ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಲುಪೇಟೆ| ಅರಿಸಿನ ಖರೀದಿಗೆ ಷರತ್ತು ಖಂಡಿಸಿ ರೈತರ ಪ್ರತಿಭಟನೆ

Published 18 ಜೂನ್ 2023, 14:49 IST
Last Updated 18 ಜೂನ್ 2023, 14:49 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಬೆಂಬಲ ಬೆಲೆಯಲ್ಲಿ ಅರಿಸಿನ ಖರೀದಿಗೆ ಷರತ್ತು ವಿಧಿಸಿರುವ ಕ್ರಮ ಖಂಡಿಸಿ ರೈತರು ಮತ್ತು ರಾಜ್ಯ ಅರಿಸಿನ ಬೆಳೆಗಾರರ ಸಂಘಟನೆ ಪದಾಧಿಕಾರಿಗಳು ರಾಷ್ಟ್ರೀಯ ಹೆದ್ದಾರಿ ತಡೆದು ಭಾನುವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಹೊರ ವಲಯದಲ್ಲಿರುವ ಎಪಿಎಂಸಿ ಮಾರುಕಟ್ಟೆ ಬಳಿ ರಾಷ್ಟ್ರೀಯ ಹೆದ್ದಾರಿ 766-ರಲ್ಲಿ ರಸ್ತೆ ತಡೆದ ರೈತ ಮುಖಂಡರು ಅಧಿಕಾರಿಗಳು ಹಾಗೂ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು.

ಈ ಸಂದರ್ಭದಲ್ಲಿ ಅರಿಸಿನ ಬೆಳೆಗಾರರ ರಾಜ್ಯ ಸಂಘಟನೆ ಸಂಚಾಲಕ ನಾಗಾರ್ಜುನಕುಮಾರ್ ಮಾತನಾಡಿ, ‘ಕೇಂದ್ರ ಕೃಷಿ ಸಚಿವಾಲಯ ರಾಜ್ಯ ಸಹಕಾರ ಇಲಾಖೆಗೆ ಖರೀದಿ ಕೇಂದ್ರ ತೆರೆಯುವಂತೆ ನೀಡಿದ್ದ ಆದೇಶ ಪಾಲನೆಯಾಗದ ಹಿನ್ನೆಲೆಯಲ್ಲಿ ಜೂನ್‌ 12ರಂದು ರೈತರು ಮತ್ತು ಅರಿಸಿನ ಬೆಳೆಗಾರರ ಸಂಘಟನೆ ಪದಾಧಿಕಾರಿಗಳು ಎಪಿಎಂಸಿ ಪ್ರಾಂಗಣದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕಾಗಮಿಸಿ ರೈತರೊಂದಿಗೆ ಚರ್ಚಿಸಿದ್ದ ಶಾಸಕ ಎಚ್.ಎಂ.ಗಣೇಶ್‍ಪ್ರಸಾದ್ ಕೂಡ ಖರೀದಿ ಕೇಂದ್ರ ತೆರೆಯುವಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಜೂನ್ 18ರಂದು ಖರೀದಿ ಕೇಂದ್ರ ತೆರೆಯುವ ಭರವಸೆ ಸಿಕ್ಕಿತ್ತು. ಆದರೂ ಕೂಡ ಖರೀದಿಗೆ ಮುಂದಾಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ರಾಜ್ಯ ಅರಿಸಿನ ಬೆಳೆಗಾರರ ಸಂಘಟನೆ ನೀಡಿದ್ದ ಪ್ರಕಟಣೆಯಂತೆ ಪಾಲಿಶ್ ಮಾಡಿದ ಅರಿಸಿನವನ್ನು 50 ಕೆ.ಜಿ ತೂಕದ ಚೀಲದಲ್ಲಿ ತುಂಬಿಸಿಕೊಂಡು ರೈತರು ಮಾರಾಟಕ್ಕೆ ತಂದಿದ್ದಾರೆ. ಆದರೆ, ಖರೀದಿ ಕೇಂದ್ರದಲ್ಲಿ ಪಾಲಿಶ್ ಮಾಡಿದ್ದರೂ ಗುಂಡು ಅರಿಸಿನ ಖರೀದಿಸುವುದಿಲ್ಲವೆಂದು ಷರತ್ತು ಹಾಕಲಾಗಿದೆ’ ಎಂದು ಆಕ್ರೋಶ ಹೊರ ಹಾಕಿದರು.

ಈ ಸಂದರ್ಭದಲ್ಲಿ ಅರಿಸಿನ ತುಂಬಿದ ಟ್ರ್ಯಾಕ್ಟರ್ ಇತರೆ ವಾಹನಗಳು ಪ್ರಾಂಗಣದಲ್ಲಿ ಸಾಲುಗಟ್ಟಿ ನಿಂತಿದ್ದವು. ಹೆದ್ದಾರಿ ರಸ್ತೆ ತಡೆಯಿಂದ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದರಿಂದ ಸರಕು ಸಾಗಣೆ ವಾಹನಗಳು ರಸ್ತೆಯಲ್ಲಿ ಸಾಲುಗಟ್ಟಿ ನಿಂತಿದ್ದವು.

ಕೃಷಿ ಸಹಾಯಕ ನಿರ್ದೇಶಕ ಸಂತೋಷ್ ಹಾಗೂ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜು ಸ್ಥಳಕ್ಕಾಗಮಿಸಿ ಪ್ರತಿಭಟನಕಾರರನ್ನು ಮನವೊಲಿಸಲು ಪ್ರಯತ್ನಪಟ್ಟರೂ ರೈತರು ಬಗ್ಗಲಿಲ್ಲ. ಪಿಎಸ್‍ಐ ಕಿರಣ್‌ರ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಪ್ರತಿಭಟನೆಯಲ್ಲಿ ರೈತ ಮುಖಂಡ ಕುಂದಕೆರೆ ಸಂಪತ್ತು ಸೇರಿದಂತೆ 80ಕ್ಕೂ ಅಧಿಕ ರೈತ ಮುಖಂಡರು, ಅರಿಸಿನ ಬೆಳೆಗಾರರು ರೈತರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT