ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನೂರು: ಈ ವರ್ಷ ಕಟ್ಟಿದ ಶೌಚಾಲಯಕ್ಕೆ 2017ರಲ್ಲೇ ಹಣ ಬಿಡುಗಡೆ!

ಶೆಟ್ಟಳ್ಳಿ ಗ್ರಾಮದಲ್ಲಿ ಒಂದು ಕಾಮಗಾರಿಗೆ ಎರಡು ಬಾರಿ ಬಿಲ್
Last Updated 15 ನವೆಂಬರ್ 2020, 14:55 IST
ಅಕ್ಷರ ಗಾತ್ರ

ಹನೂರು: ತಾಲ್ಲೂಕಿನ ಶೆಟ್ಟಳ್ಳಿ ಗ್ರಾಮಪಂಚಾಯಿತಿಯಲ್ಲಿ ಒಂದು ಕಾಮಗಾರಿಗೆ ಎರಡು ಬಾರಿ ಹಣ ಮಂಜೂರು ಮಾಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ತನಿಖೆ ನಡೆಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

‘ಶೆಟ್ಟಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಗೆ ಬರುವ ಭದ್ರಯ್ಯನಹಳ್ಳಿ, ಹೊಸಳ್ಳಿ, ಚೆನ್ನೂರು, ಎಂ.ಎಸ್.ದೊಡ್ಡಿ, ವಿ.ಎಸ್ ದೊಡ್ಡಿಮುಂತಾದ ಗ್ರಾಮದಲ್ಲಿ 2016-17ರಿಂದ 2019-2020ನೇ ಸಾಲಿನವರೆಗೆ ನಡೆದಿರುವ ಕೊಟ್ಟಿಗೆ ನಿರ್ಮಾಣ, ಕೃಷಿಹೊಂಡ ಹಾಗೂ ಶೌಚಾಲಯ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿದೆ. ಒಂದು ಕಾಮಗಾರಿಗೆ ಎರಡು ಬಾರಿ ಹಣ ಮಂಜೂರು ಮಾಡುವ ಮೂಲಕ ಗ್ರಾಮ ಪಂಚಾಯಿತಿ ಅಧಿಕಾರಿ ಹಾಗೂ ಸಿಬ್ಬಂದಿ ಸರ್ಕಾರಿ ಹಣವನ್ನು ದುರ್ಬಳಕೆ ಮಾಡಿದ್ದಾರೆ’ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಗ್ರಾಮದ ನಾಗರಾಜು ಎಂಬುವವರು ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿ ಕೇಳಿದ ಮಾಹಿತಿಯಿಂದ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳು ‘ಪ್ರಜಾವಾಣಿ’ಗೆ ಸಿಕ್ಕಿವೆ.

ಭದ್ರಯ್ಯನಹಳ್ಳಿ ಗ್ರಾಮದ ಸಿದ್ದಮ್ಮ ಹಾಗೂ ಸಿದ್ದಶೆಟ್ಟಿ ಎಂಬುವವರು ಈಚೆಗೆ ಶೌಚಾಲಯ ನಿರ್ಮಿಸಿದ್ದಾರೆ. ಆದರೆ ಇಬ್ಬರು ಫಲಾನುಭವಿಗಳ ಹೆಸರಲ್ಲಿ 2017ರಲ್ಲೇ ಶೌಚಾಲಯ ನಿರ್ಮಾಣವಾಗಿದೆ ಎಂಬ ಅಂಶ ದಾಖಲೆಗಳಲ್ಲಿದೆ.

‘ತಮ್ಮ ಹಾಗೂ ತಾಯಿ ಹೆಸರಲ್ಲಿ ಈಗ ಶೌಚಾಲಯ ನಿರ್ಮಿಸಲಾಗಿದೆ. ಇದಕ್ಕೆ ಸಹಾಯಧನ ನೀಡುವಂತೆ ಕೇಳಿದರೆ ಜಿಲ್ಲಾ ಪಂಚಾಯಿತಿಯಿಂದ ಅನುಮತಿ ಬೇಕು ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ, ಆರ್‌ಐ ಐಡಿ ಸಿಕ್ಕ ಮಾಹಿತಿ ಪ್ರಕಾರ, ತಮ್ಮ ಹಾಗೂ ತಾಯಿ 2017ರಲ್ಲೇ ಶೌಚಾಲಯ ನಿರ್ಮಿಸಿದ್ದಾರೆ ಎಂದು ಸಹಾಯಧನ ಮಂಜೂರಾಗಿದೆ. ಹಾಗಾದರೆ, ಯಾರ ಖಾತೆಗೆ ಹಣ ಹೋಗಿದೆ ಎಂಬುದನ್ನು ಅಧಿಕಾರಿಗಳು ತಿಳಿಸಬೇಕು’ ಎಂದು ಗ್ರಾಮಪಂಚಾಯಿತಿ ಮಾಜಿ ಸದಸ್ಯ ಶ್ರೀರಂಗ ಅವರು ಒತ್ತಾಯಿಸಿದರು.

‘ಸಾಲ ಮಾಡಿ ಕೊಟ್ಟಿಗೆ ನಿರ್ಮಾಣ ಮಾಡಿದೆ. ಆದರೆ ಅರ್ಧ ಹಣ ನೀಡಿ ಪಂಚಾಯಿತಿ ಅಧಿಕಾರಿಗಳು ಕೈತೊಳೆದುಕೊಂಡರು. ಈಗ ಶೌಚಾಲಯ ನಿರ್ಮಿಸಿದ್ದೇನೆ. ಅದರ ಸಹಾಯ ಧನ ಬಿಡುಗಡೆ ಮಾಡುವಂತೆ ಪಂಚಾಯಿತಿಗೆ ಎಡತಾಕುತ್ತಲೇ ಇದ್ದೇನೆ. ನಾನು ನಿರ್ಮಿಸಿರುವ ಶೌಚಾಲಯಕ್ಕೆ ಸೆ.9ರಂದೇ ಹಣ ಬಿಡುಗಡೆಯಾಗಿದೆ ಎಂದು ಗೊತ್ತಾಗಿದೆ. ಪಂಚಾಯಿತಿಗೆ ಹೋಗಿ ಕೇಳಿದರೆ ನಿಮಗೆ ಇನ್ನು ಹಣ ಬಿಡುಗಡೆಯಾಗಿಲ್ಲ ಎನ್ನುತ್ತಾರೆ. ಹಾಗಾದರೆ ನನ್ನ ಹೆಸರಿನ ಶೌಚಾಲಯದ ಸಹಾಯಧನ ಯಾರ ಖಾತೆಗೆ ಜಮೆ ಆಗಿದೆ ಎಂಬುದರ ಬಗ್ಗೆ ಹಿರಿಯ ಅಧಿಕಾರಿಗಳು ತನಿಖೆ ನಡೆಸಬೇಕು’ ಎಂದು ಚೆನ್ನೂರು ಗ್ರಾಮದ ಶಿವಲಂಕಾರಬೋವಿ ಆಗ್ರಹಿಸಿದರು.

‘ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಬಹುತೇಕ ಗ್ರಾಮಸ್ಥರು ಹನೂರಿನ ಮಂಡ್ಯ ಫಾರಂಗೆ ಕೂಲಿ ಕೆಲಸಕ್ಕೆ ತೆರಳುತ್ತಿದ್ದಾರೆ. ಪ್ರತಿ ದಿನ ಮಹಿಳೆಯರು ಸೇರಿದಂತೆ 300 ರಿಂದ 400 ಜನರು ಕೂಲಿಗೆ ತೆರಳುತ್ತಿದ್ದಾರೆ.ಈ ಹಿಂದೆ ಚೆನ್ನೂರು ಗ್ರಾಮದ ದೊಡ್ಡಕೆರೆ ಕಾಮಗಾರಿ ಸಂದರ್ಭದಲ್ಲಿ ಸುಮಾರು 100 ಜನರಿಗೆ ಇದುವರೆಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಹಣ ನೀಡಿಲ್ಲ’ ಎಂದು ಗ್ರಾಮದ ನಾಗರಾಜು ಅವರು ಆರೋಪಿಸಿದರು.

ಆರೋಪಗಳ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದಶೆಟ್ಟಳ್ಳಿ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಮಹಾದೇವ ಅವರು ‘ಶೌಚಾಲಯಗಳ ಕಾಮಗಾರಿ ನಡೆದಿರುವುದು. ನಾನು ಪಂಚಾಯಿತಿಗೆ ಬಂದು ಕೆಲವೇ ತಿಂಗಳುಗಳಾಗಿವೆ. ಈ ಬಗ್ಗೆ ಬೇಕಾದರೆ ತನಿಖೆ ನಡೆಸಲಿ. ಕೊಟ್ಟಿಗೆ ನಿರ್ಮಾಣದಲ್ಲಿ ಅವ್ಯವಹಾರ ಆಗಿರುವ ಬಗ್ಗೆ ನನಗೆ ಮಾಹಿತಿ ಇಲ್ಲ’ ಎಂದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಜು ಅವರು ಮಾತನಾಡಿ, ‘ಶೆಟ್ಟಳ್ಳಿ ಗ್ರಾಮದಲ್ಲಿ ಶೌಚಾಲಯ ನಿರ್ಮಾಣ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಮಾಹಿತಿಯಿಲ್ಲ. ಗ್ರಾಮಪಂಚಾಯಿತಿಗೆ ತೆರಳಿ ಪರಿಶೀಲನೆ ನಡೆಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT