ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನೂರು: ಬರಡು ಕೆರೆಗೆ ಹರಿಯಬೇಕಿದೆ ಜೀವ ಜಲ

ಅವಸಾನದತ್ತ ಸಾಗಿದ ರಾಮನಗುಡ್ಡೆ, ಹುಬ್ಬೆಹುಣಸೆ ಕೆರೆಗಳು
Last Updated 19 ಸೆಪ್ಟೆಂಬರ್ 2021, 3:54 IST
ಅಕ್ಷರ ಗಾತ್ರ

ಹನೂರು: ಸಾವಿರಾರು ಎಕರೆ ಕೃಷಿ ಭೂಮಿ ಹಾಗೂ ಲಕ್ಷಾಂತರ ಜನರಿಗೆ ಜೀವನಾಡಿಯಾಗಬೇಕಿದ್ದ ಪಟ್ಟಣದ ರಾಮನಗುಡ್ಡೆ ಹಾಗೂ ಹುಬ್ಬೆಹುಣಸೆ ಕೆರೆಗಳು ನಿರ್ವಹಣೆ ಕೊರತೆಯಿಂದಾಗಿ ನಲುಗಿದ್ದು, ಇದನ್ನೇ ನಂಬಿ ಬದುಕುತ್ತಿದ್ದ ನೂರಾರು ರೈತರ ಜಮೀನುಗಳು ಬರಡುಭೂಮಿಗಳಾಗಿವೆ.

ಹನೂರು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿನ ಅಂತರ್ಜಲ ಮಟ್ಟ ಹೆಚ್ಚಿಸಿ ಕೃಷಿ ಭೂಮಿಗೆ ನೀರು ಒದಗಿಸುವ ಸಲುವಾಗಿ ನಿರ್ಮಿಸಲಾಗಿದ್ದಎರಡು ಕೆರೆಗಳು ಈಗ ಅಕ್ಷರಶಃ ಅವಸಾನದ ಹಾದಿ ಹಿಡಿದಿವೆ. ಒತ್ತುವರಿ ಒಂದೆಡೆಯಾದರೆ, ಕೆರೆ ತುಂಬೆಲ್ಲಾ ಬೆಳೆದು ನಿಂತಿರುವ ಗಿಡಗಂಟಿಗಳು ಇದು ಕೆರೆಯೇ ಎಂಬ ಸಂಶಯವನ್ನು ಹುಟ್ಟುಹಾಕುತ್ತಿವೆ.

ಈ ಎರಡೂ ಕೆರೆಗಳು ಕೊಳ್ಳೇಗಾಲದ ಸರಗೂರು ಬಳಿ ಕಾವೇರಿ ನದಿಯಿಂದ ನೀರನ್ನು ಎತ್ತಿ ತಾಲ್ಲೂಕಿನ ಮೂರು ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಅಡಿಯಲ್ಲಿ ಬರುತ್ತಿದೆ. ಈ ಯೋಜನೆ ಅನುಷ್ಠಾನಗೊಂಡು, ನೀರು ಕೆರೆಗಳಿಗೆ ಹರಿಯುವುದನ್ನು ನೋಡಲು ಈ ಭಾಗದ ಜನರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಪಟ್ಟಣಕ್ಕೆ ಹೊಂದಿಕೊಂಡಂತಿರುವ ಹುಲಸುಗುಡ್ಡೆ ಬಳಿ ನಾಲ್ಕು ದಶಕಗಳ ಹಿಂದೆ ರಾಮನಗುಡ್ಡ ಕೆರೆಯನ್ನು ನಿರ್ಮಿಸಲಾಗಿದೆ. ಕೃಷಿ ಜಮೀನಿಗೆ ನೀರು ಪೂರೈಸುವ ಉದ್ದೇಶದಿಂದ ನಿರ್ಮಾಣವಾದ ಈ ಕೆರೆಯಿಂದ ಪಟ್ಟಣಕ್ಕೆ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿತ್ತು. 93 ಎಕರೆ ‌ವಿಸ್ತೀರ್ಣದ ಈ ಕೆರೆ 750 ಎಕರೆ ಕೃಷಿ ಭೂಮಿಗೆ ನೀರು ಪೂರೈಸುವ ಸಾಮರ್ಥ್ಯವನ್ನು ಹೊಂದಿದೆ. ಹನೂರು, ಚಿಂಚಳ್ಳಿ ಹಾಗೂ ಮಂಗಲ ಗ್ರಾಮದ ರೈತರಿಗೆ ಇದರಿಂದ ಅನುಕೂಲವಾಗುತ್ತಿತ್ತು. ಆದರೆ, ನಿರ್ಮಾಣವಾದಾಗಿನಿಂದ ಇದುವರೆಗೆ ಮೂರು ಬಾರಿ ಮಾತ್ರ ಭರ್ತಿಯಾಗಿದೆ.

‘ಮೊದಲು ಒಂದೆರಡು ಮಳೆಗಳೀಗೆ ಕೆರೆ ಸಂಪೂರ್ಣ ಭರ್ತಿಯಾಗುತ್ತಿತ್ತು. ಆದರೆ ಇತ್ತೀಚೆಗೆ ಅಲ್ಲಲ್ಲಿ ಚೆಕ್ ಡ್ಯಾಂಗಳನ್ನು ನಿರ್ಮಾಣ ಮಾಡಲಾಗಿದೆ. ಇದರಿಂದ ನೀರು ತುಂಬಲು ಅಧಿಕ ಮಳೆ ಅಗತ್ಯವಾಗಿದೆ. ಇದರ ತಪ್ಪಲಿನಲ್ಲೇ ಕೊಳವೆಬಾವಿಗಳನ್ನು ಕೊರೆಸಿ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿತ್ತು. ಈಗ ಕಾವೇರಿ ನೀರು ಪೂರೈಕೆಯಾದ ಮೇಲೆ ಇದು ನಿಂತಿದೆ. ಕೆರೆಗೆ ನೀರು ತುಂಬಿಸುವ ಯೋಜನೆಯಲ್ಲಿ ಇಲ್ಲಿಗೆ ನೀರು ತುಂಬಿಸಿದರೆ ರೈತರಿಗೆ ಅನುಕೂಲವಾಗಲಿದೆ’ ಎಂದು ರಾಮನಗುಡ್ಡೆ ಕೆರೆ ನೀರು ಬಳಕೆದಾರರ ಸಂಘದ ಅಧ್ಯಕ್ಷ ರಮೇಶ್ ನಾಯ್ಡು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

148 ಎಕರೆಯ ಬೃಹತ್‌ ಕೆರೆ: ಹುಬ್ಬೆಹುಣಸೆ ಕೆರೆಯ ಪರಿಸ್ಥಿತಿಯೂ ಭಿನ್ನವಾಗಿಲ್ಲ. 148 ಎಕರೆ ವಿಸ್ತೀರ್ಣದ ಈ ಕೆರೆ 900 ಎಕರೆ ಕೃಷಿ ಭೂಮಿಗೆ ನೀರುಣಿಸುತ್ತಿತ್ತು. ಈಗ ತುಂಬಿದ ನೀರು ದೀರ್ಘ ಕಾಲ ಕೆರೆಯಲ್ಲಿ ನಿಲ್ಲುತ್ತಿಲ್ಲ. ನೀರಿನ ಸಂಗ್ರಹಣಾ ಸಾಮರ್ಥ್ಯವೂ ಕಡಿಮೆಯಾಗಿದೆ ಎಂದು ಹೇಳುತ್ತಾರೆ ರೈತರು. ಉದ್ದನೂರು, ಬೆಳತ್ತೂರು ಹಾಗೂ ಹನೂರು ಪಟ್ಟಣಕ್ಕೆ ನೀರು ಪೂರೈಸುತ್ತಿದ್ದ ಕೆರೆ ಈಗ ಸಂಪೂರ್ಣವಾಗಿ ಬತ್ತಿಹೋಗಿದೆ.

‘ಕೆರೆ ನಿರ್ಮಾಣವಾದ ಮೇಲೆ ನಿರ್ವಹಣೆ ಕೊರತೆಯಿಂದಾಗಿ ಕೆರೆಯ ತುಂಬೆಲ್ಲಾ ಗಿಡಗಂಟಿಗಳು ಬೆಳೆದು ನಿಂತಿವೆ. ಮಳೆ ಕೊರತೆಯಿಂದಾಗಿ ಇತ್ತೀಚೆಗೆ ಎರಡು ವರ್ಷಗಳಿಂದ ಕೆರೆಯೂ ತುಂಬಿಲ್ಲ. ನಾಲೆಗಳಲ್ಲಿ ದಿನನಿತ್ಯ ನೀರು ಸೋರಿಕೆಯಾಗುವುದರಿಂದ ಒಂದು ವೇಳೆ ಕೆರೆ ತುಂಬಿದರೂ ನೀರು ದೀರ್ಘಕಾಲ ಕೆರೆಯಲ್ಲಿ ಉಳಿಯುವುದಿಲ್ಲ. ಇದರ ಮಧ್ಯೆ ನಿರ್ಮಾಣವಾದಾಗಿನಿಂದ ಕೆರೆಯಲ್ಲಿ ಒಮ್ಮೆಯೂ ಹೂಳು ತೆಗೆಸದ ಪರಿಣಾಮ ನೀರಿನ ಸಂಗ್ರಹಣಾ ಸಾಮರ್ಥ್ಯವೂ ಕಮ್ಮಿಯಾಗಿದೆ. ಅಧಿಕಾರಿಗಳಿಗೆ ಹೇಳಿದರೆ ಅವರು ಆ ಕ್ಷಣಕ್ಕೆ ಸರಿಪಡಿಸುತ್ತೇವೆ ಎನ್ನುತ್ತಾರೆ. ಆದರೆ, ದಿನಕಳೆದಂತೆ ಯಥಾಸ್ಥಿತಿ ಮುಂದುವರೆಯುತ್ತದೆ. ಹೀಗಾದರೆ ಲಕ್ಷಾಂತರ ವೆಚ್ಚ ಮಾಡಿ ನಿರ್ಮಾಣ ಮಾಡಿದ ಕೆರೆಯ ಗತಿಯೇನು’ ಎಂದು ಪ್ರಶ್ನಿಸುತ್ತಾರೆ ಇಲ್ಲಿನ ರೈತರು.

ನೀರಿನ ನಿರೀಕ್ಷೆಯಲ್ಲಿ...

‌₹132 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳ್ಳುತ್ತಿರುವ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಅಡಿಯಲ್ಲಿ ಗುಂಡಾಲ್ ಜಲಾಶಯದ ಜತೆಗೆ ರಾಮನಗುಡ್ಡೆ ಕೆರೆ ಹಾಗೂ ಹುಬ್ಬೆಹುಣಸೆ ಕೆರೆಗಳೂ ಸೇರಿವೆ.

ಆದರೆ, ತಾಂತ್ರಿಕ ಸಮಸ್ಯೆಯಿಂದಾಗಿ ಯೋಜನೆಯಲ್ಲಿ ಗುಂಡಾಲ್ ಜಲಾಶಯಕ್ಕೆ ಮಾತ್ರ ನೀರು ತುಂಬಿಸಲಿದ್ದು, ಉಳಿದ ಎರಡು ಕೆರೆಗಳನ್ನು ಯೋಜನೆಯಲ್ಲಿ ಕೈ ಬಿಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ್ದ ಶಾಸಕ ಆರ್.‌ನರೇಂದ್ರ ಅವರು, ‘ಕಾವೇರಿ ನದಿಯಿಂದ ಒಂದೇ ಪೈಪ್‌ಲೈನ್‌ನಲ್ಲಿ ಹುಲಸುಗುಡ್ಡೆವರೆಗೆ ನೀರು ಬಂದು ಬಳಿಕ ಅಲ್ಲಿಂದ ರಾಮನಗುಡ್ಡೆ ಕೆರೆ ಹಾಗೂ ಹುಬ್ಬೆಹುಣಸೆ ಕೆರೆಗಳಿಗೆ ಪೈಪ್‌ಲೈನ್‌ ಮಾಡಿ, ಅದರ‌ ಮೂಲಕ ನೀರು ತುಂಬಿಸಲಾಗುವುದು. ಆದರೆ, ಇದರ ಬಗ್ಗೆ ಸರಿಯಾಗಿ ತಿಳಿಯದೇ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಈ ಅವಧಿಯಲ್ಲೇ ರಾಮನಗುಡ್ಡೆ ಕೆರೆ ಹಾಗೂ ಹುಬ್ಬೆಹುಣಸೆ ಕೆರೆಗಳಿಗೆ ನೀರು ತುಂಬಿಸಲಾಗುವುದು’ ಎಂದು ಸ್ಪಷ್ಟೀಕರಣ ನೀಡಿದ್ದರು.

––

ರಾಮನಗುಡ್ಡೆ ಕೆರೆ 5 ಎಕರೆ ಒತ್ತುವರಿಯಾಗಿದೆ ಎಂದು ತಿಳಿದು ಬಂದಿದೆ. ಸರ್ವೆ ನಡೆಸಲು ಭೂಮಾಪನ ಇಲಾಖೆಗೆ ಪತ್ರ ಬರೆಯಲಾಗಿದೆ

–ಜಿ.ಎಚ್.ನಾಗರಾಜು, ತಹಶೀಲ್ದಾರ್

–––

ರಾಮನಗುಡ್ಡೆ ಕೆರೆಯಲ್ಲಿ ಹೂಳು ತೆಗೆಸುವ ಸಲುವಾಗಿ ₹ 2 ಲಕ್ಷ ಅನುದಾನ ಮಂಜೂರು ಆಗಿದೆ. ಶೀಘ್ರದಲ್ಲೇ ಹೂಳು ತೆಗೆಸಲಾಗುವುದು

–ರಮೇಶ್ ನಾಯ್ಡು, ರಾಮನಗುಡ್ಡೆ ಕೆರೆ ನೀರು ಬಳಕೆದಾರರ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT