ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳ್ಳೇಗಾಲ ಪಡಿತರ ಅವ್ಯವಹಾರ ಪ್ರಕರಣ: ತಲೆಮರೆಸಿಕೊಂಡ ಗೋದಾಮು ಅಧಿಕಾರಿ

Last Updated 27 ಸೆಪ್ಟೆಂಬರ್ 2018, 15:21 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಇಲ್ಲಿನ ತಾಲ್ಲೂಕು ವ್ಯವಸಾಯೋತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ (ಟಿಎಪಿಸಿಎಂಸಿ) ಪಡಿತರ ದಾಸ್ತಾನನ್ನು ದುರುಪಯೋಗ ಪಡಿಸಿಕೊಂಡಿರುವ ಪ್ರಕರಣದಲ್ಲಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ ನಂತರ ಗೋದಾಮು ಸಿದ್ದರಾಜು ಅವರು ತಲೆಮರೆಸಿಕೊಂಡಿದ್ದಾರೆ.

ಪೊಲೀಸರು ಅವರಿಗಾಗಿ ಹುಡುಕಾಟ ನಡೆಸಿದ್ದಾರೆ. ‘ಗುರುವಾರ ಅವರ ಮನೆ ಬಳಿ ಹೋಗಿ ಪರಿಶೀಲನೆ ಮಾಡಿದ್ದೇವೆ. ಅವರು ಅಲ್ಲಿರಲಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.

ಎರಡು–ಮೂರು ತಿಂಗಳಿನಿಂದತಾಲ್ಲೂಕಿನ ಲೊಕ್ಕನಹಳ್ಳಿ ಹೋಬಳಿಯ ಗಿರಿಜನ ವ್ಯಾಪ್ತಿಗೆ ಒಳಪಡುವ ಮೂರು ನ್ಯಾಯಬೆಲೆ ಅಂಗಡಿಗಳಿಗೆ ಮೂರು ತಿಂಗಳುಗಳಿಂದ ಅನ್ನಭಾಗ್ಯದ ಅಕ್ಕಿ, ಸಕ್ಕರೆ, ಎಣ್ಣೆ ಹಾಗೂ ಬೇಳೆಗಳನ್ನು ಸರಿಯಾಗಿ ವಿತರಣೆ ಆಗದೇ ಇದ್ದುದರಿಂದ ಈ ಹಗರಣ ಬೆಳಕಿಗೆ ಬಂದಿದೆ ಎಂದು ಹೇಳಲಾಗುತ್ತಿದೆ.ಹಲವು ಸಮಯದಿಂದ ಪಡಿತರ ದಾಸ್ತಾನನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ.

ವಾರದ ಹಿಂದೆಅಕ್ರಮದ ಆರೋಪ ಕೇಳಿ ಬಂದ ತಕ್ಷಣಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರುರಚಿಸಿದ್ದ, ಆಹಾರ ಇಲಾಖೆಯ ಉಪನಿರ್ದೇಶಕ ಆರ್‌. ರಾಚಪ್ಪ ನೇತೃತ್ವದ ತನಿಖಾ ತಂಡ ಮಂಗಳವಾರ ಗೋದಾಮಿಗೆ ಭೇಟಿ ನೀಡಿ ದಾಸ್ತಾನು ಪರಿಶೀಲಿಸಿದ್ದ ಸಂದರ್ಭದಲ್ಲಿ ಕೆಲವು ಸದಸ್ಯರು ಸಿದ್ದರಾಜು ಅವರನ್ನು ಸಮರ್ಥಿಸಿಕೊಂಡಿದ್ದರು. ಇಲಾಖೆಯ ಅಧಿಕಾರಿಗಳು ಅವರಿಗೆ ಅನಗತ್ಯಕಿರುಕುಳ ನೀಡುತ್ತಿದ್ದಾರೆ. ಹಗರಣದ ಆರೋಪ ಶುದ್ಧ ಸುಳ್ಳು ಎಂದೂ ಹೇಳಿದ್ದರು.

‘ತಾಲ್ಲೂಕಿನಲ್ಲಿ ಪಡಿತರ ಅಕ್ಕಿ ಸಮರ್ಪಕವಾಗಿ ವಿತರಣೆ ಆಗುತ್ತಿದೆ ಎಂದುನಮಗೆ ಗೋದಾಮು ಅಧಿಕಾರಿ ಸಿದ್ದರಾಜು ಹೇಳಿದ್ದರು. ಆದರೆ ಅವರು ಪಡಿತರಿಗೆ ಅಕ್ಕಿ, ಬೇಳೆ, ಸಕ್ಕರೆ ಮತ್ತು ಎಣ್ಣೆಯನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ನಮಗೆ ತಿಳಿದು ಬಂದಿದ್ದು ವಾರದ ಹಿಂದೆ. ಇದನ್ನು ಅವರು ಹೇಗೆ ಮಾಡಿದರು ಎಂಬುದು ಗೊತ್ತಿಲ್ಲ’ ಎಂದುಟಿಎಪಿಸಿಎಂಸಿ ಅಧ್ಯಕ್ಷ ಮೆಹಬೂಬ್‌ ಶರೀಫ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಬಯಲಿಗೆ ಬಂದಿದ್ದು ಹೇಗೆ?

‘ಸಾಮಾನ್ಯವಾಗಿ ಪಡಿತರ ವಿತರಣೆಗಾಗಿ ಸರ್ಕಾರ ಪ್ರತಿ ತಿಂಗಳು ದಾಸ್ತಾನಿಗೆ ಪಡಿತರ ವಸ್ತುಗಳು ಪೂರೈಸುತ್ತಲೇ ಇರುತ್ತದೆ. ಆಗ, ದಾಸ್ತಾನು ಕೇಂದ್ರಕ್ಕೆ ಅಕ್ಕಿ ಹಾಗೂ ಇನ್ನಿತರ ವಸ್ತುಗಳು ಬರುತ್ತಲೇ ಇರುತ್ತದೆ. ಅಲ್ಲಿಂದ ನ್ಯಾಯಬೆಲೆ ಅಂಗಡಿಗಳಿಗೆ ಸರಬರಾಜು ಆಗುತ್ತಿರುತ್ತದೆ. ನಿರಂತರವಾಗಿ ಹೀಗೆ ಹೀಗೆ ಸಾಗುತ್ತಿರುವಾಗ ದಾಸ್ತಾನಿನ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲು ಇಲಾಖೆ ಹೋಗುವುದಿಲ್ಲ. ಆದರೆ, ಈ ತಿಂಗಳು ಹಣಕಾಸಿನ ಕೊರತೆಯಿಂದಾಗಿ ಗೋದಾಮಿಗೆ ಪಡಿತರ ಪೂರೈಕೆ ಆಗಲಿಲ್ಲ. ಇದೇ ಸಮಯದಲ್ಲಿ ಕೆಲವು ಕಡೆಗಳಲ್ಲಿಮೂರು ತಿಂಗಳಿನಿಂದ ಪಡಿತರ ವಿತರಣೆ ಆಗಲಿಲ್ಲ. ಪರಿಶೀಲನೆ ನಡೆಸಿದಾಗ, ದಾಸ್ತಾನಿನಲ್ಲಿ ಕೊರತೆ ಇರುವುದು ಕಂಡು ಬಂತು’ ಎಂದು ಆಹಾರ ಇಲಾಖೆಯ ಉಪ ನಿರ್ದೇಶಕ ಆರ್‌. ರಾಚಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಸಾಮಾನ್ಯವಾಗಿ ಎಲ್ಲ ಗೋದಾಮು‌ಗಳಲ್ಲಿ ಒಂದು ತಿಂಗಳಿಗೆ ಬೇಕಾಗುವಷ್ಟು ದಾಸ್ತಾನು ಇರುತ್ತದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ದುರುಪಯೋಗವಾದ ಅಕ್ಕಿಯಲ್ಲಿ 1,751 ಕ್ವಿಂಟಲ್‌ಗಳಷ್ಟು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳ ಹಾಸ್ಟೆಲ್‌ಗಳಿಗೆ ಸೇರಿದ್ದು, 700 ಕ್ವಿಂಟಲ್‌ ಪಡಿತರ ವಿತರಣೆಯ ಉದ್ದೇಶದ್ದು’ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT