ಮಂಗಳವಾರ, ಜೂನ್ 28, 2022
21 °C
ಕ್ವಿಂಟಲ್‌ಗೆ ₹800–₹1100, ಖರ್ಚೂ ಸಿಗುತ್ತಿಲ್ಲ, ಕಟಾವಿಗೆ ರೈತರ ನಿರಾಸಕ್ತಿ

ಸಣ್ಣ ಈರುಳ್ಳಿ ಬೆಲೆ ಕುಸಿತ; ರೈತ ಕಂಗಾಲು!

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯಲ್ಲಿ ಸಾಂಬಾರ್‌ ಈರುಳ್ಳಿ ಬೆಲೆ ಪಾತಾಳಕ್ಕೆ ಕುಸಿದಿದ್ದು, ರೈತರು ಕಂಗಾಲಾಗಿದ್ದಾರೆ. 

ಕ್ವಿಂಟಲ್‌ ಸಾಂಬಾರ್‌ (ಸಣ್ಣ) ಈರುಳ್ಳಿ ₹800ರಿಂದ ₹1,100 ನಡುವೆ ಮಾರಾಟವಾಗುತ್ತಿದ್ದು, ಹಾಕಿದ ಖರ್ಚು ರೈತರಿಗೆ ಬರುತ್ತಿಲ್ಲ. ಇದರಿಂದಾಗಿ ಕೆಲ ಸಣ್ಣ ರೈತರು ಕಟಾವಿಗೆ ಹಿಂದೇಟು ಹಾಕುತ್ತಿದ್ದಾರೆ. 

ಜಿಲ್ಲೆಯ ಚಾಮರಾಜನಗರ, ಗುಂಡ್ಲುಪೇಟೆ ಹಾಗೂ ಹನೂರು ಭಾಗಗಳಲ್ಲಿ ಸಣ್ಣ ಈರುಳ್ಳಿಯನ್ನು ಹೆಚ್ಚು ಬೆಳೆಯುತ್ತಾರೆ. ತಮಿಳುನಾಡಿನಲ್ಲಿ ಇದಕ್ಕೆ ಹೆಚ್ಚು ಬೇಡಿಕೆ ಇದ್ದು, ಅಲ್ಲಿಂದ ಶ್ರೀಲಂಕಾಕ್ಕೂ ರಫ್ತಾಗುತ್ತದೆ.

‘ಕೋವಿಡ್‌ ಸಮಯದಲ್ಲಿ ಈರುಳ್ಳಿಗೆ ಬೇಡಿಕೆ ಕಡಿಮೆಯಾಗಿದ್ದರೂ, ಇಷ್ಟು ಬೆಲೆ ಕುಸಿತವಾಗಿರಲಿಲ್ಲ’ ಎಂದು ಹೇಳುತ್ತಾರೆ ರೈತರು. 

ಚಳಿಗಾಲದ ಬೆಳೆ: ಚಳಿಗಾಲದ ಅವಧಿಯಲ್ಲಿ ಜಿಲ್ಲೆಯಲ್ಲಿ 2,400 ಹೆಕ್ಟೇರ್‌ ಪ್ರದೇಶದಲ್ಲಿ ಸಾಂಬಾರ್ ಈರುಳ್ಳಿ ಬಿತ್ತನೆ ಮಾಡಲಾಗಿದೆ. 

ಸಾಮಾನ್ಯವಾಗಿ ರೈತರು ನವೆಂಬರ್‌ ತಿಂಗಳಲ್ಲಿ ಬಿತ್ತನೆ ಮಾಡುತ್ತಾರೆ. ಮೂರು ತಿಂಗಳಲ್ಲಿ ಕಟಾವಿಗೆ ಬರುತ್ತದೆ. ಕಳೆದ ನವೆಂಬರ್‌ ತಿಂಗಳಲ್ಲಿ ಮಳೆಯಾಗಿದ್ದರಿಂದ ಬಿತ್ತನೆ ವಿಳಂಬವಾಗಿದೆ.

ಡಿಸೆಂಬರ್‌ನಲ್ಲಿ ಬಿತ್ತನೆ ನಡೆದು, ಬಹುತೇಕ ಕಡೆಗಳಲ್ಲಿ ಈಗ ಕಟಾವು ನಡೆಯುತ್ತಿದೆ. ಕೆ.ಜಿಗೆ ₹8ನಿಂದ ₹11ರವರೆಗೆ ಇದೆ. ರೈತರು ಬಿತ್ತನೆ ಈರುಳ್ಳಿಯನ್ನು ಕ್ವಿಂಟಲ್‌ಗೆ ₹2,000ದಿಂದ ₹5,000ದವರೆಗೂ ನೀಡಿ ಖರೀದಿಸಿದ್ದರು. 

ಸಾಮಾನ್ಯವಾಗಿ ತಮಿಳುನಾಡಿನ ವ್ಯಾಪಾರಿಗಳು ಜಿಲ್ಲೆಗೆ ಬಂದು ರೈತರಿಂದ ನೇರವಾಗಿ ಖರೀದಿಸುತ್ತಾರೆ.  ಈ ಬಾರಿ ಅವರು ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ. ವ್ಯಾಪಾರಿಗಳೇ ಈರುಳ್ಳಿ ಕಟಾವು ಮಾಡಿದರೆ ಕೆಜಿಗೆ ₹8ರಂತೆ ನೀಡುತ್ತಿದ್ದಾರೆ. ಕಟಾವು ಮಾಡಿದ ಈರುಳ್ಳಿಯನ್ನು ಕೆ.ಜಿಗೆ ₹11–₹12ರಂತೆ ಕೊಳ್ಳುತ್ತಿದ್ದಾರೆ. 

ಬಾರದ ಅಸಲು: ‘ಸಣ್ಣ ಈರುಳ್ಳಿ ಬೆಳೆಯಲು ಎಕರೆಗೆ ₹35 ಸಾವಿರದಿಂದ ₹40 ಸಾವಿರ ಖರ್ಚು ಬರುತ್ತದೆ. ಎಕರೆಗೆ ಅತಿ ಹೆಚ್ಚು ಎಂದರೆ 40ರಿಂದ 50 ಕ್ವಿಂಟಲ್‌ವರೆಗೂ ಇಳುವರಿ ಬರುತ್ತದೆ. ಒಂದು ಎಕರೆಯಲ್ಲಿ ಈರುಳ್ಳಿ ಹಾಕಿದ್ದೆ. 23 ಕ್ವಿಂಟಲ್‌ ಬಂದಿದೆ. ಕ್ವಿಂಟಲ್‌ಗೆ ₹900‌ರಂತೆ  ಮಾರಾಟ ಮಾಡಿದ್ದೇನೆ. ಮಾಡಿದ ಖರ್ಚಿನ ಅರ್ಧದಷ್ಟೂ ಬಂದಿಲ್ಲ’ ಎಂದು ಬೆಳೆಗಾರ ಜಯಪ್ಪ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಈ ಬಾರಿ ಇಳುವರಿಯೂ ಕಡಿಮೆಯಾಗಿದೆ, ಬೆಲೆಯೂ ಸಿಕ್ಕಿಲ್ಲ. ಶ್ರಮವಹಿಸಿ ಬೆಳೆ ಬೆಳೆದಿರುವುದು ವ್ಯರ್ಥವಾಗಿದೆ’ ಎಂದರು.

‘ಖರ್ಚು ಕಳೆದು ಸ್ವಲ್ಪವಾದರೂ ಲಾಭ ಕಾಣುವಂತಾಗಬೇಕಾದರೆ ಕನಿಷ್ಠ ಕ್ವಿಂಟಲ್‌ಗೆ ₹2,500 ಸಾವಿರದಿಂದ ₹3,000 ಬೆಲೆ ಸಿಗಬೇಕು. ಇಲ್ಲದಿದ್ದರೆ ಪ್ರಯೋಜನವಿಲ್ಲ. ಬೆಲೆ ಕುಸಿತದ ಸಂದರ್ಭದಲ್ಲಿ ಸರ್ಕಾರ ರೈತರ ನೆರವಿಗೆ ಧಾವಿಸಿ, ಕನಿಷ್ಠಪಕ್ಷ ನಷ್ಟ ಆಗದಂತೆ ನೋಡಿಕೊಳ್ಳಬೇಕು‘ ಎಂಬುದು ಬೆಳೆಗಾರರ ಒತ್ತಾಯ.

ತಮಿಳುನಾಡಿನಲ್ಲಿ ಬೇಡಿಕೆ ಕುಸಿತ

‘ಜಿಲ್ಲೆಯಲ್ಲಿ ಬೆಳೆದ ಸಣ್ಣ ಈರುಳ್ಳಿ ಹೆಚ್ಚು ತಮಿಳುನಾಡಿಗೆ ಹೋಗುತ್ತದೆ. ವಾತಾವರಣದಲ್ಲಿನ ಬದಲಾವಣೆಯಿಂದಾಗಿ ಈ ಬಾರಿ ಚಳಿಗಾಲದ ಬೆಳೆ ವಿಳಂಬವಾಗಿದೆ. ತಮಿಳುನಾಡಿನಲ್ಲೂ ಸಣ್ಣ ಈರುಳ್ಳಿ ಬೆಳೆ ವಿಸ್ತಾರವಾಗಿದ್ದು, ಸ್ಥಳೀಯವಾಗಿ ಹೆಚ್ಚು ಲಭ್ಯವಾಗುತ್ತಿದೆ. ಇದರಿಂದ ಅಲ್ಲಿ ಸಾಂಬಾರ್‌ ಈರುಳ್ಳಿಗೆ ಬೇಡಿಕೆ ಕಡಿಮೆಯಾಗಿದೆ. ಇದರಿಂದ ಬೆಲೆ ಕಡಿಮೆಯಾಗಿದೆ‘ ಎಂದು ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಬಿ.ಎಲ್‌.ಶಿವಪ್ರಸಾದ್‌ ‘ಪ್ರಜಾವಾಣಿ‘ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು