ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇಬು, ದಾಳಿಂಬೆ, ಬೀನ್ಸ್‌ ಅಗ್ಗ

ಈ ವಾರ ಹೂವಿನ ಬೇಡಿಕೆ, ಬೆಲೆ ಕುಸಿಯುವ ನಿರೀಕ್ಷೆ
Published 11 ಡಿಸೆಂಬರ್ 2023, 14:35 IST
Last Updated 11 ಡಿಸೆಂಬರ್ 2023, 14:35 IST
ಅಕ್ಷರ ಗಾತ್ರ

ಚಾಮರಾಜನಗರ: ನಗರದ ಮಾರುಕಟ್ಟೆಯಲ್ಲಿ ಈ ವಾರ ಕೆಲವು ಹಣ್ಣುಗಳ ಬೆಲೆಯಲ್ಲಿ ಇಳಿಕೆಯಾಗಿದೆ. ಬೀನ್ಸ್‌ ಬಿಟ್ಟು ಉಳಿದ ತರಕಾರಿಗಳ ಬೆಲೆ ಸ್ಥಿರವಾಗಿದೆ. ಕಾರ್ತಿಕ ಮಾಸದ ಕಡೆ ಸೋಮವಾರದಂದು ಹೂವುಗಳಿಗೆ ಬೇಡಿಕೆ ಇತ್ತು. ಆದರೆ, ಎರಡು ಮೂರು ದಿನಗಳಲ್ಲಿ ಹೂವುಗಳ ಧಾರಣೆ ಕುಸಿಯುವ ನಿರೀಕ್ಷೆ ಇದೆ. 

ಹಣ್ಣಿನ ಮಾರುಕಟ್ಟೆಯಲ್ಲಿ ಸೇಬು, ದಾಳಿಂಬೆ, ಮೂಸಂಬಿ, ಕಿತ್ತಳೆಗಳು ಹೆಚ್ಚಿನ ಪ್ರಮಾಣದಲ್ಲಿ ಆವಕವಾಗುತ್ತಿದ್ದು, ಸೇಬು ಮತ್ತು ದಾಳಿಂಬೆಯ ಬೆಲೆ ಕೆಜಿಗೆ ₹20ರಷ್ಟು ಇಳಿಕೆಯಾಗಿದೆ.

ಹಾಪ್‌ಕಾಮ್ಸ್‌ ಮಳಿಗೆಗಳಲ್ಲಿ ಸೇಬು ಕೆಜಿಗೆ ₹120 ಇದ್ದರೆ, ದಾಳಿಂಬೆಗೆ ₹140 ಇದೆ. ಕಳೆದ ವಾರ ಎರಡೂ ಹಣ್ಣುಗಳ ಬೆಲೆ ಕ್ರಮವಾಗಿ ₹140, ₹160 ಇತ್ತು. ಹೊರಗಡೆ ವಾಹನಗಳಲ್ಲಿ, ತಳ್ಳುಗಾಡಿಗಳಲ್ಲಿ ಮಾರಾಟ ಮಾಡುವ ವ್ಯಾಪಾರಿಗಳು ಇನ್ನೂ ₹10–₹20 ಕಡಿಮೆಗೆ ಕೊಡುತ್ತಿದ್ದಾರೆ. 

ಮೂಸಂಬಿ ಹಾಗೂ ಕಿತ್ತಳೆಗಳಿಗೂ ಬೇಡಿಕೆ ಇದ್ದು, ಹಾಪ್‌ಕಾಮ್ಸ್‌ನಲ್ಲಿ ₹70ರಿಂದ ₹80ರವರೆಗೆ ಇದೆ. ತಳ್ಳುಗಾಡಿಗಳಲ್ಲಿ ಮತ್ತು ವಾಹನಗಳಲ್ಲಿ ರಾಶಿ ಹಾಕಿ ಮಾರಾಟ ಮಾಡುವವರು ಕಿತ್ತಳೆಗೆ ಕೆಜಿಗೆ ₹50–₹60 ಹೇಳುತ್ತಿದ್ದಾರೆ. 

‘ಸೇಬಿನ ಸೀಸನ್‌ ಆರಂಭವಾಗಿದೆ. ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿರುವುದರಿಂದ ಬೇಡಿಕೆ ಕಡಿಮೆಯಾಗಿದೆ. ಹೀಗಾಗಿ ಬೆಲೆಯಲ್ಲೂ ಇಳಿಕೆಯಾಗಿದೆ’ ಎಂದು ಹಾಪ್‌ಕಾಮ್ಸ್‌ ವ್ಯಾಪಾರಿ ಮಧು ಹೇಳಿದರು. 

ಉಳಿದಂತೆ ಕಪ್ಪು ಮತ್ತು ಹಸಿರು ದ್ರಾಕ್ಷಿ ಲಭ್ಯವಿದ್ದು ಬೆಲೆ ₹120, ₹160 ಇದೆ. ಏಲಕ್ಕಿ ಬಾಳೆಗೆ ಬೇಡಿಕೆ ಮುಂದುವರಿದಿದ್ದು, ಬೆಲೆ ಕೆಜಿಎಗೆ ₹70 ಇದೆ. ಪಚ್ಚಬಾಳೆಗೆ ₹40 ಇದೆ. 

ಬೀನ್ಸ್‌, ಹಸಿಮೆಣಸು ಅಗ್ಗ: ತರಕಾರಿಗಳ ಪೈಕಿ ಈ ವಾರ ಬೀನ್ಸ್‌ ಹಾಗೂ ಹಸಿಮೆಣಸಿನಕಾಯಿ ಬೆಲೆಯಲ್ಲಿ ₹10 ಇಳಿಕೆಯಾಗಿದೆ. ಹಾಪ್‌ಕಾಮ್ಸ್‌ನಲ್ಲಿ ಕೆಜಿಗೆ ₹30 ಇದೆ. ಹೋದ ವಾರ ಎರಡಕ್ಕೂ ₹40 ಇತ್ತು. 

ಬೆಳ್ಳುಳ್ಳಿಯ ದುಬಾರಿ ದರ ಈ ವಾರವೂ ಮುಂದುವರಿದಿದೆ. ಸಣ್ಣ ಗಾತ್ರದ ಬೆಳ್ಳುಳ್ಳಿಗೆ ಕೆಜಿಗೆ ₹240 ಇದೆ. ದೊಡ್ಡ ಗಾತ್ರಕ್ಕೆ ₹260–₹260 ಹೇಳುತ್ತಿದ್ದಾರೆ. 

ಉಳಿದ ಬಹುತೇಕ ತರಕಾರಿಗಳ ಬೆಲೆ ವ್ಯತ್ಯಾಸವಾಗಿಲ್ಲ. ಟೊಮೆಟೊಕ್ಕೆ ₹40 ನೀಡಬೇಕು. ಕ್ಯಾರೆಟ್‌, ಆಲೂಗಡ್ಡೆ, ಬೀಟ್‌ರೂಟ್‌ ಮೂಲಂಗಿಗೆ ₹30 ಇದೆ. ಹಲವು ವಾರಗಳಿಂದ ಈರುಳ್ಳಿ ಬೆಲೆ ಸ್ಥಿರವಾಗಿದೆ (₹60). 

ಮುಗಿದ ಕಾರ್ತಿಕ ಮಾಸ; ಹೂವಿಗೆ ಬೇಡಿಕೆ ಇಳಿಕೆ ಕಾರ್ತಿಕ ಮಾಸ ಶುಭ ಮುಹೂರ್ತಗಳು ಮುಗಿಯುತ್ತಿದ್ದಂತೆಯೇ ಹೂವುಗಳಿಗೆ ಬೇಡಿಕೆ ಕಡಿಮೆಯಾಗಲು ಆರಂಭಿಸಿದೆ.  ಕಡೆ ಕಾರ್ತಿಕ ಮಾಸದ ಕಾರಣಕ್ಕೆ ಶನಿವಾರ ಮತ್ತು ಭಾನುವಾರ ಹೂವುಗಳಿಗೆ ಬೇಡಿಕೆಯ ಜೊತೆಗೆ ಬೆಲೆಯೂ ಹೆಚ್ಚಿತ್ತು. ಸೋಮವಾರ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. ಇನ್ನೆರಡು ದಿನ ಕಳೆದರೆ ಮತ್ತಷ್ಟು ಇಳಿಕೆಯಾಗಲಿದೆ ಎಂದು ಹೇಳುತ್ತಾರೆ ವ್ಯಾಪಾರಿಗಳು.  ‘ಕಾರ್ತಿಕ ಮಾಸದಲ್ಲಿ ಶುಭ ಮುಹೂರ್ತಗಳು ಹೆಚ್ಚಿದ್ದರಿಂದ ಮದುವೆ ಗೃಹ ಪ್ರವೇಶದಂತಹ ಶುಭ ಸಮಾರಂಭಗಳು ನಡೆಯುತ್ತಿದ್ದವು. ಇನ್ನೀಗ ಶುಭ ಮುಹೂರ್ತಗಳು ಕಡಿಮೆಯಾಗಲಿವೆ. ಹಾಗಾಗಿ ಹೂವುಗಳ ಬೇಡಿಕೆ ಕುಸಿಯಲಿದೆ’ ಎಂದು ನಗರದ ಚೆನ್ನಿಪುರಮೋಳೆಯ ಬಿಡಿ ಹೂವಿನ ವ್ಯಾಪಾರಿ ರವಿ ‘ಪ್ರಜಾವಾಣಿ’ಗೆ ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT