ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಮತಾಂತರ ನಿಷೇಧ ಕಾಯ್ದೆ: ಸಾಲೂರು ಶ್ರೀ ಸ್ವಾಗತ

Last Updated 23 ಡಿಸೆಂಬರ್ 2021, 16:07 IST
ಅಕ್ಷರ ಗಾತ್ರ

ಚಾಮರಾಜನಗರ: ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿರುವ ಮಹದೇಶ್ವರ ಬೆಟ್ಟದ ಸಾಲೂರು ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಅವರು, ಈ ಕಾನೂನನ್ನು ಎಲ್ಲರೂ ಗೌರವಿಸಬೇಕು ಎಂದು ಹೇಳಿದ್ದಾರೆ.

ಸರ್ಕಾರ ಮಂಡಿಸಿರುವ ಮತಾಂತರ ನಿಷೇಧ ಮಸೂದೆಯು ದಲಿತರು ಹಾಗೂ ಹಿಂದುಳಿದ ವರ್ಗದವರನ್ನು ಹಣದ ಆಸೆ ಆಮಿಷಗಳಿಂದ ಸೆಳೆದು ಮತಾಂತರಗೊಳಿಸುವ ತಂತ್ರಗಾರಿಕೆಯನ್ನು ತಡೆಯುತ್ತದೆ ಎಂದು ಸ್ವಾಮೀಜಿ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಬುದ್ಧ, ಬಸವಣ್ಣ, ಆಚಾರ್ಯತ್ರಯರು, ಏಸುಕ್ರಿಸ್ತ, ಮಹಮ್ಮದ್‌ ಪೈಗಂಪರ್‌... ಎಲ್ಲ ಮಹಾತ್ಮರು ಮನುಕುಲದ ಏಳಿಗೆಗೆ ಶ್ರಮಿಸಿದವರು. ಅವರ ಹೆಸರಿನಲ್ಲಿ ಅನುಯಾಯಿಗಳಾದ ನಾವು ಕಚ್ಚಾಡುವುದು, ಅಂತಹವರ ಹೆಸರನ್ನು ಬಳಸಿಕೊಂಡು ಬಲವಂತವಾಗಿ ಮತಾಂತರ ಮಾಡುವುದು ಅವರಿಗೆ ಮಾಡುವ ಅಪಚಾರ. ಜಾತ್ಯತೀತ ರಾಷ್ಟ್ರದಲ್ಲಿ ಬದುಕುತ್ತಿರುವ ನಾವು ಜಾತಿ ಧರ್ಮದ ಹೆಸರಿನಲ್ಲಿ ಜನರ ನಡುವೆ ಅಶಾಂತಿ ಮೂಡಿಸುವ ಆಸೆ– ಆಮಿಷಗಳ ಮೂಲಕ ಬಲವಂತದ ಮತಾಂತರ ಮಾಡುವುದು ಸರಿಯಲ್ಲ’ ಎಂದು ಅವರು ಹೇಳಿದ್ದಾರೆ.

‘ಹಿಂದೂ ಮುಸ್ಲಿಂ ಹಾಗೂ ಕ್ರಿಶ್ಷಿಯನ್‌ ಧರ್ಮಗಳಲ್ಲಿ ಕೋಟ್ಯಂತರ ಬಡವರಿದ್ದು, ಆಯಾ ಧರ್ಮಗುರುಗಳು ಆಯಾ ಧರ್ಮಗಳ ಬಡವರನ್ನು ಉದ್ಧಾರ ಮಾಡಿದಲ್ಲಿ ಈ ದೇಶಕ್ಕೆ ಅದುವೇ ಬಹು ದೊಡ್ಡ ಕೊಡುಗೆಯಾಗುತ್ತದೆ. ಅದನ್ನು ಬಿಟ್ಟು ಹಿಂದೂ ಧರ್ಮದವರನ್ನು ತಮ್ಮ ಧರ್ಮಗಳಿಗೆ ಮತಾಂತರಿಸುತ್ತಾ, ಮತಾಂತರಗೊಂಡವರಿಗೆ ಸರಿಯಾದ ಸ್ಥಾನಮಾನಗಳನ್ನು ಕೊಡದೆ ಅವರನ್ನು ತ್ರಿಶಂಕು ಸ್ಥಿತಿಗೆ ತಳ್ಳುವುದು ಆಘಾತಕಾರಿ. ಹೀಗಾಗಿ ಧಾರ್ಮಿಕ ಮುಖಂಡರು ತಮ್ಮ ಜನಾಂಗದ ಬಡ ಜನರ ಶಿಕ್ಷಣ, ಆರ್ಥಿಕ ಸ್ಥಿತಿ ಸುಧಾರಣೆಗೆ ಕ್ರಮಕೈಗೊಳ್ಳಬೇಕು’ ಎಂದು ಅವರು ಹೇಳಿದ್ದಾರೆ.

‘ಹಿಂದೂ ಧರ್ಮೀಯರ ಬಡಜನರ ಕಷ್ಟಗಳನ್ನು ಪರಿಹರಿಸಲು ನಾಡಿನ ಎಲ್ಲ ಮಠಾಧೀಶರು ಅನವರತ ಶ್ರಮಿಸುತ್ತಿದ್ದಾರೆ. ಈಗಾಗಲೇ ಅನ್ಯಧರ್ಮಕ್ಕೆ ಮತಾಂತರವಾಗಿರುವವರನ್ನು ಮನವೊಲಿಸಿ, ಕಾನೂನಿನ ಚೌಕಟ್ಟಿನಲ್ಲಿ ಮರಳಿ ಹಿಂದೂ ಧರ್ಮಕ್ಕೆ ಕರೆತರುವ ಪ್ರಯತ್ನಗಳಾಬೇಕು. ಯಾವುದೇ ವ್ಯಕ್ತಿಯು ಯಾವುದೇ ದೇವರ ಮೇಲೆ ತನ್ನ ನಂಬಿಕೆಯನ್ನು ಇಟ್ಟುಕೊಳ್ಳುವುದು, ಬದಲಿಸುವುದು...ಎಲ್ಲವೂ ಸಂವಿಧಾನ ನೀಡಿರುವ ಮೂಲಭೂತ ಹಕ್ಕು. ಆದರೆ, ಉದಾರ ಮತ್ತು ಜಾತ್ಯತೀತ ಸಂವಿಧಾನವನ್ನೇ ಬಳಸಿಕೊಂಡು ತಪ್ಪು ಮಾರ್ಗಗಳಿಂದ ಮತಾಂತರ ಮಾಡುವ ಪರಿಪಾಠ, ಈ ಕಾನೂನು ಜಾರಿ ನಂತರ ನಿಲ್ಲಲಿದೆ’ ಎಂಬ ಆಶಯವನ್ನು ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಅವರು ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT