ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿ ಜಿಲ್ಲೆಯಲ್ಲಿ ಗಣರಾಜ್ಯೋತ್ಸವದ ಸಂಭ್ರಮ

ಜಿಲ್ಲಾ ಉಸ್ತುವಾರಿ ಸಚಿವರಿಂದ ಧ್ವಜಾರೋಹಣ, ಗಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾಧಕರಿಗೆ ಸನ್ಮಾನ
Last Updated 27 ಜನವರಿ 2020, 11:01 IST
ಅಕ್ಷರ ಗಾತ್ರ

ಚಾಮರಾಜನಗರ: 71ನೇ ಗಣರಾಜ್ಯೋತ್ಸವವನ್ನು ಜಿಲ್ಲೆಯಾದ್ಯಂತಭಾನುವಾರ ಸಂಭ್ರಮ ಸಡಗರದಿಂದ ಆಚರಿಸಲಾಯಿತು.

ಡಾ.ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಪ್ರಧಾನ‌ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಅವರು ಧ್ವಜಾರೋಹಣ ನೆರವೇರಿಸಿದರು. ನಂತರ ತೆರೆದ ವಾಹನದಲ್ಲಿ ಸಾಗಿ ಗೌರವ ವಂದನೆ ಸ್ವೀಕರಿಸಿದರು.

ಪೊಲೀಸ್, ಗೃಹ ರಕ್ಷಕ ದಳ, ಅರಣ್ಯ ರಕ್ಷಣಾ ದಳ. ಎನ್‌ಸಿಸಿ ವಿದ್ಯಾರ್ಥಿಗಳು ಹಾಗೂ ವಿವಿಧ ಶಾಲಾ ವಿದ್ಯಾರ್ಥಿಗಳು ನಡೆಸಿದ ಆಕರ್ಷಕ ಪಥಸಂಚಲನ ಗಮನಸೆಳೆಯಿತು.

ಸಂಕುಚಿತ ಭಾವನೆ ಬಿಡೋಣ: ಸಮಾರಂಭದಲ್ಲಿ ಎಲ್ಲರನ್ನು ಉದ್ದೇಶಿಸಿ ಮಾತನಾಡಿದ ಎಸ್. ಸುರೇಶ್ ಕುಮಾರ್ ಅವರು, 'ಗಣತಂತ್ರ ವ್ಯವಸ್ಥೆಯಲ್ಲಿ ಜನರ ಸಕ್ರಿಯ ಸಹಭಾಗಿತ್ವ ಇಲ್ಲದೆ ಯಾವುದೇ ಅಭಿವೃದ್ಧಿ ಕಾರ್ಯವು ಅರ್ಥಪೂರ್ಣ ಆಗದು. ನಾವೆಲ್ಲರೂ ರಾಷ್ಟ್ರ ಮತ್ತು ರಾಜ್ಯದ ಅಭಿವೃದ್ಧಿಗೆ ಕಟಿಬದ್ಧರಾಗೋಣ' ಎಂದು ಕರೆ ನೀಡಿದರು.

'ಸಂಕುಚಿತ ಭಾವನೆ, ಪ್ರಾದೇಶಿಕ ಅಸಮಾನತೆ ಮುಂತಾದ ವಿಷಯಗಳನ್ನು ಬದಿಗೊತ್ತಿ ಅನಕ್ಷರತೆ, ಬಡತನ, ನಿರುದ್ಯೋಗ ನಿರ್ಮೂಲನಗೊಳಿಸುವಲ್ಲಿ ನಾವೆಲ್ಲರೂ ಶ್ರಮಿಸ ಬೇಕಾಗಿದೆ' ಎಂದು ಪ್ರತಿಪಾದಿಸಿದರು.

ಗಮನಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ: ಸಚಿವರ ಭಾಷಣದ ನಂತರವಿವಿಧ ಶಾಲಾ ವಿದ್ಯಾರ್ಥಿಗಳು ಪ್ರದರ್ಶಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.

ಚಾಮರಾಜನಗರ ತಾಲ್ಲೂಕಿನ ಮಲ್ಲಯ್ಯನ ಪುರದ ಕ್ರೆಸೆಂಟ್ ಅಕಾಡೆಮಿ ಶಾಲೆಯ 300 ಮಕ್ಕಳು, ‘ನಾವೆಲ್ಲ ಭಾರತೀಯರು’ ಎಂಬ ನೃತ್ಯ ರೂಪಕಕ್ಕೆ ಹೆಜ್ಜೆ ಹಾಕಿದರೆ,ಚಾಮರಾಜನಗರ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ 250 ವಿದ್ಯಾರ್ಥಿನಿಯರ್‌ ‘ಹೇ ವತನ್’ ಎಂಬ ವಿವಿಧ ಹಾಡುಗಳ ಸರಣಿಗೆ ನೃತ್ಯ ಮಾಡಿದರು.

ಚಾಮರಾಜನಗರದ ಸಂತ ಜೋಸೆಫ್‌ ಶಾಲೆಯ 300 ವಿದ್ಯಾರ್ಥಿಗಳು ‘ಇದೇ ಭವ್ಯ ಭಾರತ’ ನೃತ್ಯ ರೂಪಕ ಪ್ರದರ್ಶಿಸಿ ಮೆಚ್ಚುಗೆ ಗಳಿಸಿದರು.

ಚಾಮರಾಜನಗರದ ಸೇವಾಭಾರತಿ ಇಂಗ್ಲಿಷ್‌ ಪ್ರೌಢಶಾಲೆಯ ವಿದ್ಯಾರ್ಥಿಗಳು ‘ವಿವಿಧತೆಯಲ್ಲಿ ಏಕತೆ’ ಹಾಡಿಗೆ ನೃತ್ಯ ಮಾಡಿದರು. ಇದರಲ್ಲಿ 200 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸೋಮವಾರ ಪೇಟೆಯ ಯೂನಿವರ್ಸ್‌ ಶಾಲೆಯ 200 ಮಕ್ಕಳು ‘ಬಿಲ್ವ ಬಿಲ್ವ’, ಹೊಂಡರಬಾಳು ನವೋದಯ ಆಲೆಯ 200 ಮಕ್ಕಳು ‘ಜೈ ಹೋ, ಜೈ ಹೋ’ ಮತ್ತು ಚಾಮರಾಜನಗರದ ಬಂಜಾರ ಇಂಡಿಯನ್‌ ಶಾಲೆಯ 200 ಮಕ್ಕಳು ‘ಕೂಡಿ ಬಾಳೋಣ’ ನೃತ್ಯ ರೂಪಕಗಳನ್ನು ಪ್ರದರ್ಶಿಸಿ ಗಮನ ಸೆಳೆದರು.

ರಾಜ್ಯ ಮಟ್ಟದ ಬ್ಯಾಂಡ್‌ ಸ್ಪರ್ಧೆಯಲ್ಲಿ ಮೊದಲ ಸ್ಥಾನಗಳಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುವ ಕೊಳ್ಳೇಗಾಲದ ಭವನ್ಸ್‌ ಗೀತಾ ಶಾಲೆಯ 200 ಮಕ್ಕಳು ಲಯ ಬದ್ಧವಾಗಿ ಬ್ಯಾಂಡ್‌ ನುಡಿಸಿ ಸಭಿಕರ ಚಪ್ಪಾಳೆ ಗಿಟ್ಟಿಸಿದರು.

ಆಕರ್ಷಿಸಿದ ಗಾಂಧಿ ವೇಷಧಾರಿ ಬಾಲಕ: ಮೈಗೆಲ್ಲ ಬೆಳ್ಳಿ ಬಣ್ಣವನ್ನು ಲೇಪಿಸಿ ಗಾಂಧಿ ವೇಷ ಧರಿಸಿದ್ದ ಬಾಲಕ ಸಾದಿಕ್‌ ಉಲ್ಲಾ ಖಾನ್ ಕಾರ್ಯಕ್ರಮದಲ್ಲಿ ಎಲ್ಲರ ಗಮನ ಸೆಳೆದ. ವೇದಿಕೆಗೆ ತೆರಳಿ, ಸಚಿವ ಸುರೇಶ್‌ ಕುಮಾರ್‌ ಹಾಗೂ ಗಣ್ಯರೊಂದಿಗೆ ಮೆಚ್ಚುಗೆ ಗಳಿಸಿದ.

ಸನ್ಮಾನ: ಸಮಾರಂಭದಲ್ಲಿ ಶೌರ್ಯ ಚಕ್ರ ಪ್ರಶಸ್ತಿಗೆ ಭಾಜನರಾಗಿದ್ದ ಮಾರ್ಟಳ್ಳಿಯ ಯೋಧ ಲೂಯಿಸ್‌ ಪೆರಿಯನಾಯಗನ್‌ ಅವರನ್ನು ಸನ್ಮಾನಿಸಲಾಯಿತು. ಪ್ರಧಾನಿ ಮೋದಿ ಅವರು ನಡೆಸಿದ ಪರೀಕ್ಷಾ‍ಪೇ ಚರ್ಚೆಯಲ್ಲಿ ಭಾಗವಹಿಸಿದ್ದ ಗುಂಡ್ಲುಪೇಟೆ ಆದರ್ಶ ಶಾಲೆಯ ಅಪೂರ್ವ ಹಾಗೂಯಳಂದೂರು ಆದರ್ಶ ಶಾಲೆಯ ಅರ್ಫತ್‌ ಮತ್ತು ರಾಜ್ಯ ಚುನಾವಣಾ ಆಯೋಗ ಸ್ವೀಪ್‌ ಸಮಿತಿ ನಡೆಸಿದ ರಾಜ್ಯ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದ ಸಿಂಗನಲ್ಲೂರು ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಓಂಕಾರ್‌ ಗೌಡ ಹಾಗೂ ರಿಜುಷ ಅವರನ್ನು ಸನ್ಮಾನಿಸಿ, ನೆನಪಿನ ಕಾಣಿಕೆ ನೀಡಲಾಯಿತು.

ಶಾಸಕ ಸಿ.ಪುಟ್ಟರಂಗಶೆಟ್ಟಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷ ಕೆ.ಎಸ್‌.ಮಹೇಶ್‌, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶೋಭಾ, ಉಪಾಧ್ಯಕ್ಷ ಜಿ.ಬಸವಣ್ಣ, ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಚ್‌.ನಾರಾಯಣ ರಾವ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದ ಕುಮಾರ್‌, ಚಾಮರಾಜನಗರ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್‌ ಕುಮಾರ್‌, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್‌.ಆನಂದ್‌ ಇದ್ದರು.

ಅಭಿವೃದ್ಧಿ ಯೋಜನೆಗಳನ್ನು ಪಟ್ಟಿ ಮಾಡಿದ ಸಚಿವ

ಜಿಲ್ಲಾ ಉಸ್ತುವಾರಿ ಸಚಿವರುತಮ್ಮ ಭಾಷಣದಲ್ಲಿ 2019-20ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ವಿವರಗಳನ್ನು ನೀಡಿದರು.

* ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ₹23.82 ಲಕ್ಷ ಮಾನವ ದಿನಗಳನ್ನು ಸೃಷ್ಟಿಸಲಾಗಿದೆ. ಶೇ 72.48 ಪ್ರಗತಿ ಸಾಧಿಸಲಾಗಿದೆ.

* ₹1.59 ಕೋಟಿ ವೆಚ್ಚದಲ್ಲಿ ಘನ ತ್ಯಾಜ್ಯ ನಿರ್ವಹಣ ಘಟಕ ಸ್ಥಾಪನೆಗೆ 17 ಗ್ರಾಮ ಪಂಚಾಯಿತಿಗಳ ಆಯ್ಕೆ.

* ಹನೂರು ತಾಲ್ಲೂಕು ವ್ಯಾಪ್ತಿಯ ರಾಮನಗುಡ್ಡ ಹಾಗೂ ಹುಬ್ಬೆಗುಣಸೆ ಕೆರೆಗಳಿಗೆ ಕೊಳ್ಳೇಗಾಲ ತಾಲ್ಲೂಕಿನ ಸರಗೂರು ಬಳಿ ಕಾವೇರಿ ನದಿಯಿಂದ ₹129 ಕೋಟಿ ವೆಚ್ಚದಲ್ಲಿ ನೀರೆತ್ತುವ ಕಾಮಗಾರಿ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದ್ದು, 50 ಸಾವಿರ ಜನರು ಹಾಗೂ ಜಾನುವಾರುಗಳಿಗೆ ಪ್ರಯೋಜನವಾಗಲಿದೆ.

* ₹427.35 ಕೋಟಿ ವೆಚ್ಚದಲ್ಲಿ ಹನೂರು ವಿಭಾಗದ 291 ಜನವಸತಿ ಗ್ರಾಮಗಳಿಗೆ ಮತ್ತು ಕೊಳ್ಳೇಗಾಲ ಹಾಗೂ ಯಳಂದೂರು ವಿಭಾಗದ 65 ಜನವಸತಿ ಗ್ರಾಮಗಳಿಗೆ ₹116 ಕೋಟಿ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರು ಪೂರೈಸುವಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಪಗ್ರತಿಯಲ್ಲಿವೆ.

* ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ ಡಿಸೆಂಬರ್‌ವರೆಗೆ 1,86,352 ಕಾರ್ಡ್‌ಗಳನ್ನು ವಿತರಿಸಲಾಗಿದೆ.

* ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆವರಣದಲ್ಲಿ ವಿದ್ಯಾರ್ಥಿ ನಿಲಯ, ವೈದ್ಯರ ವಸತಿಗೃಹ ಹಾಗೂ ಶುಶ್ರೂಷಕರ ವಸತಿಗೃಹಗಳನ್ನು ₹68.48 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಹಾಗೂ ನಿರ್ಮಾಣವಾಗುತ್ತಿರುವ ಆಸ್ಪತ್ರೆಗೆ ಮೂಲಸೌಕರ್ಯ ಒದಗಿಸಲು ₹ 15 ಕೋಟಿ ವೆಚ್ಚ ಮಾಡಲು ಆಡಳಿತ ಮಂಡಳಿ ಅನುಮೋದನೆ ನೀಡಿದೆ.

* ಸಾರ್ವಜನಿಕರಿಗೆ ಉತ್ತಮ ಚಿಕಿತ್ಸೆ ನೀಡಲು ಬೋಧನಾ ಆಸ್ಪತ್ರೆಯಲ್ಲಿ ಎಂಐಸಿಯು ಮತ್ತು ಐಸಿಯು ನಿರ್ಮಾಣ ಮಾಡಲು ಸಂಸ್ಥೆಯ ಆಡಳಿತ ಮಂಡಳಿ ಅನುಮೋದನೆ ನೀಡಿದೆ.

* ಪರಿಶಿಷ್ಟ ಜಾತಿ ಕಾಲೊನಿಗಳ ಅಭಿವೃದ್ಧಿಗೆ 33 ಗ್ರಾಮಗಳ ಆಯ್ಕೆ.

* ಹಿಂದುಳಿದ ವರ್ಗಗಳ ವಿವಿಧ 50 ಸಮುದಾಯ ಭವನಗಳನ್ನು ನಿರ್ಮಿಸಲು ₹ 3.75 ಕೋಟಿ ಬಿಡುಗಡೆ.

* ಕರ್ನಾಟಕ ಕೈಗಾರಿಕಾ ನೀತಿ ಅನ್ವಯ 30 ಉದ್ಯಮಗಳಿಗೆ ಯೋಜನಾ ಅನುಮೋದನೆ ನೀಡಿದ್ದು, ₹52 ಬಂಡವಾಳದ ಜೊತೆಗೆ 759 ಜನರಿಗೆ ಉದ್ಯೋಗಾವಕಾಶ ದೊರೆಯಲಿದೆ.

* 5,911 ಮಂದಿ ಅಂಗವಿಕಲರಿಗೆ ಗುರುತಿನ ಚೀಟಿ ವಿತರಣೆ.

* ಸಕಾಲ ಯೋಜನೆ ಅನುಷ್ಠಾನದಲ್ಲಿ ಜನವರಿ ತಿಂಗಳಲ್ಲಿ ರಾಜ್ಯವು ಮೊದಲನೇ ಸ್ಥಾನಗಳಿಸಿದೆ. 55,571 ಅರ್ಜಿಗಳನ್ನು ವಿಲೇವಾರಿ.

ನೆಹರೂ ಹೆಸರು ಹೇಳಲಿಲ್ಲ...

ಎಸ್. ಸುರೇಶ್ ಕುಮಾರ್ ಅವರು 10 ಪುಟಗಳ ಲಿಖಿತ ಭಾಷಣವನ್ನು ಓದಿದರು. ಅದರಲ್ಲಿ ದೇಶದ ಸ್ವಾತಂತ್ರ್ಯಕ್ಕೆ ಹೋರಾಟದ ನಾಯಕತ್ವ ವಹಿಸಿದ್ದ ಮಹಾತ್ಮ ಗಾಂಧಿ, ಬಾಲಗಂಗಾಧರ ತಿಲಕ್, ಲಾಲಾ ಲಜಪತರಾಯ್, ಬಿಪಿನ್ ಚಂದ್ರಪಾಲ್, ಸುಭಾಷ್ ಚಂದ್ರಬೋಸ್, ಜವಹರಲಾಲ್ ‌ನೆಹರೂ ಅವರ ಹೆಸರು ಇತ್ತು. ನೆಹರೂ ಬಿಟ್ಟು ಉಳಿದ ಎಲ್ಲರ ಹೆಸರುಗಳನ್ನು ಸಚಿವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT