ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಳಂದೂರು |ರೋಹಿಣಿ ಮಳೆಗೆ ಮೈದುಂಬಿದ ಹಸಿರು; ಕಾಡಿಗೆ ವೈಭವ ತುಂಬಿದ ಪೂರ್ವ ಮುಂಗಾರು

Published 2 ಜೂನ್ 2024, 5:47 IST
Last Updated 2 ಜೂನ್ 2024, 5:47 IST
ಅಕ್ಷರ ಗಾತ್ರ

ಯಳಂದೂರು: ‘ರೋಹಿಣಿ ಸುರಿದರೆ ಓಣಿಯಲ್ಲ ಕೆಸರು’ ಎಂಬ ಗಾದೆ ಮಾತು ಇದೆ. ಈ ಮಳೆ ನಕ್ಷತ್ರ ಒಲಿದರೆ ರೈತರ ಬಾಳು ಬಂಗಾರ ಎಂದೂ ಹೇಳಲಾಗುತ್ತದೆ.  ಕೃಷಿ ಚಟುವಟಿಕೆಗಳು ಬಿರುಸುಗೊಂಡರೆ, ನಾಡು ಮತ್ತು ಕಾಡಿನ ಪರಿಸರದಲ್ಲೂ ತಂಪಿನ ಅನುಭವ ತುಂಬಿತ್ತಿದೆ. ಎರಡು ವಾರಗಳ ಹಿಂದೆ ಒಣಗಿ ನಿಂತಿದ್ದ ವನ ಧಾಮದಲ್ಲೂ ಹಸಿರು ವನಸಿರಿ ನಳನಳಿಸಿದೆ. ಮನೆ ಮುಂದಿನ ಅಲಂಕಾರಿಕ ಸಸ್ಯಗಳಲ್ಲೂ ಬಣ್ಣದ ಹೂ ಗಳು ಮುಂಗಾರು ಮಳೆರಾಯನ ಸ್ವಾಗತಿಸಲು ನೆಲೆ ನಿಂತಿವೆ.

ತಾಲ್ಲೂಕಿನಲ್ಲಿ ಹಲವು ದಿನಗಳಿಂದ ಸುರಿಯುತ್ತಿರುವ ವರ್ಷಧಾರೆಗೆ ಹಸಿರ ಮೇವು ಚಿಗುರೊಡೆದಿದೆ. ಗಿಡ, ಮರ, ಬಳ್ಳಿಗಳು ಕಸುವು ತುಂಬಿಕೊಳ್ಳುತ್ತಿವೆ. ಕಾನನದ ನಿಸರ್ಗದಲ್ಲೂ ತರುಲತೆಗೆ ಜೀವ ತುಂಬುತ್ತಿದೆ. ಜೀವಾಮೃತ ಅರಸಿ ಅಲೆಯುತ್ತಿದ್ದ ಆನೆ, ಕಾಡೆಮ್ಮೆ, ಜಿಂಕೆ, ಕಾಡು ಕುರಿಗಳಿಗೆ ಸಮೃದ್ಧ ಮೇವು. ನೀರು ಸಿಕ್ಕರೆ, ಸಸ್ಯ ಶಾಮಲೆ ಹಸಿರುಟ್ಟು ಜನ ಸಮೂಹವನ್ನು ಚುಂಬಕದಂತೆ ಸೆಳೆಯುತ್ತಿದೆ.

‘ಎರಡು ವರ್ಷಗಳಿಂದ ಮಳೆ ವೈಭವ ಕಳೆಗಟ್ಟಿರಲಿಲ್ಲ. ನೀರಿನ ಒರತೆಗಳು ಭಣಗುಟ್ಟುತ್ತಿದ್ದವು. ಇಳೆ ಕಾದು ಹವೆ ಬಿಸಿಯಾಗಿ ಕಾಡಿತ್ತು. ಆದರೆ, ಎರಡು ವಾರಗಳಿಂದ ಈಚೆಗೆ ವರುಣನ ಕಣ್ಣು ಬಿದ್ದಿದೆ. ಬರದಿಂದ ತಲ್ಲಣಿಸಿದ ಹೊಲ, ಗದ್ದೆಗಳು ತಂಪಾಗುತ್ತಿವೆ. ಮನೆ ಮುಂದೆ ಒಣಗಿ ನಿಂತಿದ್ದ ಗಿಡಗಳಲ್ಲಿ ಹತ್ತಾರು ಲತೆಗಳು ಕಾಣತೊಡಗಿವೆ. ಹಸಿರು ಮತ್ತು ಪುಷ್ಪಲೋಕ ಮತ್ತೆ ಜೀವ ಲೋಕವನ್ನು ಚಂದಗಾಣಿಸಿದೆ. ಹಕ್ಕಿ, ಕಪ್ಪೆ, ಜೀರುಂಡೆ ಹಾಗೂ ಜಲಚರ ಜೀವಿಗಳ ಸದ್ದು ವಸುಧೆಯ ಲಾಲಿ ಹಾಡಾಗಿ ಕಾಡಿದೆ’ ಎಂದು ಬಿಆರ್‌ಟಿಯ ಏಟ್ರೀ ವಿಜ್ಞಾನಿ ಸಿದ್ದಪ್ಪಶೆಟ್ಟಿ ಹೇಳಿದರು.

ಹೊನ್ನೆ, ಅರಳೆ, ದೊಳ್ಳಿ, ನೇರಳೆ, ಕರ್ವಾಡಿ, ಬೀಟೆ, ಕೆಸಿಲು, ಕೆಂಡೆ, ಸಂಪಿಗೆ, ಬೂರಗ, ಕಾಂಧೂಪ ಬಿಳಿಗಿರಿ ಬನದಲ್ಲಿ ಗಮನಾರ್ಹವಾಗಿ ಕಂಡುಬರುತ್ತದೆ. ಮೇ-ಜೂನ್ ನಡುವೆ ಹೂ ಬಿಟ್ಟು ಜೇನು, ಕೀಟ, ಚಿಟ್ಟೆಗಳನ್ನು ಆಕರ್ಷಿಸುತ್ತವೆ. ಇದರಿಂದ ಕಾನನದಲ್ಲಿ ಪರಾಗಸ್ಪರ್ಶ ನಡೆದು ಕಿರು ಉತ್ಪನ್ನಗಳು ಕೈಸೇರುತ್ತದೆ. ಒಣಗಿದ ಕಾಫಿ, ಮೆಣಸು ಬಳ್ಳಿಗಳಿಗೂ ಮಳೆ ಜೀವ ನೀಡಿದೆ. ಜೂನ್ ಆರಂಭದಲ್ಲಿ ಮುಂಗಾರು ಋತು ಬರಲೇಬೇಕು. ಮೇಘಮಾಲೆ ಮಳೆ ಸುರಿಸಬೇಕು. ಇದರಿಂದ ಕಾಡಿನ ಪ್ರಕೃತಿ ಪ್ರಾಣಿ ಪ್ರಪಂಚಕ್ಕೆ ಅಗತ್ಯ ಮೇವು, ಜೀವವಾಯು ಜೀವ ಜಲ ವರ್ಷಪೂರ್ತಿ ಒರತೆಯಾಗಿ ಹರಿಯುತ್ತದೆ.

ಪಟ್ಟಣಕ್ಕೆ ಲಿಲ್ಲಿ ಸೊಬಗು: ಮಳೆಗಾಲದ ವಿಶೇಷ ಎಂದರೆ ಭೂರಮೆಗೆ ಲಲ್ಲಿ ಲತೆಗಳು ಸಿಂಗಾರ ಮೂಡಿಸುತ್ತವೆ. ಹೊಲ, ಗದ್ದೆ, ತಿಟ್ಟು, ಗುಟ್ಟ ಖಾಲಿ ಜಾಗದಲ್ಲಿ ಇಣುಕುತ್ತಿದ್ದ ಇವು ಈಗ ಪಟ್ಟಣದ ಮನೆಗಳ ಅಂದವನ್ನು ಹೆಚ್ಚಿಸಿವೆ.

‘ವರ್ಷದ ಹಿಂದೆ ನೆಟ್ಟಿದ್ದ ಹಳದಿ, ತಿಳಿ ಕೆಂಪು ಲಿಲ್ಲಿಗಳು ಯಥೇಚ್ಚವಾಗಿ ಅರಳಿ ಮಳೆಗಾಲ ಮುಗಿಯುವ ತನಕ ರಾರಾಜಿಸುತ್ತದೆ. ಕಾಶ್ಮೀರದ ಟ್ಯೂಲಿಪ್ ಲತೆಗಳಂತೆ ಮನೆ ಮುಂದೆ ಇವು ಶೋಭಿಸುತ್ತವೆ’ ಎಂದು ಪಟ್ಟಣದ ನಿವಾಸಿ ಶೋಭಾ ಸುರೇಶ್ ಹೇಳಿದರು. 

ಸುರಿದ ಮಳೆಗೆ ಅರಳಿ ನಿಂತ ವಿವಿಧ ಜಾತಿಯ ಹೂಗಳು
ಸುರಿದ ಮಳೆಗೆ ಅರಳಿ ನಿಂತ ವಿವಿಧ ಜಾತಿಯ ಹೂಗಳು

ವೃಕ್ಷಗಳಲ್ಲೂ ‘ಪುಷ್ಪ’

‘ಈ ವರ್ಷ ಮೇ ಮಳೆ ನಿರೀಕ್ಷೆಗಿಂತ ಹೆಚ್ಚು ಸುರಿದಿದೆ. ವೃಕ್ಷಗಳಲ್ಲೂ ಅಂದ ಚಂದದ ಪುಷ್ಪ ಪ್ರಪಂಚ ಕಣ್ಣು ಬಿಟ್ಟಿದೆ. ಮೋಡಗಳ ಚೆಲ್ಲಾಟ ತಂಪು ಹವೆ ಒಣಗಿದ ಮರಗಳಲ್ಲೂ ಜೀವಂತಿಕೆ ತುಂಬಿದರೆ ದುಂಬಿ ಜೇನು ಹಕ್ಕಿ ಕೀಟಗಳಿಗೂ ಮಕರಂದ ಪೂರೈಸುತ್ತವೆ. ಜೊತೆಗೆ ರಸ್ತೆ ತುಂಬ ನಿಸರ್ಗ ರಮ್ಯ ಚಲುವನ್ನು ಕಟ್ಟಿಕೊಟ್ಟಿದೆ. ಮಂಜು-ಮೇಘಗಳ ಸುಂದರ ಸಂಚಾರ ಮನಸ್ಸಿಗೆ ಪ್ರಫುಲ್ಲತೆ ತುಂಬುತ್ತದೆ’ ಎಂದು ಬಿಆರ್‌ಟಿ ಮೂಲಿಕೆ ತಜ್ಞ ಬೊಮ್ಮಯ್ಯ  ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT