ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷಾ ಸೌಹಾರ್ದತಾ ದಿನ ಆಚರಣೆ

ಎಲ್ಲ ಭಾಷೆಗಳನ್ನು ಗೌರವಿಸಿ: ನ್ಯಾಯಾಧೀಶೆ ಸಿ.ಜಿ.ವಿಶಾಲಾಕ್ಷಿ ಕರೆ
Last Updated 21 ನವೆಂಬರ್ 2020, 14:20 IST
ಅಕ್ಷರ ಗಾತ್ರ

ಚಾಮರಾಜನಗರ: ‘ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಭಾಷೆಯ ಬಗ್ಗೆ ಅಭಿಮಾನಬೇಕು. ಆದರೆ ದುರಾಭಿಮಾನ ಬೇಡ. ಎಲ್ಲ ಭಾಷೆಗಳನ್ನೂ ಗೌರವಿಸುವ ಮನೋಭಾವ ಹೊಂದಿರಬೇಕು’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶೆ ಸಿ.ಜಿ.ವಿಶಾಲಾಕ್ಷಿ ಅವರು ಪ್ರತಿಪಾದಿಸಿದರು.

ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ರಾಷ್ಟ್ರೀಯ ಏಕತಾ ಸಪ್ತಾಹದ ಅಂಗವಾಗಿ ಆಯೋಜಿಸಿದ್ದ ಭಾಷಾ ಸೌಹಾರ್ದತಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಭಾಷೆ ಎಂದರೆ ಸಂವಹನ. ಪ್ರತಿಯೊಬ್ಬರಿಗೂ ಯಶಸ್ವಿ ಸಂವಹನಕ್ಕಾಗಿ ಒಂದಲ್ಲ ಒಂದು ಭಾಷೆಯ ಅಗತ್ಯವಿದೆ. ಹಾಗಾಗಿ, ಎಲ್ಲ ಭಾಷೆಗಳನ್ನು ನಾವು ಗೌರವಿಸಬೇಕು. ಎರಡು ರಾಜ್ಯ ಅಥವಾ ಪ್ರಾಂತ್ಯಗಳ ನಡುವಿನ ಒಳ ಜಗಳವನ್ನು ದುರುಪಯೋಗಪಡಿಸಿಕೊಂಡು ಹೊರಗಿನವರು ದೇಶ ಆಳಿದ ಇತಿಹಾಸ ನಮ್ಮಲ್ಲಿದೆ’ ಎಂದರು.

‘ನ.19ರಿಂದ 25ರ ತನಕ ರಾಷ್ಟ್ರೀಯ ಏಕತಾ ಸಪ್ತಾಹ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ. ದೇಶವು ವಿವಿಧ ಸಂಸ್ಕೃತಿ, ಆಚರಣೆ, ಜಾತಿ, ಧರ್ಮಗಳನ್ನು ಹೊಂದಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ನೂರಾರು ಭಾಷೆಗಳು, ಹಬ್ಬ ಹರಿದಿನಗಳು ಇವೆ. ಸಂಸ್ಕೃತಿ ಆಚರಣೆ ಬೇರೆಯಾದರೂ ನಾವೆಲ್ಲರೂ ಒಂದು ಎಂಬ ಮನೋಭಾವ ಪ್ರತಿಯೊಬ್ಬರಲ್ಲೂ ಮೂಡಬೇಕು’ ಎಂದು ವಿಶಾಲಾಕ್ಷಿ ಅವರು ಹೇಳಿದರು.

ಸಾಹಿತಿ ಹಾಗೂ ಪ್ರಾಂಶುಪಾಲ ಮಹೇಶ್ ಅವರು ಮಾತನಾಡಿ, ‘ದೇಶದಲ್ಲಿ ನೂರಾರು ಭಾಷೆಗಳಿದ್ದು, ತನ್ನದೇ ಆದ ಸೊಗಡು, ಸಾಹಿತ್ಯ, ಚಿಂತನೆಗನ್ನೊಳಗೊಂಡಿದೆ. ನಮ್ಮ ರಾಜ್ಯದಲ್ಲಿರುವ ಭಾಷಾ ಸೌಹಾರ್ದತೆ ಬೇರೆಯವರಿಗೆ ದೊಡ್ಡ ಉದಾಹರಣೆಯಾಗಿದೆ’ ಎಂದರು.

ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಮಂಜು ಎಸ್‌.ಹರವೆ, ಸಾಧನಾ ಸಂಸ್ಥೆಯ ಟಿ.ಜೆ.ಸುರೇಶ್, ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಕಸ್ತೂರಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT