ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ದಿಂಬಂ ಘಾಟಿ ರಾತ್ರಿ ಸಂಚಾರ; ನಿಯಮಗಳ ಪ್ರಕಟಣೆ

Last Updated 10 ಏಪ್ರಿಲ್ 2022, 16:10 IST
ಅಕ್ಷರ ಗಾತ್ರ

ಚಾಮರಾಜನಗರ: ತಮಿಳುನಾಡಿನ ಸತ್ಯಮಂಗಲ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ ಸಂಬಂಧ ಮದ್ರಾಸ್‌ ಹೈಕೋರ್ಟ್‌ ಇದೇ 6ರಂದು ನೀಡಿರುವ ಆದೇಶ ಹಾಗೂ 2019ರ ಜನವರಿ 7ರಂದು ಈರೋಡ್‌ ಜಿಲ್ಲಾಧಿಕಾರಿ ಹೊರಡಿಸಿರುವ ಅಧಿಸೂಚನೆಯ ಆಧಾರದಲ್ಲಿ ತಮಿಳುನಾಡಿನ ಅರಣ್ಯ ಇಲಾಖೆ ನಿಯಮಗಳನ್ನು ರೂಪಿಸಿದೆ.

ಇದೇ 6ರಿಂದ ನಿಯಮಗಳು ಜಾರಿಗೆ ಬಂದಿವೆ.ಅದರಂತೆ, 12ಕ್ಕಿಂತ ಹೆಚ್ಚು ಚಕ್ರಗಳನ್ನು ಹೊಂದಿರುವ ವಾಹನಗಳಿಗೆ ಈ ಹೆದ್ದಾರಿಯಲ್ಲಿ ಸಂಚರಿಸಲು ನಿರ್ಬಂಧ ವಿಧಿಸಲಾಗಿದೆ.

16.2 ಟನ್‌ಗಿಂತ ಕಡಿಮೆ ಭಾರದ ವಾಹನಗಳು ಮಾತ್ರ ಸಂಚರಿಸಬಹುದು. ವಾಣಿಜ್ಯ ಉದ್ದೇಶದ ಸರಕು, ಭಾರದ ವಾಹನಗಳಿಗೆ ಬೆಳಿಗ್ಗೆ 6ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸಂಚರಿಸಲು ಅವಕಾಶ ಇದೆ.ಲಘು ವಾಹನಗಳು ಬೆಳಿಗ್ಗೆ 6ರಿಂದ ರಾತ್ರಿ 9 ಗಂಟೆವರೆಗೆ ಸಂಚರಿಸಬಹುದು. ಎಲ್ಲ ವಾಣಿಜ್ಯ ವಾಹನಗಳು ಚೆಕ್‌ಪೋಸ್ಟ್‌ನಲ್ಲಿ ಅರಣ್ಯ ಇಲಾಖೆ ನಿಗದಿಪಡಿಸಿರುವ ಶುಲ್ಕ ಪಾವತಿಸುವುದು ಕಡ್ಡಾಯ ಎಂದು ನಿಯಮಗಳಲ್ಲಿ ಹೇಳಲಾಗಿದೆ.

ಉಳಿದಂತೆ ಆಂಬುಲೆನ್ಸ್‌, ತುರ್ತು ಹಾಗೂ ವೈದ್ಯಕೀಯ ಉದ್ದೇಶದ ವಾಹನಗಳ ಸಂಚಾರಕ್ಕೆ ಅವಕಾಶ ಇದೆ. ಪಾಸ್‌ ಹೊಂದಿರುವ ಆರೋಗ್ಯ ಕಾರ್ಯಕರ್ತರು ಹಾಗೂ ವೈದ್ಯರ ವಾಹನಗಳು, ಸರ್ಕಾರಿ ವಾಹನಗಳು, ಹಾಲಿನ ವಾಹನ, ಹುಲಿ ಸಂರಕ್ಷಿತ ಪ್ರದೇಶದಲ್ಲಿ ನೆಲೆಸಿರುವವರ ವಾಹನಗಳಿಗೆ ಅವಕಾಶ ನೀಡಲಾಗಿದೆ.

ಹುಲಿ ಸಂರಕ್ಷಿತ ಪ್ರದೇಶವನ್ನು ಸಂಜೆ 6 ಗಂಟೆಯ ಒಳಗೆ ಪ್ರವೇಶಿಸಿದ, ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಇರುವ ಗ್ರಾಮಗಳಲ್ಲಿ ತರಕಾರಿ ಅಥವಾ ಹಣ್ಣುಗಳನ್ನು ಸಾಗಣೆ ಮಾಡುವ ವಾಹನಗಳು ರಾತ್ರಿ ಹೆದ್ದಾರಿಯಲ್ಲಿ ಸಂಚರಿಸಬಹುದು ಎಂದು ಸತ್ಯಮಂಗಲ ಹುಲಿ ಸಂರಕ್ಷಿತ ಪ್ರದೇಶದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT