ಶನಿವಾರ, ಸೆಪ್ಟೆಂಬರ್ 18, 2021
26 °C

ಆರ್‌ಎಸ್‌ಎಸ್‌ನವರು ನಿಜವಾದ ತಾಲಿಬಾನಿಗಳು: ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ಭಾರತದಲ್ಲಿ ಆರ್‌ಎಸ್‌ಎಸ್‌ನವರು ನಿಜವಾದ ತಾಲಿಬಾನಿಗಳು. ಅವರು (ಅಫ್ಘಾನಿಸ್ತಾನದ ತಾಲಿಬಾನಿಗಳು) ಯಾವ ರೀತಿ ಧರ್ಮದ ಆಧಾರದಲ್ಲಿ ಮಾಡುತ್ತಿದ್ದಾರೋ, ಇಲ್ಲಿ ಇವರು ಈ ಸಂಘಟನೆಯನ್ನು ಆ ರೀತಿ ಮಾಡುತ್ತಿದ್ದಾರೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಅವರು ಬುಧವಾರ ಹೇಳಿದರು. 

‘ಪ್ರಧಾನಿ ಮೋದಿ ಅವರು ಸಿಎಎಯನ್ನು ಯಾಕೆ ಜಾರಿ ಮಾಡಿರಬಹುದು ಎಂಬುದು ಈಗ ಅರ್ಥವಾಗಿರಬಹುದು’ ಎಂಬ ಮೈಸೂರು–ಕೊಡಗು ಸಂಸದ ಪ್ರತಾಪ್‌ ಸಿಂಹ ಅವರ ಹೇಳಿಕೆಗೆ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ‘ತಾಲಿಬಾನಿಗಳಿಂದಾಗಿ ದೇಶಕ್ಕೆ ಆಗುವ ಅನಾಹುತಗಳ ಬಗ್ಗೆ ಕೇಂದ್ರ ಸರ್ಕಾರ ಕಟ್ಟೆಚ್ಚರ ವಹಿಸಿ ಕ್ರಮ ಕೈಗೊಳ್ಳಬೇಕು. ಅಲ್ಲಿನ ತಾಲಿಬಾನಿಗಳಿಗೂ ಇಲ್ಲಿನ ಸಿಎಎಗೆ ಏನು ಸಂಬಂಧ? ಸಿಎಎ, ಎನ್‌ಆರ್‌ಸಿ ಬಗ್ಗೆ ಯಾವ ಸಂಬಂಧ ಕಲ್ಪಿಸುತ್ತೀರಿ’ ಎಂದು ಖಾರವಾಗಿ ಪ್ರಶ್ನಿಸಿದರು. 

‘ಅಸ್ಸಾಂಗೆ ಹೊರದೇಶದಿಂದ ಬಂದವರನ್ನು ಹೊರದೂಡಬೇಕು ಎಂದು ಕೇಂದ್ರ ಸರ್ಕಾರ ಸಿಎಎ ಜಾರಿಗೊಳಿಸಿತ್ತು. ಬಾಂಗ್ಲಾದೇಶದಿಂದ ಮುಸ್ಲಿಮರು ಜಾಸ್ತಿ ಬಂದಿದ್ದಾರೆ ಎಂಬ ದೃಷ್ಟಿಕೋನ ಇಟ್ಟುಕೊಂಡು ಈ ಕಾಯ್ದೆ ಜಾರಿಗೆ ತರಲಾಗಿತ್ತು. ವಾಸ್ತವದಲ್ಲಿ ಮುಸ್ಲಿಮರಿಗಿಂತ ಹಿಂದೂಗಳೇ ಹೆಚ್ಚು ಸಂಖ್ಯೆಯಲ್ಲಿ ವಲಸೆ ಬಂದಿದ್ದರು. ಹಾಗಾಗಿ ಆ ಪ್ರಕ್ರಿಯೆಯನ್ನೇ ಕೈಬಿಡಲಾಯಿತು’ ಎಂದರು. 

‘ಬಿಜೆಪಿ ಕೋಮುವಾದಿ ಪಕ್ಷ. ಅದೇ ಮನೋಭಾವದಲ್ಲಿ ಪ್ರತಾಪ್ ಸಿಂಹ ಅವರು ಮಾತನಾಡಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ’ ಎಂದು ಹೇಳಿದರು.

ಮಾನನಷ್ಟ ಮೊಕದ್ದಮೆ ಹಾಕಲಿ: ಕಾಂಗ್ರೆಸ್‌ ಮುಖಂಡರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುವುದಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಧ್ರುವನಾರಾಯಣ ಅವರು, ‘ದೇಶಕ್ಕಾಗಿ ಸಂಪತ್ತನ್ನು ಧಾರೆ ಎರೆದು, ಪ್ರಾಣವನ್ನೇ ಅರ್ಪಣೆ ಮಾಡಿದ ನೆಹರೂ ಕುಟುಂಬದ ಬಗ್ಗೆ ಮಾತನಾಡುವ ಮೊದಲು ರವಿ ಅವರು ಮಾನದ ಬಗ್ಗೆ ಯೋಚನೆ ಮಾಡಬೇಕಿತ್ತು. ನೆಹರೂ, ಇಂದಿರಾ ಗಾಂಧಿ ಹೆಸರಿನಲ್ಲಿ ಹುಕ್ಕಾ ಬಾರ್ ತೆರೆಯಲಿ... ಎಂದು ‌ಪಕ್ಷದ ಪ್ರಧಾನ ಕಾರ್ಯದರ್ಶಿಯೊಬ್ಬರು ಹೇಳುವ ಮಾತಾ? ಮಾನ ಇದ್ದರೆ ಮಾನನಷ್ಟ ಮೊಕದ್ದಮೆ ಹಾಕಲಿ. ನಾವು ಎಲ್ಲದಕ್ಕೂ ಸಿದ್ಧ’ ಎಂದರು. 

ಬಿಜೆಪಿ ಮುಖಂಡರು ವಿಮೆ ಸಂಸ್ಥೆಗಳ ಏಜೆಂಟರು: ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವವರು ದಲ್ಲಾಳಿಗಳು ಎಂಬ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷರು, ‘ಶೋಭಾ ಕರಂದ್ಲಾಜೆ ಅವರಿಗೆ ರೈತರ ಸಮಸ್ಯೆಗಳ ಅರಿವಿಲ್ಲ. ಪ್ರತಿಭಟನೆ ಯಾಕೆ ನಡೆಸುತ್ತಿದ್ದಾರೆ ಎಂಬುದನ್ನು ಅವರು ಅರಿಯಬೇಕು. ರೈತರ ಪರವಾಗಿದ್ದ ಎಪಿಎಂಸಿ, ಭೂ ಸುಧಾರಣಾ ಕಾಯ್ದೆಗಳನ್ನು ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿ ಶ್ರೀಮಂತರಿಗೆ ಹಾಗೂ ವ್ಯಾಪಾರಸ್ಥರಿಗೆ ಅನುಕೂಲವಾಗುವ ಕಾಯ್ದೆಗಳನ್ನು ಮಾಡಿದೆ. ಸಚಿವರು ಈಗ ಎಪಿಎಂಸಿಗಳಿಗೆ ಭೇಟಿ ನೀಡಲಿ. ಮೊದಲು ಅವು ಹೇಗೆ ಲಾಭದಾಯಕವಾಗಿದ್ದವು, ಈಗ ಯಾಕೆ ಸಂಕಷ್ಟಕ್ಕೆ ತುತ್ತಾಗಿವೆ’ ಎಂಬುದನ್ನು ಅರಿಯಲಿ’ ಎಂದರು. 

‘ಇಡೀ ದೇಶಕ್ಕೆ ಬೇಕಾದ ಗೋಧಿಯಲ್ಲಿ ಶೇ 80ರಷ್ಟನ್ನು ಬೆಳೆಯುವ ಪಂಜಾಬ್‌ ರೈತರ ಬಗ್ಗೆ ಅಗೌರವ ತರುವ ಮಾತುಗಳನ್ನು ಸಚಿವರು ಹೇಳಿರುವುದು ದುರಂತ, ಶೋಚನೀಯ’ ಎಂದು ಟೀಕಿಸಿದರು. 

ಕೇಂದ್ರ ಸರ್ಕಾರ ಬೆಳೆ ವಿಮೆ ಯೋಜನೆ ತಂದಿದೆ. ಆದರೆ, ಎರಡು ವರ್ಷಗಳಾದರೂ ವಿಮೆ ಪಾವತಿಯಾಗಿಲ್ಲ. ಸರ್ಕಾರ ರೈತರ ಪರವಾಗಿಲ್ಲ, ವಿಮೆ ಸಂಸ್ಥೆಗಳ ಪರವಾಗಿದೆ. ಬಿಜೆಪಿ ಮುಖಂಡರು ವಿಮೆ ಕಂಪನಿಗಳ ಏಜೆಂಟರಾಗಿದ್ದಾರೆ’ ಎಂದು ದೂರಿದರು.  

‘ಸಚಿವೆ ಶೋಭಾ ಕರಂದ್ಲಾಜೆ ಅವರು ಚಳವಳಿ ಮಾಡುವವರ ಬಗ್ಗೆ ಅಗೌರವದ ಮಾತು ಆಡುವುದನ್ನು ನಿಲ್ಲಿಸಬೇಕು. ಸಚಿವ ಸ್ಥಾನ ಸಿಕ್ಕಿದೆ. ರೈತರ ಹಿತಾಸಕ್ತಿ ಕಾಪಾಡುವ ಕೆಲಸ ಮಾಡಲಿ‌’ ಎಂದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು