ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅವರೆಕಾಯಿ, ತೊಗರಿಕಾಯಿ ಜುಗಲ್ಬಂದಿ!

ಇಳಿದ ಟೊಮೆಟೊ ಬೆಲೆ,. ಸೇಬು, ದಾಳಿಂಬೆ ಮತ್ತೆ ತುಟ್ಟಿ
Published 20 ಡಿಸೆಂಬರ್ 2023, 15:54 IST
Last Updated 20 ಡಿಸೆಂಬರ್ 2023, 15:54 IST
ಅಕ್ಷರ ಗಾತ್ರ

ಚಾಮರಾಜನಗರ: ತರಕಾರಿ ಮಾರುಕಟ್ಟೆಯಲ್ಲಿ ಈಗ ಸೋನೆ ಅವರೆಕಾಯಿ, ತೊಗರಿಕಾಯಿಗಳ ಸುಗ್ಗಿ. 

ಅವರೆ –ತೊಗರಿ ಸೀಸನ್‌ ಚಳಿಗಾಲದಲ್ಲಿ ಆರಂಭವಾಗುತ್ತದೆ. ನವೆಂಬರ್‌ ಕೊನೆ, ಡಿಸೆಂಬರ್‌ ಹೊತ್ತಿಗೆ ಮಾರುಕಟ್ಟೆಗೆ ಸಾಕಷ್ಟು ಪ್ರಮಾಣದಲ್ಲಿ ಆವಕವಾಗುತ್ತದೆ. ಅವರೆಕಾಯಿ ಈಗ ಬಹುತೇಕ ವರ್ಷ ಪೂರ್ತಿ ಸಿಗುತ್ತದೆಯಾದರೂ, ಚಳಿಗಾಲದ ಸೋನೆ ಅವರೆಗೆ ಬೇಡಿಕೆ ಹೆಚ್ಚು. ಜಿಲ್ಲೆಯ ಮಳಿಗೆಗಳಿಗೆ ಸ್ಥಳೀಯ ರೈತರೇ ಎರಡನ್ನೂ ಪೂರೈಸುತ್ತಾರೆ. 

ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರಲ್ಲಿ ಈಗ ಅವರೆಕಾಯಿ, ತೊಗರಿಕಾಯಿಗಳ ರಾಶಿಯೇ ಕಂಡು ಬರುತ್ತಿದೆ. ತಳ್ಳುಗಾಡಿ ವ್ಯಾಪಾರಿಗಳು, ಬೀದಿ ಬದಿ ವ್ಯಾಪಾರಿಗಳು ಎರಡನ್ನೂ ರಾಶಿ ಹಾಕಿ ಮಾರಾಟ ಮಾಡುತ್ತಿದ್ದಾರೆ. 

ತೊಗರಿಕಾಯಿಗೆ ಕೆಜಿಗೆ ₹60 ಇದ್ದರೆ, ಅವರೆಕಾಯಿಗೆ ₹60ರಿಂದ ₹80ರವರೆಗೂ ಹೇಳುತ್ತಿದ್ದಾರೆ. ಹಾಪ್‌ಕಾಮ್ಸ್‌ನಲ್ಲಿ ಅವರೆಗೆ ₹70 ಇದೆ. 

ಎರಡಕ್ಕೂ ಗ್ರಾಹಕರಿಂದ ಬೇಡಿಕೆ ಇದೆ ಎಂದು ಹೇಳುತ್ತಾರೆ ವ್ಯಾಪಾರಿಗಳು. 

ಟೊಮೆಟೊ ಇಳಿಕೆ: ಇತರ ತರಕಾರಿಗಳ ಪೈಕಿ ಟೊಮೆಟೊ ಬೆಲೆ ಈ ವಾರ ₹10ರಷ್ಟು ಇಳಿದಿದೆ. ಹೋದವಾರ ₹40 ಇತ್ತು. ಸೋಮವಾರ ಹಾಪ್‌ಕಾಮ್ಸ್‌ನಲ್ಲಿ ಕೆಜಿಗೆ ₹30 ಇತ್ತು. 

ಬೀನ್ಸ್‌ ಹಾಗೂ ಹಸಿಮೆಣಸಿನಕಾಯಿ, ಸೌತೆಕಾಯಿಗಳ ಬೆಲೆಯಲ್ಲಿ ₹10 ಜಾಸ್ತಿಯಾಗಿದೆ. ಕಳೆದ ವಾರ ₹30 ಇದ್ದಿದ್ದು, ಈ ವಾರ ₹40ಕ್ಕೆ ಏರಿದೆ. 

ಉಳಿದ ತರಕಾರಿಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ. ಬೆಳ್ಳುಳ್ಳಿ ದುಬಾರಿಯಾಗಿದ್ದರೂ ಧಾರಣೆ ಸ್ಥಿರವಾಗಿದೆ (₹240). ಕ್ಯಾರೆಟ್‌, ಮೂಲಂಗಿ, ಬೀಟ್‌ರೂಟ್‌ (₹30), ಹಾಗಲಕಾಯಿ, ದಪ್ಪಮೆಣಸಿನಕಾಯಿ (₹60), ಗೆಡ್ಡೆಕೋಸು (₹40), ಶುಂಠಿ (₹120) ಹಿಂದಿನ ವಾರದ ಬೆಲೆಯಲ್ಲೇ ಸಿಗುತ್ತಿದೆ. 

ಹೂವಿನ ಧಾರಣೆ ಯಥಾಸ್ಥಿತಿ: ಚಂಪಾ ಷಷ್ಠಿಗೂ ಪೂರ್ವಭಾವಿಯಾಗಿ ಶನಿವಾರ ಮತ್ತು ಭಾನುವಾರ ಹೂವುಗಳ ಧಾರಣೆ ಹೆಚ್ಚಳವಾಗಿತ್ತು. ಸೋಮವಾರ ಬೆಲೆಯಲ್ಲಿ ಇಳಿಕೆಯಾಗಿದೆ ಎಂದು ಹೇಳುತ್ತಾರೆ ಬಿಡಿ ಹೂವಿನ ವ್ಯಾಪಾರಿಗಳು.

‘ಮಾರುಕಟ್ಟೆಗೆ ಮಲ್ಲಿಗೆ ಮತ್ತು ಮರ್ಲೆ ಹೂಗಳು ಬರುತ್ತಿಲ್ಲ. ಚೆಂಡು ಹೂವು ಬಿಟ್ಟರೆ ಉಳಿದ ಹೂವುಗಳ ಬೆಲೆ ಕಳೆದವಾರದಷ್ಟೇ ಇದೆ’ ಎಂದು ನಗರದ ಚೆನ್ನಿಪುರಮೋಳೆಯ ಬಿಡಿ ಹೂವಿನ ವ್ಯಾಪಾರಿ ರವಿ ‘ಪ್ರಜಾವಾಣಿ’ಗೆ ತಿಳಿಸಿದರು. 

ಮಾಂಸ ಮಾರುಕಟ್ಟೆಯಲ್ಲಿ ಚಿಕನ್‌, ಮಟನ್‌ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ.

ಸೇಬು ದಾಳಿಂಬೆ ತುಟ್ಟಿ ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಹಾಪ್‌ಕಾಮ್ಸ್‌ನಲ್ಲಿ ಸೇಬು ಮತ್ತು ದಾಳಿಂಬೆ ಬೆಲೆ ಕೆಜಿಗೆ ತಲಾ ₹20 ಜಾಸ್ತಿಯಾಗಿದೆ.  ₹120 ಇದ್ದ ಸೇಬಿನ ಬೆಲೆ ₹140ಕ್ಕೆ ತಲುಪಿದೆ. ಅದೇ ರೀತಿ ₹160 ಇದ್ದ ದಾಳಿಂಬೆ ಧಾರಣೆ ₹180ಕ್ಕೆ ಏರಿದೆ.  ಕಪ್ಪು ದ್ರಾಕ್ಷಿಯ ಬೆಲೆ ₹10 ಜಾಸ್ತಿಯಾಗಿ ₹130ಕ್ಕೆ ತಲುಪಿದೆ. ಮೂಸಂಬಿ ಕಿತ್ತಳೆ (₹80) ವ್ಯತ್ಯಾಸವಾಗಿಲ್ಲ. ಹೊರಗಡೆ ಕಿತ್ತಳೆ ಇನ್ನೂ ಸ್ವಲ್ಪ ಕಡಿಮೆಗೆ ಸಿಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT