ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ಆರ್‌ಟಿಇ: 23 ಶಾಲೆಗಳಲ್ಲಿ 195 ಸೀಟು ಲಭ್ಯ

ಕಳೆದ ವರ್ಷ ಬಂದಿತ್ತು 106 ಅರ್ಜಿ, ದಾಖಲಾಗಿದ್ದು ಕೇವಲ 22 ಮಕ್ಕಳು
Last Updated 15 ಜೂನ್ 2020, 16:54 IST
ಅಕ್ಷರ ಗಾತ್ರ

ಚಾಮರಾಜನಗರ: ಕೋವಿಡ್‌–19 ಕಾರಣದಿಂದಾಗಿ ಶಾಲೆಗಳ ಪುನರಾರಂಭದ ಬಗ್ಗೆ ಸರ್ಕಾರ ಇನ್ನೂ ನಿರ್ಧಾರ ಕೈಗೊಳ್ಳದೇ ಇದ್ದರೂ ರಾಜ್ಯದಾದ್ಯಂತ ಕಡ್ಡಾಯ ಶಿಕ್ಷಣದ ಹಕ್ಕು (ಆರ್‌ಟಿಇ) ಕಾಯ್ದೆಯ ಅಡಿಯಲ್ಲಿ ದಾಖಲಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಜಿಲ್ಲೆಯ 23 ಖಾಸಗಿ ಶಾಲೆಗಳಲ್ಲಿ 195 ಸೀಟುಗಳು ಲಭ್ಯ ಇವೆ.

ಸದ್ಯ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಇದೇ 10ರಿಂದ ಆರಂಭವಾಗಿದ್ದು, 24ರವರೆಗೂ ಮುಂದುವರಿಯಲಿದೆ. ಖಾಸಗಿ, ಅನುದಾನಿತ ಶಾಲೆಗಳಲ್ಲಿ ಶೇ 25ರಷ್ಟು ಸೀಟುಗಳನ್ನು ಬಡ ಕುಟುಂಬಗಳ ಮಕ್ಕಳಿಗೆ ಮೀಸಲಿ‌ಡಬೇಕು ಎಂಬುದು ಆರ್‌ಟಿಇ ಕಾಯ್ದೆಯ ನಿಯಮ.

ಅದರಂತೆ ಜಿಲ್ಲೆಯಲ್ಲಿ 23 ಶಾಲೆಗಳನ್ನು ಗುರುತಿಸಲಾಗಿದೆ. ನಿಯಮಗಳ ಅನುಸಾರ ಜಿಲ್ಲೆಗೆ 195 ಸೀಟುಗಳು ಹಂಚಿಕೆಯಾಗಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್‌.ಟಿ.ಜವರೇಗೌಡ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಅರ್ಜಿ ಸಲ್ಲಿಕೆಗೆ ಜೂನ್‌ 24 ಕೊನೆಯ ದಿನವಾಗಿದ್ದು, ಆ ಬಳಿಕ ಮತ್ತೆಲಭ್ಯವಿರುವ ಸೀಟುಗಳ ಸಂಖ್ಯೆಯಲ್ಲಿ ಪರಿಷ್ಕರಣೆ ನಡೆಯುವ ಸಾಧ್ಯತೆಯೂ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

2 ವರ್ಷಗಳಿಂದ ಕಡಿಮೆ ಶಾಲೆಗಳು: 2019–20ನೇ ಸಾಲಿನ ಶೈಕ್ಷಣಿಕ ವರ್ಷಾರಂಭದಲ್ಲಿಆರ್‌ಟಿಇ ನಿಯಮಗಳಿಗೆ ರಾಜ್ಯ ಸರ್ಕಾರ ತಿದ್ದುಪಡಿ ತಂದಿದ್ದರಿಂದ ಆರ್‌ಟಿಇ ಶಾಲೆಗಳ ಸಂಖ್ಯೆಯಲ್ಲಿ ಗಣನೀಯ ಕುಸಿತ ಕಂಡಿತ್ತು.

ತಿದ್ದುಪಡಿ ಮಾಡಿರುವ ನಿಯಮದ ಪ್ರಕಾರ, ಗ್ರಾಮ ಅಥವಾ ವಾರ್ಡ್ ವ್ಯಾಪ್ತಿಯಲ್ಲಿ ಸರ್ಕಾರಿ ಅಥವಾ ಅನುದಾನಿತ ಶಾಲೆಗಳು ಇದ್ದರೆ ಕಾಯ್ದೆ ಅಡಿಯಲ್ಲಿ ಖಾಸಗಿ ಶಾಲೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ.

ಈ ನಿಯಮದಿಂದಾಗಿ 2018–19ನೇ ಸಾಲಿನಲ್ಲಿ 115 ಶಾಲೆಗಳಲ್ಲಿ ಆರ್‌ಟಿಇ ಸೀಟುಗಳು ಲಭ್ಯ ಇದ್ದವು. ಹೊಸ ನಿಯಮ ಬಂದ ನಂತರ, ಕಳೆದ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳ ಸಂಖ್ಯೆ 25ಕ್ಕೆ ಕುಸಿದಿತ್ತು. ಈ ವರ್ಷ ಮತ್ತೆ ಎರಡು ಶಾಲೆಗಳು ಕಡಿಮೆಯಾಗಿವೆ.

2019–20ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 222 ಆರ್‌ಟಿಇ ಸೀಟುಗಳು ಲಭ್ಯ ಇದ್ದವು. ಆದರೆ, 106 ಅರ್ಜಿಗಳಷ್ಟೇ ಬಂದಿದ್ದವು. ಅಂತಿಮವಾಗಿ ಶಾಲೆಗಳಿಗೆ ದಾಖಲಾಗಿದ್ದು ಮಾತ್ರ 22 ಮಕ್ಕಳು.

ಅರ್ಜಿ ಹೀಗೆ ಸಲ್ಲಿಸಿ...

ಆರ್‌ಟಿಇ ಅಡಿಯಲ್ಲಿ ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರು,ಆಸಕ್ತ ಪೋಷಕರ ಮಗು, ಮಗುವಿನ ತಂದೆ ಅಥವಾ ತಾಯಿ ಆಧಾರ್ ನಂಬರ್, ಜಾತಿ ಹಾಗೂ ಆದಾಯ ಪ್ರಮಾಣ ದೃಢೀಕರಣ ಪತ್ರಗಳೊಂದಿಗೆ ಹಾಗೂ ವಿಶೇಷ ವರ್ಗ, ದುರ್ಬಲ ವರ್ಗದಡಿಯಲ್ಲಿ ಆಯ್ಕೆ ಬಯಸುವವರು ಸಂಬಂಧಿತ ದಾಖಲೆಗಳೊಂದಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಇದಕ್ಕೂ ಮೊದಲುಸಾರ್ವಜನಿಕ ಶಿಕ್ಷಣ ಇಲಾಖೆಯ ವೆಬ್‌ಸೈಟ್‌ http://www.schooleducation.kar.nic.in ಭೇಟಿ‌ ನೀಡಿ, ತಮ್ಮ ನೆರೆಹೊರೆಯಲ್ಲಿರುವ ಶಾಲೆಗಳ ಬಗ್ಗೆ ಮಾಹಿತಿ ಪಡೆದು ನಂತರ ಅರ್ಜಿ ಸಲ್ಲಿಸಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT