ಪುಂಡರ ಹಾವಳಿಗೆ ಪೊಲೀಸ್ ಕಡಿವಾಣ

ಕೊಳ್ಳೇಗಾಲ: ನಗರದ ವಿವಿಧ ಶಾಲಾ ಕಾಲೇಜುಗಳ ಮುಂದೆ ಅಡ್ಡಾಡುವ ಪುಂಡರು ಹಾಗೂ ತ್ರಿಬಲ್ ರೈಡಿಂಗ್ ಮಾಡಿ ಸಂಚಾರ ನಿಯಮ ಉಲ್ಲಂಘಿಸುವರ ವಿರುದ್ಧ ಪೊಲೀಸರು ಗುರುವಾರ ಕಾರ್ಯಾಚರಣೆ ಆರಂಭಿಸಿದ್ದಾರೆ.
ಸಂಚಾರ ನಿಯಮ ಉಲ್ಲಂಘಿಸಿದ ಹಲವು ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಪೊಲೀಸರು ಚುರುಕು ಮುಟ್ಟಿಸಿದ್ದಾರೆ.
‘ಪ್ರಜಾವಾಣಿ’ಯ ಬುಧವಾರದ ಸಂಚಿಕೆಯಲ್ಲಿ ‘ಪುಂಡರ ಹಾವಳಿ, ನಿಯಮ ಉಲ್ಲಂಘನೆ’ ಎಂಬ ಶೀರ್ಷಿಕೆ ಅಡಿಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ಇದರಿಂದ ಎಚ್ಚೆತ್ತಿರುವ ಪೊಲೀಸರು ಗುರುವಾರ ಬೆಳಿಗ್ಗೆ ಕಾಲೇಜುಗಳ ಮುಂದೆ ವಾಹನ ತಪಾಸಣೆ ನಡೆಸಿದರು.
ಪಟ್ಟಣ ಠಾಣೆ ಸಬ್ ಇನ್‌ಸ್ಪೆಕ್ಟರ್ ಚೇತನ್ ಹಾಗೂ ಇತರ ಸಿಬ್ಬಂದಿ ನಗರದ ಮಾನಸ ಕಾಲೇಜು, ವಾಸವಿ ಕಾಲೇಜು, ಲಯನ್ಸ್ ಕಾಲೇಜುಗಳ ಮುಂದೆ ಕಾರ್ಯಾಚರಣೆ ನಡೆಸಿದ್ದಾರೆ. ತ್ರಿಬಲ್ ರೈಡ್, ವಾಹನ ಪರವಾನಗಿ ಮತ್ತು ವಿಮೆ ಇಲ್ಲದ 77 ಬೈಕ್‍ಗಳಿಗೆ ದಂಡ ವಿಧಿಸಿದ್ದಾರೆ. ಕೆಲವು ವಿದ್ಯಾರ್ಥಿಗಳಿಗೆ ರಸ್ತೆಯಲ್ಲೆಯೇ ಕಾನೂನು ಪಾಠವನ್ನು ಸಹ ತಿಳಿಸಿದ್ದಾರೆ.
‘18 ವರ್ಷ ಒಳಪಟ್ಟ ವಿದ್ಯಾರ್ಥಿಗಳು ಕಾಲೇಜಿಗೆ ಬೈಕ್ ತರುವುದು ಬೇಡ. ಕಾನೂನು ಮೀರಿ ನಡೆದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇನೆ. ಯಾವ ಪ್ರಭಾವಿಗಳ ಕೈಯಲ್ಲಿ ಪೋನ್ ಮಾಡಿಸಿದರೂ ತಲೆಕೆಡಿಸಿಕೊಳ್ಳುವುದಿಲ್ಲ’ ಸಬ್ ಇನ್‌ಸ್ಪೆಕ್ಟರ್ ಚೇತನ್ ವಿದ್ಯಾರ್ಥಿಗಳನ್ನು ಎಚ್ಚರಿಸಿದರು.
‘ನಗರದ ಪ್ರತಿಯೊಂದು ವೃತ್ತದಲ್ಲೂ, ವಿಶೇಷವಾಗಿ ಶಾಲಾ ಕಾಲೇಜು ಬಿಡುವಾಗ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗುವುದು’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.