ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಲುಪೇಟೆ: ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ರಥೋತ್ಸವ

Last Updated 19 ಮಾರ್ಚ್ 2023, 7:37 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಸ್ಥಳ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಹಿಮವದ್ ಗೋಪಾಲಸ್ವಾಮಿಯ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ವಿಜೃಂಭಣೆಯಿಂದ ಜರುಗಿತು.

ಈಶಾನ್ಯ ಪಾರ್ಶ್ವದಲ್ಲಿ ಧ್ವಜ ಪತಾಕೆ, ಪಣತಾರು, ಫಲಪುಷ್ಪಗಳಿಂದ ಅಲಂಕೃತಗೊಂಡಿದ್ದ ರಥದಲ್ಲಿ ಸ್ವಾಮಿಯ ಉತ್ಸವ ಮೂರ್ತಿ ಇರಿಸಿ ಪೂಜೆ ಸಲ್ಲಿಸಲಾಯಿತು. ಬಳಿಕ ದೇವಾಲಯದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಭಟ್ಟರ್ ಮಹಾ ಮಂಗಳಾರತಿ ನೆರವೇರಿಸಿದರು.

ತಹಶೀಲ್ದಾರ್ ಮಲ್ಲಿಕಾರ್ಜುನ್ ಅವರು ತೇರಿಗೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ಶಾಸಕ ಸಿ.ಎಸ್.ನಿರಂಜನಕುಮಾರ್ ರಥಕ್ಕೆ ಈಡುಗಾಯಿ ಹೊಡೆದು ತೇರು ಎಳೆದರು. ಅರಣ್ಯದಿಂದ ತಂದು ಕಟ್ಟಿದ್ದ ಹಂಬಿನಿಂದ ಭಕ್ತರು ರಥವನ್ನು ಎಳೆದು ಸಾಗಿದರು. ಒಂದು ಸುತ್ತು ಪ್ರದಕ್ಷಿಣೆ ನಂತರ ಮೂಲಸ್ಥಾನದಲ್ಲಿ ರಥೋತ್ಸವ ಕೊನೆಗೊಂಡಿತು.

ರಥೋತ್ಸವದ ಅಂಗವಾಗಿ ಪ್ರತಿ ವರ್ಷದಂತೆ ದೇವಾಲಯ, ರಾಜಗೋಪುರ ಮತ್ತು ಪ್ರವೇಶದ್ವಾರ, ಗೋಪುರಗಳಿಗೆ ಸುಣ್ಣ-ಬಣ್ಣ ಬಳಿದು ಶೃಂಗರಿಸಲಾಗಿತ್ತು. ಮಾರ್ಚ್ 15ರಿಂದಲೇ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ಜರುಗಿದವು. ತಾಲ್ಲೂಕಿನ ಗೋಪಾಲಪುರದ ತೇರು ಬಿಟ್ಟಿ ಸಂಘದವರು ಮತ್ತು ಕಣ್ಣೇಗಾಲ, ಕುಣಗಹಳ್ಳಿ, ಹೊನ್ನೇಗೌಡನಹಳ್ಳಿ, ದೇವರಹಳ್ಳಿ ಗ್ರಾಮಗಳ ಭಕ್ತರು ಕಾಡಿನ ಹಂಬು, ರಥದ ಶೃಂಗಾರಕ್ಕೆ ಬೇಕಾದ ಪಣತಾರು, ಬಿದಿರು ಕಡ್ಡಿಗಳನ್ನು ಅರಣ್ಯದಿಂದ ತಂದು ಸಿದ್ಧಗೊಳಿಸಿದ್ದರು. ಬೆಳಿಗ್ಗೆಯಿಂದಲೇ ವಿವಿಧೆಡೆಯ ಭಕ್ತರು ಪೂಜೆ ಸಲ್ಲಿಸಿ ಸೇವರ ದರ್ಶನ ಪಡೆದರು.

ರಥೋತ್ಸವದ ಅಂಗವಾಗಿ ತಾಲ್ಲೂಕಿನ ಹಂಗಳ ಸೋನೆಪುರದ ಬಸವೇಶ್ವರ ದೇವಾಲಯ, ಅರಣ್ಯ ಇಲಾಖೆ ಚೆಕ್‍ಪೋಸ್ಟ್ ಮತ್ತು ದೇವಾಲಯದ ಪೂರ್ವಪಾರ್ಶ್ವದಲ್ಲಿ ದಾನಿಗಳು ಮತ್ತು ಪೊಲೀಸ್ ಇಲಾಖೆಯಿಂದ ಉಪಾಹಾರ, ಸಿಹಿಪೊಂಗಲ್, ಮೊಸರನ್ನ, ಮಜ್ಜಿಗೆ, ಪಾನಕ ವಿತರಿಸಲಾಯಿತು.

ವಿಶೇಷ ಬಸ್ ವ್ಯವಸ್ಥೆ: ಕೊರೊನಾ ನಂತರ ರಥೋತ್ಸವ ವಿಜೃಂಭಣೆಯಿಂದ ನಡೆದಿದ್ದು, ಸಾವಿರಾರು ಭಕ್ತರು ಬಂದಿದ್ದರಿಂದ ಪಟ್ಟಣದ ಸಾರಿಗೆ ಸಂಸ್ಥೆ ಬಸ್ ನಿಲ್ದಾಣ, ಅರಣ್ಯ ಇಲಾಖೆ ಚೆಕ್‍ಪೋಸ್ಟ್ ಮತ್ತು ದೇವಾಲಯದ ಬಳಿಯಲ್ಲಿ ಬಸ್ ಹತ್ತಲು, ಟಿಕೆಟ್ ಖರೀದಿ ಮತ್ತು ದರ್ಶನಕ್ಕಾಗಿ ಸರದಿ ಸಾಲು ಕಂಡು ಬಂದಿತು. ಭಕ್ತರು ಅರಣ್ಯ ಇಲಾಖೆ ಚೆಕ್‍ಪೋಸ್ಟ್ ಬಳಿ ವಾಹನಗಳನ್ನು ನಿಲುಗಡೆ ಮಾಡಿ, ಹೆಚ್ಚುವರಿಯಾಗಿ ವ್ಯವಸ್ಥೆ ಮಾಡಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‍ಗಳಲ್ಲಿ ದೇವಾಲಯಕ್ಕೆ ಹೋಗಿ ಬಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT