ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೀಕ್ಷೆಯನ್ನು ಹಬ್ಬದಂತೆ ಸಂಭ್ರಮಿಸಿ

‘ಪ್ರಜಾವಾಣಿ’ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಡಿಡಿಪಿಐ ಎಸ್‌.ಟಿ.ಜವರೇಗೌಡ ಸಲಹೆ, ಕರೆ ಮಾಡಿ ಸಮಸ್ಯೆ ಹೇಳಿಕೊಂಡ ಪೋಷಕರು
Last Updated 25 ಫೆಬ್ರುವರಿ 2020, 10:52 IST
ಅಕ್ಷರ ಗಾತ್ರ

ಚಾಮರಾಜನಗರ: ’ಪರೀಕ್ಷೆಯ ಸಂದರ್ಭದಲ್ಲಿ ಓದು ಓದು ಎಂದು ಮಕ್ಕಳ ಒತ್ತಡ ಹಾಕಬೇಡಿ. ಮಕ್ಕಳು ಪರೀಕ್ಷೆಯನ್ನೂ ಒಂದು ಸಂಭ್ರಮದಂತೆ ಸ್ವೀಕಾರ ಮಾಡುವ ವಾತಾವರಣವನ್ನು ಮನೆಯಲ್ಲಿ ಸೃಷ್ಟಿಸಿ’

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಸ್‌.ಟಿ.ಜವರೇಗೌಡ ಅವರು ಎಸ್ಸೆಸ್ಸೆಲ್ಸಿ ಮಕ್ಕಳ ಪೋಷಕರಿಗೆ ನೀಡಿದ ಸಲಹೆ ಇದು.

‘ಪ್ರಜಾವಾಣಿ’ಯ ಜಿಲ್ಲಾ ಕಚೇರಿಯಲ್ಲಿ ಸೋಮವಾರ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧತೆಗೆ ಸಂಬಂಧಿಸಿದಂತೆ ನಡೆದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಪೋಷಕರು ಕೇಳಿದ ಪ್ರಶ್ನೆಗೆ ಹಾಗೂ ವ್ಯಕ್ತಪಡಿಸಿದ ಆತಂಕಗಳಿಗೆ ಜವರೇಗೌಡ ಅವರು ಸಾವಧಾನವಾಗಿ ಉತ್ತರಿಸಿದರು.

ಒಂದು ಗಂಟೆ ಅವಧಿಯ ಕಾರ್ಯಕ್ರಮಕ್ಕೆ ಬಹುತೇಕ ಕರೆಗಳನ್ನು ಪೋಷಕರೇ ಮಾಡಿದ್ದರು. ‘ಮಕ್ಕಳು ಚೆನ್ನಾಗಿ ಓದುತ್ತಿದ್ದಾರೆ, ಪರೀಕ್ಷೆಗೆ ಸಿದ್ಧತೆ ಮಾಡುತ್ತಿದ್ದಾರೆ. ಆದರೆ ಪರೀಕ್ಷೆಯಲ್ಲಿ ಬರೆಯುವುದಕ್ಕೆ ಅವರಿಗೆ ಆಗುತ್ತಿಲ್ಲ. ಇದಕ್ಕೆ ಏನು ಮಾಡಬೇಕು’ ಎಂಬುದು ಬಹುತೇಕರ ಪ್ರಶ್ನೆಯಾಗಿತ್ತು.

ಕೊಳ್ಳೇಗಾಲದಿಂದ ಕರೆ ಮಾಡಿದ್ದ ಚಂದ್ರಕಲಾ ಅವರ ಮಗಳು ಅಲ್ಲಿನ ಖಾಸಗಿ ಶಾಲೆಯೊಂದರಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿದ್ದಾಳೆ. ಅವರ ಮೊದಲ ಪ್ರಶ್ನೆ ಇದೇ ಆಗಿತ್ತು. ಕೊಳ್ಳೇಗಾಲದಿಂದ ಕರೆ ಮಾಡಿದ್ದ ರವಿ, ಸುಮತಿ ಸೇರಿದಂತೆ ಇನ್ನೂ ಕೆಲವರು ಕೂಡ ಇದನ್ನೇ ಕೇಳಿದರು.

ಮೂವರ ಪ್ರಶ್ನೆಗಳಿಗೂ ಒಂದೇ ಉತ್ತರ ನೀಡಿದ ಜವರೇಗೌಡ ಅವರು, ‘ಈ ಸಮಯದಲ್ಲಿ ಪೋಷಕರು ಮಕ್ಕಳ ಮೇಲೆ ಹೆಚ್ಚು ಒತ್ತಡ ಹಾಕಬೇಡಿ. ಶಾಲೆಗಳಲ್ಲಿ ಬೋಧಕರು ಕೂಡ ಮಕ್ಕಳನ್ನು ತಯಾರು ಮಾಡುತ್ತಿದ್ದಾರೆ. ಓದುವ ಸಮಯದಲ್ಲಿ ಮಕ್ಕಳು ಏಕಾಗ್ರತೆಯಿಂದ ಇರುವಂತೆ ನೋಡಿಕೊಳ್ಳಿ. ಆರೋಗ್ಯ ಕಾಪಾಡಲು ಕಾಳಜಿ ವಹಿಸಿ. ಪರೀಕ್ಷೆ ಮುಗಿಯುವರೆಗೂ ಸಾತ್ವಿಕ ಆಹಾರವನ್ನೇ ಕೊಡಿ’ ಎಂದು ಸಲಹೆ ನೀಡಿದರು.

‘ಬೆಳಿಗ್ಗೆ ನಾಲ್ಕು ಇಲ್ಲ ಐದು ಗಂಟೆಗೆ ಮಕ್ಕಳನ್ನು ನಿದ್ದೆಯಿಂದ ಏಳಿಸಿ. ಯೋಗ, ಪ್ರಾಣಾಯಾಮವನ್ನು ಮಾಡುವುದಕ್ಕೆ ಹೇಳಿ. ಅಗತ್ಯ ಬಿದ್ದರೆ ಅವರಿಗೆ ಕೌನ್ಸೆಲಿಂಗ್‌ ಮಾಡಿ. ಅವರಲ್ಲಿರುವ ಭಯವನ್ನು ಹೋಗಲಾಡಿಸಿ, ಧೈರ್ಯ ತುಂಬಿ. ಪರೀಕ್ಷೆ ಬಗ್ಗೆ ಆತಂಕ ಅಥವಾ ಗಾಬರಿಗೆ ಒಳಗಾಗದಂತೆ ನೋಡಿಕೊಳ್ಳಿ. ಒತ್ತಡ ಅನುಭವಿಸಿದರೆ ಗೊತ್ತಿರುವುದನ್ನೂ ಮರೆತು ಬಿಡುವ ಸಾಧ್ಯತೆ ಇರುತ್ತದೆ. ಯಾವಾಗ ಯಾವುದನ್ನು ಓದಬೇಕು ಎಂಬ ದಿನಚರಿಯನ್ನು ಎಲ್ಲ ಮಕ್ಕಳು ಸಿದ್ಧಪಡಿಸಿಕೊಂಡಿದ್ದಾರೆ. ಅದರಂತೆ ಅಧ್ಯಯನ ಮಾಡುವಂತೆ ಮಕ್ಕಳನ್ನು ಪ್ರೇರೇಪಿಸಿ’ ಎಂದು ಹೇಳಿದರು.

‘ಇದೇ ಮೊದಲ ಬಾರಿಗೆ ಅಂತಿಮ ಪರೀಕ್ಷೆಯ ರೀತಿಯಲ್ಲೇ ಪೂರ್ವ ಸಿದ್ಧತಾ ಪರೀಕ್ಷೆಯನ್ನು ನಡೆಸಲಾಗಿದೆ. ಪರೀಕ್ಷಾ ಮಂಡಳಿಯೇ ಉತ್ತರ ಪತ್ರಿಕೆಯನ್ನು ಪೂರೈಸಿದೆ. ಹಾಗಾಗಿ ಅಂತಿಮ ಪರೀಕ್ಷೆ ಹೇಗಿರಲಿದೆ ಎಂಬ ಸ್ಪಷ್ಟ ಕಲ್ಪನೆ ಮಕ್ಕಳಿಗೆ ಆಗಿದೆ. ಆದ್ದರಿಂದ ಪೋಷಕರು ಆತಂಕ‌ಪಡಬೇಕಿಲ್ಲ’ ಎಂದು ಹೇಳಿದರು.

ಪಠ್ಯ ಪರಿಷ್ಕರಣೆ ಆತಂಕ ಬೇಡ: ಚಾಮರಾಜನಗರ ತಾಲ್ಲೂಕಿನ ಅಮಚವಾಡಿಯಿಂದ ಕರೆ ಮಾಡಿದ್ದ ಗಣಿತ ಶಿಕ್ಷಕಿ ಉಷಾರಾಣಿ ಅವರು, ‘ಈ ವರ್ಷ ಪ್ರಶರ್ನೆ ಪತ್ರಿಕೆಯಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದ್ದು, ಐದು ಅಂಕಗಳ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಹಿಂದೆ ಎಲ್ಲ ಕಡಿಮೆ ಅಂಕಗಳ ಪ್ರಶ್ನೆಗಳಿಗಾಗಿ ಚಿಕ್ಕದಾಗಿ ಉತ್ತರಿಸಿ ಗೊತ್ತಿರುವ ಮಕ್ಕಳಿಗೆ ಇದರಿಂದ ಒತ್ತಡ ಹೆಚ್ಚಾಗುವುದಿಲ್ಲವೇ’ ಎಂದು ಕೇಳಿದರು.

‘ಇಲ್ಲಿ ಒತ್ತಡ ಹೆಚ್ಚಾಗುವ ಪ್ರಶ್ನೆ ಬರುವುದಿಲ್ಲ. ಹಿಂದೆ ಇದ್ದ ಎರಡು, ಮೂರು ಅಂಕಗಳ ಪ್ರಶ್ನೆಗಳನ್ನೇ ಒಟ್ಟುಗೂಡಿಸಿ ಐದು ಅಂಕಗಳ ಪ್ರಶ್ನೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಈಗಾಗಲೇ ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ಅಂತಹ ಪ್ರಶ್ನೆಗಳನ್ನು ಕೇಳಲಾಗಿದೆ. ಎಲ್ಲೂ ಯಾರಿಗೂ ತೊಂದರೆಯಾಗಿಲ್ಲ. ಶಿಕ್ಷಕಿಯಾಗಿ ನೀವು ಮಕ್ಕಳನ್ನು ಹೊಸ ವ್ಯವಸ್ಥೆಗೆ ಸಜ್ಜುಗೊಳಿಸಬೇಕು. ಮಕ್ಕಳಿಗೆ ಈ ಬಗ್ಗೆ ತಿಳಿ ಹೇಳಿ’ ಎಂದು ಡಿಡಿಪಿಐ ಹೇಳಿದರು.

‘ಕಳೆದ ವರ್ಷ ಗಣಿತ, ವಿಜ್ಞಾನ, ಸಮಾಜ ವಿಷಯಗಳ ಪಠ್ಯ ಪರಿಷ್ಕರಣೆಯಾಗಿತ್ತು. ಈ ವರ್ಷ ಕನ್ನಡ, ಇಂಗ್ಲಿಷ್‌ ಹಾಗೂ ಹಿಂದಿ ಭಾಷಾ ವಿಷಯಗಳ ಪಠ್ಯ ಪರಿಷ್ಕರಣೆಯಾಗಿದೆ. ಪಠ್ಯದಲ್ಲಿ ಕೊಂಚ ಬದಲಾವಣೆಯಾಗಿದ್ದರಿಂದ ಪ್ರಶ್ನೆಪತ್ರಿಕೆ ಯಾವ ರೀತಿ ಬರುತ್ತದೆ ಎಂಬ ಆತಂಕ ಶಿಕ್ಷಕರಿಗೆ ಇತ್ತು. ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ಅಂತಹ ಯಾವುದೇ ಸಮಸ್ಯೆ ಆಗಿಲ್ಲ. ಪರೀಕ್ಷೆಗಳು ಸುಲಭವಾಗಿದ್ದವು’ ಎಂದು ಉಪನಿರ್ದೇಶಕರ ಕಚೇರಿಯ ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ್‌ ಅವರು ಹೇಳಿದರು.

ಯಳಂದೂರಿನಿಂದ ಕರೆ ಮಾಡಿದ್ದ ಶಿಕ್ಷಕ ಮಹದೇವ್‌ ಅವರು ಪರೀಕ್ಷೆಗೆ ಮಕ್ಕಳನ್ನು ಸಜ್ಜು ಮಾಡುವ ಬಗೆ ಹೇಗೆ ಎಂದು ಕೇಳಿದರು.

‘ಈಗಾಗಲೇ ಶಾಲೆಗಳಲ್ಲಿ ಶಿಕ್ಷಕರು ಏನೇನು ಮಾಡಬೇಕು ಎಂದು ಕಾರ್ಯಾಗಾರ ಮಾಡಿ, ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಮಾಡಿ ತಿಳಿಹೇಳಲಾಗಿದೆ. ಮಕ್ಕಳಲ್ಲಿರುವ ಪರೀಕ್ಷಾ ಭಯವನ್ನು ಮೊದಲು ಹೋಗಲಾಡಿಸಬೇಕು. ಅದಕ್ಕಾಗಿ ಶಿಕ್ಷಕರೆಲ್ಲ ಸೇರಿ ಮಕ್ಕಳಿಗೆ ಕೌನ್ಸೆಲಿಂಗ್‌ ಮಾಡಿ. ಪರೀಕ್ಷೆಯನ್ನು ಹೇಗೆ ಎದುರಿಸಬಹುದು ಎಂಬುದನ್ನು ವಿವರಿಸಿ’ ಎಂದು ಸಲಹೆ ನೀಡಿದರು.

ಚಾಮರಾಜನಗರ ತಾಲ್ಲೂಕಿನ ದೇಮಳ್ಳಿಯಿಂದ ಕರೆ ಮಾಡಿದ್ದ ಶಿವನಾಗಪ್ಪ ಹಾಗೂ ಗುಂಡ್ಲುಪೇಟೆ ತಾಲ್ಲೂಕಿನ ಭೀಮನಬೀಡುವಿನಿಂದ ಕರೆ ಮಾಡಿದ್ದ ಕೃಷ್ಣ ಅವರು, ‘ಮಕ್ಕಳನ್ನು ಯಾವ ರೀತಿ ಓದಿಸಬೇಕು, ಕಷ್ಟ ವಿಷಯಗಳನ್ನು ಹೇಗೆ ಓದಿಸುವುದು’ ಎಂದು ಕೇಳಿದರು.

‘ಎಲ್ಲ ಮಕ್ಕಳಿಗೆ ದಿನಚರಿ ಸಿದ್ಧಪಡಿಸಿ ಕೊಡಲಾಗಿದೆ. ಅವರು ಅದರಂತೆಯೇ ಓದುವಂತೆ ಮಾಡಿ. ರಾತ್ರಿ 10 ಗಂಟೆವರೆಗೂ ಓದುವಂತೆ ಮಾಡಿ. ಬೆಳಿಗ್ಗೆ ಬೇಗ ಎದ್ದು ಓದುವುದಕ್ಕೆ ಹೇಳಿ. ಕಷ್ಟದ ವಿಷಯಗಳಿಗೆ ಹೆಚ್ಚು ಒತ್ತು ನೀಡುವಂತೆ ಮಾಡಿ’ ಎಂದು ಜವ‌ರೇಗೌಡ ಅವರು ಸಲಹೆ ನೀಡಿದರು.

ಸಂತೇಮರಹಳ್ಳಿಯ ಸಂಯುಕ್ತ ಪದವಿ ಪೂರ್ವ ಕಾಲೇಜಿನ 10ನೇ ತರಗತಿ ವಿದ್ಯಾರ್ಥಿ ಶಿರಂತಾಜ್‌ ಮಾತನಾಡಿ, ‘ಪೂರ್ವ ಸಿದ್ಧತಾ ಪರೀಕ್ಷೆ ಆದ ಮೇಲೆ, ಓದುವುದಕ್ಕೆ ರಜೆ ನೀಡುತ್ತೀರಾ? ನಾವು ಎಲ್ಲಿವರೆಗೆ ಶಾಲೆಗೆ ಬರಬೇಕು’ ಎಂದು ಕೇಳಿದಳು

‘ಪೂರ್ವ ಸಿದ್ಧತಾ ಪರೀಕ್ಷೆ ಮುಗಿದ ನಂತರವೂ ಕಡ್ಡಾಯವಾಗಿ ಶಾಲೆಗೆ ಬರಬೇಕು. ಮಾರ್ಚ್‌ 25ರವರೆಗೂ ಬರಲೇ ಬೇಕು. ಶಾಲೆಯಲ್ಲೇ ಹೆಚ್ಚು ಅಭ್ಯಾಸ ಮಾಡಿ’ ಎಂದು ಡಿಡಿಪಿಐ ಸೂಚಿಸಿದರು.

ಶಾಲೆಯಲ್ಲೇ‍ಪರೀಕ್ಷೆ ಮಾಡಿ: ಯಳಂದೂರು ತಾಲ್ಲೂಕಿನ ಗುಂಬಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ವಿಜಯ್‌ ಕುಮಾರ್‌ ಮಾತನಾಡಿ, ‘ಪರೀಕ್ಷೆ ಬರೆಯುವುದಕ್ಕೆ ಬೇರೆ ಶಾಲೆಗಳಿಗೆ ಯಾಕೆ ಹೋಗಬೇಕು. ನಮ್ಮ ಶಾಲೆಯಲ್ಲೇ ಬರೆಯುವುದಕ್ಕೆ ಸಾಧ್ಯವಿಲ್ಲವೇ’ ಎಂದು ಕೇಳಿದರು.

ಇದಕ್ಕೆ ಉತ್ತರಿಸಿದ ಜವರೇಗೌಡ ಅವರು, ‘ನಮ್ಮ ಜಿಲ್ಲೆಯಲ್ಲಿ 214 ಶಾಲೆಗಳಿವೆ. ಎಲ್ಲ ಕಡೆಗಳಲ್ಲಿ ಪರೀಕ್ಷೆ ಮಾಡಲು ಕಷ್ಟವಾಗುತ್ತದೆ. ಪರೀಕ್ಷೆ ನಡೆಸಲು ಸಾಕಷ್ಟು ಮೂಲ ಸೌಕರ್ಯಗಳನ್ನು ಒದಗಿಸಬೇಕು. ಹಾಗಾಗಿ ಐದಾರು ಶಾಲೆಗಳ ಮಕ್ಕಳಿಗೆ ಒಂದು ಕಡೆ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗುತ್ತದೆ. ನಮ್ಮಲ್ಲಿ 46 ಕೇಂದ್ರಗಳನ್ನು ಗುರುತಿಸಲಾಗಿದೆ’ ಎಂದರು.

ಪ್ರಶ್ನೆ ಪತ್ರಿಕೆ ಸೋರಿಕೆಗೆ ಅವಕಾಶ ಇಲ್ಲ

‌ಅಂತಿಮ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗುತ್ತದೆ ಎಂಬ ಆತಂಕ ಯಾರಿಗೂ ಬೇಡ. ಪ್ರಶ್ನೆಪತ್ರಿಕೆಗಳಿಗೆ ಬಿಗಿ ಭದ್ರತೆ ಒದಗಿಸಲಾಗುತ್ತದೆ ಎಂದು ಎಸ್‌.ಟಿ.ಜವರೇಗೌಡ ಹೇಳಿದರು.

‘ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂಪೊಲೀಸರ ಬೆಂಗಾವಿನಲ್ಲಿ ಪ್ರಶ್ನೆಪತ್ರಿಕೆಗಳನ್ನು ತಾಲ್ಲೂಕು ಖಜಾನೆಗಳಿಗೆ ತಲುಪಿಸಲಾಗುತ್ತದೆ. ಅಲ್ಲಿಯೂ ಅದರ ಮೇಲೆ ನಿರಂತರ ನಿಗಾ ಇಡಲಾಗುತ್ತದೆ. ಪರೀಕ್ಷೆಯ ದಿನ, ಪರೀಕ್ಷೆ ಆರಂಭವಾಗುವುದಕ್ಕೂ ಒಂದು ಗಂಟೆ ಮೊದಲು ಅಥವಾ ಪರೀಕ್ಷಾ ಕೇಂದ್ರಗಳು ಇರುವ ದೂರವನ್ನು ಪರಿಗಣಿಸಿ ಪ್ರಶ್ನೆಪತ್ರಿಕೆಗಳನ್ನು ಪಡೆಯಲಾಗುತ್ತದೆ.ಪ್ರತಿ ಮಾರ್ಗಕ್ಕೂ ಒಬ್ಬ ಮಾರ್ಗಾಧಿಕಾರಿ ಇರುತ್ತಾರೆ. ಪ್ರಶ್ನೆ‌ಪತ್ರಿಕೆಯನ್ನು ಪಡೆಯುವುದಕ್ಕೂ ಮುನ್ನ ತಹಶೀಲ್ದಾರ್‌, ಬಿಇಒ ಹಾಗೂ ಇತರ ಅಧಿಕಾರಿಗಳ ಸಹಿ ಹಾಕಬೇಕು’ ಎಂದು ಅವರು ವಿವರಿಸಿದರು.

ಅಕ್ರಮ ತಡೆಗೆ ಕ್ರಮ: ಪ್ರತಿ ಕೇಂದ್ರದಲ್ಲಿ ಕನಿಷ್ಠ ನಾಲ್ಕು ಸಿಸಿಟಿವಿ ಕ್ಯಾಮೆರಾಗಳು ಕಡ್ಡಾಯವಾಗಿ ಇರುತ್ತವೆ. ಪ್ರಶ್ನೆ ಪತ್ರಿಕೆಯ ಕಟ್ಟನ್ನು ಒಡೆಯುವ ಕೊಠಡಿ, ಕೇಂದ್ರದ ಆವರಣ, ಅತ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿ ಕ್ಯಾಮೆರಾಗಳು ಇರುತ್ತವೆ. ಖಾಸಗಿ ಶಾಲೆಗಳಲ್ಲಿ ಬಹುತೇಕ ಎಲ್ಲ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಸೌಲಭ್ಯ ಹೊಂದಿವೆ ಎಂದು ಅವರು ಮಾಹಿತಿ ನೀಡಿದರು.

ಹೆಚ್ಚಿನ ಫಲಿತಾಂಶಕ್ಕೆ ಪಣ

ಜಿಲ್ಲೆಯು ಈ ವರ್ಷ 10ಕ್ಕಿಂತ ಒಳಗಿನ ಸ್ಥಾನ ಗಳಿಸಬೇಕು ಎಂದು ಪಣ ತೊಟ್ಟಿರುವ ಸಾರ್ವಜನಿಕ ಶಿಕ್ಷಣ ಇಲಾಖೆ, ಶೈಕ್ಷಣಿಕ ವರ್ಷದ ಆರಂಭದಿಂದಲೇ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದೆ.

ಜೂನ್‌ ತಿಂಗಳಲ್ಲೇ ವಿಷಯವಾರು ಶಿಕ್ಷಕರಿಗೆ ವಿಶೇಷ ಕಾರ್ಯಾಗಾರ ಮಾಡಲಾಗಿತ್ತು. ನವೆಂಬರ್‌ನಲ್ಲಿ ಪರಿಷ್ಕೃತ ಪಠ್ಯದ ಬಗ್ಗೆ ಮತ್ತೊಮ್ಮೆ ಕಾರ್ಯಾಗಾರ ನಡೆಸಲಾಗಿತ್ತು. ಇದಲ್ಲದೇ, ಮಕ್ಕಳಿಗೆ ಶನಿವಾರ, ಭಾನುವಾರ ವಿಶೇಷ ತರಗತಿ, ಶಿಕ್ಷಣದಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಅವರಿಗೆ ಅವರ ಬಗ್ಗೆ ವಿಶೇಷ ಕಾಳಜಿ ವಹಿಸುವುದು, ಬಿಇಒ ನೇತೃತ್ವದ ತಂಡದಿಂದ ಶಾಲೆಗಳಿಗೆ ಭೇಟಿ ನೀಡಿ, ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ, ಮಕ್ಕಳ ಮನೆ ಮನೆಗೆ ಭೇಟಿ ನೀಡಿ ಪೋಷಕರಲ್ಲಿ ಜಾಗೃತಿ ಮೂಡಿಸುವುದು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಇಲಾಖೆ ಹಮ್ಮಿಕೊಂಡಿದೆ.

‘ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ಕೂಡ ಅಧಿಕಾರಿಗಳ ಹಾಗೂ ಮುಖ್ಯಶಿಕ್ಷಕರ ಹಲವು ಸಭೆಗಳನ್ನು ನಡೆಸಿ ಸಲಹೆ ಸೂಚನೆಗಳನ್ನು ನೀಡಿದ್ದಾರೆ’ ಎಂದು ಉಪನಿರ್ದೇಶಕರ ಕಚೇರಿಯ ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ್‌ ಅವರು ಹೇಳಿದರು.

ಪರೀಕ್ಷಾ ಕೇಂದ್ರದಲ್ಲಿ ಅಗತ್ಯ ಸೌಕರ್ಯಗಳು

ಯಳಂದೂರು ತಾಲ್ಲೂಕು ಮದ್ದೂರಿನಿಂದ ಕರೆ ಮಾಡಿದ್ದ ರಾಮು ಎಂಬುವವರು, ಪರೀಕ್ಷಾ ಕೇಂದ್ರದಲ್ಲಿ ಮಕ್ಕಳಿಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವಂತೆ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಿಡಿಪಿಐ ಅವರು, ‘ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಮಕ್ಕಳಿಗೆ ಅಗತ್ಯ ಸೌಕರ್ಯ ಕಲ್ಪಿಸಲು ಕ್ರಮ ವಹಿಸಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತದೆ. ಆರೋಗ್ಯದ ಮೇಲೆ ನಿಗಾ ಇಡುವುದಕ್ಕಾಗಿ ಪ್ರತಿ ಕೇಂದ್ರದಲ್ಲೂ ಆರೋಗ್ಯ ಸಹಾಯಕಿಯರು ಇರಲಿದ್ದಾರೆ.ಮೂತ್ರ ವಿಸರ್ಜನೆಗೆ ಹೋಗಬೇಕೆಂದಿದ್ದರೆ, ಅದಕ್ಕೂ ಅವಕಾಶ ನೀಡಲಾಗುವುದು. ಮಕ್ಕಳಿಗೆ ಪರೀಕ್ಷೆ ಬರೆಯಲು ಯಾವುದೇ ಅಡ್ಡಿಯಾಗದಂತೆ ಎಲ್ಲ ವ್ಯವಸ್ಥೆ ಮಾಡುತ್ತೇವೆ’ ಎಂದು ಭರವಸೆ ನೀಡಿದರು.

ಪರೀಕ್ಷಾ ಕೊಠಡಿಯಲ್ಲಿ ಹೀಗೆ ಮಾಡಿ...

ಪ್ರಶ್ನೆ ಪತ್ರಿಕೆ ಸಿಕ್ಕಿದ ನಂತರ ಆತಂಕವಾದರೆ ಏನು ಮಾಡಬೇಕು ಎಂಬುದನ್ನು ಇಬ್ಬರೂ ಅಧಿಕಾರಿಗಳು ವಿವರಿಸಿದ್ದು ಹೀಗೆ...

* ಎರಡು ನಿಮಿಷ ಕಣ್ಣು ಮುಚ್ಚಿ ಕುಳಿತುಕೊಳ್ಳಿ. ಎದೆ ಬಡಿತ ನಿಧಾನವಾಗಿ
ಕಡಿಮೆಯಾಗುತ್ತದೆ

* ನಂತರ ಪ್ರಶ್ನೆಪತ್ರಿಕೆಯನ್ನು ಓದಿ. ಯಾವ ಪ್ರಶ್ನೆಗೆ ಉತ್ತರ ಗೊತ್ತಿದೆ, ಅರ್ಧ ಗೊತ್ತಿದೆ,
ಗೊತ್ತಿಲ್ಲ ಎಂಬುದನ್ನು ಪಟ್ಟಿ ಮಾಡಿ

* ಗೊತ್ತಿರುವ ಪ್ರಶ್ನೆಗೆ ಮೊದಲು ಉತ್ತರ ಬರೆಯಿರಿ. ನಂತರ ಅರ್ಧ ಉತ್ತರ ಗೊತ್ತಿರುವ
ಪ್ರಶ್ನೆಗಳನ್ನು ಪರಿಗಣಿಸಿ, ಕೊನೆಗೆ ಇತರ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ

* ಆರಂಭದಲ್ಲಿ ಎಲ್ಲ ಉತ್ತರಗಳು ಸರಿ ಇದ್ದರೆ, ಸಹಜವಾಗಿ ಮೌಲ್ಯಮಾಪಕರು
ಖುಷಿ ಪಡುತ್ತಾರೆ, ಮುಂದಿನ ಪ್ರಶ್ನೆಗಳಿಗೆ ಬರೆದ ಉತ್ತರಗಳು ಸ್ವಲ್ಪ ತಪ್ಪು ಇದ್ದರೂ
ಅಂಕಗಳನ್ನು ಕೊಡುವ ಸಾಧ್ಯತೆ ಇರುತ್ತದೆ.

* ಉತ್ತರ ಪತ್ರಿಕೆಯಲ್ಲಿ ನೀಟಾಗಿ ಇರಲಿ, ಪದಗಳನ್ನು ಬರೆದು ಅದನ್ನು ಚಿತ್‌
ಮಾಡುವುದಕ್ಕೆ ಹೋಗಬೇಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT