ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ಕೃಷಿ ಕಾಯಕ ಚುರುಕು: ಬಿತ್ತನೆ ಬಿರುಸು

Published 14 ಆಗಸ್ಟ್ 2023, 8:30 IST
Last Updated 14 ಆಗಸ್ಟ್ 2023, 8:30 IST
ಅಕ್ಷರ ಗಾತ್ರ

ನಾ.ಮಂಜುನಾಥಸ್ವಾಮಿ

ಚಾಮರಾಜನಗರ/ಯಳಂದೂರು: ಜಿಲ್ಲೆಯಾದ್ಯಂತ ಎರಡು ದಿನಗಳ ಕಾಲ ಸಾಧಾರಣ ಮಳೆಯಾಗಿರುವುದು ರೈತರಲ್ಲಿ ಮಂದಹಾಸ ಮೂಡಿಸಿದೆ. ಕೃಷಿ ಚಟುವಟಿಕೆ ಆರಂಭಿಸಿದ್ದಾರೆ. ಬಿತ್ತನೆ ಕಾರ್ಯ ಬಿರುಸು ಪಡೆದಿದೆ. 

ಒಂದು ವಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 2.91 ಸೆಂ.ಮೀ ಮಳೆಯಾಗಿದೆ. ಚಾಮರಾಜನಗರ ಮತ್ತು ಯಳಂದೂರು ತಾಲ್ಲೂಕು ವ್ಯಾಪ್ತಿಯಲ್ಲಿ ಉತ್ತಮ ವರ್ಷಧಾರೆಯಾಗಿದ್ದು, ರೈತರು ಅಲಸಂದೆ, ರಾಗಿ, ಮೆಕ್ಕಜೋಳ, ಹೆಸರು ಮುಂತಾದ ಬೆಳೆಗಳ ಬಿತ್ತನೆ ಆರಂಭಿಸಿದ್ದಾರೆ.

ಗುರುವಾರ ಮತ್ತು ಶುಕ್ರವಾರ ಜಿಲ್ಲೆಯಾದ್ಯಂತ ಮಳೆಯಾಗಿದೆ. ಶನಿವಾರ ಸ್ವಲ್ಪ ಕಡಿಮೆ ಮಳೆಯಾಗಿದೆ. ಈಗಾಗಲೇ ಬಿತ್ತನೆಗೆ ಸಿದ್ಧಮಾಡಿಕೊಂಡಿದ್ದ ಮಳೆಯಾಶ್ರಿತ ರೈತರು ಬಿತ್ತನೆಗೆ ಮುಂದಾಗಿದ್ದಾರೆ. 

ಗುರಿ ಮುಟ್ಟದ ಬಿತ್ತನೆ: ಮಳೆ ಕೊರತೆ ಕಾರಣಕ್ಕೆ ಈ ವರ್ಷ ಬಿತ್ತನೆ ನಿಧಾನವಾಗಿದೆ. ಮುಂಗಾರು ಪೂರ್ವ ಮತ್ತು ಮುಂಗಾರು ಅವಧಿಯಲ್ಲಿ ಒಟ್ಟು 1.17 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯ ಗುರಿಯನ್ನು ಇಲಾಖೆ ಹೊಂದಿತ್ತು. ಈವರೆಗೆ 53,506 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಅಂದರೆ ಶೇ 45.38ರಷ್ಟು ಮಾತ್ರ ಸಾಧನೆಯಾಗಿದೆ. 

ಮಳೆ ಕೊರತೆಯಿಂದ ಬಿತ್ತನೆ ನಿಧಾನವಾಗಿತ್ತು. ಎರಡು ದಿನ ಮಳೆಯಾಗಿರುವುದರಿಂದ ರೈತರು ಬಿತ್ತನೆ ಆರಂಭಿಸಿದ್ದಾರೆ.
ಕೆ.ಮಧುಸೂದನ್‌, ಜಂಟಿ ಕೃಷಿ ನಿರ್ದೇಶಕ

ಬಿತ್ತನೆಯಾಗಿರುವ ಪ್ರದೇಶದ ಸಿಂಹಪಾಲು ಮುಂಗಾರು ಪೂರ್ವದಲ್ಲೇ ನಡೆದಿರುವ ಬಿತ್ತನೆ. ಮುಂಗಾರು ಪೂರ್ವ ಅವಧಿಯಲ್ಲಿ 54,440 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಮುಂಗಾರು ಆರಂಭದವರೆಗೆ 39,479 ಹೆಕ್ಟೇರ್‌ನಲ್ಲಿ ರೈತರು ಬಿತ್ತನೆ ಮಾಡಿದ್ದರು. 

ಜೂನ್‌ 1ರ ನಂತರ ಆಗಸ್ಟ್‌ 11ರವರೆಗೆ 14,027 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ. ಇದರಲ್ಲಿ ನೀರಾವರಿ ಪ್ರದೇಶವೂ ಸೇರಿದೆ.

‘ಮುಂಗಾರು ಅವಧಿಯಲ್ಲಿ ನಿರೀಕ್ಷೆಯಷ್ಟು ಮಳೆಯಾಗದಿರುವುದರಿಂದ ಬಿತ್ತನೆ ಸಾಧ್ಯವಾಗಿಲ್ಲ. ಈ ತಿಂಗಳು ಮಳೆಯಾದರೆ ಕೃಷಿ ಚಟುವಟಿಕೆ ವೇಗ ಪಡೆಯಬಹುದು. ಎರಡು ದಿನ ಸುರಿಯುತ್ತಿರುವ ಮಳೆ ಆಶಾಭಾವನೆ ಮೂಡಿಸಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಮಧುಸೂದನ್‌ ‘ಪ್ರಜಾವಾಣಿ’ಗೆ ತಿಳಿಸಿದರು.  

‘ಅಲಸಂದೆ, ರಾಗಿ, ಮುಸುಕಿನ ಜೋಳ ಹಾಗೂ ಸಿರಿ ಧಾನ್ಯ ಬಿತ್ತನೆಗೆ ಮುಂದಾಗಿದ್ದೇವೆ. ಎರಡು ದಿನಗಳಿಂದ ಉತ್ತಮ ಮಳೆ ಸುರಿಯುತ್ತಿದ್ದು, ಉಷ್ಣಾಂಶದಲ್ಲೂ ಏರಿಕೆಯಾಗಿದೆ. ಬಿತ್ತನೆ ಹಂತದಲ್ಲಿ ಮಳೆ ಮುಂದುವರಿದರೆ, ಸಾಗುವಳಿ ಕಳೆಗಟ್ಟುವ ನಿರೀಕ್ಷೆ ಇದೆ’ ಎಂದು ಯಳಂದೂರು ತಾಲ್ಲೂಕು ಮಾಲಾರಪಾಳ್ಯ ಕೃಷಿಕ ಮುತ್ತುರಾಜ್ ತಿಳಿಸಿದರು.

‘ಆಗಸ್ಟ್‌  2ನೇ ವಾರದಿಂದ ಮಳೆ ಆರಂಭವಾದರೆ ತೋಟಗಾರಿಕಾ ವಲಯಗಳಲ್ಲೂ ನಾಟಿ ಪ್ರಕ್ರಿಯೆ ಚುರುಕು ಮುಟ್ಟುತ್ತದೆ. ಅಡಿಕೆ, ತೆಂಗು ಮತ್ತು ಹಣ್ಣಿನ ಬೆಳೆಗಾರರು ಮುಂಗಾರು ನಂಬಿ ಭೂಮಿ ಸಿದ್ಧತೆ ಆರಂಭಿಸಿದ್ದಾರೆ’ ಎಂದು ಕೃಷಿಕ ಮಧುರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು. 

ಮಳೆ ಕೊರತೆ: ಜೂನ್‌ 1ರಿಂದ ಭಾನುವಾರದವರೆಗಿನ (ಆ.13) ಮುಂಗಾರು ಅವಧಿಯಲ್ಲಿ ಶೇ 15ರಷ್ಟು ಮಳೆ ಕೊರತೆ ಉಂಟಾಗಿದೆ. ಸಾಮಾನ್ಯವಾಗಿ ಈ ಸಮಯದಲ್ಲಿ 14.8 ಸೆಂ.ಮೀ ಮಳೆಯಾಗುತ್ತದೆ. ಈ ಬಾರಿ 12.5 ಸೆಂ.ಮೀನಷ್ಟು ಮಳೆ ಸುರಿದಿದೆ. 

ಯಳಂದೂರು: 700 ಕ್ವಿಂಟಲ್ ಬೀಜ ದಾಸ್ತಾನು

ಯಳಂದೂರು ತಾಲ್ಲೂಕಿನ ವಿವಿಧ ರೈತ ಸಂಪರ್ಕ ಕೇಂದ್ರಗಳಲ್ಲಿ 700 ಕ್ವಿಂಟಲ್ ಬಿತ್ತನೆ ಬೀಜ ದಾಸ್ತಾನಿದೆ. ಭತ್ತ 500 ಕ್ವಿಂಟಲ್ ಮುಸುಕಿನ ಜೋಳ 150 ರಾಗಿ 25 ಚಂಬೆ 20 ಕ್ವಿಂಟಲ್ ಇದೆ.  ‘ಮಳೆ ಮುಂದುವರಿದರೆ ಮಾತ್ರ ರೈತರು ಬಿತ್ತನೆಗೆ ಮುಂದಾಗುತ್ತಾರೆ. ಬೀಜಕ್ಕೆ ಬೇಡಿಕೆ ತರುತ್ತದೆ. ಋತುಮಾನಕ್ಕೆ ಅನುಗುಣವಾಗಿ ನಿಯಮಿತವಾಗಿ ಸುರಿಯದೆ ಏಕ ಕಾಲಕ್ಕೆ ಮಳೆ ಸುರಿದರೆ ಇಳುವರಿ ಮೇಲೆ ಪ್ರಭಾವ ಬೀರುತ್ತದೆ. ಸದ್ಯ ಅಗರ ಕಸಬಾ ಹೋಬಳಿಗಳಲ್ಲಿ ಕಬ್ಬು 2500 ಹೆಕ್ಟೇರ್ ಭತ್ತ 2500 ರಾಗಿ 300 ಹಾಗೂ ಮೆಕ್ಕೆಜೋಳ 300 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ’ ಎಂದು ಕೃಷಿ ಇಲಾಖೆ ಅಧಿಕಾರಿ ಎ.ವೆಂಟಕರಂಗಶೆಟ್ಟಿ ಮಾಹಿತಿ ನೀಡಿದರು.

ಭೂಮಿಗೆ ಬಿದ್ದ ಬೀಜ ಮೊಳೆಯಲು ಅನುವಾಗುವಂತೆ ಮಕ್ಕಳು ಬಿತ್ತನೆ ಮಾಡಿದ ಸಾಲನ್ನು ಮಣ್ಣಿನಿಂದ ಮುಚ್ಚಿದರು
ಭೂಮಿಗೆ ಬಿದ್ದ ಬೀಜ ಮೊಳೆಯಲು ಅನುವಾಗುವಂತೆ ಮಕ್ಕಳು ಬಿತ್ತನೆ ಮಾಡಿದ ಸಾಲನ್ನು ಮಣ್ಣಿನಿಂದ ಮುಚ್ಚಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT