ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳ್ಳೇಗಾಲ: ಯುಗಾದಿಗೆ ಕೊನೆಯಾಗುವ ಕಪ್ಪಡಿ ಯಾತ್ರೆ

ಜಿಲ್ಲೆಯಿಂದ ಸಾವಿರಾರು ಜನರ ಭೇಟಿ, ಶತಮಾನಗಳಿಂದ ನಡೆದು ಬಂದಿರುವ ಸಂಪ್ರದಾಯ
Last Updated 31 ಮಾರ್ಚ್ 2022, 19:31 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಒಂದು ತಿಂಗಳ ಕಾಲ ನಡೆಯುವ ಕೆ.ಆರ್‌.ನಗರ ಕಪ್ಪಡಿ ಜಾತ್ರೆಯಲ್ಲಿ ಭಾಗವಹಿಸುವುದಕ್ಕಾಗಿಗಡಿ ಜಿಲ್ಲೆ ಚಾಮರಾಜನಗರದ ವಿವಿಧ ತಾಲ್ಲೂಕುಗಳಿಂದ ಸಾವಿರಾರು ಭಕ್ತರು ಯುಗಾದಿಗೆ 10 ದಿನಗಳು ಇರುವಾಗಲೇ ಯಾತ್ರೆ ಕೈಗೊಳ್ಳುತ್ತಾರೆ. ಯುಗಾದಿಯ ದಿನ ಬೆಳಿಗ್ಗೆ ಅವರು ತಮ್ಮ ಗ್ರಾಮಗಳಿಗೆ ಹಿಂದಿರುಗುತ್ತಾರೆ.

ಶತಮಾನಗಳಿಂದಲೂ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. ರಾಚಪ್ಪಾಜಿ ಮತ್ತು ಚೆನ್ನಾಜಮ್ಮ ಐಕ್ಯರಾಗಿರುವ ಸ್ಥಳ ಎಂದು ಕರೆಯಲಾಗುವ ಕಪ್ಪಡಿಗೆ ಜಿಲ್ಲೆಯ ನೀಲಗಾರರು ಸೇರಿದಂತೆ ರಾಚಪ್ಪಾಜಿ, ಮಂಟೇಸ್ವಾಮಿ ಅವರಿಗೆ ನಡೆದುಕೊಳ್ಳುವವರು ಯಾತ್ರೆ ಹೊರಡುತ್ತಾರೆ.

10 ದಿನಗಳ ಯಾತ್ರೆ:ಪರಿಷೆಗೆ ಹೋಗುವವರುಹಿಂದಿನ ಕಾಲದಲ್ಲಿ ಕಾಲ್ನಡಿಗೆಯ ಮೂಲಕವೇ ಹೋಗುತ್ತಿದ್ದರು. ಈಗ ಸಾಮಾನ್ಯವಾಗಿ ಬಸ್ಸಿನಲ್ಲಿ ಹೋಗುತ್ತಾರೆ.

ಯುಗಾದಿ ಹಬ್ಬಕ್ಕೆ 10 ದಿನ ಇರುವಾಗ ನೀಲಗಾರರು ಮತ್ತು ಪರಿಷೆ ಜನರು ನೇರವಾಗಿ ಕಪ್ಪಡಿ ಕ್ಷೇತ್ರಕ್ಕೆ ಹೋಗಿ ಮನೆಯಿಂದ ತೆಗೆದುಕೊಂಡು ಹೋಗಿರುವ ಬುತ್ತಿಗಳನ್ನು ಬಿಚ್ಚಿ ದೇವರಿಗೆ ನೈವೇದ್ಯ ಮಾಡಿ ಪ್ರಸಾದ ರೂಪದಲ್ಲಿ ಸೇವಿಸಿ ಅಲ್ಲೇ ತಂಗುತ್ತಾರೆ.

‘ಎರಡನೇ ದಿನ ಹರಿಸೇವೆ ನಡೆಸುವ ಭಕ್ತರು, ಕಾವೇರಿ ನದಿಯಿಂದ ನೀಲಗಾರರ ಸಾಂಪ್ರದಾಯಕ ವಿಧಿ ವಿಧಾನಗಳೂಡನೆ ನೀರು ತಂದು ಅಡುಗೆ ಮಾಡಿ ದೇವರ ಸೇವೆಯಲ್ಲಿ ಭಾಗಿಯಾಗುತ್ತಾರೆ. ಮುಡಿಸೇವೆ, ಉರುಳು ಸೇವೆ ಸಲ್ಲಿಸಿ ಹರಕೆ ತೀರಿಸುತ್ತಾರೆ. ಮೂರನೇ ದಿನ ದೊಡ್ಡವರ ಸೇವೆ (ಪಂಕ್ತಿ ಸೇವೆ) ಮಾಡುವ ಭಕ್ತಾಧಿಗಳು ಕುರಿ, ಮೇಕೆ, ಕೋಳಿ ಮಾಂಸದ ಅಡುಗೆ ತಯಾರಿಸಿ ಸಹ ಪಂಕ್ತಿ ಭೋಜನ ಮಾಡುತ್ತಾರೆ’ ಎಂದು ಹಲವು ಬಾರಿ ಪರಿಷೆಗೆ ಹೋಗಿರುವ ಹಿರಿಯ ನಾಗರಿಕ ಮಂಟಯ್ಯ ಮಾಹಿತಿ ನೀಡಿದರು.

‘ನಾಲ್ಕನೇ ದಿನ ಜಾತ್ರೆಯ ಪ್ರಮುಖ ಸೇವೆಯಾದ ಮಹಾಮಾದಲಿ ಸೇವೆ ನಡೆಯುವುದರಿಂದ ಭಕ್ತರು ಅಂದು ಕಾವೇರಿ ನದಿಯಲ್ಲಿ ಮಿಂದು ಮಡಿ ಉಟ್ಟು ಶುಭ್ರವಾಗಿ ಮಹಾಮಾದಲಿ ಪ್ರಸಾದ ಪಡೆಯುತ್ತಾರೆ. ಐದನೇ ದಿನ ಗದ್ದುಗೆ ತೊಳೆಯುವ ಕಾರ್ಯಕ್ರಮವಿದ್ದು ಅಂದು ಯಾತ್ರೆ ಹೊರಟವರು ಕಪ್ಪಡಿಯಿಂದ ನಿರ್ಗಮಿಸುತ್ತಾರೆ. ಆರನೇ ದಿನ ಮೈಸೂರಿನಲ್ಲಿ ಬಂದು ತಂಗುತ್ತಾರೆ. ಏಳನೇ ದಿನ ಮೈಸೂರು ಜಿಲ್ಲೆಯ ತಿ.ನರಸೀಪುರಕ್ಕೆ ಬಂದು ತ್ರಿವೇಣಿ ಸಂಗಮದಲ್ಲಿ ಸಾನ್ನ ಮಾಡಿ ಮಳವಳ್ಳಿಯ ಬೊಪ್ಪೇಗೌಡನಪುರ ಮುಟ್ಟನಹಳ್ಳಿನತ್ತ ಹೊರಡುತ್ತಾರೆ. ಯುಗಾದಿಯ ಮುನ್ನಾದಿನ ಮಳ್ಳವಳ್ಳಿ ತಾಲ್ಲೂಕಿನ ಬೊಪ್ಪೇಗೌಡನಪುರದ ಮಠದಲ್ಲಿರುವ ಮಂಟೇಸ್ವಾಮಿ ಗದ್ದುಗೆ ಬಂದು ಎದುರು ಸೇವೆ ಮಾಡುತ್ತಾರೆ. ಅಲ್ಲಿಂದ ಕಂಡಾಯ, ಸೂರಪಾನಿಯ, ಬೆತ್ತಕ್ಕೆ ಪೂಜೆ ಮಾಡಿಕೊಂಡು ಬಂದು ಹಣ್ಣು, ಕಾಯಿ, ಕಡಲೆಪುರಿ, ಮಿಠಾಯಿ ಸೇರಿದಂತೆ ವಿವಿಧ ವಸ್ತುಗಳನ್ನು ತೆಗೆದುಕೊಂಡು ಬಂದು ಕೊಳ್ಳೇಗಾಲ ತಾಲ್ಲೂಕಿನ ಕಾವೇರಿ ನದಿ ತೀರದ ಗ್ರಾಮದಲ್ಲಿ ತಂಗುತ್ತಾರೆ’ ಎಂದು ಅವರು ವಿವರಿಸಿದರು.

‘ಯುಗಾದಿಯ ದಿನ ಕಾವೇರಿ ನದಿಯಲ್ಲಿ ಮಿಂದು, ತಾವು ತಂದಿದ್ದ ವಸ್ತುಗಳನ್ನು ಶುಚಿಗೊಳಿಸಿ ಭಕ್ತರು ತಮ್ಮ ಗ್ರಾಮಗಳತ್ತ ಹಿಂದಿರುಗುತ್ತಾರೆ. ನೀಲಗಾರರು ಮತ್ತು ಪರಿಶೆ ಜನರು ಕಂಡಾಯಗಳೂಂದಿಗೆ ಆಗಮಿಸುವಾಗ ದಾರಿಯುದ್ದಕ್ಕೂ ಗ್ರಾಮಸ್ಥರು ಮಜ್ಜಿಗೆ, ಪಾನಕ ವಿತರಣೆ ಮಾಡುತ್ತಾರೆ’ ಎಂದು ಮಂಟಯ್ಯ ‘ಪ್ರಜಾವಾಣಿ‘ಗೆ ವಿವರಿಸಿದರು.

*
ಕಪ್ಪಟಿ, ಮುಟ್ಟನಹಳ್ಳಿ, ಬೊಪ್ಪೇಗೌಡನಪುರದ ಜಾತ್ರೆಗಳು ಜನಕಲ್ಯಾಣ ಜಾತ್ರೆಗಳಾಗಿದ್ದು, ಯುಗಾದಿ ಹಬ್ಬದ ಹಿಂದಿನ ದಿನ ಮುಕ್ತಾಯವಾಗಿ ಹಬ್ಬಕ್ಕೆ ಮುನ್ನುಡಿ ಬರೆಯುತ್ತವೆ.
-ಮಹಾದೇವ ಶಂಕನಪುರ, ಸಾಹಿತಿ

*

ನಾವು ಕುಟುಂಬ ಸಮೇತವಾಗಿ ಜಾತ್ರೆಗೆ ಹೋಗುವುದು ಸಂಪ್ರದಾಯವಾಗಿ ಬೆಳೆದು ಬಂದಿದೆ. ತಲೆ ತಲೆಮಾರುಗಳಿಂದ ಈ ಪರಂಪರೆಯನ್ನು ಮುಂದುವರಿಸಕೊಂಡು ಬರುತ್ತಿದ್ದೇವೆ.
-ಸಿದ್ದರಾಜು, ಹಳೆ ಹಂಪಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT