾದ ತೇಜಸ್‌, ಚಂದನ್‌ ಅವರ ಸಹಕಾರವೂ ಇದೆ.

‘ರೈತರು ಏಕ ಬೆಳೆಗೆ ಒತ್ತು ಕೊಡಬಾರದು. ವಿವಿಧ ಬೆಳೆಗಳನ್ನು ಬೆಳೆಯುವುದರಿಂದ ಒಂದು ಬೆಳೆಯ ಬೆಲೆ ಕಡಿಮೆಯಾದರೂ ಇನ್ನೊಂದರಲ್ಲಿ ಹೆಚ್ಚು ಸಿಕ್ಕಿ ಸಮತೋಲನವಾಗುತ್ತದೆ. ಕೃಷಿಯ ಜೊತೆಗೆ ಹೆಚ್ಚುವರಿಯಾಗಿ ಹೈನುಗಾರಿಕೆ, ಕುರಿ, ಕೋಳಿ, ಮೀನು ಸಾಕಣೆ ಮಾಡಬೇಕು’ ಎಂಬುದು ರೈತರಿಗೆ ಅವರು ನೀಡುವ ಸಲಹೆ.

ದಿನಕ್ಕೆ 100 ಲೀಟರ್‌ಗಳಷ್ಟು ಹಾಲು ಪೂರೈಸುತ್ತಿರುವುದರಿಂದ ಕಲ್ಲಿಗೌಡನಹಳ್ಳಿ ಹಾಲು ಉತ್ಪಾದಕರ ಸಂಘವು ಶಿವಮಲ್ಲು ಅವರನ್ನು ಮಾದರಿ ರೈತ ಎಂದು ಗೌರವಿಸಿ ಅಭಿನಂದಿಸಿದೆ.

*
ಪತ್ನಿ ಹಾಗೂ ಇಬ್ಬರು ಮಕ್ಕಳ ಸಹಕಾರದಿಂದ ಕೃಷಿ ಹಾಗೂ ಹೈನುಗಾರಿಕೆಯನ್ನು ಮಾಡುತ್ತಾ ತಕ್ಕ ಮಟ್ಟಿಗೆ ಯಶಸ್ಸು ಗಳಿಸಿದ್ದೇನೆ
-ಶಿವಮಲ್ಲು, ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT